Homeಮುಖಪುಟರೈತ ಹೋರಾಟಕ್ಕೆ ಆಸರೆಯಾದ ಟೆಂಟ್ ಸಿಟಿ ಎಂಬ ಹೊಸ ನಗರ..!

ರೈತ ಹೋರಾಟಕ್ಕೆ ಆಸರೆಯಾದ ಟೆಂಟ್ ಸಿಟಿ ಎಂಬ ಹೊಸ ನಗರ..!

- Advertisement -

ರೈತ ಪ್ರತಿಭಟನೆಯಲ್ಲಿ ಭಾಗವಹಿಸಿರುವ ರೈತರು ತಮ್ಮ ಟ್ರಾಲಿಗಳಲ್ಲಿ, ತಮ್ಮದೆ ಟೆಂಟ್‌ಗಳಲ್ಲಿ ಕಳೆದ 67 ದಿನಗಳಿಂದ ವಾಸಿಸುತ್ತಿದ್ದಾರೆ. ಆದರೆ ಪ್ರತಿಭಟನೆಗೆ ಬೆಂಬಲಿಸಿ ಬರುತ್ತಿರುವ ಜನಸಾಗರಕ್ಕೆ, ಹೊರ ರಾಜ್ಯಗಳಿಂದ ಬರುವ ರೈತರಿಗೆ ಉಳಿಯಲು ವ್ಯವಸ್ಥೆಯಾಗುತ್ತಿರುವುದು ಟೆಂಟ್ ಸಿಟಿ ಎಂಬ ಅದ್ಭುತ ಸ್ಥಳದಲ್ಲಿ.

ಹೌದು, ದೆಹಲಿಯ ಗಡಿಗಳಲ್ಲಿ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ 67 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಬೆಂಬಲಕ್ಕೆ ಬರುವವರಿಗೆ ಈ ಟೆಂಟ್ ಸಿಟಿಗಳು ಆಶ್ರಯತಾಣಗಳಾಗಿವೆ.

ಹೋರಾಟಕ್ಕೆ ಬೆಂಬಲ ನೀಡಲು ಬರುವ ಜನರಿಗೆ ರೈತರು ಉಳಿಯಲು ವ್ಯವಸ್ಥೆ ಮಾಡುತ್ತಿದ್ದಾರೆ. ತಮ್ಮ ಟ್ರ್ಯಾಲಿ, ಟೆಂಟ್, ಟ್ರ್ಯಾಕ್ಟರ್‌ಗಳಲ್ಲೂ ಜಾಗ ನೀಡಿದ್ದಾರೆ. ಆದರೆ ಇಷ್ಟೊಂದು ಸಂಖ್ಯೆಯಲ್ಲಿ ತುಂಬುತ್ತಿರುವ ಜನರಿಗಾಗಿ ಈ ಟೆಂಟ್ ಸಿಟಿಗಳ ಅವಶ್ಯಕತೆ ಹೆಚ್ಚಾಗಿದೆ. ಇವುಗಳ ಸೇವೆ ಈ ರೈತ ಹೋರಾಟದಲ್ಲಿ ವಿಭಿನ್ನವಾಗಿ ನಿಲ್ಲುತ್ತಿದೆ.

ಹೇಮಕುಂತ್ ಫೌಂಡೇಶನ್ ಎಂಬ ಸಾರ್ವಜನಿಕ ಸೇವಾ ಸಂಸ್ಥೆ ಪ್ರತಿಭಟನೆ ಬೆಂಬಲಿಸಿ ಬರುವವರಿಗೆ ಉಳಿಯಲು ಸಿಂಘು, ಚಿಲ್ಲಾ, ಗಾಝಿಪುರ್ ಮತ್ತು ಟಿಕ್ರಿ ಗಡಿಗಳಲ್ಲಿ ಟೆಂಟ್ ಸಿಟಿಗಳನ್ನು ನಿರ್ಮಿಸಿದೆ. ಈ ಟೆಂಟ್ ಸಿಟಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಪುರುಷರಿಗೂ ಇಲ್ಲಿ ಉಳಿಯಲು ಅವಕಾಶವಿದೆ. ಆದರೆ ಅವರೆಲ್ಲಾ ಹೆಚ್ಚಾಗಿ ಟ್ರ್ಯಾಲಿಗಳಲ್ಲಿ ಉಳಿಯುವ ಕಾರಣ ಇಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ.

ಟೆಂಟ್ ಸಿಟಿಯಲ್ಲಿ ಉಳಿಯುವುದು ಉಚಿತವಾಗಿರುತ್ತದೆ. ಎಷ್ಟು ದಿನ ಬೇಕಿದ್ದರು ಇಲ್ಲಿ ಉಳಿಯಬಹುದು. ನಮಗೆ ಟೆಂಟ್ ನೀಡಿರುವ ದಾಖಲೆಗಾಗಿ ಯಾವುದಾದರೂ ಒಂದು ಗುರುತು ಪತ್ರ ನೀಡಬೇಕಾಗುತ್ತದೆ. ಒಬ್ಬಂಟಿಯಾಗಿರುವವರಿಗೆ ಸಿಂಗಲ್ ಟೆಂಟ್ ನೀಡಲಾಗುತ್ತಿದೆ. ಇಬ್ಬರಿದ್ದರೆ ಅವರಿಗೆ ಆಗುವಂತಹ ಟೆಂಟ್, ಇಡೀ ಕುಟುಂಬವಿದ್ದರೇ ಅವರಿಗೆ ಉಳಿಯಲು ಮತ್ತು 20 ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೇ ದೊಡ್ಡ ಟೆಂಟ್ ವ್ಯವಸ್ಥೆ ಮಾಡಲಾಗುತ್ತದೆ.

ಟೆಂಟ್ ಒಳಗಡೆ ಹಾಸಿಗೆ ಮತ್ತು 2 ಬೆಡ್‌ಶೀಟ್‌ಗಳನ್ನು ವ್ಯವಸ್ಥೆ ಮಾಡುತ್ತಾರೆ. ಚಳಿ ಹೆಚ್ಚು ಎನಿಸಿದರೇ ಮತ್ತೆ ಬೆಡ್‌ಶೀಟ್‌ಗಳನ್ನು ನೀಡಲಾಗುತ್ತದೆ. ಟೆಂಟ್ ಸಿಟಿಯಲ್ಲಿ ಹೆಣ್ಣು ಮಕ್ಕಳೇ ಹೆಚ್ಚಾಗಿರುವ ಕಾರಣ, ರಾತ್ರಿ ಪೂರ್ತಿ ಟೆಂಟ್ ಸಿಟಿಯಲ್ಲಿ ಯುವಕರು ಕಾವಲು ಕಾಯುತ್ತಾರೆ. ಪಾಳಿಯ ಮೇರೆಗೆ ಮೂರು ಜನರ ತಂಡ ಕಾರ್ಯ ನಿರ್ವಹಿಸುತ್ತದೆ.

ಇಲ್ಲಿನ ಸ್ವಯಂ ಸೇವಕರ ಪ್ರಕಾರ ಮೊದ ಮೊದಲು ಇಲ್ಲಿ ಉಳಿಯುವವರ ಸಂಖ್ಯೆ ಕಡಿಮೆಯಿತ್ತು. ಆದರೆ ಪ್ರತಿಭಟನೆಯ ದಿನಗಳು ಹೆಚ್ಚಾಗುತ್ತಿದ್ದಂತೆ ಬೇರೆ ರಾಜ್ಯಗಳಿಂದ ಬರುವವರ ಸಂಖ್ಯೆಯೂ ಹೆಚ್ಚಾಗಿ ಟೆಂಟ್ ಸಿಟಿ ತುಂಬುತ್ತಿದೆ. ಭದ್ರತೆ ದೃಷ್ಠಿಯಿಂದಲೂ ಇಲ್ಲಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ನಾವು ಆಶ್ರಯ ಪಡೆದವರ ಲಗೇಜ್ ಜವಾಬ್ದಾರಿ ಪಡೆಯುವುದಿಲ್ಲ. ಇಷ್ಟೊಂದು ಸಂಖ್ಯೆಯಲ್ಲಿ ಜನ ಬರುವುದರಿಂದ ಅವರೇ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೂ ನಮ್ಮ ಟೆಂಟ್ ಸಿಟಿಗೆ ಬರುವವರ ಸಂಖ್ಯೆ ಕಡಿಮೆಯಾಗಿಲ್ಲ. ನಮ್ಮ ಬಳಿ ಟೆಂಟ್‌ಗಳಿವೆ ಆದರೆ ಹೋರಾಟದ ಸ್ಥಳ ಟೆಂಟ್, ಟ್ರ್ಯಾಲಿ, ಟ್ರ್ಯಾಕ್ಟರ್‌ಗಳಿಂದ ತುಂಬಿರುವುದರಿಂದ ಸ್ಥಳ ಸಿಗುತ್ತಿಲ್ಲ ಎನ್ನುತ್ತಾರೆ.

ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ತಮಿಳುನಾಡಿನಿಂದ ಬಂದಿದ್ದ ರೈತ ಮಹಿಳೆಯರು, ಮಹಾರಾಷ್ಟ್ರದಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ತಂಡ ಸೇರಿದಂತೆ ಹೊರ ರಾಜ್ಯಗಳಿಂದ ಬಂದು ಉಳಿಯುವವರ ಸಂಖ್ಯೆ ಹೆಚ್ಚಾಗಿದೆ.

– ಮಮತ. ಎಂ


ಇದನ್ನೂ ಓದಿ: ಟಿಕಾಯತ್ ಮನವಿಗೆ ಭಾರೀ ಸ್ಪಂದನೆ: ಗಾಜಿಪುರ್ ಗಡಿಯತ್ತ ಹೊರಟ 10 ಸಾವಿರಕ್ಕೂ ಹೆಚ್ಚು ರೈತರು!

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial