ಕಾಡು ಮತ್ತು ಕಡಲು ಸಮಾನಾಂತರವಾಗಿ ಹಬ್ಬಿರುವ ಉಡುಪಿ ಎಂದಾಕ್ಷಣ ವಿಶಿಷ್ಟ ಶೈಲಿ-ರುಚಿಯ ಊಟ-ತಿಂಡಿಯ ವಿಶ್ವವ್ಯಾಪಿ ’ಉಡುಪಿ ಹೊಟೇಲ್’ಗಳು, ಶೂದ್ರ ಕನಕನಿಗೊಲಿದ ಕಡುಗೋಲು ಕೃಷ್ಣನ ದೇವಾಲಯ, ಅಷ್ಠ ಮಠದ ಮಡಿ-ಮೈಲಿಗೆ ತಾರತಮ್ಯ, ಸೇಂಟ್ ಮೇರಿ ದ್ವೀಪ ಸಮೂಹ, ಮಲ್ಪೆ ಬೀಚ್ ಮತ್ತು ಕೋಟ್ಯಾಂತರ ರುಪಾಯಿ ವಹಿವಾಟಿನ ಮೀನುಗಾರಿಕಾ ಬಂದರು, ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳೆಲ್ಲ ಒಟ್ಟೊಟ್ಟಿಗೆ ಕಣ್ಮುಂದೆ ಸುಳಿಯುತ್ತದೆ. ಉಡುಪಿ ನಗರ ಆಧಾರಿತ ವಿಧಾನಸಭಾ ಕ್ಷೇತ್ರವಾದ್ದರಿಂದ ಜನರಿಗೆ ದಿನನಿತ್ಯ ಬಾಧಿಸುವ ಸಮಸ್ಯೆಗಳು ದೊಡ್ಡ ಪ್ರಮಾಣದಲ್ಲಿಲ್ಲ. ಅವಿಭಜಿತ ದಕ್ಷಿಣ ಕನ್ನಡಕ್ಕೆ ಹಿಂದುತ್ವದ ಪ್ರಯೋಗಶಾಲೆಯೆಂಬ ಛಾಪು ಬಿದ್ದಿದೆಯಾದರೂ ಉಡುಪಿಮಟ್ಟಿಗೆ ಅನೈತಿಕ ಪೊಲೀಸ್‌ಗಿರಿ, ಕೌಬ್ರಿಗೇಡ್ ಹಾವಳಿ ಕಮ್ಮಿಯೆ! ಆದರೆ ಈಚೆಗೆ ಕರ್ನಾಟಕವನ್ನು ಕಂಗೆಡಿಸಿ ದೇಶವಿದೇಶದಲ್ಲಿ ವಿವಾದದ ಕಂಪನಗಳನ್ನೆಬ್ಬಿಸಿದ್ದ ’ಹಿಜಾಬ್’ ಹರಾಕಿರಿಯ ಮೂಲಬೀಜ ಮೊಳಕೆ ಒಡೆದಿದ್ದು ಉಡುಪಿಯಲ್ಲೆಂಬುದು ಇಲ್ಲಿಯ ಪ್ರಜ್ಞಾವಂತರನ್ನು ಆತಂಕಕ್ಕೀಡುಮಾಡಿದೆ!
ಉಡುಪಿಯ ಹೆಚ್ಚು ಜನರ ಆಡು ಭಾಷೆ ತುಳು. ದೈನಂದಿನ ಸಂವಹನ, ವ್ಯಾಪಾರ-ವಹಿವಾಟೆಲ್ಲ ತುಳುವಿನಲ್ಲಿ ನಡೆಯುತ್ತದೆ. ಭಾಷಾಶಾಸ್ತ್ರದ ತರ್ಕದಂತೆ ’ಒಡಿಪು’ ಶಬ್ದದಿಂದ ಉಡುಪಿ ನಿಷ್ಪನ್ನವಾಗಿದೆ. ಈಗಲೂ ಉಡುಪಿಯನ್ನು ತುಳುವಿನಲ್ಲಿ ಒಡಿಪು ಎಂದೇ ಕರೆಯಲಾಗುತ್ತಿದೆ. ಕನ್ನಡ, ಬ್ಯಾರಿ, ಕೊಂಕಣಿ, ನವಾಯತಿ, ಕೊರಗ ಮತ್ತು ಉರ್ದು ಮಾತು ಉಡುಪಿಯಲ್ಲಿ ಕೇಳಿಬರುತ್ತದೆ. ಉಡುಪಿಯ ಜೀವನದಿಗಳಾದ ಸೀತಾ ಮತ್ತು ಸ್ವರ್ಣ, ತೆಂಗು-ಕಂಗಿನ ತೋಟ, ಭತ್ತ-ನೆಲಗಡಲೆ-ಕಬ್ಬಿನ ಹೊಲಗಳನ್ನು ಹಸಿರಾಗಿಸಿದೆಯಾದರೂ ಶೇ.50ರಷ್ಟು ಮಂದಿ ವ್ಯವಸಾಯೇತರ ವ್ಯವಹಾರದಿಂದ ಬದುಕು ಕಟ್ಟಿಕೊಂಡಿದ್ದಾರೆ. ಐಟಿ ಲೋಕದಲ್ಲೂ ಉಡುಪಿ ಗುರುತಿಸಿಕೊಂಡಿದೆ. ಉಡುಪಿಯ ವಾಣಿಜ್ಯೋದ್ಯಮ ಮುಖ್ಯವಾಗಿ ಕೃಷಿ ಮತ್ತು ಮೀನುಗಾರಿಕೆ ಅವಲಂಬಿಸಿದೆ.
ಅಷ್ಟ ಮಠಗಳ ಪ್ರಭಾವ!
ಉಡುಪಿಯ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನೀತಿ-ನಿರೂಪಣೆ ನಿರ್ಧರಿತವಾಗುವುದು
ಅಷ್ಟ ಮಠಗಳ ಪ್ರಾಂಗಣದಲ್ಲೆಂಬ ಅಭಿಪ್ರಾಯವಿದೆ. ಅಷ್ಟ ಯತಿಗಳ ನಡುವೆ ಎರಡು ವರ್ಷಕ್ಕೊಮ್ಮೆ ನಡೆಯುವ ಕೃಷ್ಣ ಪೂಜಾಧಿಕಾರ ಹಸ್ತಾಂತರ-ಪರ್ಯಾಯ ಉತ್ಸವ ಧಾರ್ಮಿಕ ಮತ್ತು ಆರ್ಥಿಕ ಮಹತ್ವ ಪಡೆದಿದೆ. ತಂತಮ್ಮ ಸರದಿ ಬಂದಾಗ ಯತಿಗಳು ಪೈಪೋಟಿಗೆ ಬಿದ್ದು ಧಾರ್ಮಿಕ, ಆರ್ಥಿಕ, ಸಾಮಾಜಿಕ ಪ್ರಭಾವ ಬೆಳೆಸಿಕೊಳ್ಳುತ್ತಾರೆಂಬುದು ಬಹಿರಂಗ ರಹಸ್ಯ. ಲಕ್ಷಾಂತರ ಜನ ಸೇರುವ ವಿಜೃಂಭಣೆಯ ಪ್ರತಿ ಪರ್ಯಾಯಕ್ಕೂ ದೇಶ-ವಿದೇಶದಿಂದ ಕೋಟಿಕೋಟಿ ಹರಿದುಬರುತ್ತದೆ. ಪ್ರಧಾನಿಯಿಂದ ಸಾಮಾನ್ಯ ಶಾಸಕನ ತನಕದ ಎಲ್ಲ ಪಕ್ಷದ ರಾಜಕಾರಣಿಗಳು ಮಠದ ಕೃಪಾಶೀರ್ವಾದಕ್ಕೆ ಹಾತೊರೆಯುತ್ತಾರೆ.
ಧರ್ಮಕಾರಣದ ಕೇಂದ್ರವೆನ್ನಲಾಗುತ್ತಿರುವ ಅಷ್ಟಮಠ ಕರಾವಳಿಯ ಚುನಾವಣಾ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತಿದೆ. ತನಗೆ ಬೇಕಾದ ಅಭ್ಯರ್ಥಿಯನ್ನು ಗೆಲ್ಲಿಸಲು ಮಠ ತನು-ಮನ-ಧನದ ನೆರವು ನೀಡುತ್ತದೆಂಬ ಮಾತೂ ಇದೆ. ಇತ್ತೀಚೆಗೆ ನಿಧನರಾದ ಪೇಜಾವರ ಮಠಾಧೀಶ ವಿಶ್ವೇಶತೀರ್ಥರು ಬಿಜೆಪಿ ಹುರಿಯಾಳು ಯಾರಾಗಬೇಕು-ಯಾರಾಗಬಾರದೆಂದು ನಿರ್ಧರಿಸುವ ರಾಜರ್ಷಿಯಾಗಿದ್ದರೆನ್ನಲಾಗಿದೆ. ಕೋಮು ಸಾಮರಸ್ಯದ ಹೆಸರಲ್ಲಿ ಇಫ್ತಾರ್ ಕೂಟ ಏರ್ಪಡಿಸುತ್ತ ಮುಸ್ಲಿಮರ ಕಡೆಯಿಂದ ಬರುತ್ತಿದ್ದ ಆರ್ಥಿಕ ಮೂಲ ಕಾಪಾಡಿಕೊಳ್ಳುತ್ತಿದ್ದ ವಿಶ್ವೇಶ ತೀರ್ಥರು ಮತ್ತೊಂದೆಡೆ ಸಂಘಪರಿವಾರದ ಕಟ್ಟರ್ ಹಿಂದುತ್ವದ ಮಾರ್ಗದರ್ಶಕರಾಗಿದ್ದದ್ದು ವಿಪರ್ಯಾಸವೆಂದು ವ್ಯಾಖ್ಯಾನಿಸಲಾಗುತ್ತಿದೆ.
ದ್ವೈತ ಸಿದ್ಧಾಂತದ ಅಷ್ಟ ಮಠದ ಧೋರಣೆಯು ದ್ವಂದ್ವವೆಂಬ ಆಕ್ಷೇಪ ಲಾಗಾಯ್ತಿನಿಂದ ಕೇಳಿಬರುತ್ತಿದೆ. ಇದಕ್ಕೆ ಕಾರಣ ಮಠದಲ್ಲಿ ಬ್ರಾಹ್ಮಣ ಮತ್ತು ಶೂದ್ರರನ್ನು ಮೇಲು-ಕೀಳಾಗಿ ನೋಡುವ ರೀತಿ-ನೀತಿ. ಪಂಕ್ತಿ ಭೇದ ಇವತ್ತಿಗೂ ಅನೂಚಾನಾಗಿ ನಡೆದುಬರುತ್ತಿದ್ದು, ಅನಿಷ್ಠ ಅಜಲು ಪದ್ಧತಿಯ ಕೆಲವು ಆಚರಣೆಗಳೂ ಮುಂದುವರಿದಿದೆ. ಮಠದಲ್ಲಿ ಬ್ರಾಹ್ಮಣ ಗೆಳತಿ ಜತೆಯಲ್ಲಿ ಊಟಕ್ಕೆ ಕುಳಿತಿದ್ದ ಶೂದ್ರ ಉಪನ್ಯಾಸಕಿಯೊಬ್ಬರನ್ನು ಎಬ್ಬಿಸಿದ್ದ ಅಷ್ಟ ಮಠದ ಪರಿವಾರ ಅನಿಷ್ಟ ಸುದ್ದಿಗೆ ಈಡಾಗಿತ್ತು. ಕನಕ ಗೋಪುರ ವಿವಾದವಂತೂ ಅಷ್ಠ ಯತಿಗಳ ಶೂದ್ರ ವಿರೋಧಿ ಮನಸ್ಥಿತಿಯನ್ನು ನಿಸ್ಸಂಶಯವಾಗಿ ಸಾಬೀತುಪಡಿಸಿತ್ತು!
ಅಷ್ಟ ಮಠದ ಯತಿಗಳ ದ್ವೇಷಾಸೂಯೆಯ ಬೀದಿ ಕಾಳಗವೂ ಲೋಕಪ್ರಸಿದ್ಧ! ಎರಡು ವರ್ಷದ ಹಿಂದೆ ನಿಧನರಾದ ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮಿ ಮದ್ಯ ವ್ಯಸನಿ, ಸ್ತ್ರೀ ವ್ಯಾಮೋಹಿಯೆಂದು ವಿಶ್ವೇಶತೀರ್ಥ ಸ್ವಾಮಿ ಬಹಿರಂಗವಾಗಿಯೇ ಆರೋಪಿಸಿದ್ದರು. ವಿಶ್ವೇಶತೀರ್ಥರ ವಿರುದ್ಧ ಇಂಥದೆ ಆರೋಪವನ್ನು ಲಕ್ಷ್ಮೀವರ ಮಾಡಿದ್ದರು. ಲಕ್ಷ್ಮೀವರರ ಧ್ವನಿಯೆನ್ನಲಾದ ವಿಶ್ವೇಶತೀರ್ಥರ ವೈಯಕ್ತಿಕ ಬದುಕಿನ ಟೀಕೆ-ಟಿಪ್ಪಣಿಯ ಆಡಿಯೋ ಒಂದು ಹರಿದಾಡಿ ಅಲ್ಲೋಲಕಲ್ಲೋಲ ಉಂಟುಮಾಡಿತ್ತು! ಇತರ ಯತಿಗಳ ಬಗ್ಗೆಯೂ ವಾಣಿಜ್ಯ ವಹಿವಾಟು ಮತ್ತಿತರ ಅನೇಕ ಉಪ-ಕತೆಗಳಿದ್ದು, ಇದೆಲ್ಲ ಮಾಮೂಲಿ ಎಂಬಂತಾಗಿಬಿಟ್ಟಿದೆ ಕೃಷ್ಣ ಮಠದ ನಿಷ್ಟ ಅನುಯಾಯಿಗಳಿಗೆ!
ರಾಜಕೀಯ ಪುರಾಣ
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಲ್ಲವ, ಬಂಟ ಮತ್ತು ಮೊಗವೀರರು ಹೆಚ್ಚುಕಮ್ಮಿ ಸಮಬಲದಲ್ಲಿದ್ದಾರೆ. 2008ರಲ್ಲಿ ಪನರ್‌ರಚನೆ ಮಾಡಲಾಗಿರುವ ಈ ಕ್ಷೇತ್ರಕ್ಕೆ ಹಿಂದಿನ ಬ್ರಹ್ಮಾವರ ಕ್ಷೇತ್ರದಲ್ಲಿದ್ದ ಸೀತಾ ನದಿಯ ದಕ್ಷಿಣ ದಂಡೆಯ ಹಳ್ಳಿಗಳನ್ನು ಸೇರಿಸಲಾಗಿದೆ. ಉಡುಪಿ ಕ್ಷೇತ್ರದ ಗಡಿ ಗುರುತಿಸುವಿಕೆ ಅವೈಜ್ಞಾನಿಕ ಮತ್ತು ಅಸಮರ್ಪಕ ಎಂಬ ಕೂಗು ವ್ಯಾಪಕವಾಗಿ ಕೇಳಿಬರುತ್ತಿದೆ. ಒಂದು ಅಂದಾಜಿನಂತೆ ಉಡುಪಿ ಅಸೆಂಬ್ಲಿ ಕೇತ್ರದಲ್ಲಿ ಬಿಲ್ಲವರು 48 ಸಾವಿರ, ಬಂಟರು 42 ಸಾವಿರ, ಮೊಗವೀರರು 40 ಸಾವಿರ, ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರು 30 ಸಾವಿರ ಹಾಗು ಬ್ರಾಹ್ಮಣರು, ಕೊಂಕಣಿಗರು ಮತ್ತು ದಲಿತರೆ ಮುಂತಾದ ಸಣ್ಣಪುಟ್ಟ ಸಂಖ್ಯೆಯ ಜಾತಿಯವರಿದ್ದಾರೆ. ಕ್ಷೇತ್ರದ ಬಹುಸಂಖ್ಯಾತ ಮೀನುಗಾರರ (ಮೊಗವೀರ) ಮೀಸಲು ಕ್ಷೇತ್ರದಂತಿದ್ದ ಉಡುಪಿ ಹಿಂದುತ್ವದ ಆರ್ಭಟದಲ್ಲಿ ತೀರಾ ಅಲ್ಪಸಂಖ್ಯಾತ ಬ್ರಾಹ್ಮಣರ ಪಾಲಾಗುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
1957ರಿಂದ 1999ರವರೆಗಿನ ಅಸೆಂಬ್ಲಿ ಚುನಾವಣಾ ಫಲಿತಾಂಶದ ಮೇಲೆ ಕಣ್ಣು ಹಾಯಿಸಿದರೆ ಉಪೇಂದ್ರ ನಾಯಕ್, ಡಾ.ವಿ.ಎಸ್.ಆಚಾರ್ಯನಂಥ ಮೊಗವೀರೇತರರು ಎರಡು ಬಾರಿ ಶಾಸಕರಾಗಿದ್ದು ಬಿಟ್ಟರೆ ಉಳಿದೆಲ್ಲ ಸಲ ಮೊಗವೀರ ಸಮುದಾಯದವರೆ ಕ್ಷೇತ್ರ ಆಳಿದ್ದಾರೆ. 1957ರಲ್ಲಿ ಚುನಾಯಿತರಾಗಿದ್ದ ಪ್ರಜಾ ಸೋಷಲಿಸ್ಟ್ ಪಕ್ಷದ ಉಪೇಂದ್ರ ನಾಯಕ್ 1962ರಲ್ಲಿ ಕಾಂಗ್ರೆಸ್‌ನ ಮಲ್ಪೆ ಮಧ್ವರಾಜ್ (ಮಾಜಿ ಮಂತ್ರಿ ಪ್ರಮೋದ್ ಮಧ್ವರಾಜ್ ತಂದೆ) ಎದುರು ಗೆಲ್ಲಲಾಗಲಿಲ್ಲ. 1967ರಲ್ಲಿ ಕಾಂಗ್ರೆಸ್‌ನ ಎಸ್.ಕೆ.ಅಮೀನ್ ಆಯ್ಕೆಯಾಗಿದ್ದರು.
ಮನೋರಮಾ ಆಗಮನ
1972ರಲ್ಲಿ ದೇವರಾಜ ಅರಸು ಮಧ್ವರಾಜರ ಮಡದಿ ಮನೋರಮಾರಿಗೆ ಚುನಾವಣಾ ರಾಜಕಾರಣದ ದೀಕ್ಷೆ ಕೊಟ್ಟರು. ಜನಸಂಘದ ಡಾ.ವಿ.ಎಸ್.ಆಚಾರ್ಯರನ್ನು 14,944ಗಳ ಅಂತರದಲ್ಲಿ ಸೋಲಿಸಿ ವಿಧಾನಸಭೆ ಪ್ರವೇಶಿಸಿದ ಮನೋರಮಾರನ್ನು ಅರಸು ಮಂತ್ರಿಯೂ ಮಾಡಿದ್ದರು. ಮನೋರಮಾ 1978ರಲ್ಲಿ ಜನತಾ ಪಕ್ಷದ ಶ್ರೀಧರ ಕಲ್ಮಾಡಿ ಎದುರು ಮತ್ತೆ ಗೆಲುವು ಸಾಧಿಸಿದರು. ಅರಸು ಈ ಬಾರಿಯು ಮನೋರಮಾರಿಗೆ ಸಚಿವ ಸ್ಥಾನ ಕೊಟ್ಟರು. ಗುಂಡೂರಾವ್ ಸರಕಾರದಲ್ಲೂ ಸ್ಥಾನ ಪಡೆದಿದ್ದ ಮನೋರಮಾರಿಗೆ 1983ರಲ್ಲಿ
ಶಾಸಕಿಯಾಗುವುದು ಸಾಧ್ಯವಾಗಲಿಲ್ಲ. ಆ ವೇಳೆ ಸ್ಥಳೀಯ ಬಿಲ್ಲವ ಸಮುದಾಯದಲ್ಲಿ ಪ್ರಭಾವಿಯಾಗಿದ್ದ ಬಂಗಾರಪ್ಪ ಕಾಂಗ್ರೆಸ್ ಬಿಟ್ಟಿದ್ದರು. ಬಂಗಾರಪ್ಪನವರ ಜನತಾರಂಗ ಕಾಂಗ್ರೆಸ್ ಬುಟ್ಟಿಗೆ ಕೈಹಾಕಿದ್ದರಿಂದ ಬಿಜೆಪಿಯ ಡಾ.ವಿ.ಎಸ್. ಆಚಾರ್ಯ ’ಅಕಸ್ಮಾತ್’ ಗೆದ್ದರು.

ಅಲ್ಪಸಂಖ್ಯಾತ ಹೆಗಡೆ ಸರಕಾರಕ್ಕೆ ಬೆಂಬಲ ನೀಡಿದ್ದ ಬಿಜೆಪಿಯ 18 ಶಾಸಕರ ತಂಡದ ಮುಖಂಡರೂ ಆಗಿದ್ದ ಆಚಾರ್ಯ ಹೆಗಡೆಯವರನ್ನು ತುದಿಗಾಲಲ್ಲಿ ನಿಲ್ಲಿಸಿದ್ದರೆಂಬ ಮಾತು ಜೋರಾಗಿ ಕೇಳಿಬಂದಿತ್ತು. ಸಿಟಿ ಬಸ್‌ನ ಫುಟ್‌ಬೋರ್ಡ್ ಮೇಲೆ ನೇತಾಡುತ್ತ ಕಾಲೇಜಿಗೆ ಹೋಗುತ್ತಿದ್ದ ಆಚಾರ್ಯರ ಮಗ ಬೈಕ್ ಕೊಂಡಿದ್ದು ಆಗ ದೊಡ್ಡ ಸುದ್ದಿಯಾಗಿತ್ತು. ಅಧಿಕಾರಿಗಳ ವರ್ಗಾವಣೆಯಲ್ಲಿ ಆಚಾರ್ಯ ಸಿಎಂ ಹೆಗಡೆ ಮೇಲೆ ಒತ್ತಡ ಹಾಕುತ್ತಿದ್ದರೆಂಬ ಆರೋಪವೂ ಇತ್ತು. ಹೆಗಡೆ ಬಿಜೆಪಿ ಕಾಟ ತಾಳಲಾರದೆ ಮಧ್ಯಂತರ ಚುನಾವಣೆಗೆ ಹೋಗಿ ಪೂರ್ಣ ಬಹುಮತದಿಂದ ಸರಕಾರ ರಚಿಸಿದ್ದು ಇತಿಹಾಸ.
1985ರ ಚುನಾವಣೆ ಹೊತ್ತಿಗೆ ಬಂಗಾರಪ್ಪ ಮತ್ತೆ ಕಾಂಗ್ರೆಸ್ ಸೇರಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಮನೋರಮಾಗೆ ಬಿಲ್ಲವರ ಮತದ ದೊಡ್ಡ ಪಾಲು ದಕ್ಕಿತು. ಹೀಗಾಗಿ ವಿ.ಎಸ್.ಆಚಾರ್ಯ 15,641 ಮತದಂತರದಿಂದ ಪರಾಭವ ಅನುಭವಿಸಬೇಕಾಗಿಬಂತು. ಆನಂತರ ಹಲವು ಬಾರಿ ಸ್ಪರ್ಧಿಸಿದರೂ ಆಚಾರ್ಯರಿಗೆ ಜನಮನ್ನಣೆ ಸಿಗಲಿಲ್ಲ. ಬಿಜೆಪಿ ಚಿಂತನ ಚಿಲುಮೆಯ ಪ್ರಮುಖರಾಗಿದ್ದ ಆಚಾರ್ಯ ಹಿಂಬಾಗಿಲ ರಾಜಕಾರಣದಿಂದ ಮಂತ್ರಿಯೂ ಆಗಿದ್ದರು. ಕರಾವಳಿ ಬಿಜೆಪಿಯಲ್ಲಿ ಆಚಾರ್ಯ-ಕಲ್ಲಡ್ಕ ಜೋಡಿಯದೆ ಅಂತಿಮವಾಣಿಯಾಗಿತ್ತು.
ಮನೋರಮಾ ಮನೆಗೆ
ಜನಸಾಮಾನ್ಯರ ಕೈಗೆ ಸಿಗದೆ ಮಂತ್ರಿಗಿರಿ ರಾಜಕಾರಣದಲ್ಲಿ ತೊಡಗಿಕೊಂಡಿದ್ದ ಮನೋರಮಾ ಬಗ್ಗೆ ಕ್ಷೇತ್ರದಲ್ಲಿ 1989ರ ಇಲೆಕ್ಷನ್ ಸಂದರ್ಭದಲ್ಲಿ ಅಸಮಾಧಾನದ ಅಲೆ ಏಳಲಾರಂಭಿಸಿತ್ತು. ಪಕ್ಷೇತರ ಅಭ್ಯರ್ಥಿ ಯು.ಆರ್.ಸಭಾಪತಿಯತ್ತ ಸ್ವಜಾತಿ ಮೊಗವೀರರು ಒಲವು ತೋರಿದ್ದರು. ಮನೋರಮಾ ತಿಣುಕಾಡಿ 785 ಮತದಂತರದಿಂದ ದಡಸೇರಿದ್ದರು. ವೀರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪ ಮೊಯ್ಲಿ ಸಂಪುಟದಲ್ಲಿ ಮಂತ್ರಿ ಸ್ಥಾನಮಾನ ಸಿಕ್ಕರೂ ಮನೋರಮಾ ಕ್ಷೇತ್ರದ ಜನರ ವಿಶ್ವಾಸ ಮಾತ್ರ ಗಳಿಸಲಾಗಲಿಲ್ಲ.
ಅಮ್ಮನ ಮಂತ್ರಿಗಿರಿ ಅಧಿಕಾರ ಮಗ ಪ್ರಮೋದ್ ಚಲಾಯಿಸುತ್ತಾನೆಂಬ ಆರೋಪ ಒಂದೆಡೆಯಾದರೆ, ಮತ್ತೊಂದೆಡೆ ಜನರೊಂದಿಗೆ ಮನೋರಮಾ ಒರಟಾಗಿ ವರ್ತಿಸುತ್ತಾರೆಂಬ ಅಸಮಾಧಾನವಿತ್ತು. 1994ರ ಚುನಾವಣೆ ಎದುರಾದಾಗ ಬಂಗಾರಪ್ಪ ಕೆಸಿಪಿ ಕಟ್ಟಿದ್ದರು. 1989ರಲ್ಲಿ ಕೂದಲೆಳೆ ಅಂತರದಲ್ಲಿ ಸೋತಿದ್ದ ಸಭಾಪತಿ ಕೆಸಿಪಿ ಕ್ಯಾಂಡಿಡೇಟಾಗಿದ್ದರು. ಸ್ವಜಾತಿ ಮೊಗವೀರರ ಮತ್ತು ಬಿಲ್ಲವರ ಮತ ಗಳಿಸಿದ ಸಭಾಪತಿ ಮನೋರಮಾರನ್ನು ಮನೆಗೆ ಕಳಿಸಿ ಅಸೆಂಬ್ಲಿಗೆ ಹೋದರು. ಆನಂತರ ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗಿ ಮುನಿಸಿಕೊಂಡರು.
ಪ್ರಮೋದ್ ಮಧ್ವರಾಜ್ ಪ್ರವೇಶ
ಯಾವುದಾದರೂ ರಾಜ್ಯದ ರಾಜ್ಯಪಾಲ ಮಾಡಿಯೆಂದು ಕೇಳಿದರು ಕಾಂಗ್ರೆಸ್ ಹೈಕಮಾಂಡ್ ಹತ್ತಿರವಿದ್ದ ಆಸ್ಕರ್ ಫರ್ನಾಂಡಿಸ್ ಕೇರ್ ಮಾಡಲಿಲ್ಲವೆಂಬ ಸಿಟ್ಟಿನಿಂದ ಮನೋರಮಾ ಬಿಜೆಪಿ ಸೇರಿದರು. ಬಿಜೆಪಿ ಉಡುಪಿ-
ಚಿಕ್ಕಮಗಳೂರು ಕ್ಷೇತ್ರದ ಎಂಪಿಯಾಗುವ ಅವಕಾಶ ಕೊಟ್ಟಿತಾದರೂ ಆ ಪಕ್ಷದ ಗರ್ಭಗುಡಿ ಸಂಸ್ಕೃತಿಗೆ ಹೊಂದಿಕೊಳ್ಳಲಾಗದೆ ಪಾರ್ಲಿಮೆಂಟಲ್ಲಿ ಕಾಂಗ್ರೆಸ್ ಪರನಿಂತರು. ಕಾಂಗ್ರೆಸ್ ಬೆಂಬಲಿಸುವಾಗ- ತನ್ನ ಮಗ ಪ್ರಮೋದ್ ಮಧ್ವರಾಜ್‌ಗೆ ಉಡುಪಿಯಲ್ಲಿ ಕಾಂಗ್ರೆಸ್ ಎಮ್ಮೆಲ್ಲೆ ಟಿಕೆಟ್ ಕೊಡಬೇಕು- ಎಂದು ಷರತ್ತು ಹಾಕಿದ್ದರು. ಆ ಬಳಿಕ ಮನೋರಮಾ ರಾಜಕೀಯದಿಂದ ಸ್ವಯಂ ನಿವೃತ್ತಿ ಪಡೆದರು.
1999ರ ಚುನಾವಣೆ ಸಮಯದಲ್ಲಿ ಸಭಾಪತಿಯ ಸ್ವಯಂಕೃತ ಅಪರಾಧದಿಂದ ಜನರಿಗೆ ಬೇಸರ ಬಂದಿತ್ತು. ಬಿಜೆಪಿಯ ಸುಧಾಕರ ಶೆಟ್ಟಿ ಎದುರು ಗೆಲ್ಲಲು ಸಭಾಪತಿ ಹೆಣಗಬೇಕಾಯಿತು. 2004ರ ಚುನಾವಣೆ ನಡೆದಾಗ ಬಂಗಾರಪ್ಪ ಫ್ಯಾಕ್ಟರ್ ಮತ್ತು ಸಭಾಪತಿಗಿದ್ದ ಎಂಟಿಇನ್ಕಕಂಬೆನ್ಸ್ ಪರಿಣಾಮಬೀರಿತ್ತು. ಆಗ ಬಂಗಾರಪ್ಪ ಬಿಜೆಪಿಯಲ್ಲಿದ್ದರು. ಹೀಗಾಗಿ ಬಿಲ್ಲವರ ಮತ ಸಭಾಪತಿಗೆ ಖೋತಾ ಆಯಿತು. ಬಿಜೆಪಿಯ ರಘುಪತಿ ಭಟ್ ಕೇವಲ 1,533 ಮತದ ಅಂತರದಿಂದ ಶಾಸಕಗಿರಿ ಭಾಗ್ಯ ಕಾಣುವಂತಾಯಿತು. 2008ರಲ್ಲಿ ಸಭಾಪತಿ ತನಗೆ ಸಿಕ್ಕಿದ ಕಾಂಗ್ರೆಸ್ ಟಿಕೆಟ್ ಪ್ರಮೋದ್ ಮಧ್ವರಾಜ್‌ಗೆ ಬಿಟ್ಟುಕೊಟ್ಟರು. ಆದರೆ ಪ್ರಮೋದ್‌ಗೆ ಬಿಜೆಪಿಯ ರಘುಪತಿ ಭಟ್‌ಅನ್ನು ಮಣಿಸಲಾಗಲಿಲ್ಲ.

ರಘುಪತಿ ಭಟ್ ಕರಾವಳಿಯ ಸಂಘಪರಿವಾರದ ಸೂತ್ರಧಾರರೊಬ್ಬರನ್ನು ಎದುರುಹಾಕಿಕೊಂಡಿದ್ದರು. ಹೀಗಾಗಿ ಅವರಿಗೆ 2013ರ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸುವ ತಂತ್ರಗಾರಿಕೆ ಬಿಜೆಪಿಯಲ್ಲಿ ನಡೆದಿತ್ತು. ರಘುಪತಿ ಭಟ್ಟರದೆಂದು ಆರೋಪಿಸಲಾದ ರಾಸಲೀಲೆಯ ವೀಡಿಯೊ ಬಹಿರಂಗವಾಯಿತು. ಭಟ್ಟರಿಗೆ ತಪ್ಪಿದ ಬಿಜೆಪಿ ಟಿಕೆಟ್ ಬಂಟ ಸಮುದಾಯದ ಸುಧಾಕರ ಶೆಟ್ಟರ ಪಾಲಾಯಿತು. ಆದರೆ ಹಿಂದುಳಿದ ವರ್ಗದ ಕೈಗೆ ಕ್ಷೇತ್ರ ಹೋದರೆ ಬಿಜೆಪಿಯಲ್ಲಿನ ಮೇಲ್ವರ್ಗದವರಿಗದು ಮರಳಿ ಪಡೆಯುವುದು ಕಷ್ಟವೆಂದು ಸುಧಾಕರ ಶೆಟ್ಟರನ್ನು ಸೋಲಿಸುವ ಪ್ರಯತ್ನ ಬಿಜೆಪಿಗರೆ ಮಾಡಿದರೆಂಬ ತರ್ಕ ಇವತ್ತಿಗೂ ನಡೆಯುತ್ತಿದೆ. ಇದರ ಲಾಭ ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜರಿಗಾಯಿತು. ಸುಧಾಕರ ಶೆಟ್ಟಿ 39,524 ಮತಗಳ ಅಂತರದ ಪರಾಭವ ಅನುಭವಿಸಬೇಕಾಯಿತು.
ಬಿಜೆಪಿಯತ್ತ ಪ್ರಮೋದ್ ಚಿತ್ತ
ಕಾಂಗ್ರೆಸ್‌ನಲ್ಲಿ ಪ್ರಮೋದ್ ಎತ್ತರೆತ್ತರಕ್ಕೆ ಏರುತ್ತಾಹೋದರು. ಒಂದೇ ಅವಧಿಯಲ್ಲಿ ನಾಲ್ಕು ಮುಂಬಡ್ತಿ ಪಡೆದರು. ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಸಹಾಯಕ ಸಚಿವ, ಕ್ಯಾಬಿನೆಟ್ ಮಂತ್ರಿ ಸ್ಥಾನಕ್ಕೇರಿದರು. 2000 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಆದರೆ 2018ರ ಅಸೆಂಬ್ಲಿ ಚುನಾವಣೆಗೆ ಐದಾರು ತಿಂಗಳಿರುವಾಗ ನಿಗೂಢವಾಗಿ ನಿಧನನಾದ ಹೊನ್ನಾವರದ ಪರೇಶ್ ಮೇಸ್ತನ ಪ್ರಕರಣ ಬಳಸಿಕೊಂಡು ಸಂಘ ಪರಿವಾರ ಎಬ್ಬಿಸಿದ್ದ ಹಿಂದುತ್ವದ ಪ್ರಚಂಡ ಮಾರುತಕ್ಕೆ ವಿಚಲಿತರಾದ ಪ್ರಮೋದ್ ಬಿಜೆಪಿಗೆ ಹೋಗಲು ಹವಣಿಸಿದರು. ಆದರೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥರು ರಘುಪತಿ ಭಟ್ಟರ ಬೆನ್ನಿಗೆ ನಿಂತಿದ್ದರಿಂದ ಯಶಸ್ವಿಯಾಗಲಿಲ್ಲ.
ಕಾಂಗ್ರೆಸ್‌ನ ಮಂತ್ರಿಯಾಗಿದ್ದುಕೊಂಡು “ನಾನು ಬಿಜೆಪಿಗೆ ಹೋಗಬೇಕೆಂದು ಪ್ರಯತ್ನಿಸಿದ್ದೆ… ಆದರೆ ಗೇಟಲ್ಲಿ ಇಬ್ಬರು ನಿಂತು ಅಡ್ಡಿಮಾಡುತ್ತಿದ್ದಾರೆ” ಎಂದು ಬಹಿರಂಗವಾಗಿಯೇ ಹೇಳಿದ್ದ ಪ್ರಮೋದ್‌ರ ಬದ್ಧತೆ-ನಿಯತ್ತು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಪ್ರಮೋದ್‌ರನ್ನು ಗೇಟು ಪಾಲಕರೆಂದು ಜರಿದವರೆ ಈಗ ಅವರನ್ನು ಬಿಜೆಪಿಗೆ ಸೇರಿಸಲು ಹೆಬ್ಬಾಗಿಲಾಗಿದ್ದಾರೆಂದು ಬಿಜೆಪಿಗರು ವ್ಯಂಗ್ಯವಾಡುತ್ತಾರೆ. ಅನಿವಾರ್ಯವಾಗಿ 2018ರಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾದ ಪ್ರಮೋದ್ ತಾವೇ ನಿರೀಕ್ಷೆಯಂತೆ ಸೋತುಹೋದರು. ಆನಂತರ ಬಿಜೆಪಿ ಸೇರುವ ಪ್ರಯತ್ನ ಬಿರುಸುಗೊಳಿಸಿ ಎಂಪಿ ಅಭ್ಯರ್ಥಿಯಾಗುವ ಕನಸುಕಂಡರು. ಅದು ಕೈಗೂಡದಿದ್ದಾಗ ಜೆಡಿಎಸ್ ಸೇರಿ ಉಡುಪಿ-ಚಿಕ್ಕಮಗಳೂರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಹುರಿಯಾಳಾಗಿ ಹೀನಾಯವಾಗಿ ಸೋತು ಕಾಂಗ್ರೆಸ್‌ಗೆ ಮರಳಿದರು.
ರಾಜ್ಯದ ಗಂಗಾ ಮತಸ್ಥರ (ಮೀನುಗಾರ ಸಮುದಾಯ) ಮುಖಂಡನೆಂದು ಬಿಂಬಿಸಿಕೊಳ್ಳುತ್ತಿರುವ ಪ್ರಮೋದ್‌ಗೆ ತವರೂರು ಮಲ್ಪೆಯಲ್ಲೆ ಸ್ವಜಾತಿಯವರ ಮತಗಳನ್ನು ಪಡೆಯಲಾಗಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಾರ್ಟಿಯಲ್ಲಿ ಎಮ್ಮೆಲ್ಸಿ ಸ್ಥಾನದ ಬೇಡಿಕೆ ಇಟ್ಟಿದ್ದಾರೆನ್ನಲಾಗಿದೆ. ಎಮ್ಮೆಲ್ಸಿ ಮಾಡುವ ಪಕ್ಷದ ಪರವಾಗಿ ಇಡೀ ರಾಜ್ಯದ ಗಂಗಾಮತಸ್ಥರನ್ನು ಸಂಘಟಿಸುವುದಾಗಿ ಹೇಳಿದ್ದಾರಂತೆ. ದಟ್ಟವಾಗಿ ಹಬ್ಬಿರುವ ಮತ್ತೊಂದು ಸುದ್ದಿ ಪ್ರಕಾರ ನಿರ್ಮಲಾ ಸೀತಾರಾಮನ್‌ರಿಂದ ತೆರವಾಗಲಿರುವ ರಾಜ್ಯಸಭಾ ಸದಸ್ಯತ್ವ ಬೇಡಿಕೆಯಿಟ್ಟು ಮಾತುಕತೆ ನಡೆಸುತ್ತಿದ್ದಾರೆನ್ನಲಾಗಿದೆ. ಪ್ರಮೋದ್ ಪರವಾಗಿ ಬಿಜೆಪಿಯಲ್ಲಿ ವಕಾಲತ್ತು ಮಾಡುತ್ತಿದ್ದಾರೆನ್ನಲಾದ ಮಂತ್ರಿ ಸುನಿಲ್‌ಕುಮಾರ್ ಮತ್ತು ಶಾಸಕ ರಘುಪತಿ ಭಟ್ಟ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆಯ ವಿರೋಧಿಗಳು. ಇವರಿಬ್ಬರು ಪ್ರಮೋದ್ ಎಂಪಿ ಅಭ್ಯರ್ಥಿಯಾಗಲು ಸೂಕ್ತ ಎನ್ನುತ್ತಿದ್ದಾರಂತೆ.

ಇತ್ತ ಉಡುಪಿ ಕಾಂಗ್ರೆಸ್ ನಾವಿಕನಿಲ್ಲದ ದೋಣಿಯಂತೆ ಹೊಯ್ದಾಡುತ್ತಿದೆ. ಪ್ರಮೋದ್ ಕಾಂಗ್ರೆಸ್‌ಗೆ ಡ್ಯಾಮೇಜ್ ಮಾಡುತ್ತಿದ್ದರೂ ಹೈಕಮಾಂಡ್ ಸುಮ್ಮನಿರುವುದು ಕಾಂಗ್ರೆಸ್‌ನ ನಿಷ್ಟಾವಂತ ಕಾರ್ಯಕರ್ತರನ್ನು ಹತಾಶರಾಗಿಸಿದೆ. ಮುಂಬರುವ ಚುನಾವಣೆಯಲ್ಲಿ ಕ್ಯಾಂಡಿಡೇಟ್ ಯಾರೆಂಬ ಗೊಂದಲದಲ್ಲಿ ಕಾಂಗ್ರೆಸ್ ದುರ್ಬಲವಾಗುತ್ತಿದೆ. ಪಕ್ಷದ ಕಾರ್ಯಕರ್ತರ ಮತ್ತು ಜನರ ಸಂಪರ್ಕ ಕಳೆದುಕೊಂಡಿರುವ ಪ್ರಮೋದ್ ಅನಿವಾರ್ಯವಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಗೆಲ್ಲುವುದು ಕಷ್ಟವೆಂದು ತರ್ಕಿಸಲಾಗುತ್ತಿದೆ.
ಪ್ರಗತಿಯ ಗತಿ
ಸಣ್ಣ ಕೈಗಾರಿಕೆಗಳು, ಕೆಎಂಸಿಯಂಥ ಬೃಹತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಬ್ಯಾಂಕ್‌ಗಳು, ಮೆಡಿಕಲ್-ಇಂಜಿನಿಯರಿಂಗ್ ಇನ್ನಿತರ ಉನ್ನತ ಶಿಕ್ಷಣ ಸಂಸ್ಥೆಗಳು, ಮಣಿಪಾಲ ಮುದ್ರಣಾಲಯ, ವಿದೇಶಿ ವಿನಿಮಯ ನಡೆಸುವಂಥ ಮೀನುಗಾರಿಕಾ ಚಟುವಟಿಕೆಯ ಬಂದರು, ಹೊಟೇಲ್‌ಗಳು, ಕೃಷ್ಣ ಮಠ, ಪ್ರವಾಸೋದ್ಯಮ, ಮಾಲ್‌ಗಳು, ಅಂಡರ್‌ವರ್ಲ್ಡ್, ಕಮ್ಯುನಲ್ ಜಗತ್ತು – ಹೀಗೆ ಬೇಕಾದ-ಬೇಡವಾದ ವ್ಯಾಪಾರೋದ್ಯಮದಿಂದ ಸದಾ ಗಿಜಿಗುಡುವ ಉಡುಪಿ ಯದ್ವಾತದ್ವಾ ಬೆಳೆಯುತ್ತಿದೆ. ಒಂದು ಸಮೀಕ್ಷೆ ಪ್ರಕಾರ ಬೆಂಗಳೂರು ಮತ್ತು ಮಂಗಳೂರು ನಂತರ ಉಡುಪಿ ತಲಾ ಆದಾಯ ಹೆಚ್ಚು. ಆದರೆ ನಗರದ ಸರಹದ್ದಿನಾಚೆ ಬವಣೆಯ ಬದುಕಿದೆ. ಆರೆಂಟು ಸಾವಿರವಿರುವ ಕಾಡಿನಂಚಿನ ’ಕುಡುಬಿ’ ಬುಡಕಟ್ಟು ಸಮುದಾಯ ಮತ್ತು ಆದಿವಾಸಿ ’ಕೊರಗ’ ಜನಾಂಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಸ್ಯೆ ಎದುರಿಸುತ್ತಿವೆ. ಎಲ್ಲ ಪಕ್ಷದವರು ಈ ಸಮುದಾಯವನ್ನು ಓಟ್ ಬ್ಯಾಂಕ್‌ನಂತೆ ಪರಿಗಣಿಸಿದ್ದಾರೆಯೆ ಹೊರತು ಅವರನ್ನು ಮುಖ್ಯವಾಹಿನಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ.
ಸಾಕ್ಷರತೆ, ಶೈಕ್ಷಣಿಕವಾಗಿ ಮಂದುವರಿದಿರುವ ಉಡುಪಿಯ ಜನಜೀವನದಲ್ಲಿ ದೆವ್ವ-ಪಿಶಾಚಿ, ಮಾಟ-ಮೋಡಿ, ಮಡಿ-ಮೈಲಿಗೆ ಹಾಸುಹೊಕ್ಕಾಗಿದೆ. ಭೂತಕೋಲ, ಆಟಿಕಳಂಜ, ಕರಂಗೋಲು, ಪಾಣಾರಾಟ, ನಾಗಾರಾಧನೆ ಸಂಸ್ಕೃತಿಯ ಉಡುಪಿ ವ್ಯವಸಾಯಿಕ ಯಕ್ಷಗಾನ ಮೇಳಗಳ ತವರೂರು. ತುಳು ಸಿನೆಮಾ, ರಂಗಭೂಮಿ ಜನಪ್ರಿಯವಾಗಿದೆ. ಬಡವರ ಬದುಕಿಗೆ ಆಧಾರವಾಗಿದ್ದ ಹೆಂಚು ಮತ್ತು ಬೀಡಿ ಉದ್ಯಮ ಕಳೆಗುಂದಿದೆ. ಗೋಡಂಬಿ ಸಂಸ್ಕರಣಾ ಕಾರ್ಖಾನೆ, ಅಕ್ಕಿ ಗಿರಣಿ, ತೆಂಗಿನ ನಾರಿನ ಉದ್ಯಮ ನಡೆಯುತ್ತಿದೆ. ದಶದಿಕ್ಕಿಗೆ ಪರಿಮಳ ಚೆಲ್ಲಿರುವ ಉಡುಪಿ ಬ್ರ್ಯಾಂಡಿನ ಮಲ್ಲಿಗೆಗೆ ಜಿಯೋಲಾಜಿಕಲ್ ಐಡೆಂಟಿಫಿಕೇಶನ್ ಟ್ಯಾಗ್ ದೊರಕಿದೆ.
ಉಡುಪಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾಧಿಸುತ್ತದೆ. ವಾರಾಹಿ ನೀರನ್ನು ತರಲಾಗುತ್ತದೆ ಎನ್ನಲಾಗುತ್ತಿದೆ. ಆದರೆ ವಾರಾಹಿ ಯೋಜನೆ ಕುಂದಾಪುರ ಭಾಗದ ಕೃಷಿಕರಿಗಾಗಿ ರೂಪಿಸಿದ್ದಾಗಿದೆ. ಈ ನೀರು ಅಲ್ಲಿಯ ವ್ಯವಸಾಯಕ್ಕೆ ಸಾಕಾಗುವುದೇ ಅನುಮಾನವಿರುವಾಗ ಉಡುಪಿಯ ದಾಹ ನೀಗುವುದು ಹೇಗೆಂಬ ಪ್ರಶ್ನೆ ಜನರದು. ಸ್ವರ್ಣ ನದಿಯಲ್ಲಿನ ಹೂಳು ತೆಗೆದು ಉಡುಪಿಗೆ ಭರಪೂರು ಕುಡಿಯುವ ನೀರು ಒದಗಿಸಲಾಗುತ್ತದೆಂದು ಹೇಳಿ ಕೋಟ್ಯಾಂತರ ರುಪಾಯಿ ಮರಳು ತೆಗೆದು ಅಕ್ರಮ ವ್ಯವಹಾರ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಕೊರೊನಾ ಲಾಕ್‌ಡೌನ್ ಸಂದರ್ಭ ಬಳಸಿ ಬಿಜೆಪಿ ಮುಂದಾಳುಗಳು ಮರಳು ಕಳ್ಳಸಾಗಣೆ ಮಾಡಿದ್ದಾರೆಂದು ಜನರು ಆಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಲೋಕಾಯುಕ್ತದ ಗಮನಕ್ಕೂ ತರಲಾಗಿತ್ತಾದರೂ ಪ್ರಯೋಜನವಾಗಿಲ್ಲವೆಂದು ದೂರುದಾರರು ಹೇಳುತ್ತಾರೆ. ಉಡುಪಿ ಶಾಸಕ ರಘುಪತಿ ಭಟ್ಟರ ಮೇಲಿರುವ ದೊಡ್ಡ ಆರೋಪವೆ ಆವರು ಮರಳು ಲೂಟಿಕೋರರ ಲಾಬಿ ಪೋಷಿಸಿದ್ದಾರೆನ್ನುವುದಾಗಿದೆ. ಕಾಡುಗಳ್ಳರನ್ನು ಮಟ್ಟಹಾಕಿದ್ದ ಅರಣ್ಯಾಧಿಕಾರಿ ಮುನಿರಾಜುರನ್ನು ಈ ಶಾಸಕರು ಎತ್ತಂಗಡಿ ಮಾಡಿಸಿದ್ದು ಕೋಲಾಹಲವನ್ನೇ ಸೃಷ್ಟಿಸಿತ್ತು.

ಉಡುಪಿಗೆ ರಂಗಮಂದಿರ ಮತ್ತು ಸರಕಾರಿ ಮೆಡಿಕಲ್ ಕಾಲೇಜು ಬೇಕೆಂಬ ಕೂಗು ತುಂಬ ಸಮಯದಿಂದ ಕೇಳಿಬರುತ್ತಿದೆ. ಮಣಿಪಾಲದ ಮೆಡಿಕಲ್ ಮಾಫಿಯಾ ಉಡುಪಿಯಲ್ಲಿ ವೈದ್ಯಕೀಯ ಕಾಲೇಜಾಗದಂತೆ ನೋಡಿಕೊಳ್ಳುತ್ತಿದೆ ಎನ್ನಲಾಗಿದೆ. ಉಡುಪಿಯನ್ನು ಐಟಿ ಹಬ್ ಮಾಡುವ ವಿಪುಲ ಅವಕಾಶವಿದ್ದರೂ ಶಾಸಕ ಭಟ್ಟರು ಉದಾಸೀನದಿಂದ ಇದ್ದಾರೆಂಬ ಅಭಿಪ್ರಾಯವ್ಯಕ್ತವಾಗುತ್ತಿದೆ. ಐಟಿ ಹಬ್ ನಿರ್ಮಾಣವಾದರೆ ’ಧರ್ಮ ಯುದ್ಧ’ದ ಕಾಲಾಳುಗಳಾಗಿರುವ ನಿರುದ್ಯೋಗಿ ಯುವಕರ ಕೈಗೆ ಕೆಲಸ ದೊರಕುತಿತ್ತೆಂಬ ಕಳಕಳಿಯ ಮಾತುಗಳು ಕೇಳಿಬರುತ್ತಿದೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರಿಗೆ ಇದ್ದೂ ಇಲ್ಲದಂತಾಗಿದೆ. ಅದು ಬೆಲ್ಲ ತಯಾರಿಕಾ ಕಂಪನಿಯಾಗಿದೆಯೆಂದು ರೈತರು ಹೇಳುತ್ತಾರೆ.
ಉಡುಪಿಯ ಸಾವಿರಾರು ಕುಟುಂಬಗಳ ಬದುಕು ಮೀನುಗಾರಿಕೆಯನ್ನು ಅವಲಂಬಿಸಿದ್ದು, ವಾರಗಟ್ಟಲೆ ಆಳ ಸಮುದ್ರದಲ್ಲಿ ಜೀವ ಒತ್ತೆಯಿಟ್ಟು ಹಿಡಿದುತರುವ ಮೀನಿಗೆ ಬಂದರಿನಲ್ಲಿ ನ್ಯಾಯಬೆಲೆ ಸಿಗುತ್ತಿಲ್ಲವೆಂಬ ಕೊರಗಿದೆ. ಇನ್ನೊಂದೆಡೆ ಮೀನು ಮಾರಾಟ ಮಾಡುವ ಮಹಿಳೆಯರಿಗೂ ಯೋಗ್ಯ ದರ ದೊರಕದಂತಾಗಿದೆ. ಸಂಜೆವರೆಗೆ ಕಾದು ಕಡಿಮೆ ದರಕ್ಕೆ ಮೀನು ಬಿಕರಿ ಮಾಡಿಹೋಗುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಇದೆಲ್ಲ ನಿಯಂತ್ರಿಸಬೇಕಿದ್ದ ಸರಕಾರದ ಮೀನುಗಾರಿಕಾ ಅಭಿವೃದ್ಧಿ ನಿಗಮ ಮತ್ತು ಮೀನುಗಾರಿಕಾ ಇಲಾಖೆ ಕಣ್ಣುಮುಚ್ಚಿಕೊಂಡು ಕೂತಿದೆಯೆಂದು ಮೀನುಗಾರ ಮುಖಂಡರು ಬೇಸರಿಸುತ್ತಾರೆ.
ಚುನಾವಣಾ ಚಮತ್ಕಾರ
ಉಡುಪಿ ಶಾಸಕ ರಘುಪತಿ ಭಟ್ಟ ಸ್ವಭಾವತಃ ಕಟ್ಟರ್ ಹಿಂದುತ್ವವಾದಿಯಲ್ಲ. ಆದರೆ ಎಲ್ಲರನ್ನು ಒಟ್ಟಿಗೆ ಕರೆದೊಯ್ಯಲು ವಿಫಲರಾಗಿದ್ದಾರೆಂಬ ಮಾತು ಕೇಳಿಬರುತ್ತಿದೆ. ಮತೋನ್ಮತ್ತ ಹೇಳಿಕೆ, ಭಾಷಣ ಮಾಡದ ಭಟ್ಟರು ಎಲ್ಲರೊಂದಿಗೆ ಸರಳವಾಗಿ ಬೆರೆಯುತ್ತಾರೆ, ಪಕ್ಷದ ಕಾರ್ಯಕರ್ತರಿಗೆ ’ತೊಂದರೆ’ಯಾದರೆ ’ಯಾವ ಮಟ್ಟ’ಕ್ಕೂ ಹೋಗುತ್ತಾರೆ. ಆದರೆ ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ ಹಾಗಲ್ಲ. ರಾಜ-ಮಹಾರಾಜರ ಠೀವಿಯ ಪ್ರಮೋದ್ ಜನರಿಗೆ ನಾಟ್ ರಿಚಬಲ್ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ. ಜನರಿಗೆ ಪ್ರಮೋದ್‌ಗಿಂತ ಬೆಟರ್ ಆಗಿ ಕಾಣಿಸುವ ಭಟ್ಟರು ಕರಾವಳಿಯ ಸಂಘಪರಿವಾರದ ಕಟ್ಟರ್ ನಾಯಕನೊಬ್ಬನ ಅಂಕುಶಕ್ಕೆ ಸಿಲುಕಿ
ದಾರಿತಪ್ಪಿದಂತಾಗಿದ್ದಾರೆಂದು ಜನರು ಹೇಳುತ್ತಾರೆ.
2023ರಲ್ಲಿ ಬರಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರನ್ನು ಬದಲಿಸಿ ಹೊಸ ಮುಖಗಳನ್ನು ಪರಿಚಯಿಸಲು ಸಂಘಪರಿವಾರದ ಹೈಕಮಾಂಡ್ ತೀರ್ಮಾನಿಸಿದೆಯೆಂಬ ಗುಲ್ಲು ಬಿಜೆಪಿ ಬಿಡಾರದಿಂದ ಹೊರಬರುತ್ತಿದೆ. ಬಿಜೆಪಿ ಟಿಕೆಟ್ ನಿರ್ಧರಿಸುವ ಆರ್‌ಎಸ್‌ಎಸ್‌ನ ಸರ್ವೋಚ್ಚ ನಾಯಕನಿಗೆ ರಘುಪತಿ ಭಟ್ಟರೆಂದರೆ ಅಷ್ಟಕ್ಕಷ್ಟೆ! ಮೊಗವೀರ ಸಮುದಾಯದ ಉಗ್ರ ಹಿಂದುತ್ವವಾದಿ ಒಬ್ಬನಿಗೆ ಅಭ್ಯರ್ಥಿ ಮಾಡುವ ತಯಾರಿ ನಡೆದಿದೆಯೆನ್ನಲಾಗಿದೆ.
ಶಾಸಕ ಭಟ್ಟರ ಕೃಪಾಕಟಾಕ್ಷದಲ್ಲಿ ಮರಳು ಉದ್ಯಮಿಯಾಗಿ ಬೆಳೆದಿರುವ ಈ ನಿಯೋಜಿತ ಹುರಿಯಾಳು 2000ದ ದಶಕದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಹಾಜಬ್ಬ-ಹಸನಬ್ಬ ಎಂಬ ಜಾನುವಾರು ವ್ಯಾಪಾರಿ ತಂದೆ-ಮಗನನ್ನು ಬೆತ್ತಲೆ ಮಾಡಿ ಅಮಾನಷವಾಗಿ ಬಡಿದ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದೆ. ಶಾಸಕ ರಘುಪತಿ ಭಟ್ಟ ಹಿಜಾಬ್ ಪ್ರಕರಣವನ್ನು ಕಾಲೇಜು ಮಟ್ಟದಲ್ಲೆ ಬಗೆಹರಿಸುವ ಪ್ರಯತ್ನದಲ್ಲಿರುವುದನ್ನು ಅರಿತ ಅವರ ವಿರೋಧಿ ಆರ್‌ಎಸ್‌ಎಸ್ ಪ್ರಮುಖ ನಿಯೋಜಿತ ಕ್ಯಾಂಡಿಡೇಟನ್ನು ಮುಂದೆಮಾಡಿ ಬಿಟ್ಟಿದ್ದರೆನ್ನಲಾಗಿದೆ. ಈತ ತನ್ನನ್ನು ಬದಿಗೆ ಸರಿಸಿ ಹಿಜಾಬ್ ಪ್ರಕರಣದ ಲಾಭ ಪಡೆಯಲು ಹವಣಿಸಿದಾಗ ಅಸ್ತಿತ್ವ ಉಳಿಸಿಕೊಳ್ಳಲು ಭಟ್ಟರು ಅನಿವಾರ್ಯವಾಗಿ ಉಲ್ಟಾ ಹೊಡೆದು ಕಟ್ಟರ್ ನಿಲುವನ್ನು ಪ್ರದರ್ಶಿಸಿದರೆಂದು ಉಡುಪಿಯಲ್ಲಿ ಯಾರನ್ನು ಕೇಳಿದರು ಹೇಳುತ್ತಾರೆ.
ಉಡುಪಿಯಲ್ಲಿ ಕೇಸರಿ ಬಾವುಟಗಳು ನಳನಳಿಸತ್ತಿವೆಯಾದರೂ ಕಾಂಗ್ರೆಸ್‌ನ ಬೇರುಗಳೇನು ಒಣಗಿಲ್ಲ. ಪಕ್ಷ ದ್ರೋಹಿಗಳು ಮತ್ತು ಅನಾಯಕತ್ವದಿಂದ ಕಾಂಗ್ರೆಸ್ ಸೊರಗಿದೆಯೆಂದು ಆ ಪಕ್ಷದ ನಿಷ್ಟಾವಂತರು ಆಕ್ರೋಶದಿಂದ ಹೇಳುತ್ತಾರೆ. ಉಡುಪಿ ಕಾಂಗ್ರೆಸ್‌ನ ಹೈಕಮಾಂಡ್ ಆಗಿದ್ದ ಆಸ್ಕರ್ ಫರ್ನಾಂಡಿಸ್ ನಿಧನದ ನಂತರ ಆ ಪಕ್ಷ ನಾವಿಕನಿಲ್ಲದ ಹಡಗಿನಂತಾಗಿದೆ. ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುವ ಕೊನೆ ಹಂತದ ಕಸರತ್ತಿನಲ್ಲಿದ್ದಾರೆ. ಬಿಜೆಪಿ ಸೇರಲು ಸಾಧ್ಯವಾಗದೆ ಕಾಂಗ್ರೆಸ್‌ನಲ್ಲೆ ಉಳಿಯಬೇಕಾಗಿ ಬಂದರೂ ಅವರಿಗೆ ಚುನಾವಣೆ ಎದುರಿಸುವ ದೈರ್ಯವಿಲ್ಲವೆನ್ನಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರಿಗೂ ಅವರ ಮೇಲೆ ನಂಬಿಕೆ ಇಲ್ಲದಾಗಿದೆ.
ಕಾಂಗ್ರೆಸ್‌ನಲ್ಲಿ ಪರ್ಯಾಯ ಅಭ್ಯರ್ಥಿಯ ಹುಡುಕಾಟವೂ ನಡೆದಿದೆ. ಹುಂಡೈ ಕಾರು ಮಾರಾಟಗಾರ ’ಕಾಂಚನ್ ಹುಂಡೈ’ ಮಾಲಿಕ ಪ್ರಸಾದ್‌ರಾಜ್ ಕಾಂಚನ್‌ರನ್ನು ಅ ಖಾಡಕ್ಕಿಳಿಸುವ ಪ್ರಯತ್ನ ನಡೆದಿದೆ. ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದ, ಒಮ್ಮೆ ಬ್ರಹ್ಮಾವರದಲ್ಲಿ ಸಣ್ಣ ಅಂತರದಲ್ಲಿ ಸೋತಿದ್ದ ಸರಳಾ ಕಾಂಚನ್‌ರ ಮಗನಾದ ಪ್ರಸಾದ್ ಮಂಗಳೂರನ್ನು ತನ್ನ ವ್ಯವಹಾರದ ಕೇಂದ್ರ ಮಾಡಿಕೊಂಡಿರುವುದರಿಂದ, ಸುರತ್ಕಲ್ (ಮಂಗಳೂರು ಉತ್ತರ) ಕ್ಷೇತ್ರದ ಟಿಕೆಟ್ ಬಯಸಿದ್ದಾರೆನ್ನಲಾಗುತ್ತಿದೆ. ಉಡುಪಿಯ ಆಗು-ಹೋಗು, ಬೇಕು-ಬೇಡಗಳನ್ನು ತಿಳಿದಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಸಮರ್ಥ ಅಭ್ಯರ್ಥಿಯಾಗಬಲ್ಲರೆಂದು ಕಾಂಗ್ರೆಸ್‌ನಲ್ಲಿ ಚರ್ಚೆ ನಡೆದಿದೆ. ಉಡುಪಿಯಲ್ಲಿ ಬಂಧುತ್ವ ಬಯಸುವವರೂ ದೊಡ್ಡ ಸಂಖ್ಯೆಯಲ್ಲಿರುವುದರಿಂದ ಬಿಜೆಪಿಗೆ ಗೆಲುವು ಸುಲಭವೇನಲ್ಲ ಎಂದು ರಾಜಕೀಯ ವಿಶ್ಲೇಷಕರು ತರ್ಕಿಸುತ್ತಾರೆ. ಕಾಂಗ್ರೆಸ್ಸಿಗರು ಮನೆ ಮುರುಕುತನ ಬಿಟ್ಟರೆ ಗೆಲ್ಲುವುದು ಕಷ್ಟವೇನಲ್ಲ ಎನ್ನುವ ಮಾತೂ ಚಾಲ್ತಿಯಲ್ಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಭಟ್ಕಳ-ಹೊನ್ನಾವರ: ಧರ್ಮಕಾರಣ ಮತ್ತು ಜಾತಿಕಾರಣದ ಜುಗಲ್‌ಬಂದಿಯ ಆಖಾಡ!


