ಭಾನುವಾರ ನಡೆದ ಕಾರ್ಟಿಂಗ್ ಸ್ಪರ್ಧೆಯ (ಚಿಕ್ಕ ಕಾರು ಚಲಾಯಿಸುವ ರೇಸ್) ಯುರೋಪಿಯನ್ ಜೂನಿಯರ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ ಜಯಗಳಿಸಿದ 15 ವರ್ಷದ ಯುವಕನೊಬ್ಬ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ನಾಜಿ ಶೈಲಿಯಲ್ಲಿ ಸೆಲ್ಯೂಟ್ ಮಾಡಿರುವ ಘಟನೆ ಸಂಭವಿಸಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಇಂಟರ್ನ್ಯಾಷನಲ್ ಆಟೋಮೊಬೈಲ್ ಫೆಡರೇಶನ್ (ಎಫ್‌ಐಎ) ತನಿಖೆ ನಡೆಸುತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ರಷ್ಯಾ ಆಟಗಾರರನ್ನು ಬ್ಯಾನ್ ಮಾಡಿರುವ ಕಾರಣ ರಷ್ಯಾದ ಯುವ ಸ್ಪರ್ಧಿ ಆರ್ಟೆಮ್ ಸೆವೆರಿಯುಖಿನ್ ಈ ಚಾಂಪಿಯನ್‌ಶಿಪ್‌ನಲ್ಲಿ ಇಟಲಿ ಪರವಾನಗಿ ಅಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಜಯ ಗಳಿಸಿದ್ದರು. ಪ್ರಶಸ್ತಿ ಸ್ವೀಕರಿಸುವ ವೇಳೆ ಮುಷ್ಟಿ ಬಿಗಿಹಿಡಿದು ಎದೆಗೆ ಗುದ್ದಿಕೊಂಡ ನಂತರ ಕೈ ಮುಂದೆ ಮಾಡಿ ನಾಜಿ ಶೈಲಿಯಲ್ಲಿ ಸೆಲ್ಯೂಟ್ ಮಾಡಿದ್ದ. ಅಲ್ಲದೆ ಎದುರಿಗಿರುವವನ್ನು ನೋಡುತ್ತ ನಗುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಆತನನ್ನು ಸ್ಪರ್ಧೆಯಿಂದ ವಜಾಗೊಳಿಸಿದ್ದಲ್ಲದೆ, ಯಾವ ಪ್ರಚೋದನೆಗೆ ಒಳಗಾಗಿ ಆತ ನಾಜಿ ಶೈಲಿ ಸೆಲ್ಯೂಟ್ ಮಾಡಿದ ಎಂದು ತನಿಖೆ ನಡೆಸಲಾಗುತ್ತಿದೆ.
#Russian driver Artyom Severyukhin, competing under the Italian flag at the #European Junior Karting Championship, showed a #Nazi salute at the awards ceremony.
He competing under the #Italian flag because of the sanctions imposed on #Russia. pic.twitter.com/q4wOGHPsvR
— NEXTA (@nexta_tv) April 11, 2022
ಸೆವೆರಿಯುಖಿನ್ ಪ್ರತಿನಿಧಿಸುವ ವಾರ್ಡ್ ರೇಸಿಂಗ್ ತಂಡವು ಆತನನ್ನು ವಜಾಗೊಳಿಸಿದೆ ಎಂದು ತಿಳಿಸಿದೆ. “ಆ ಚಾಲಕನ ವರ್ತನೆಗೆ ವಾರ್ಡ್ ರೇಸಿಂಗ್ ತಂಡವು ನಾಚಿಕೆಪಡುತ್ತದೆ. ನಾವು ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ವಿರೋಧಿಸಿ ಪ್ರತಿ ಡ್ರೈವರ್‌ಗಳ ಹೆಲ್ಮೆಟ್ ಮೇಲೆ ಯುದ್ದ ಬೇಡ ಎಂಬ ಸ್ಟಿಕ್ಕರ್ ಅಂಟಿಸಿದ್ದೇವೆ. ಅಲ್ಲದೆ ನಮ್ಮ ತಂಡದೊಂದಿಗೆ ಉಕ್ರೇನ್‌ನ ಮೂರು ನಿರಾಶ್ರಿತ ಕುಟುಂಬಗಳು ಪ್ರಯಾಣ ಬೆಳೆಸಲು ಅನುವು ಮಾಡಿಕೊಟ್ಟಿದ್ದೇವೆ” ಎಂದು ಹೇಳಿಕೆ ನೀಡಿದೆ.
ವಿವಾದದ ಬಳಿಕ ವಿಡಿಯೋ ಮೂಲಕ ಕ್ಷಮೆ ಕೇಳಿರುವ ಯುವ ಸ್ಪರ್ಧಿ ಆರ್ಟೆಮ್ ಸೆವೆರಿಯುಖಿನ್, ಅದು ನಿಜವಾಗಿಯೂ ನಾಜಿ ಶೈಲಿಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. “ಬಹಳಷ್ಟು ಜನರು ಅದು ನಾಜಿ ಶೈಲಿ ಎಂಬು ಭಾವಿಸಿದ್ದಾರೆ, ಅದು ನಿಜವಲ್ಲ. ನಾನು ಎಂದಿಗೂ ನಾಜಿಸಂ ಅನ್ನು ಬೆಂಬಲಿಸುವುದಿಲ್ಲ. ನಾಜಿಸಂ ಮಾನವೀಯತೆಯ ವಿರುದ್ಧದ ಕೆಟ್ಟ ಅಪರಾಧಗಳಲ್ಲಿ ಒಂದು ಎಂದು ನಂಬಿದ್ದೇನೆ” ಎಂದಿದ್ದಾನೆ.
ನಾನು ಒಬ್ಬ ಮೂರ್ಖ ಎಂದು ನನಗೆ ಅರಿವಾಗಿದೆ. ಆ ಕೃತ್ಯಕ್ಕೆ ಶಿಕ್ಷ ಅನುಭವಿಸಲು ಸಿದ್ದನಿದ್ದೇನೆ. ಆದರೆ ನನ್ನ ಉದ್ದೇಶ ಕೆಟ್ಟದಾಗಿರಲಿಲ್ಲ ಎಂದು ಯುವ ಚಾಲಕ ತಿಳಿಸಿದ್ದಾನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಎಲ್ಲವನ್ನೂ ಇಲ್ಲಿಗೆ ಬಿಡಿ, ಕೋಮು ಸಾಮರಸ್ಯ ಹಾಳು ಮಾಡಬೇಡಿ: ಬಿಎಸ್‌ವೈ ಖಡಕ್ ಎಚ್ಚರಿಕೆ