ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ರಾಜ್ಯ ವಿಧಾನಸಭಾ ಚುನಾವಣೆಯ ಪ್ರಯುಕ್ತ ಅಖಿಲ ಭಾರತ ಅಣ್ಣಾ ದ್ರಾವಿಡ ಕಳಗಂನಿಂದ (AIADMK) ಇ.ಪಳನಿಸ್ವಾಮಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ಈ ವಿಷಯವನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಪೈಪೋಟಿ ನಿಡುತ್ತಿದ್ದ ಪಕ್ಷದ ಜಂಟಿ ಸಂಯೋಜಕರಾದ ಒ.ಪನ್ನೀರ್‌ಸೆಲ್ವಂ ಘೋಷಿಸಿರುವುದು ಮಹತ್ವದ್ದಾಗಿದೆ. ಇದು ಇಪಿಎಸ್ (ಇ.ಪಳನಿಸ್ವಾಮಿ) ಮತ್ತು ಒಪಿಎಸ್ (ಒ.ಪನ್ನೀರ್ಸೆಲ್ವಂ) ಬಣಗಳ ಒಗ್ಗೂಡಿಸುವಿಕೆಯನ್ನು ಸೂಚಿಸುತ್ತದೆ.
ಇದನ್ನೂ ಓದಿ: ಹತ್ರಾಸ್ ಸಂತ್ರಸ್ತ ಕುಟುಂಬ ಕೇಳುತ್ತಿರುವುದೇನು?: 5 ಪ್ರಶ್ನೆಗಳನ್ನು ಮುಂದಿಟ್ಟ ಪ್ರಿಯಾಂಕ ಗಾಂಧಿ
11 ಜನ ಸದಸ್ಯರ ಸಮಿತಿಯನ್ನು ಪಕ್ಷವು ಚುನಾವಣೆಯ ಅಭ್ಯರ್ಥಿಗಳನ್ನು ಪರೀಕ್ಷಿಸಲು ಸಭೆಯಲ್ಲಿ ರಚಿಸಿತ್ತು. ಈ ಸಮಿತಿಯು ಇ.ಪಳನಿಸ್ವಾಮಿಯವರನ್ನು ಆಯ್ಕೆ ಮಾಡಿದೆ.
2021ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಲು ಇ.ಪಳನಿಸ್ವಾಮಿ ಮತ್ತು ಒ.ಪನ್ನೀರ್‌ಸೆಲ್ವಂ ಅವರ ನಡುವೆ ಬಿರುಸಿನ ಪೈಪೋಟಿ ನಡೆದಿತ್ತು.
ಇದನ್ನೂ ಓದಿ: NEP ಯ ತ್ರಿಭಾಷಾ ಸೂತ್ರ ಅಳವಡಿಸುವುದಿಲ್ಲ: ತಮಿಳುನಾಡು ಮುಖ್ಯಮಂತ್ರಿ
ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಅವರ ಬೆಂಬಲಿಗರು ತಮ್ಮ ನಾಯಕ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೊಂಡು ಪೋಸ್ಟರ್‌ಗಳನ್ನು ಹಾಕಿದಾಗ ಈ ವಿವಾದ ಉಲ್ಬಣಗೊಂಡಿತ್ತು.
ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಲು ಎಐಎಡಿಎಂಕೆ ಕಾರ್ಯಕಾರಿ ಸಮಿತಿ ಸೆಪ್ಟೆಂಬರ್ 28 ರಂದು ಚೆನ್ನೈನ ಎಐಎಡಿಎಂಕೆ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿತ್ತು. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪನ್ನೀರ್ ಸೆಲ್ವಂ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಇಬ್ಬರೂ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ: ವಿನಾಯಕ ಚತುರ್ಥಿ: ತಮಿಳುನಾಡಿನಲ್ಲಿ ಮಿತ್ರಪಕ್ಷಗಳಾದ AIADMK ಮತ್ತು BJP ಟ್ವೀಟ್ ಸಮರ
ಉಪಮುಖ್ಯಮಂತ್ರಿ ಪನ್ನೀರ್‌ಸೆಲ್ವಂಗೆ ಬೆಂಬಲದ ಕೊರತೆ ಇದ್ದು, ಪಳನಿಸ್ವಾಮಿ ಅವರಿಗೆ ಬಹುತೇಕ ಶಾಸಕರು, ಮುಖಂಡರ ಬೆಂಬಲವಿದೆ ಎನ್ನಲಾಗಿದೆ.
’ಪಕ್ಷದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಯಥಾಸ್ಥಿತಿ ಮುಂದುವರಿಯುತ್ತದೆ. ಪಳನಿಸ್ವಾಮಿ ಉಸ್ತುವಾರಿಯಲ್ಲಿ ಪಕ್ಷವು ಚುನಾವಣೆಯನ್ನು ಎದುರಿಸಲಿದೆ, ಆದರೆ ಪನ್ನೀರ್ ಸೆಲ್ವಂ ಪಕ್ಷದ ಸಂಯೋಜಕರಾಗಿರುತ್ತಾರೆ’ ಎಂದು ಹೆಸರು ಹೇಳಲು ಬಯಸದ ಹಿರಿಯ ಅಧಿಕಾರಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ತಮಿಳುನಾಡು ಸಿಎಂ ಅಭ್ಯರ್ಥಿ ಪಟ್ಟಕ್ಕಾಗಿ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ನಡುವೆ ಪೈಪೋಟಿ


