ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಕಾರ್ಪೊರೇಷನ್‌ನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದಿಂದ 42 ವರ್ಷದ ಆಟೋರಿಕ್ಷಾ ಚಾಲಕ ಕೆ.ಸರವಣನ್ ಅಧಿಕಾರ ವಹಿಸಿಕೊಂಡಿದ್ದಾರೆ. ಸರವಣನ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಮ್ಮ ಆಟೋರಿಕ್ಷಾದಲ್ಲಿ ಆಗಮಿಸಿ ಗಮನ ಸೆಳೆದಿದ್ದಾರೆ.
ತಮಿಳುನಾಡು ರಾಜ್ಯದ ಆಡಳಿತಾರೂಢ ಡಿಎಂಕೆ ರಾಜ್ಯದ 21 ಪಾಲಿಕೆಗಳ ಪೈಕಿ 20 ಪಾಲಿಕೆಗಳ ಮುಖ್ಯಸ್ಥರಾಗಿ ಪಕ್ಷದಿಂದ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿದ್ದು, ಕಾಂಗ್ರೆಸ್‌ಗೆ ಒಂದು ಮೇಯರ್ ಹುದ್ದೆಯನ್ನು ಮೀಸಲಿಟ್ಟಿತ್ತು. ಕಾಂಗ್ರೆಸ್ ಪಕ್ಷ ಈ ಸ್ಥಾನಕ್ಕೆ ಪಕ್ಷದ ಹಿರಿಯ ಕಾರ್ಯಕರ್ತರಲ್ಲಿ ಒಬ್ಬರನ್ನು ನಾಮನಿರ್ದೇಶನ ಮಾಡುವ ನಿರೀಕ್ಷೆಯಿದ್ದರೂ, ಹೈಕಮಾಂಡ್ ಆಟೋರಿಕ್ಷಾ ಚಾಲಕರಾದ ಸರವಣನ್ ಅವರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಿದೆ.
ಸರವಣನ್ ಅವರು ಇತ್ತೀಚೆಗೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿರುವ ಕುಂಭಕೋಣಂನ ಮೊದಲ ಮೇಯರ್ ಕೂಡ ಆಗಿದ್ದಾರೆ. ಕುಂಭಕೋಣಂನ ವಾರ್ಡ್ 17ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 2,100 ಮತಗಳ ಪೈಕಿ 964 ಮತಗಳನ್ನು ಪಡೆದು ಸರವಣನ್ ಜಯಗಳಿಸಿದ್ದರು.
ಇದನ್ನೂ ಓದಿ: 334 ವರ್ಷಗಳ ಇತಿಹಾಸವಿರುವ ಚೆನ್ನೈ ಪಾಲಿಕೆಗೆ ಮೊದಲ ಬಾರಿಗೆ ದಲಿತ ಮಹಿಳೆ ಮೇಯರ್
எளிமையான பின்னனி கொண்ட ஆட்டோ ஓட்டுனர் திரு. க. சரவணன் அவர்கள் கும்பகோணம் மேயராக காங்கிரஸ் கட்சி சார்பில் வேட்பாளராக அறிவிக்கப்பட்டுள்ளார். இது காங்கிரஸ் கட்சியில் மட்டுமே சாத்தியம். எளிய மக்களின் குரலாய் அவர்களின் வளர்ச்சிக்கு துணையாய் காங்கிரஸ் எப்போதும் உற்ற துணையாய் இருக்கும். pic.twitter.com/mHoYJ7pmMT
— Tamil Nadu Congress Committee (@INCTamilNadu) March 3, 2022
“ತಂಜಾವೂರು ಉತ್ತರ ಕಾಂಗ್ರೆಸ್ ಸಮಿತಿಯ ಜಿಲ್ಲಾ ನಾಯಕ ಟಿ.ಆರ್.ಲೋಗನಾಥನ್ ಅವರು ಜಿಲ್ಲಾ ಕಛೇರಿಗೆ ಬರುವಂತೆ ನನ್ನನ್ನು ಹೇಳಿ, ನಿಮಗೆ ಒಂದು ಆಶ್ಚರ್ಯವಿದೆ ಎಂದು ಹೇಳಿದ್ದರು. ನಾನು ಕಚೇರಿಯನ್ನು ತಲುಪಿದಾಗ, ‘ಸ್ವಾಗತ, ಕುಂಭಕೋಣಂನ ಮೊದಲ ಮೇಯರ್’ ಎಂದು ನನಗೆ ಅದ್ದೂರಿ ಸ್ವಾಗತ ನೀಡಿದರು. ನಾನು ಗಾಬರಿಯಾದೆ. ಅನೇಕ ಹಿರಿಯ ನಾಯಕರು ಮತ್ತು ಪದಾಧಿಕಾರಿಗಳಿರುವುದರಿಂದ ನಾನು ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ” ಎಂದು ಕೆ. ಸರವಣನ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಹತ್ತನೇ ತರಗತಿವರೆಗೆ ಓದಿರುವ ಸರವಣನ್ ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅಜ್ಜ-ಅಜ್ಜಿಯ ಆಶ್ರಯದಲ್ಲಿ ಬೆಳೆದವರು. ಅವರ ಅಜ್ಜ ಟಿ.ಕುಮಾರಸ್ವಾಮಿ ಅವರು 1976 ರಲ್ಲಿ ಕುಂಭಕೋಣಂ ಪುರಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಅಜ್ಜನಿಂದ ಪ್ರೇರಿತರಾದ ಸರವಣನ್ 2002 ರಲ್ಲಿ ಕಾಂಗ್ರೆಸ್‌ಗೆ ಸೇರಿದ್ದರು. ಶೀಘ್ರದಲ್ಲೇ ವಾರ್ಡ್ ನಾಯಕರ ಹುದ್ದೆಗೆ ಮತ್ತು ನಂತರ ಪುರಸಭೆಯಲ್ಲಿ ಪಕ್ಷದ ಉಪನಾಯಕರಾಗಿ ನಾಮನಿರ್ದೇಶನಗೊಂಡಿದ್ದರು.
ಪತ್ನಿ ದೇವಿ ಮತ್ತು ಮೂವರು ಮಕ್ಕಳೊಂದಿಗೆ ತುಕ್ಕಂಪಾಳ್ಯಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಸರವಣನ್ ಎರಡು ದಶಕಗಳಿಂದ ಆಟೋರಿಕ್ಷಾ ಓಡಿಸುತ್ತಿದ್ದಾರೆ. ಏಳು ವರ್ಷಗಳ ಹಿಂದೆ ಸ್ವಂತ ಆಟೋರಿಕ್ಷಾ ಖರೀದಿಸಿ ಜೀವನ ಸಾಗಿಸುತ್ತಿದ್ದಾರೆ. ದಿನಕ್ಕೆ ನನಗೆ ಸುಮಾರು 200-250 ರೂಪಾಯಿ ಗಳಿಸುವ ಇವರು ಲಾಕ್‌ಡೌನ್ ನನ್ನ ಜೀವನೋಪಾಯಕ್ಕೆ ಸಂಪೂರ್ಣ ಹೊಡೆತ ನೀಡಿತ್ತು ಎಂದಿದ್ದಾರೆ.
“ಲಾಕ್‌ಡೌನ್ ಸಮಯದಲ್ಲಿ ನನ್ನ ಪ್ರದೇಶದ ಜನರು ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಈಗಲೂ, ಅವರು ಈ ಚುನಾವನೆ ಗೆಲ್ಲಲು ನನಗೆ ಸಹಾಯ ಮಾಡಿದರು. ಸಾಧ್ಯವಾದಾಗಲೆಲ್ಲಾ ನಾನು ಅವರನ್ನು ಭೇಟಿ ಮಾಡುವುದನ್ನು ಮುಂದುವರಿಸುತ್ತೇನೆ. ಭೂಗತ ಒಳಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು, ಹಾಳಾದ ರಸ್ತೆಗಳನ್ನು ಸರಿಪಡಿಸುವುದು ಮತ್ತು ಕುಡಿಯುವ ನೀರು ಸರಬರಾಜು, ಬೀದಿ ದೀಪಗಳು ಮುಂತಾದ ಮೂಲಭೂತ ಸೌಕರ್ಯಗಳನ್ನು ನೀಡುವುದು ನನ್ನ ಮೊದಲ ಕರ್ತವ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 15 ಮತಗಳ ಅಂತರದಿಂದ ಗೆದ್ದ ಟ್ರಾನ್ಸ್‌ಜೆಂಡರ್ ಅಭ್ಯರ್ಥಿ


