Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಟಿ.ನರಸೀಪುರ: ಹಳೆ ಹುಲಿ ಮಹದೇವಪ್ಪ ಮತ್ತೆ ಪುಟಿದೇಳುವರೇ?

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಟಿ.ನರಸೀಪುರ: ಹಳೆ ಹುಲಿ ಮಹದೇವಪ್ಪ ಮತ್ತೆ ಪುಟಿದೇಳುವರೇ?

- Advertisement -
- Advertisement -

ಕಾವೇರಿ, ಕಪಿಲಾ, ಸ್ಪಟಿಕ ನದಿಗಳ ಸಂಗಮ ಕ್ಷೇತ್ರ ತಿರುಮಕೂಡಲು ನರಸೀಪುರ. ಜೊತೆಗೆ ಐತಿಹಾಸಿಕ ತಲಕಾಡು, ಸೋಮನಾಥಪುರದಂತಹ ಸ್ಥಳಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿರುವ ಈ ತಾಲ್ಲೂಕು, ವರುಣಾ ಮತ್ತು ಟಿ.ನರಸೀಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಹೋಗಿದೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿರುವ ಟಿ.ನರಸೀಪುರ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಪ್ರತಿನಿಧಿಸುವ ಕಾರಣಕ್ಕೆ ಎಂದಿಗೂ ಚರ್ಚೆಯ ವಿಷಯ.

ರಾಜ್ಯ ರಾಜಕಾರಣದಲ್ಲಿ ಪ್ರಸ್ತುತವಾಗಿ ಗುರುತಿಸಲೇಬೇಕಾದ ದಲಿತ ರಾಜಕಾರಣಿಗಳ ಪೈಕಿ ಮಹದೇವಪ್ಪ ಅವರ ಹೆಸರು ಇರದೇ ಇರುವುದಿಲ್ಲ. ಮೈಸೂರು ಭಾಗದಲ್ಲಿನ ಈಗಿನ ದಲಿತ ರಾಜಕಾರಣಿಗಳ ಪೈಕಿ ವಿ. ಶ್ರೀನಿವಾಸ್ ಪ್ರಸಾದ್ ಅವರ ನಂತರದ ಸ್ಥಾನದಲ್ಲಿ ಆರ್.ಧ್ರುವನಾರಾಯಣ, ಎಚ್.ಸಿ.ಮಹದೇವಪ್ಪ ಅವರ ಹೆಸರು ನಿಲ್ಲುವುದು ಖಚಿತ. ಧ್ರುವ ಅವರ ನಿಧನದ ನಂತರದಲ್ಲಿ ದಲಿತ ರಾಜಕಾರಣದೊಳಗೆ ಹಲವು ಪಲ್ಲಟಗಳು ನಡೆದಿವೆ.

ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಸೇರುವ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಆರ್.ಧ್ರುವನಾರಾಯಣ ಮತ್ತು ಎಚ್.ಸಿ.ಮಹದೇವಪ್ಪ ಅವರ ಕೊಡುಗೆ ಅಪಾರ. ಮಹದೇವಪ್ಪನವರು ಲೋಕೋಪಯೋಗಿ ಸಚಿವರಾಗಿದ್ದ ಅವಧಿಯಲ್ಲಂತೂ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಾದವು. ಉಕ್ಕಲಗೆರೆ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಬನ್ನೂರು ಭಾಗದಲ್ಲಿ ಕುಡಿಯುವ ನೀರಿನ ಬರ ನೀಗಿಸಲು ಕ್ರಮ, ಬನ್ನೂರಿನ ಬಳಿ ಕಾವೇರಿ ನದಿ ಸೇತುವೆ ನಿರ್ಮಾಣ, ಟಿ.ನರಸೀಪುರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ, ತಾಲ್ಲೂಕು ಕಚೇರಿ, ಪುರಸಭೆ ನೂತನ ಕಟ್ಟಡ ಅಭಿವೃದ್ಧಿ, ಬನ್ನೂರಿನ ಒಳಚರಂಡಿ ಯೋಜನೆ, ಮಲಿಯೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಬನ್ನೂರು- ಮುಡುಕುತೊರೆ ನಾಲೆ ಅಭಿವೃದ್ಧಿ, ಬನ್ನೂರು ಕೆರೆ ಅಭಿವೃದ್ಧಿ, ನರಸೀಪುರ-ಬನ್ನೂರು ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ವಸತಿಗಳ ನಿರ್ಮಾಣ – ಹೀಗೆ ಅನೇಕ ಕಾರ್ಯಕ್ರಮಗಳಿಗೆ ಕೋಟಿಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತಂದ ಶ್ರೇಯಸ್ಸು ಮಹದೇವಪ್ಪನವರಿಗೆ ಸಲ್ಲುತ್ತದೆ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಮಹದೇವಪ್ಪನವರು ಲೋಕೋಪಯೋಗಿ ಸಚಿವರಾಗಿದ್ದಾಗ ಸುಮಾರು 40,000 ಕಿಮೀ ರಸ್ತೆ ಅಭಿವೃದ್ಧಿಯಾಯಿತು ಎಂದು ಶ್ಲಾಘಿಸಲಾಗುತ್ತದೆ. ಇಷ್ಟೆಲ್ಲ ಕೆಲಸಗಳನ್ನು ಮಾಡಿದ ಮಹದೇವಪ್ಪ ಅವರು 28,324 ಮತಗಳ ಅಂತರದಲ್ಲಿ ಸೋತಿದ್ದೇಕೆ ಎಂಬುದು ಯೋಚಿಸಬೇಕಾದ ಸಂಗತಿ.

ಎಂ. ರಾಜಶೇಖರಮೂರ್ತಿ

ಮಹದೇವಪ್ಪನವರ ಏಳುಬೀಳಿನ ಜೊತೆಯಲ್ಲಿಯೇ ಕ್ಷೇತ್ರದ ರಾಜಕಾರಣವನ್ನು ನೋಡುವುದು ಸೂಕ್ತ. ಇಲ್ಲಿ ಮಹದೇವಪ್ಪ 5 ಬಾರಿ ಆಯ್ಕೆಯಾದರೆ, ಸತತವಾಗಿ ನಾಲ್ಕು ಬಾರಿ ಎಂ. ರಾಜಶೇಖರಮೂರ್ತಿ ಅವರು ಗೆದ್ದು ದಾಖಲೆ ನಿರ್ಮಿಸಿದ್ದರು. 1952ರಲ್ಲಿ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹಾಗೂ ಛತ್ರ ಹೋಬಳಿ, ನಂತರ 1978ರಲ್ಲಿ ಟಿ.ನರಸೀಪುರ ತಾಲ್ಲೂಕಿನ ಕಸಬ, ಮೂಗೂರು ಹೋಬಳಿ ಮತ್ತು ಪಟ್ಟಣ ಒಳಗೊಂಡಂತೆ ಟಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರವನ್ನು ರೂಪಿಸಲಾಯಿತು. ಟಿ. ನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ 2008ರಲ್ಲಿ ಬನ್ನೂರು ವಿಧಾನಸಭಾ ಕ್ಷೇತ್ರವನ್ನು ವಿಲೀನಗೊಳಿಸಿ, ಬಿಳಿಗೆರೆ, ಕಸಬಾ ಹಾಗೂ ಛತ್ರ ಹೋಬಳಿಯನ್ನು ನೂತನ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲಾಯಿತು. ಬನ್ನೂರು, ತಲಕಾಡು, ಸೋಸಲೆ, ಮೂಗೂರು ಹೋಬಳಿ ಹಾಗೂ ಪಟ್ಟಣವನ್ನು ಒಳಗೊಂಡು ಟಿ.ನರಸೀಪುರ ಕ್ಷೇತ್ರ ಪುನರ್ ವಿಂಗಡಣೆಯಾಯಿತು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನಂಜನಗೂಡು: ಅನುಕಂಪದ ಅಲೆಯಲ್ಲಿ ದರ್ಶನ್ ಧ್ರುವ; ಆಂತರಿಕ ಬಿಕ್ಕಟ್ಟಿನಲ್ಲಿ ಹರ್ಷವರ್ಧನ್

ಇಲ್ಲಿನ ಮತದಾರರು ಈ ಕ್ಷೇತ್ರದಲ್ಲಿ ಹೆಚ್ಚು ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. 8 ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 3 ಬಾರಿ ಜನತಾ ಪಕ್ಷದ ಅಭ್ಯರ್ಥಿಗಳನ್ನು, 1 ಬಾರಿ ಬಿಜೆಪಿ ಅಭ್ಯರ್ಥಿಯನ್ನು ಹಾಗೂ 2 ಬಾರಿ ಜಾ.ದಳ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಎಂ.ರಾಜಶೇಖರಮೂರ್ತಿ, ವೆಂಕಟರಮಣ, ಎಂ.ಶ್ರೀನಿವಾಸಯ್ಯ, ಎಚ್.ಸಿ.ಮಹದೇವಪ್ಪ, ವಿ.ವಾಸುದೇವ, ಭಾರತೀಶಂಕರ್, ಈಗ ಎಂ.ಅಶ್ವಿನ್‌ಕುಮಾರ್ ಕ್ಷೇತ್ರವನ್ನು ಪ್ರತಿನಿಧಿಸಿರುವುದನ್ನು ಕಾಣಬಹುದು. ಸದ್ಯ ಜೆಡಿಎಸ್‌ನ ಅಶ್ವಿನ್ ಮತ್ತು ಕಾಂಗ್ರೆಸ್‌ನ ಮಹದೇವಪ್ಪ ಅವರ ನಡುವೆ ಪ್ರಬಲ ಪೈಪೋಟಿ ಇರುವುದನ್ನು ಕಾಣಬಹುದು.

ಜನತಾ ಪರಿವಾರದಲ್ಲಿ ಬೆಳೆದ ಎಚ್‌ಸಿಎಂ

ಜನತಾ ಪರಿವಾರದ ಸಕ್ರಿಯ ಕಾರ್ಯಕರ್ತರಾಗಿ ರಾಜಕೀಯ ಪ್ರವೇಶ ಪಡೆದ ಎಚ್.ಸಿ.ಮಹದೇವಪ್ಪನವರು ನರಸೀಪುರ ಕ್ಷೇತ್ರದ ತಾಲ್ಲೂಕು ಅಧ್ಯಕ್ಷರಾಗಿ ಜನತಾ ಪಕ್ಷವನ್ನು ಬಲಪಡಿಸಿದರು. 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಪುಟ್ಟಬಸವಯ್ಯನವರನ್ನು ಸೋಲಿಸಿದರು. 1989ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಶ್ರೀನಿವಾಸಯ್ಯ ಅವರ ಎದುರು ಸೋತರು. 1994ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಶ್ರೀನಿವಾಸಯ್ಯನವರಿಗೆ ಸೋಲುಣಿಸಿ ಮತ್ತೆ ಶಾಸಕರಾದರು. ಆ ವೇಳೆಗೆ ಜೆಡಿಎಸ್ ಹುಟ್ಟಿಕೊಂಡಿತ್ತು. 1999ರಲ್ಲಿ ಜೆಡಿಎಸ್ ಅಭ್ಯರ್ಥಿಯಾದ ಮಹದೇವಪ್ಪನವರು ಬಿಜೆಪಿಯ ಭಾರತಿ ಶಂಕರ್ ಎದುರು ಸೋಲು ಕಂಡರು. ಜೆಡಿಎಸ್‌ನಲ್ಲಿ ಪ್ರಬಲ ನಾಯಕರಾಗಿ ಬೆಳೆದಿದ್ದ ಎಚ್‌ಸಿಎಂ ಮತ್ತೆ 2004ರಲ್ಲಿ ಜೆಡಿಎಸ್‌ನಿಂದಲೇ ಸ್ಪರ್ಧಿಸಿ, ಕಾಂಗ್ರೆಸ್‌ನ ಶ್ರೀನಿವಾಸಯ್ಯನವರನ್ನು ಮಣಿಸಿದರು.

ಎಂ.ಸಿ. ಸುಂದರೇಶನ್

ಈ ವೇಳೆಗೆ ಜೆಡಿಎಸ್‌ನೊಳಗೆ ಪಲ್ಲಟಗಳು ಶುರುವಾದವು. ಸಿದ್ದರಾಮಯ್ಯನವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಸಿದ್ದರಾಮಯ್ಯನವರ ವಲಯದಲ್ಲಿ ಗುರುತಿಸಿಕೊಂಡಿದ್ದ ಎಚ್‌ಸಿಎಂ ಅವರೂ ಕಾಂಗ್ರೆಸ್ ಸೇರಿಕೊಂಡರು. 2008ರ ಚುನಾವಣೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ಬನ್ನೂರು ಕ್ಷೇತ್ರವನ್ನು ನರಸೀಪುರದೊಂದಿಗೆ ವಿಲೀನಗೊಳಿಸಲಾಯಿತು. ಒಕ್ಕಲಿಗ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿರುವ ಬನ್ನೂರು ಕ್ಷೇತ್ರ ಮಹದೇವಪ್ಪನವರ ಕೈತಪ್ಪಲಿಲ್ಲ. ಈ ವೇಳೆಗಾಗಲೇ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರಿಂದ, 2008ರ ಚುನಾವಣೆಯಲ್ಲಿ ಜೆಡಿಎಸ್‌ನ ಎಂ.ಸಿ.ಸುಂದರೇಶನ್ ಅವರನ್ನು 13724 ಮತಗಳ ಅಂತರದಲ್ಲಿ ಮಹದೇವಪ್ಪ ಮಣಿಸಿದರು. 2013ರಲ್ಲಿ ಅದೇ ಸುಂದರೇಶನ್ ಟಫ್ ಫೈಟ್ ನೀಡಿದರು. ಈ ಚುನಾವಣೆಯಲ್ಲಿ ಕೇವಲ 323 ಮತಗಳ ಅಂತರದಲ್ಲಿ ಗೆದ್ದ ಮಹದೇವಪ್ಪ ಗೆಲುವಿನ ದಡ ಮುಟ್ಟಿದರು. ಆದರೆ 2018ರಲ್ಲಿ ಎಚ್‌ಸಿಎಂ ಭಾರೀ ಸೋಲು ಕಂಡರು. 28324 ಮತಗಳ ಭಾರೀ ಅಂತರದಲ್ಲಿ ಅಶ್ವಿನ್ ಎದುರು ಸೋಲು ಕಂಡಿದ್ದು ಎಚ್‌ಸಿಎಂ ರಾಜಕೀಯದಲ್ಲಿ ಮಾಸದ ಗಾಯವಾಗಿ ಉಳಿಯಿತು.

ಮಹದೇವಪ್ಪ ಸೋತಿದ್ದೇಕೆ?

2018ರ ಚುನಾವಣೆಯಲ್ಲಿ ಎಚ್‌ಸಿಎಂ ಭಾರೀ ಅಂತರದಲ್ಲಿ ಸೋತಿದ್ದಕ್ಕೆ ಕ್ಷೇತ್ರದ ಜನತೆ ಹಲವು ಕಾರಣಗಳನ್ನು ನೀಡುತ್ತಾರೆ. ಲೋಕೋಪಯೋಗಿ ಸಚಿವರಾದ ಮೇಲೆ ಮಹದೇವಪ್ಪನವರು ಕ್ಷೇತ್ರದ ಮೇಲೆ ಹಿಡಿತ ಕಳೆದುಕೊಳ್ಳಲಾರಂಭಿಸಿದರು. ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾದ ಅವರು ಕ್ಷೇತ್ರವನ್ನು ತಮ್ಮ ಪುತ್ರ ಸುನಿಲ್ ಬೋಸ್ ಕೈಗಿತ್ತರು. ಸುನಿಲ್ ಬೋಸ್ ಅವರ ನಿಷ್ಕ್ರಿಯತೆ, ಆಲಸ್ಯ, ವೈಯಕ್ತಿಕ ದೌರ್ಬಲ್ಯಗಳ ಕಾರಣಕ್ಕೆ ನಿಧಾನವಾಗಿ ನರಸೀಪುರ ಕ್ಷೇತ್ರವು ಮಹದೇವಪ್ಪನವರಿಂದ ಜಾರುತ್ತಾ ಹೋಯಿತು. ಬೆಂಗಳೂರಿಗೆ ಹುಡುಕಿಕೊಂಡ ಹೋದ ಕ್ಷೇತ್ರದ ಜನತೆಗೆ, “ನನ್ನ ಮಗ ಸುನಿಲ್ ಇದ್ದಾನೆ. ಅವನಲ್ಲಿ ವಿಷಯ ತಿಳಿಸಿ, ಸಮಸ್ಯೆ ಬಗೆಹರಿಸುತ್ತಾನೆ” ಎಂದು ಎಚ್‌ಸಿಎಂ ಹೇಳಿ ಕಳಿಸುತ್ತಿದ್ದರು. ಸುನಿಲ್ ಜನಪರವಾಗಿ ಯೋಚಿಸುವ ಯುವಕನಾದರೂ ಜನರ ಕೈಗೆ ಸಿಗುತ್ತಿದ್ದದ್ದು ಮಾತ್ರ ದುರ್ಲಭವಾಗಿತ್ತು. ಜನಸಾಮಾನ್ಯರ ಕೈಗೆ ಮಹದೇವಪ್ಪನವರು ಸಿಗುವುದಿಲ್ಲ ಎಂಬ ಸಂದೇಶ ರವಾನೆಯಾಯಿತು. ಇತ್ತ ಚಾಮರಾಜನಗರ ಕ್ಷೇತ್ರದ ಸಂಸದರಾಗಿದ್ದ ಧ್ರುವನಾರಾಯಣ ಅವರು ಸುನಿಲ್‌ನನ್ನು ರಾಜಕೀಯವಾಗಿ ಮೇಲೆತ್ತುವ ಪ್ರಯತ್ನಗಳನ್ನು ಮಾಡಿದ್ದರು. ರಾಜಕಾರಣದಲ್ಲಿ ಬಹಳ ಶಿಸ್ತನ್ನು ಬೆಳೆಸಿಕೊಂಡಿದ್ದ ಧ್ರುವ ಅವರಿಗೂ ಸುನಿಲ್ ಅವರ ನಿರ್ಲಕ್ಷ್ಯ ಬೇಸರ ತರಿಸಿತ್ತು. ಜನರ ನಂಬಿಕೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಭಾವಿಸಿದ ಧ್ರುವ ಅವರು ಸುನಿಲ್ ಮೇಲಿನ ಕಾಳಜಿಯನ್ನು ಒಂದಿಷ್ಟು ಕಡಿಮೆ ಮಾಡಿಕೊಂಡರು. ಇವೆಲ್ಲ ಬೆಳವಣಿಗೆಗಳಿಂದಾಗಿ ಧ್ರುವ ಮತ್ತು ಎಚ್‌ಸಿಎಂ ನಡುವೆ ತಿಕ್ಕಾಟಗಳು ಆರಂಭವಾದವು ಎಂದು ಗುರುತಿಸಲಾಗುತ್ತದೆ.

ತಹಸೀಲ್ದಾರ್ ಸವಿತಾ ಪ್ರಕರಣ: ಎಚ್‌ಸಿಎಂ ಲೋಕೋಪಯೋಗಿ ಸಚಿವರಾಗಿದ್ದ ಅವಧಿಯಲ್ಲಿ ನರಸೀಪುರದಲ್ಲಿ ಎಂ.ಕೆ.ಸವಿತಾ ತಹಸೀಲ್ದಾರ್ ಆಗಿದ್ದರು. ವಿವಾಹಿತರಾಗಿದ್ದ ಸವಿತಾ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಸವಿತಾ ಮತ್ತು ಸುನಿಲ್ ಬೋಸ್ ನಡುವೆ ಪ್ರೇಮಾಂಕುರವಾಯಿತು. ಈ ವೇಳೆಗೆ ಸವಿತಾ ವಿಚ್ಛೇದನಾ ಪ್ರಕ್ರಿಯೆಯಲ್ಲಿ ಇದ್ದರು. ಮೂಲಗಳು ಹೇಳುವ ಪ್ರಕಾರ, “ಸುನಿಲ್-ಸವಿತಾ ವಿಷಯ ಕೇವಲ ವೈಯಕ್ತಿಕ ನೆಲೆಯಲ್ಲಿ ನಿಲ್ಲದೆ ಜಾತಿ-ಜಾತಿ ನಡುವಿನ ಪ್ರಕರಣವಾಗಿ ಹೊಮ್ಮಿತು. ಹೀಗಾಗಿ ಬನ್ನೂರು ಭಾಗದ ಒಕ್ಕಲಿಗ ಮತಗಳು ಎಚ್‌ಸಿಎಂ ಕೈತಪ್ಪಿ ಹೋಗಲು ಕಾರಣವಾದವು.”

ನರಸೀಪುರ ಕ್ಷೇತ್ರದಲ್ಲಿ ಒಕ್ಕಲಿಗರೇ ನಿರ್ಣಾಯಕ ಮತದಾರರು. ನಂತರದ ಸ್ಥಾನದಲ್ಲಿ ದಲಿತರು (ಎಡಗೈ- ಬಲಗೈ ಸೇರಿ), ನಾಯಕರು, ಕುರುಬರು, ಲಿಂಗಾಯತರು ಇದ್ದಾರೆ. ಎಲ್ಲ ಜಾತಿಯೊಂದಿಗೆ ಎಚ್‌ಸಿಎಂ ಬಾಂಧವ್ಯ ಅನೋನ್ಯವಾಗಿತ್ತು. ಆದರೆ ಕೆಲವೊಂದು ಘಟನೆಗಳು ಜಾತಿ ಧ್ರುವೀಕರಣದಲ್ಲಿ ಕೈತಪ್ಪಿ ಹೋಗಿರುವುದನ್ನು ಅಲ್ಲಗಳೆಯಲಾಗದು.

ನಾಯಕರ ಮತಗಳು ಕೈತಪ್ಪಿದವೇ?

ಪುರಸಭೆಯಾಗಿ ಮೇಲ್ದರ್ಜೆಗೇರಿದ ನರಸೀಪುರದಲ್ಲಿ ಕಟ್ಟಡ ಕಾಮಗಾರಿಗಳು ಆರಂಭವಾದವು. ಹೊಸ ಮಾರುಕಟ್ಟೆಯನ್ನು ನಿರ್ಮಿಸಲಾಗಿತ್ತು. ಈ ಭಾಗದಲ್ಲಿ ಸಾಂಪ್ರದಾಯಿಕವಾಗಿ ನಾಯಕ ಸಮುದಾಯ ತರಕಾರಿ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ಬರುತ್ತಿದೆ. ಮಾಂಸ ಮತ್ತು ತರಕಾರಿಯನ್ನು ಒಂದೇ ಕಡೆ ಮಾರಾಟ ಮಾಡುವಂತೆ ಮಾರ್ಕೆಟ್ ರೂಪಿಸಿದ್ದು ಟೀಕೆಗೆ ಗುರಿಯಾಗಿತ್ತು. ಈ ಎರಡನ್ನು ಬೇರ್ಪಡಿಸಿ, ಅನುಕೂಲ ಮಾಡಿಕೊಡಿ; ಅನೇಕರು ಮಾರ್ಕೆಟ್‌ನತ್ತ ಸುಳಿಯುತ್ತಿಲ್ಲ ಎಂಬುದು ಸಮುದಾಯದ ಬೇಡಿಕೆಯಾಗಿತ್ತು. ಎಚ್‌ಸಿಎಂ ಅವರನ್ನು ಒಮ್ಮೆ ಭೇಟಿಯಾಗಲು ಹೋದ ಮುಖಂಡರನ್ನು ಬಹಳ ಹೊತ್ತು ಕಾಯಿಸಲಾಯಿತು. ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಭಾವನೆ ಅವರಲ್ಲಿ ಮೂಡಿತು. ಕೋಪಗೊಂಡ ಈ ಮುಖಂಡರು ತಮ್ಮ ನಾಯಕ ಸಮುದಾಯದ ಮತಗಳು ಪ್ರಾಬಲ್ಯವಿರುವಲ್ಲಿ ಮಹದೇವಪ್ಪನವರ ವಿರುದ್ಧ ಪ್ರಚಾರ ಮಾಡಿದರು ಎಂದು ಹೇಳಲಾಗುತ್ತದೆ.

ಆರ್.ಧ್ರುವನಾರಾಯಣ

ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಡಗೈ ಸಮುದಾಯದ ಎಸ್.ಶಂಕರ್ ಕ್ಷೇತ್ರದಲ್ಲಿ ಗಮನ ಸೆಳೆದಿದ್ದರು. ಆದರೆ ಮತದಾನದ ಕೊನೆ ಗಳಿಗೆಯಲ್ಲಿ ನಿಷ್ಕ್ರಿಯರಾಗಿದ್ದರು. ಮಹದೇವಪ್ಪನವರನ್ನು ಸೋಲಿಸಬೇಕೆಂಬ ಇರಾದೆ ಬಿಜೆಪಿಯ ಹಿರಿಯ ದಲಿತ ನಾಯಕ ವಿ.ಶ್ರೀನಿವಾಸ ಪ್ರಸಾದ್ ಅವರಿಗೂ ಇತ್ತು. ಯಾಕೆಂದರೆ 2017ರಲ್ಲಿ ನಡೆದ ನಂಜನಗೂಡು ಉಪಚುನಾವಣೆಯಲ್ಲಿ ಪ್ರಸಾದ್ ಸೋಲಿನಲ್ಲಿ ಮಹದೇವಪ್ಪನವರ ಪಾತ್ರವೂ ಬಹುದೊಡ್ಡದಿತ್ತು. ಕೊನೆಗಳಿಗೆಯಲ್ಲಿ ಬೇರೆಯದೇ ರಾಜಕೀಯ ದಾಳಗಳನ್ನು ಪ್ರಸಾದ್ ಉರುಳಿಸಿರುವ ಸಾಧ್ಯತೆಗಳಿವೆ ಎಂದು ರಾಜಕೀಯ ವಿಶ್ಲೇಷಣೆಗಳು ಹೇಳುತ್ತವೆ.

ನಂಜನಗೂಡಿನಲ್ಲಿ ಸ್ಪರ್ಧಿಸುವ ಆಕಾಂಕ್ಷೆ

ಸೋಲಿನಿಂದ ನೊಂದಿದ್ದ ಎಚ್‌ಸಿಎಂ ನಂಜನಗೂಡಿನತ್ತ ಪ್ರಸಕ್ತ ಚುನಾವಣೆಯಲ್ಲಿ ಕಣ್ಣು ಹಾಯಿಸಿದ್ದರು. ಇಲ್ಲಿ ದಲಿತರ ಮತಗಳು ನಿರ್ಣಾಯಕವಾಗಿದೆ. ಹೀಗಾಗಿಯೇ ಧ್ರುವನಾರಾಯಣ ಅವರಂತೆಯೇ ಎಚ್‌ಸಿಎಂ ಕೂಡ ನಂಜನಗೂಡಿನಲ್ಲಿ ಸುತ್ತಾಟ ಆರಂಭಿಸಿದ್ದರು. ತಮ್ಮ ಪುತ್ರ ಸುನಿಲ್ ಅವರನ್ನು ನರಸೀಪುರದಲ್ಲಿ ನಿಲ್ಲಿಸಿ, ತಾವು ನಂಜನಗೂಡಿನಿಂದ ಸ್ಪರ್ಧಿಸುವ ಯೋಚನೆಯನ್ನು ಮಹದೇವಪ್ಪ ಮಾಡಿದ್ದರು. ಆದರೆ ನಂಜನಗೂಡಿನಿಂದ ಧ್ರುವನಾರಾಯಣ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ವರಿಷ್ಠರು ಬಯಸಿದ್ದರು. ಧ್ರುವ ಮತ್ತು ಎಚ್‌ಸಿಎಂ ನಡುವೆ ನಂಜನಗೂಡು ಟಿಕೆಟ್‌ಗಾಗಿ ಮುಸುಕಿನ ಗುದ್ದಾಟವಿದ್ದದ್ದು ಸುಳ್ಳಲ್ಲ. ಆದರೆ ಧ್ರುವ ಅವರ ಹಠಾತ್ ನಿಧನವು ಸನ್ನಿವೇಶಗಳ ಬದಲಾವಣೆಗೆ ಕಾರಣವಾಯಿತು.

ಇದನ್ನೂ ಓದಿ: ವರುಣಾ ವಿಧಾನಸಭಾ ಕ್ಷೇತ್ರ ಸಮೀಕ್ಷೆ: ಪುನರಾವರ್ತನೆಯಾದ 2018ರ ಹೈಡ್ರಾಮಾ!

“ಮಹದೇವಪ್ಪನವರ ಒತ್ತಡಗಳಿಂದಾಗಿಯೇ ಧ್ರುವ ಸಾವಿಗೀಡಾದರು” ಎಂಬ ಮೂದಲಿಕೆಯನ್ನು ಕೇಳಿ ಮಹದೇವಪ್ಪ ಜರ್ಜರಿತರಾದರು. “ಈ ಹೊಲಸು ರಾಜಕೀಯಕ್ಕೂ ಮೀರಿದ ನೋವಿನಲ್ಲಿರುವ ನನ್ನ ಮಗನಂತಹ ದರ್ಶನ್ ಜೊತೆಗೆ ಈ ವೇಳೆ ನಾವೆಲ್ಲರೂ ಬೆಂಬಲವಾಗಿ ನಿಲ್ಲೋಣ. ಏಕೆಂದರೆ ಮನುಷ್ಯನ ಕ್ಲಿಷ್ಟ ಸಂದರ್ಭದಲ್ಲಿ ಧೈರ್ಯ ಮತ್ತು ಸಾಂತ್ವನಕ್ಕೆ ಮಿಗಿಲಾದ ಸಂಗತಿ ಇನ್ನೊಂದಿಲ್ಲ ಎಂದು ಮಹದೇವಪ್ಪ ನುಡಿದರು. ಮಹದೇವಪ್ಪನವರ ಮೇಲೆ ಆಗುತ್ತಿದ್ದ ವೈಯಕ್ತಿಕ ದಾಳಿಯ ಸಂದರ್ಭದಲ್ಲಿ ದಸಂಸ ಐಕ್ಯತಾ ಸಮಿತಿಯ ನಾಯಕರು ಅವರ ಪರ ನಿಂತರು. ಈಗ ಪರಿಸ್ಥಿತಿ ತಿಳಿಯಾಗಿರುವಂತೆ ಕಂಡುಬರುತ್ತಿದೆ ಎನ್ನುತ್ತಾರೆ ಮತದಾರರು.

ಡಾ.ರೇವಣ್ಣ

ನರಸೀಪುರದಲ್ಲಿ ಹಳಿ ತಪ್ಪಿದ್ದ ಸಂಪರ್ಕವನ್ನು ಮತ್ತೆ ತಹಬದಿಗೆ ತರುವ ಪ್ರಯತ್ನದಲ್ಲಿ ಮಹದೇವಪ್ಪ ಇದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರವನ್ನು ಸುತ್ತುತ್ತಿದ್ದಾರೆ. ಸಮುದಾಯದ ಮುಖಂಡರುಗಳನ್ನು ನಿರಂತರ ಸಂಪರ್ಕಿಸುತ್ತಿದ್ದಾರೆ. ಆಗಿರುವ ಗಾಯಗಳು ಸದ್ಯಕ್ಕೆ ಮಾಸಿದಂತೆ ತೋರುತ್ತಿವೆ. ಒಂದು ವೇಳೆ ಮಹದೇವಪ್ಪನವರ ಬದಲು ಸುನಿಲ್ ಬೋಸ್ ಇಲ್ಲಿ ಸ್ಪರ್ಧಿಸಿದ್ದರೆ ಕಾಂಗ್ರೆಸ್‌ಗೆ ಕಷ್ಟವಾಗುತ್ತಿತ್ತು. ಜೊತೆಗೆ ಬನ್ನೂರು ಕ್ಷೇತ್ರದ ಮಾಜಿ ಶಾಸಕಿ ಸುನಿತಾ ವೀರಪ್ಪಗೌಡ ಕಾಂಗ್ರೆಸ್ ಸೇರಿರುವುದು ಪ್ಲಸ್ ಪಾಯಿಂಟ್. ಒಂದಿಷ್ಟು ಬನ್ನೂರು ಭಾಗದ ಮತಗಳು ಕಾಂಗ್ರೆಸ್‌ಗೆ ಮರಳುವ ಸಾಧ್ಯತೆಯೂ ಇದೆ. ಆದರೆ ಈ ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿರುವುದು ಸುಳ್ಳಲ್ಲ.

ಅಶ್ವಿನ್ ವರ್ಚಸ್ಸು ಕಡೆಗಣಿಸುವಂತಿಲ್ಲ

ಭಾರೀ ಮತಗಳ ಅಂತರದಲ್ಲಿ ಮಹದೇವಪ್ಪನವರನ್ನು ಸೋಲಿಸಿದ್ದ ಅಶ್ವಿನ್‌ಕುಮಾರ್ ಮೂಲತಃ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದವರು. ಸೋಮನಾಥಪುರ ಜಿಪಂ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದರು. ಜೆಡಿಎಸ್ ವರಿಷ್ಠರ ಗಮನ ಸೆಳೆದು 2018ರಲ್ಲಿ ಟಿಕೆಟ್ ಪಡೆದರು. ಚುನಾವಣೆಯಲ್ಲಿಯೂ ಗೆದ್ದರು. ಈಗಲೂ ಅವರಿಗೆ ಟಿಕೆಟ್ ಖಾತ್ರಿಯಾಗಿದೆ.

ಅಶ್ವಿನ್ ಅವರು ಶಾಸಕರಾದ ಬಳಿಕ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ಸ್ಥಳೀಯವಾಗಿ ಬೇರುಬಿಡುತ್ತಿದ್ದಾರೆ. ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಜನಸಾಮಾನ್ಯರು ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಅಲ್ಲಿ ಅಶ್ವಿನ್ ಹಾಜರ್. ಯಾವುದೇ ಸಾವಿನ ಸಂದರ್ಭಗಳಲ್ಲಿ ತಪ್ಪದೇ ಭೇಟಿ ನೀಡಿ ಸಾಂತ್ವನ ಹೇಳುತ್ತಾರೆ. ವಾರಕ್ಕೊಮ್ಮೆ ಜನಸಂಪರ್ಕ ಸಭೆಗಳನ್ನು ನಡೆಸುತ್ತಾ ಗಮನ ಸೆಳೆದಿದ್ದಾರೆ. ಸರಳತೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಚುನಾವಣಾ ಕಣದಲ್ಲಿ ತಳಸ್ಪರ್ಶಿಯಾಗಿ ಮಾತುಗಳನ್ನು ಆಡುತ್ತಾರೆ. ಇದು ಅಶ್ವಿನ್ ಅವರಿಗೆ ಬೇರೊಂದು ಇಮೇಜ್ ತಂದುಕೊಟ್ಟಿದೆ.

ಬಿಜೆಪಿ ಸಾಮಾನ್ಯವಾಗಿ ಮಾದಿಗ ಸಮುದಾಯಕ್ಕೆ ಕಳೆದ ಹತ್ತು ವರ್ಷಗಳಿಂದ ಇಲ್ಲಿ ಟಿಕೆಟ್ ನೀಡುತ್ತಾ ಬಂದಿದೆ. ಕಾಂಗ್ರೆಸ್ ಎಂಎಲ್‌ಎ ಟಿಕೆಟ್‌ಅನ್ನು ಬಲಗೈ ಸಮುದಾಯಕ್ಕೆ ಇಲ್ಲಿ ನೀಡುತ್ತಾ ಬಂದಿದ್ದರೂ ಎಂಎಲ್‌ಸಿ ಅಭ್ಯರ್ಥಿಗಳನ್ನು ಎಡಗೈ ಸಮುದಾಯದಿಂದ ಆಯ್ಕೆ ಮಾಡಿ, ಸಮತೋಲನ ಕಾಪಾಡುವ ತಂತ್ರಗಾರಿಕೆಯನ್ನು ಮೊದಲಿನಿಂದಲೂ ಮಾಡುತ್ತಿದೆ. ಎರಡು ಬಾರಿ ಆರ್.ಧರ್ಮಸೇನ ಅವರನ್ನು, ಈಗ ಡಾ.ತಿಮ್ಮಯ್ಯ ಅವರನ್ನು ಎಂಎಲ್‌ಸಿ ಮಾಡಿರುವುದು ಇದಕ್ಕೆ ಉದಾಹರಣೆ.

ವೈದ್ಯಕೀಯ ವೃತ್ತಿಯಲ್ಲಿದ್ದ ಡಾ.ರೇವಣ್ಣ ಸ್ವಯಂ ನಿವೃತ್ತಿ ಪಡೆದು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಮಂಗಳವಾರ ರಾತ್ರಿ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು ರೇವಣ್ಣ ಅವರನ್ನು ಕಣಕ್ಕಿಳಿಸಿದೆ. ರೋಗಿಗಳಿಗೆ ಟ್ರೀಟ್‌ಮೆಂಟ್ ಮಾಡುತ್ತಾ ನೇರವಾಗಿ ಒಂದಿಷ್ಟು ಜನರನ್ನು ರೇವಣ್ಣ ಬಲ್ಲರು. ಆದರೆ ಕ್ಷೇತ್ರದಲ್ಲಿನ ಕಾರ್ಯಕರ್ತರ ಪರಿಚಯ ಅಷ್ಟಾಗಿ ಅವರಿಗಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಬಿಜೆಪಿಯಿಂದ ಪ್ರಬಲ ಪೈಪೋಟಿಯನ್ನು ಇಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಇನ್ನು ಮಾಜಿ ಸಚಿವ ಡಾ.ಭಾರತೀ ಶಂಕರ್, ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಸಾಮ್ರಾಟ್ ಸುಂದರೇಶನ್, ಪ್ರೇಮಕುಮಾರಿ ಕೂಡ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಾಗಿದ್ದರು.

ಒಂದು ವೇಳೆ ಸುನಿಲ್ ಬೋಸ್ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದರೆ ಬಹುಶಃ ಅಶ್ವಿನ್ ಗೆಲುವು ಸುಲಭವಾಗಿಬಿಡುತ್ತಿತ್ತು. ಆದರೆ ಮಹದೇವಪ್ಪನವರ ಮೇಲೆ ಕ್ಷೇತ್ರದ ಜನತೆಗೆ ಈಗಲೂ ಪ್ರೀತಿ, ವಿಶ್ವಾಸವಿದೆ. ಹಳೆ ಹುಲಿ ಎಚ್‌ಸಿಎಂ ತಮ್ಮ ಹಳೆಯ ಪಟ್ಟುಗಳನ್ನು ಉರುಳಿಸಿದ್ದಾರೆ. ಅಶ್ವಿನ್ ಮತ್ತು ಮಹದೇವಪ್ಪನವರ ನಡುವೆ ಕತ್ತಕತ್ತಿನ ಕಾಳಗ ಏರ್ಪಡುವುದಂತೂ ನಿಶ್ಚಿತ ಎನ್ನಲಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...