`ಬೆಂಗಳೂರು ದಕ್ಷಿಣ ಸಂಸದ, ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಬಿಬಿಎಂಪಿ ವಾರ್‌ರೂಮಿಗೆ ದಾಳಿ ಮಾಡಿ, ಬೆಡ್ ಬ್ಲಾಕಿಂಗ್ ಹಗರಣದ ಹೆಸರಲ್ಲಿ ಕೋಮು ಸಾಮರಸ್ಯ ಕದಡುವ ಕೆಲಸ ಮಾಡಿದ್ದಾರೆ. ಹೀಗಾಗಿ ಇವರ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಿ’ ಎಂದು ಕೆಲವು ಸಾಮಾಜಿಕ ಕಾರ್ಯಕರ್ತರು ಮತ್ತು ವಕೀಲರು ಬೆಂಗಳೂರು ಜಿಲ್ಲಾಧಿಕಾರಿ ಮತ್ತು ಬೆಂಗಳೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.
ಅವತ್ತು ತೇಜಸ್ವಿ ಸೂರ್ಯ ಜೊತೆಗೆ ಇದ್ದ ಬೆಂಗಳೂರಿನ ಬಸವನಗುಡಿಯ ಶಾಸಕ ರವಿ ಸುಬ್ರಮಣ್ಯ, ಚಿಕ್ಕಪೇಟೆಯ ಶಾಸಕ ಉದಯ್ ಗರುಡಾಚಾರ್ ಮತ್ತು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ಮೇಲೂ ದೂರು ದಾಖಲಿಸಲು ಅನುಮತಿ ನೀಡಿ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಆಮ್ಲಜನಕ ಪೂರೈಕೆಯ ಹೊಣೆ ಹೊರಬೇಕಾದ ಕೈಗಾರಿಕಾ ಸಚಿವ ಶೆಟ್ಟರ್ ಎಲ್ಲಿ?
ಸಾಮಾಜಿಕ ಕಾರ್ಯಕರ್ತ ವರದ ರಾಜೇಂದ್ರ ಮತ್ತು ಹಲವು ವಕೀಲರು ಈ ದೂರು ಸಲ್ಲಿಸಿದ್ದು, `206 ಉದ್ಯೋಗಿಗಳ ಪೈಕಿ 16 ಮುಸ್ಲಿಂ ಉದ್ಯೋಗಿಗಳ ಹೆಸರು ಹೇಳುವ ಮೂಲಕ ತೇಜಸ್ವಿ ಸೂರ್ಯ ಮತ್ತು ಅವರ ತಂಡ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಯತ್ನ ಮಾಡಿದೆ. ಇದೇನು ಮದರಸಾನಾ ಎಂದು ನೇರವಾಗಿ ಮುಸ್ಲಿಮರ ವಿರುದ್ಧ ಅಸಂವಿಧಾನಿಕ ಮಾತುಗಳನ್ನು ಆಡಿದ್ದಾರೆ. ಹೀಗಾಗಿ ಸಂಸದರು ಮತ್ತು ಅವರ ಜೊತೆಗಿದ್ದ ಜನಪ್ರತಿನಿಧಿಗಳು ಕೋಮು ಸಾಮರಸ್ಯ ಕದಡುವ ಉದ್ದೇಶದಿಂದಲೇ ಈ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಿ’ ಎಂದು ಅರ್ಜಿಯಲ್ಲಿ ಕೇಳಲಾಗಿದೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ವರದ ರಾಜೇಂದ್ರ `ಸಾಂಕ್ರಾಮಿಕ ತಡೆ ಕಾಯ್ದೆ ಪ್ರಕಾರ, ಜನಪ್ರತಿನಿಧಿ ಅಥವಾ ಯಾರದೇ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮುನ್ನ ಜಿಲ್ಲಾಧಿಕಾರಿ ಅವರ ನೇತೃತ್ವದ ಜಿಲ್ಲಾ ಮ್ಯಾಜಿಸ್ಟ್ರೇಟ್ ವ್ಯವಸ್ಥೆಯ ಅನುಮತಿ ಪಡೆಯುವ ಅಗತ್ಯವಿರುವ ಕಾರಣ, ನಾವು ಮನವಿ ಸಲ್ಲಿಸಿದ್ದೇವೆ’ ಎಂದು ಹೇಳಿದರು.
`ಈ ಮನವಿ ಪುರಸ್ಕರಿಸದಿದ್ದರೆ, ನಾವು ಹೈಕೋರ್ಟ್ ಮೆಟ್ಟಿಲು ಏರುತ್ತೇವೆ’ ಎಂದು ಅವರು ತಿಳಿಸಿದರು.
ಕೋಮು ಸಾಮರಸ್ಯ ಕದಡುವ ಉದ್ದೇಶದಲ್ಲಿ ಕಂಗನಾ ರಾಣಾವತ್ ಮಾಡಿದ ಟ್ವೀಟ್ ಕಾರಣಕ್ಕೆ, ಟ್ವಿಟರ್ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದೆ. ನಿನ್ನೆ ಶುಕ್ರವಾರ ಕೋಲ್ಕೊತ್ತದಲ್ಲಿ ಅವರ ವಿರುದ್ಧ ಕೇಸ್ ದಾಖಲಾಗಿದೆ. ಇದೇ ಮಾದರಿಯ ಪೋಸ್ಟ್ ಹಾಕಿದ್ದ ರಂಗಕರ್ಮಿ ಪ್ರಕಾಶ್ ಬೆಳವಾಡಿ ವಿರುದ್ಧ ಹಲವರು ಕೇಸ್ ಹಾಕುವ ಪ್ರಕ್ರಿಯೆಯಲ್ಲಿ ಇದ್ದಾರೆ.
ಇದನ್ನೂ ಓದಿ: ರಾಜ್ಯಕ್ಕೆ ಆಮ್ಲಜನಕ ನೀಡುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಆದೇಶ- ’ಬೆಡ್’ ವಿಚಾರದಲ್ಲೇ ಇರುವ BJP ಸಂಸದರು!