ತೌಕ್ತೆ ಚಂಡಮಾರುತದ ಪರಿಣಾಮ ತೀವ್ರವಾಗಿದ್ದು, ರಾಜ್ಯದಲ್ಲಿ ಮೇ 20 ರವರೆಗೆ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಮೂರು ದಿನಗಳಿಂದ ಕರಾವಳಿ ಭಾಗದಲ್ಲಿ ಹೆಚ್ಚಾಗಿದ್ದ ತೌಕ್ತೆ ಚಂಡಮಾರುತದ ಅಬ್ಬರ ಕೊಂಚ ಕಡಿಮೆಯಾಗಿದ್ದರೂ ಮುಂದಿನ 2 ದಿನ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಮೇ 19 ರವರೆಗೆ ಮಳೆಯಾಗಲಿದೆ. ಈ ಜಿಲ್ಲೆಗಳಲ್ಲಿ ಸೋಮವಾರದಿಂದ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದ್ದು ಮುಂದುವರೆದಿದೆ.
ಇದನ್ನೂ ಓದಿ: ತೌಕ್ತೆ ಚಂಡಮಾರುತ: ರಾಜ್ಯದಲ್ಲಿ ಮುಂದಿನ 3 ದಿನ ಭಾರಿ ಮಳೆ, ಗುಜರಾತ್‌ನಲ್ಲಿ 1 ಲಕ್ಷ ಜನರ ಸ್ಥಳಾಂತರ
ರಾಜ್ಯದಲ್ಲಿ ಸೋಮವಾರ ಹವಾಮಾನ ಇಲಾಖೆ ಆರೆಂಜ್ ಮತ್ತು ಹಳದಿ ಅಲರ್ಟ್ ಘೋಷಣೆ ಮಾಡಿ, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿತ್ತು.
ತೌಕ್ತೆ ಚಂಡಮಾರುತದ ಪರಿಣಾಮದಿಂದ ಭಾರಿ ಗಾಳಿಯ ಜೊತೆಗೆ ಅರಬ್ಬಿ ಸಮುದ್ರದಲ್ಲಿ ಗರಿಷ್ಠ 5 ಮೀಟರ್ ಗಳಷ್ಟು ಎತ್ತರದ ಅಲೆಗಳು ಏಳುತ್ತಿದ್ದು, ಮೇ 19 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ತೌಕ್ತೆ ಚಂಡಮಾರುತ ದೇಶದ ಕರಾವಳಿ ಪ್ರದೇಶಗಳಲ್ಲಿ ಅಸ್ತವ್ಯಸ್ತ ಪರಿಣಾಮ ಬೀರಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಈಗಾಗಲೇ ತುರ್ತು ಕೆಲಸಗಳಿಗೆ 100 ತಂಡಗಳನ್ನು ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರ ಭಾಗಗಳಲ್ಲಿ ನಿಯೋಜಿಸಿದೆ. ಇವುಗಳ ಪೈಕಿ 65 ತಂಡಗಳನ್ನು ಸಕ್ರಿಯಗೊಳಿಸಲಾಗಿದೆ.
ಇದನ್ನೂ ಓದಿ: ಈ ಊರಿನಲ್ಲಿ ಮರವೇ ಕೊರೊನಾ ಕೇಂದ್ರ, ಕೊಂಬೆಗಳಲ್ಲಿ ನೇತಾಡುತ್ತವೆ ಗ್ಲೂಕೋಸ್ ಬಾಟಲ್‌ಗಳು!


