ಲಾಕ್‌ಡೌನ್ ಅನ್ನುವ ಪದ ದೇಶದ ಎಲ್ಲರ ಬಾಯಲ್ಲೂ ಹರಿದಾಡುತ್ತಿದೆ. ಆದರೆ ಸರ್ಕಾರಕ್ಕೆ ಯಾರೆಲ್ಲರ ಬದುಕು ಹೇಗೆ ಲಾಕ್‌ಡೌನ್ ಆಗುತ್ತಿದೆ ಎಂಬ ಅಂದಾಜಿಲ್ಲ ಎನಿಸುತ್ತಿದೆ. ಮೇಲ್ನೋಟಕ್ಕೆ ಹಲವಾರು ಉತ್ತಮವಾದ ಘೋಷಣೆಗಳನ್ನು ಸರ್ಕಾರವು ಮಾಡಿದೆ. ಆದರೆ ತಳಮಟ್ಟದಲ್ಲಿನ ಅನುಷ್ಠಾನದ ಸಮಸ್ಯೆ ನೋಡಿದರೆ ಜನಸಾಮಾನ್ಯರ ಬದುಕಿನ ಬಗ್ಗೆ ಅರಿವು ಇಲ್ಲದ ರೀತಿಯಲ್ಲಿ ನಡೆದುಕೊಳ್ಳಲಾಗುತ್ತಿದೆ ಎಂಬುದರಲ್ಲಿ ಸಂಶಯವೇ ಇಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್ ಸಮಯದಲ್ಲಿ ಹೆಚ್ಚಿನ ಪಡಿತರ ವಿತರಣೆ ಮಾಡುವುದಾಗಿ ಘೋಷಿಸಿವೆ. ಆದರೆ ಎಷ್ಟು ಪ್ರಮಾಣದ ಜನಕ್ಕೆ ತಲುಪುತ್ತದೆ ಎಂಬುದು ದೊಡ್ಡ ಪ್ರಶ್ನೆ ಆಗಿದೆ. ಜನರ ಅನ್ನದ ಪ್ರಶ್ನೆಯನ್ನು ಸರಿಯಾಗಿ ನಿಭಾಯಿಸಬೇಕಾದ ಅನಿವಾರ್ಯತೆ ಇದೆ. ಜನರು ಜೀವನಾಧಾರ ಕೆಲಸಗಳನ್ನು ನಿಲ್ಲಿಸಿ ಮನೆಯಲ್ಲಿ ಕುಳಿತಿರುವ ಈ ಸಂದರ್ಭದಲ್ಲಿ ಅವರಿಗೆ ಸರಿಯಾದ ಪಡಿತರ ವ್ಯವಸ್ಥೆ ಮಾಡಬೇಕಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅನ್ನಭಾಗ್ಯ ಯೋಜನೆಯಾಗಿ ಪಡಿತರ ವಿತರಕ ವ್ಯವಸ್ಥೆಯನ್ನು ವಿಸ್ತರಿಸಿದ ನಂತರ ಸಾಮಾನ್ಯವಾಗಿ ಪ್ರತಿ ತಿಂಗಳೂ ಒಬ್ಬ ವ್ಯಕ್ತಿಗೆ 7 ಕೆ.ಜಿ ಅಕ್ಕಿ ಕೊಡುತ್ತಿದ್ದರು. ಆದರೆ ಈಗ ಪ್ರತಿ ವ್ಯಕ್ತಿಗೆ ೫ ಕೆ.ಜಿ ಅಕ್ಕಿ ಕೊಡುತ್ತಿದ್ದಾರೆ. ಹಾಗೇನೂ ಇಲ್ಲ, ನಾವು ಅದರ ಜೊತೆಗೆ 2 ಕೆ.ಜಿ. ಗೋಧಿ ನೀಡುತ್ತೇವೆ ಎಂದು ಹೇಳಲಾಗಿತ್ತು. ಆದರೆ ಒಬ್ಬ ವ್ಯಕ್ತಿಗಲ್ಲಾ, ಒಂದು ಕುಟುಂಬಕ್ಕೆ 2 ಕೆಜಿ ಗೋಧಿ ಕೊಡುತ್ತಾರೆ.

ಆದರೆ ಬಡಜನರ ಹೊಟ್ಟೆ ತುಂಬಿಸಲು ಇಷ್ಟು ಸಾಕಾಗುವುದಿಲ್ಲ. ಪೂರ್ತಿ ಲಾಕ್‌ಡೌನ್ ಮಾಡಿದಾಗ ಅವರ ಜೀವನ ಅವಶ್ಯಕತೆಗಳಿಗೆ ಬೇಕಾಗುವ ಇತರ ಆಹಾರ ವಸ್ತುಗಳ ಪೂರೈಕೆ ಸರಿಯಾಗಿ ಮಾಡಲೇಬೇಕಿದೆ. ಇಲ್ಲವಾದರೆ ಅನಿವಾರ್ಯವಾಗಿ ಲಾಕ್‌ಡೌನ್ ಮುರಿದು ಹೊರಗೆ ಹೋಗುವ ಪರಿಸ್ಥಿತಿ ಉದ್ಭವವಾಗುತ್ತದೆ. ಇದು ಕೂಡ ಮತ್ತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆಯೆಂಬುದು ಆಹಾರದ ಹಕ್ಕಿನ ಕಾರ್ಯಕರ್ತರ ಒಕ್ಕೊರಲಿನ ಅಭಿಪ್ರಾಯವಾಗಿದೆ.
ಈ ಕುರಿತು ಆಹಾರದ ಹಕ್ಕಿಗಾಗಿ ಆಂದೋಲನದ ಧಾರವಾಡದ ಶಾರದ ಗೋಪಾಲ್‌ರವರನ್ನು ಮಾತಾಡಿಸಿದಾಗ ‘ಪಡಿತರ ವಿತರಣೆಗೆ ಸಂಬಂಧಿಸಿದಂತೆ ನಾವು ಈ ಹಿಂದೆ ಸರ್ಕಾರಕ್ಕೆ ನಮಗೆ ಗೋಧಿ ಬೇಡ ಅಕ್ಕಿಯ ಜೊತೆಗೆ ಉತ್ತರ ಕರ್ನಾಟಕದ ಮಂದಿಗೆ ಜೋಳ, ದಕ್ಷಿಣ ಕರ್ನಾಟಕದ ಕಡೆ ರಾಗಿ ಈ ರೀತಿ ಕೊಡಿ ಎಂದು ಹೇಳಿದ್ದೆವು. ಸರ್ಕಾರ ಬೇಡ ಎಂದದ್ದನ್ನು ಮಾತ್ರ ತೆಗೆದುಕೊಂಡು ಗೋಧಿಯನ್ನು ಕಡಿಮೆ ಮಾಡಿತ್ತು. ಆದರೆ ಈಗ ಅಕ್ಕಿಯ ಜೊತೆ ಒಂದು ಕಾರ್ಡಿಗೆ ೨ ಕೆಜಿ ಗೋಧಿ ಕೊಡುತ್ತಿದ್ದಾರೆ. ಈ ಪಂಜಾಬ್‌ನಲ್ಲಿ ಅಧಿಕವಾಗಿ ಹೊಸ ಸ್ಟಾಕ್ ಬಂದಿದೆ. ಹಾಗಾಗಿ ಹಳೆಯ ಸ್ಟಾಕ್ ಖಾಲಿ ಮಾಡಬೇಕಾಗಿದೆ. ಗೋಧಿಯನ್ನ ಕೊಡುತ್ತಿದ್ದಾರೆ. ಕೊಡುವುದನ್ನೇ ಸರಿಯಾಗಿ ಕೊಡದ ಸರ್ಕಾರವು ಜನಗಳಿಗೆ ಇದು ಸಾಕಾಗುವುದೋ ಇಲ್ವೋ ಅನ್ನೋದನ್ನು ಯೋಚನೆ ಮಾಡುವುದಿಲ್ಲ. ಇನ್ನು ಏಪ್ರಿಲ್ ೨೦ರಿಂದ ಕೇಂದ್ರ ಸರ್ಕಾರವು ಒಬ್ಬ ವ್ಯಕ್ತಿಗೆ 5 ಕೆ.ಜಿ ಅಕ್ಕಿ, ಒಂದು ಕಾರ್ಡ್ಗೆ ಒಂದು ಕೆ.ಜಿ ಬೇಳೆ, ಮೂರು ತಿಂಗಳ ಸಾಮಗ್ರಿ ಕೊಡುವುದಾಗಿ ನಿರ್ಮಲ ಸೀತಾರಾಮನ್ ಘೋಷಿಸಿದ್ದಾರೆ. ಅದನ್ನು ಕೊಡುತ್ತಾರೋ ಇಲ್ಲವೋ ಇದುವರೆಗೆ ಜನರಿಗೆ ಸ್ಪಷ್ಟವಾಗಿಲ್ಲ.
ಇನ್ನು ವಿತರಣೆಯ ಸಮಸ್ಯೆಗಳನ್ನು ನೋಡಿದರೆ ರಾಜ್ಯಸರ್ಕಾರವು ಒಟಿಪಿ ತಗೊಂಡು ವಿತರಿಸುತ್ತೇವೆ ಎಂದು ಮೊದಲು ಹೇಳಿದ್ದರು. ನಂತರ ಒಟಿಪಿ ಇಲ್ಲದೆಯೇ ವಿತರಿಸಬೇಕೆಂದು ಸರ್ಕಾರ ಹೇಳಿದೆ. ಆದರೆ ಸರ್ಕಾರದ ಸೂಚನೆಗಳನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ. ಹುಕ್ಕೇರಿ, ಖಾನಾಪುರ ಭಾಗದಲ್ಲಿ ಒಟಿಪಿ ಇದ್ದರೆ ಮಾತ್ರ ಕೊಡುತ್ತೇವೆ ಎನ್ನುತ್ತಿದ್ದಾರೆ. ಬೆಂಗಳೂರಿಗೆ ಹತ್ತಿರವಿರುವ ಜಿಲ್ಲೆಗಳಲ್ಲಿ ಮಾತ್ರ ಒಟಿಪಿ ಇಲ್ಲದೆ ಕೊಡುತ್ತಿದ್ದಾರೆ. ಹಾಗೂ ಹಳ್ಳಿಗಳಲ್ಲಿ ತಿಂಗಳಿಗೆ ಕನಿಷ್ಟ ಹತ್ತು ಕಾರ್ಡ್ ಡಿಲಿಟ್ ಆಗುತ್ತಿವೆ. ಇದಕ್ಕೆ ಕಾರಣ ಏನೆಂದು ಇದುವರೆಗೂ ಅಧಿಕಾರಿಗಳ ಬಳಿ ಉತ್ತರವಿಲ್ಲ. ಜನ ಕಾರ್ಡ್ನ್ನು ಮಾಡಿಸಲು ಇಡೀ ವರ್ಷ ತಾಲ್ಲೂಕು ಕಚೇರಿಗೆ ಅಲೆಯುತ್ತಿದ್ದಾರೆ. ಎಪಿಎಲ್ ಅವರಿಗೆ ಅಂತೂ ಏನು ಕೊಡುತ್ತಿಲ್ಲ. ಹಾಗಾಗಿ ಈಗಾಗಲೇ ಕೊಡುವುದರಲ್ಲೇ ಲೋಪ ಇರುವುದರಿಂದ ನಾವು ಈ ಪಡಿತರ ಹಂಚಿಕೆಯನ್ನು ಲಾಕ್‌ಡೌನ್ ವಿಚಾರವನ್ನು ದೃಷ್ಟಿಯಲ್ಲಿಟ್ಟಕೊಂಡು ಸಾರ್ವತ್ರಿಕರಣಗೊಳಿಸಬೇಕೆಂದು ನಮ್ಮ ಆಂದೋಲನದ ಒತ್ತಾಯವಾಗಿದೆ. ಎಂದು ಹೇಳಿದರು.

ಲೋಡಿಂಗ್ ಕಾರ್ಮಿಕರ ಸಂಘಟನೆಯಿಂದ ಸಿಕ್ಕ ಮಾಹಿತಿ
ಅನ್ನಭಾಗ್ಯ ಲೋಡಿಂಗ್ ಕಾರ್ಮಿಕರನ್ನು ಸಂಘಟಿಸುತ್ತಿರುವ ಶ್ರಮಿಕ ಶಕ್ತಿ ಸಂಘಟನೆಯ ಅಧ್ಯಕ್ಷರಾದ ವರದರಾಜೇಂದ್ರ ಅವರನ್ನೂ ಮಾತಾಡಿಸಲಾಯಿತು. ಕೇಂದ್ರ ಸರ್ಕಾರದಿಂದ ಬಂದಿರುವ ರೇಷನ್ ಈಗ ಸ್ಟಾಕ್ ಮಾಡುತ್ತಿದ್ದಾರೆ ಇಷ್ಟರಲ್ಲೇ ವಿತರಣೆಯಾಗಲಿದೆ, ಇದರಲ್ಲಿ ನಮ್ಮ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ವಲಸೆ ಕಾರ್ಮಿಕರೇನು ಹೇಳುತ್ತಾರೆ?
ಯಾದಗಿರಿ ಜಿಲ್ಲೆಯಿಂದ ಬೆಂಗಳೂರಿಗೆ ಬಂದಿರುವ ದಿನಗೂಲಿ ಕಾರ್ಮಿಕರಾದ ದೇವಮ್ಮ ಮಾತನಾಡಿ ಈ ಸಮಯದಲ್ಲಿ ಮಕ್ಕಳು ಮರಿ ಇರೋ ನಾವು ಸರ್ಕಾರ ಕೊಡುತ್ತಿರುವ ರೇಷನ್ ಕೆಲವು ದಿನಗಳು ಮಾತ್ರ ನಡೆಯಲಿದೆ ಮತ್ತು ಅಕ್ಕಿ, ಗೋಧಿ ಅಷ್ಟೇ ಕೊಡದೆ ಬೇರೆ ಸಾಮಗ್ರಿಗಳನ್ನು ಕೊಟ್ಟರೆ ಸ್ವಲ್ಪ ಮಟ್ಟಿಗೆ ಉಸಿರಾಡುವ ಸ್ಥಿತಿಯಲ್ಲಿ ಇರುತ್ತೇವೆ. ಇಲ್ಲವಾದರೆ ನಮಗೆ ಕಷ್ಟವಾಗಲಿದೆ ಎಂದರು. ನಮ್ಮ ಕಂಟ್ರಾಕ್ಟರ್ ಮೂರನೇ ದಿನದಿಂದ ಪತ್ತೆ ಇಲ್ಲ. ಇಲ್ಲಿ ನಮಗೆ ಬೇರೆ ಅಗತ್ಯಗಳಿಗೆ ದುಡ್ಡು ಕೋಡೋರ್ಯಾರು? ನಾವೂ ಊರಿಗೆ ಹೋಗಿಬಿಟ್ಟಿದ್ದರೆ ಒಳ್ಳೇದಿತ್ತು ಎಂದರು. ಕಟ್ಟಡ ಕಾರ್ಮಿಕರಿಗೆ ಮತ್ತು ಮಹಿಳೆಯರ ಜನಧನ್ ಅಕೌಂಟಿಗೆ ಹಣ ಬಂದಿದೆಯಲ್ಲಾ ಎಂಬ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಪರಿಸ್ಥಿತಿಯನ್ನು ಬಿಚ್ಚಿಟ್ಟಿತ್ತು. ‘ಆ ಕಾರ್ಡ್ ಮಾಡಿಸ್ತೀವಿ ಅಂತ ನಮ್ ಹತ್ರ ಯಾರೋ ೫೦೦ ರೂ. ಇಸ್ಕೊಂಡು ಹೋದ್ರು. ಆಮೇಲೆ ಏನಾಯ್ತು ಗೊತ್ತಿಲ್ಲ. ದುಡ್ಡು ಬಂದ್ರೆ ಹೇಗೆ ಗೊತ್ತಾಗುತ್ತೆ?’, ‘ನಿಮ್ಮ ಫೋನಿಗೆ ಮೆಸೇಜು ಬರುತ್ತೆ ನೋಡಿ’, ‘ಮೆಸೇಜು ನೋಡೋದು ನನಗೂ ಗೊತ್ತಿಲ್ಲ, ನನ್ನ ಗಂಡಂಗೂ ಗೊತ್ತಿಲ್ಲ’.
ಪಡಿತರ ವಿತರಕರ ಅನಿಸಿಕೆ
ಮಂಡ್ಯ ಜಿಲ್ಲೆಯ ಪಡಿತರ ವಿತರಕ ಶಿವಣ್ಣ ಅವರನ್ನು ಮಾತಾಡಿಸಿದಾಗ ಈ ಬಾರಿ ಕಳೆದ ಬಾರಿಗಿಂತ ವ್ಯಕ್ತಿಗೆ ಎರಡು ಕೆಜಿ ಅಕ್ಕಿ ಕಮ್ಮಿ ಮಾಡಿದ್ದಾರೆ. ಇಲ್ಲಿ ಬೆಂಗಳೂರಿನಿAದ ಸಾಕಷ್ಟು ಜನ ಹಳ್ಳಿಗೆ ಬಂದಿರುವುದರಿAದ ಹೆಚ್ಚು ಅಕ್ಕಿ ಬೇಕಾಗುತ್ತದೆ ಮತ್ತು ಈಗ ಬೇರೆ ಜಿಲ್ಲೆಯವರೂ ಇಲ್ಲಿ ಬಂದು ಲಾಕ್ ಆಗಿರುತ್ತಾರೆ. ಅಂತಹವರಿಗೂ ನಾವು ಅಕ್ಕಿ ಕೊಡಬೇಕಾಗುತ್ತದೆ. ಆದರೆ ಸರ್ಕಾರ ಹೆಚ್ಚಿನ ಅಕ್ಕಿ ಮಾತ್ರ ಕೊಡುವುದಿಲ್ಲ. ಪಡಿತರ ಲೈಸನ್ಸ್ದಾರರು ಹಣ ಹೊಡೆಯುತ್ತಾರೆ ಎಂಬ ಮಾತು ಮಾತ್ರ ಬರುತ್ತದೆ. ಆದರೆ ಲೈಸನ್ಸ್ದಾರರ ಸಮಸ್ಯೆಗಳು ಸಾಕಷ್ಟಿವೆ. ಸರ್ಕಾರ ಕೊಡುವ ಕಮಿಷನ್ ಅತಿ ಕಡಿಮೆ ಪ್ರಮಾಣದ್ದಾಗಿದ್ದು ದುರಾಸೆ ಮೂಡಿಸುವಂತೆ ಪ್ರೇರೇಪಿಸುತ್ತಿದೆ. ಆಹಾರ ವಿತರಣೆ ಪ್ರಮುಖವಾದಂತಹ ಕೆಲಸ. ಇದನ್ನ ಗಂಭೀರವಾಗಿ ಮಾಡುವಂತಹ ವಾತಾವರಣ ಇಲಾಖೆ ಕಲ್ಪಿಸಬೇಕು ಎಂದಿದ್ದಾರೆ.
ಅಧಿಕಾರಿಗಳ ಪ್ರತಿಕ್ರಿಯೆ
ಈ ಬಗ್ಗೆ ಆಹಾರ ಇಲಾಖೆ ಆಯುಕ್ತರಾದ ಶಮ್ಲಾ ಇಕ್ಬಾಲ್ ಅವರಿಗೆ ಕರೆಮಾಡಿದಾಗ ‘ನಾವು 10 ಕೆಜಿ ಕೊಡ್ತಿದ್ದೀವಿ’ ಅಂದವರೇ ಫೋನ್ ಕಟ್ ಮಾಡಿದರು. ಮತ್ತೆ ಕರೆ ಮಾಡಿದರೂ ರಿಸೀವ್ ಮಾಡಲಿಲ್ಲ.
ಇದೇ ಇಲಾಖೆಯ ಅಪರ ನಿರ್ದೇಶಕರಾದ ಗಂಗಾಧರ್‌ರವರನ್ನು ಮಾತನಾಡಿಸಿದಾಗ ‘ಬಜೆಟ್‌ನ ತೀರ್ಮಾನದಂತೆ ಎರಡು ಕೆ.ಜಿ ಕಡಿಮೆ ಆಗಿದೆ. ಬೇರೆ ಬೇರೆ ಜಿಲ್ಲೆಯವರಿಗೂ ಆಧಾರ್ ಕಾರ್ಡಿನ ದಾಖಲೆಯಂತೆ ಲಭ್ಯವಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಕೊಡುತ್ತಾರೆ. ಮುಖ್ಯಮಂತ್ರಿಗಳ ತೀರ್ಮಾನದಂತೆ ಪಡಿತರ ಚೀಟಿ ಇಲ್ಲದ ಹೊಸ ಅರ್ಜಿ ಹಾಕಿರುವ 1.85 ಲಕ್ಷ ಜನಕ್ಕೆ ಒಂದು ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ. ಅದು ಇನ್ನು ಎರಡು ದಿನದಲ್ಲಿ ಕಾರ್ಯರೂಪಕ್ಕೆ ಬರುತ್ತೆ’ ಎಂದರು.
ಆಹಾರ ಸರಬರಾಜು ಕೆಲಸದಲ್ಲಿರುವ ಸ್ವಯಂಸೇವಕರ ಅನಿಸಿಕೆ
ನಾವು ಮಾತನಾಡಿಸಿದಂತಹ ಸ್ವಯಂಸೇವಕರು ‘ಈ ಸಂದರ್ಭದಲ್ಲಿ ನಾವು ಸರ್ಕಾರದಿಂದ ಬರುವ ಸಾಮಗ್ರಿಗಳನ್ನು ತಲುಪಿಸುವುದಕ್ಕೂ ಆದ್ಯತೆ ನೀಡುತ್ತಿದ್ದೇವೆ. ಸಮಸ್ಯೆಗಳನ್ನು ಹೇಳುತ್ತೇವೆ. ನಮ್ಮ ಹೆಸರು ಹಾಕಬಾರದು’ ಎಂದು ಹೇಳಿ ಶುರು ಮಾಡಿದರು.
‘ಬಡವರು, ದಿನಗೂಲಿ ಕಾರ್ಮಿಕರು, ಮಹಿಳೆಯರು ತುಂಬಾ ಸಂಕಷ್ಟದಲ್ಲಿದ್ದಾರೆ. ಇವರಿಗೆ ಸರ್ಕಾರ ಈಗ ನೀಡುತ್ತಿರುವ ರೇಷನ್ ಯಾವುದೇ ಕಾರಣಕ್ಕೂ ಸಾಲುವುದಿಲ್ಲ. ಅಕ್ಕಿ ಗೋಧಿಯ ಜೊತೆ, ಪ್ರತಿ ದಿನ ಅಡುಗೆಗೆ ಬೇಕಾದಂತಹ ಮೂಲಭೂತ ಸಾಮಗ್ರಿಗಳನ್ನು ತಪ್ಪದೇ ನೀಡಬೇಕಿದೆ.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯನ್ನು ಲಾಕ್‌ಡೌನ್ ಸಮಯದಲ್ಲಿ ಇನ್ನಷ್ಟು ಬಲಗೊಳಿಸುವ ಅವಶ್ಯಕತೆ ಇದೆ. ಆಹಾರ ವಿತರಣೆ ಮಾಡಲು ಸರಿಯಾದ ಮಾರ್ಗಸೂಚಿಗಳನ್ನು ಇಟ್ಟುಕೊಳ್ಳಬೇಕಿದೆ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಗಮನಕೊಟ್ಟು ಆಹಾರ ವಿತರಣೆ ಮಾಡಬೇಕಿದೆ ಎಂದು ಹೇಳಿದರು.
ಜೊತೆಗೆ ಎಲ್ಲರಿಗೂ ಆಹಾರದ ಖಾತರಿ ಇದೆ ಎಂದಾದಾಗ ಇರುವ ನೆಮ್ಮದಿಯು, ಬೇರೆ ಬೇರೆ ಕಾರಣಗಳಿಂದ ಕೆಲವರನ್ನು ಹೊರಗಿಡುವ ಪ್ರಕ್ರಿಯೆ ನಡೆದಾಗ ಇರುವುದಿಲ್ಲ. ಜನರು ಭೀತಿಗೊಳಗಾಗುತ್ತಾರೆ; ಸ್ವಲ್ಪ ಮಟ್ಟಿಗೆ ಉಳ್ಳವರೂ ಸಹಾ ಆಹಾರ ಪದಾರ್ಥಗಳನ್ನು ಸ್ಟಾಕ್ ಮಾಡಲು ತೊಡಗುತ್ತಾರೆ. ಆಗ ಬಿಕ್ಕಟ್ಟು ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಕಾರ್ಡ್ ಯಾರಿಗಿದೆ ಯಾರಿಗಿಲ್ಲ ಎಂಬುದನ್ನೆಲ್ಲಾ ನೋಡಬಾರದು. ಬಹಳ ದೊಡ್ಡ ಆರ್ಥಿಕ ತಜ್ಞರೂ ಸಹಾ ಇದನ್ನೇ ಹೇಳಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರಿಗೂ ಸಮಾನವಾದ ರೀತಿಯಲ್ಲಿ ಅಗತ್ಯವಿರುವಷ್ಟೂ ಆಹಾರವನ್ನು ಒದಗಿಸುವುದಕ್ಕಿಂತ ಮಹತ್ವದ ಕೆಲಸ ಇನ್ನೊಂದಿಲ್ಲ. ಜೊತೆಗೆ ಜನರ ಕೈಯ್ಯಲ್ಲಿ ಹಣ ಓಡಾಡುವಂತೆ ಮಾಡಿದರೆ ಅವರ ಕೊಳ್ಳುವ ಶಕ್ತಿ ಸ್ವಲ್ಪಮಟ್ಟಿಗೆ ಉಳಿದುಕೊಂಡರೂ ಆರ್ಥಿಕತೆ ಪೂರ್ಣ ಕುಸಿಯದಂತೆ ತಡೆಯಬಹುದು. ಆದರೆ ನೀತಿ ನಿರೂಪಕರು ಮೇಲಿನಿಂದ ಜನರನ್ನು ಹೊರಗಿಡುವ ತೀರ್ಮಾನ ಘೋಷಿಸುತ್ತಾರೆ. ಕೆಳಗಿನವರು ಅದನ್ನು ಮತ್ತಷ್ಟು ಕ್ಲಿಷ್ಟಗೊಳಿಸಿ ಜನರಿಗೆ ತೊಂದರೆ ಕೊಡುತ್ತಾರೆ. ಹೀಗೆಯೇ ಮುಂದುವರೆದರೆ ಬೇರೆ ದೇಶಗಳಲ್ಲಿಯಂತೆ ಇಲ್ಲೂ ಆಹಾರ ದಂಗೆಗಳು ಏರ್ಪಡುತ್ತವೆ.’


