ಪಂಚರಾಜ್ಯ ಚುನಾವಣಾ ದಿನಾಂಕ ಪ್ರಕಟವಾಗಿದ್ದು, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗೆ ಪಕ್ಷಗಳು ಬಿರುಸಿನ ತಯಾರಿ ನಡೆಸಿವೆ. ತಮಿಳುನಾಡಿನ ಡಿಎಂಕೆ ಯುವ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ ಟಿಕೆಟ್‌ಗಾಗಿ ಸಂದರ್ಶನ ಕೂಡ ಎದುರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ, ಚೆಪಾಕ್-ತಿರುವಳ್ಳಿಕೇಣಿ ಕ್ಷೇತ್ರದಿಂದ ಸ್ಪರ್ಧಿಸಲು ಉದಯನಿಧಿ ತಮ್ಮ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂಬ ಊಹಪೋಹಗಳ ನಂತರ ಅವರ ಸುತ್ತ ವಿವಿಧ ಟೀಕೆಗಳು ಮತ್ತು ಪ್ರಶ್ನೆಗಳು ಎದ್ದಿವೆ. ಪ್ರತಿಪಕ್ಷಗಳು ಡಿಎಂಕೆ ವಿರುದ್ಧ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದು, ಇದು ಉತ್ತರಾಧಿಕಾರ ರಾಜಕೀಯ ಮತ್ತು ಕುಟುಂಬ ರಾಜಕಾರಣವನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿದೆ. ಇದನ್ನು ಕೊನೆಗೊಳಿಸಲು, ಉದಯನಿಧಿ ಸ್ಟಾಲಿನ್ ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ವರದಿಯಾಗಿತ್ತು.
ಆದರೆ, ಶನಿವಾರ ತಮಿಳುನಾಡಿನ ಚೆನ್ನೈನಲ್ಲಿರುವ ಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಉದಯನಿಧಿ ಸ್ಟಾಲಿನ್, ಡಿಎಂಕೆ ಚುನಾವಣಾ ಸಮಿತಿಯ ಎದುರು ಹಾಜರಾಗಿ ಸಂದರ್ಶನ ನೀಡಿದ್ದಾರೆ. ಡಿಎಂಕೆ ಪಕ್ಷದ ಟಿಕೆಟ್ ಪಡೆದುಕೊಳ್ಳುವ ಆಕಾಂಕ್ಷಿಗಳು ಡಿಎಂಕೆ ಚುನಾವಣಾ ಸಮಿತಿಯ ಎದುರು ಹಾಜರಾಗಿ ಸಂದರ್ಶನ ನೀಡುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: ತಮಿಳುನಾಡು: ದಿ. ಕರುಣಾನಿಧಿ ಮೊಮ್ಮಗ ಉದಯನಿಧಿ ವಿರುದ್ಧ ಸ್ಪರ್ಧಿಸಲಿದ್ದಾರಾ ನಟಿ ಖುಷ್ಬೂ?
Chennai: Udayanidhi Stalin, son of DMK President MK Stalin and DMK Youth Wing Secretary was interviewed by the DMK election committee at party headquarters yesterday.
Udayanidhi Stalin is seeking a ticket to contest from Chennai-Chepauk assembly constituency. pic.twitter.com/vocqS9duJq
— ANI (@ANI) March 7, 2021
ಪ್ರಮುಖ ಡಿಎಂಕೆ ಚುನಾವಣಾ ಅಧಿಕಾರಿಗಳು ಉದಯನಿಧಿ ಸ್ಪರ್ಧೆ 100% ನಿರ್ಧಾರವಾಗಿಲ್ಲ ಎಂದು ಹೇಳಿದ್ದಾರೆ. ಆದರೆ ರಾಜಕೀಯ ರಂಗದಲ್ಲಿ ಏನು ಬೇಕಾದರೂ ಆಗುವುದರಿಂದ, ಡಿಎಂಕೆ ಯುವ ಕಾರ್ಯದರ್ಶಿ ವಿರುದ್ಧ ಪ್ರತಿಪಕ್ಷಗಳು ಅವರನ್ನು ಸೋಲಿಸಲು ಅಗತ್ಯವಾದ ಎಲ್ಲ ಕೆಲಸಗಳಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.
ದಿವಂಗತ ಕರುಣಾನಿಧಿಯವರ ಮೊಮ್ಮಗ ಸ್ಪರ್ಧಿಸಲು ಯೋಜಿಸಿದ್ದಾರೆ ಎನ್ನಲಾದ ಚೆಪಾಕ್-ತಿರುವಳ್ಳಿಕೆಣಿ ಕ್ಷೇತ್ರದಲ್ಲಿ, ಡಿಎಂಕೆಯ ಪ್ರಮುಖ ಪ್ರತಿಸ್ಪರ್ಧಿ ಪಕ್ಷ ಎಐಎಡಿಎಂಕೆ-ಬಿಜೆಪಿ ಮೈತ್ರಿಯ ಅಭ್ಯರ್ಥಿ ನಟಿ ಖುಷ್ಬೂ ಅವರನ್ನು ಕಣಕ್ಕಿಳಿಸಲು ಯೋಜಿಸುತ್ತಿದೆ.
ಸಂದರ್ಶನದಲ್ಲಿ ಭಾಗಿಯಾಗಿರುವ ಕುರಿತು ಪ್ರತಿಪಕ್ಷಗಳು ಎತ್ತಿರುವ ಪ್ರಶ್ನೆಗೆ, “ಪಕ್ಷದ ಅನೇಕ ಕಾರ್ಯಕರ್ತರು ಸಂದರ್ಶನದಲ್ಲಿ ಪಕ್ಷದ ನಾಯಕರನ್ನು ವೈಯಕ್ತಿಕವಾಗಿ ಭೇಟಿಯಾಗಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ತಂದೆ-ಮಗನ ಸಂಬಂಧ ಏನೇ ಇರಲಿ, ಪಕ್ಷದ ಕಾರ್ಯಕರ್ತರಾಗಿ ಉದಯನಿಧಿ ಸ್ಟಾಲಿನ್ ಸಂದರ್ಶನಕ್ಕೆ ಹಾಜರಾಗಬೇಕಾಗಿತ್ತು. ಆ ಭಾವನೆಯಿಂದ ಉದಯನಿಧಿ ಅವರು ಸಂದರ್ಶನದಲ್ಲಿ ಭಾಗವಹಿಸಿದರು” ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಪಕ್ಷದಲ್ಲಿ ಈವರೆಗೆ ಕರುಣಾನಿಧಿ ಮೊಮ್ಮಗನಿಗೆ ಟಿಕೆಟ್ ನೀಡುವ ಬಗ್ಗೆ ನಿರ್ಧಾರವಾಗಿಲ್ಲ. ಪಕ್ಷದಿಂದ ಯಾವುದೇ ಅಧಿಕೃತ ಘೋಷಣೆಗಳು ಬಂದಿಲ್ಲ. ಆದರೆ ಪ್ರತಿಪಕ್ಷಗಳು ಉದಯನಿಧಿ ವಿರುದ್ಧ ಈಗಾಗಲೇ ಹಲವು ಯೋಜನೆಗಳನ್ನು ಮಾಡಿಕೊಂಡಿವೆ.
ಇದನ್ನೂ ಓದಿ: ಟಿಎಂಸಿ ಅಭ್ಯರ್ಥಿಗಳ ಪಟ್ಟಿ: ಮಹಿಳೆಯರಿಗೆ ಆದ್ಯತೆ, 114 ಹೊಸಮುಖಗಳು, ಎಸ್‌ಸಿ-ಎಸ್‌ಟಿಗೆ ಒತ್ತು


