ತಮಿಳುನಾಡು ಚುನಾವಣಾ ದಿನ ದಿನಕ್ಕೂ ರಂಗೇರುತ್ತಿದೆ. ಸಿನಿಮಾ ತಾರೆಯರಿಂದ, ಐಪಿಎಸ್ ಅಧಿಕಾರಿಗಳಿಂದ ಕುತೂಹಲ ಗಳಿಸಿಕೊಂಡಿರುವ ಚುನಾವಣೆಗೆ ಹೊಸ ಹೊಸ ಚುನಾವಣಾ ತಂತ್ರಗಳು ಸೇರಿಕೊಳ್ಳುತ್ತಿವೆ. ಈಗ ಎಐಎಡಿಎಂಕೆ ಅಭ್ಯರ್ಥಿಯೊಬ್ಬರು ಮತದಾರರ ಬಟ್ಟೆ ಒಗೆಯುವ ಮೂಲಕ ಸುದ್ದಿಯಾಗಿದ್ದಾರೆ.
ನಾಗಪಟ್ಟಣಂ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ತಂಗಾ ಕಾತಿರಾವನ್, ಚುನಾವಣಾ ಪ್ರಚಾರದಲ್ಲಿ ಮಹಿಳೆಯೊಬ್ಬರ ಬಟ್ಟೆಗಳನ್ನು ತೊಳೆದು ಕೊಟ್ಟಿದ್ದಾರೆ. ಈ ಮೂಲಕ ತಮ್ಮ ಪ್ರಣಾಳಿಕೆಯಲ್ಲಿರುವ ವಾಷಿಂಗ್ ಮಷಿನ್ ಕೊಡುವ ಭರವಸೆಯನ್ನು ನೆನಪಿಸಿದ್ದಾರೆ.
ಎಐಎಡಿಎಂಕೆ ಅಭ್ಯರ್ಥಿ ತಂಗಾ ಕಾತಿರಾವನ್ ನಾಗೋರ್ ಬಳಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಪಕ್ಷದ ಕಾರ್ಯಕರ್ತರು ವಂಡಿಪೆಟ್ಟೈನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾಗ, ಒಬ್ಬ ಮಹಿಳೆ ತನ್ನ ಕುಟುಂಬ ಸದಸ್ಯರ ಬಟ್ಟೆ ಒಗೆಯುವುದನ್ನು ನೋಡಿದ ಕಾತಿರಾವನ್ ಮಹಿಳೆಯ ಬಳಿ ತಾವು ಬಟ್ಟೆ ಒಗೆದುಕೊಡುವುದಾಗಿ ತಿಳಿಸಿದ್ದಾರೆ. ಮೊದಲಿಗೆ ಬೇಡ ಎಂದ ಮಹಿಳೆ ನಂತರ ಕೆಲವು ಬಟ್ಟೆಗಳನ್ನು ಒಗೆಯಲು ನೀಡಿದ್ದಾರೆ.
ಇದನ್ನೂ ಓದಿ: ಬಂಗಾಳ ಚುನಾವಣೆಗೆ ಬಿಜೆಪಿ ಫೈನಲ್ ಲಿಸ್ಟ್ ಬಿಡುಗಡೆ: ಮಿಥುನ್ ಚಕ್ರವರ್ತಿಗೆ ಟಿಕೆಟ್ ಇಲ್ಲ!
Tamil Nadu: AIADMK candidate Thanga Kathiravan from Nagapattinam washed clothes and promised to give washing machine after winning elections during campaigning yesterday. pic.twitter.com/orDGoRFUhn
— ANI (@ANI) March 23, 2021
ಅಭ್ಯರ್ಥಿ ಕಾತಿರಾವನ್ ಕೆಲವು ನಿಮಿಷಗಳ ಕಾಲ ಬಟ್ಟೆ ತೊಳೆದಿದ್ದಾರೆ. ನಂತರ ಬಟ್ಟೆ ಪಕ್ಕದಲ್ಲಿ ಇದ್ದ ಕೆಲವು ಪಾತ್ರೆಗಳನ್ನು ತೊಡೆದು ಇಟ್ಟಿದ್ದಾರೆ. ಕಾತಿರಾವನ್ ಕೆಲಸ ನೋಡಿ ಸ್ಥಳೀಯ ನಿವಾಸಿಗಳು ಆಶ್ಚರ್ಯಪಟ್ಟಿದ್ದಾರೆ. ಜೊತೆಗೆ ಗಾಬರಿ ಕೂಡ ಆಗಿದ್ದಾರೆ ಎಂದು ವರದಿಯಾಗಿದೆ.
ಬಟ್ಟೆ ತೊಳೆದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾತಿರಾವನ್, “ನಮ್ಮ ಅಮ್ಮನ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದ ನಂತರ ಬಟ್ಟೆಗಳನ್ನು ತೊಳೆಯುವ ಯಂತ್ರಗಳನ್ನು ನೀಡುವ ಭರವಸೆ ನೀಡಿದ್ದೇವೆ. ಮಹಿಳೆಯರು ಮತ್ತು ಗೃಹಿಣಿಯರಿಗೆ ವಾಷಿಂಗ್ ಮಷಿನ್‌ಗಳನ್ನು ನೀಡಲಾಗುತ್ತದೆ. ಇದನ್ನೂ ಸೂಚಿಸಲು ಮತ್ತು ಸಾಬೀತು ಪಡಿಸಲು ನಾನು ಬಟ್ಟೆಯನ್ನು ತೊಳೆದಿದ್ದೇನೆ” ಎಂದಿದ್ದಾರೆ.
50 ವರ್ಷದ ಎಐಎಡಿಎಂಕೆ ಅಭ್ಯರ್ಥಿ ಕಾತಿರಾವನ್, ನಾಗಪಟ್ಟಣಂ ಪಟ್ಟಣ ಕಾರ್ಯದರ್ಶಿಯಾಗಿದ್ದಾರೆ. ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಪಕ್ಷಕ್ಕಾಗಿ ಅವರು ಮಾಡಿರುವ ಕೆಲಸವನ್ನು ಗುರುತಿಸಿ ಈ ಬಾರಿ ಟಿಕೆಟ್ ನೀಡಲಾಗಿದೆ ಎನ್ನಲಾಗಿದೆ.
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಮತದಾನವನ್ನು ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ. ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ದಲಿತ ಆರ್‌ಟಿಐ ಕಾರ್ಯಕರ್ತನ ಹತ್ಯೆ ವಿರೋಧಿಸಿ ಪ್ರತಿಭಟನೆ: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬಂಧನ


