ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರಗಿನಿಂದ ನೋಡುವವರಿಗೆ ಇಲ್ಲಿಯ ಶ್ರೀಮಂತಿಕೆಯ ಚಿತ್ರಣವಷ್ಟೇ ಗೋಚರಿಸುತ್ತದೆ. ಕಡು ಬಡತನ ನಮ್ಮ ಜಿಲ್ಲೆಯಲ್ಲಿಯೂ ಇದೆ. ಆದರೆ ಹಸಿವು ರುದ್ರತಾಂಡವವಾಡಿದ್ದು ವಿರಳ. ಇದಕ್ಕೆ ಕಾರಣ ಇಲ್ಲಿನ ಬೀಡಿ ಉದ್ಯಮ. ಕರಾವಳಿಯ ಗ್ರಾಮೀಣ ಮಹಿಳೆಯರನ್ನು ಸ್ವಾವಲಂಬಿಯಾಗಿಸಿದ್ದೂ ಇದೇ ಬೀಡಿ ಉದ್ಯಮ. ಬೀಡಿ ಕಟ್ಟುವ ಕಲೆಯನ್ನು ಕರಗತ ಮಾಡಿಕೊಂಡಿರುವ ಇಲ್ಲಿನ ಮಹಿಳೆಯರು ವಿದ್ಯಾಭ್ಯಾಸವಿಲ್ಲದೇ, ಪ್ರಮಾಣ ಪತ್ರವಿಲ್ಲದೇ ಬದುಕನ್ನು ಕಟ್ಟಿಕೊಳ್ಳುವಲ್ಲಿ ಬೀಡಿಯ ಪಾತ್ರ ಹಿರಿದು. ಬಡವರು ಮಾತ್ರವಲ್ಲದೇ ಸಣ್ಣ ಕೃಷಿಕರು, ಗ್ರಾಮೀಣ ಕೆಳಮಧ್ಯಮವರ್ಗದ ಜನರು ಇಂದಿಗೂ ಬೀಡಿಯನ್ನು ತಮ್ಮ ಉಪಕಸುಬಾಗಿಸಿಕೊಂಡಿದ್ದಾರೆ. ಕೂಲಿ ಕಾರ್ಮಿಕರು ದುಡಿಮೆಯಿಲ್ಲದ ದಿನಗಳಲ್ಲಿ ಈ ಉಪಕಸುಬನ್ನು ಅವಲಂಬಿಸುತ್ತಾರೆ. ಇದೀಗ ಲಾಕ್ಡೌನಿನಿಂದಾಗಿ ಅತ್ತ ಕಸುಬೂ ಇಲ್ಲದೆ, ಇತ್ತ ಉಪಕಸುಬೂ ಇಲ್ಲದೆ ಕೈ ಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಕಷ್ಟದ ಸಂದರ್ಭಗಳಲ್ಲೆಲ್ಲಾ ನೆರವಾಗುತ್ತಿದ್ದ ಬೀಡಿ ಈ ಬಾರಿ ಕೈ ಹಿಡಿಯಲಿಲ್ಲ.
ಹಳೇ ಕಾಲದಲ್ಲಿ ದ.ಕ.ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬೀಡಿಯ ಕುರಿತ ಉದ್ಯೋಗದ ಪರಿಕಲ್ಪನೆ ಹೇಗಿತ್ತೆಂದರೆ ಮದುವೆ ಸಂಬಂಧ ಮಾತನಾಡುವಾಗ ಹುಡುಗ- ಹುಡುಗಿಗೆ ಬೀಡಿ ಕಟ್ಟಲು ಬರುತ್ತದಾ ಎಂಬ ಪ್ರಶ್ನೆ ಬಡ ಮತ್ತು ಮಧ್ಯಮ ವರ್ಗದಲ್ಲಿ ಸರ್ವೇ ಸಾಮಾನ್ಯವಾಗಿತ್ತಂತೆ. ಇಬ್ಬರಿಗೂ ಬರುತ್ತದೆಂದರೆ ಒಳ್ಳೆಯ ಜೋಡಿ ಎನ್ನಲು ಅದೂ ಒಂದು ಪ್ರಮಾಣ ಪತ್ರದಂತಿತ್ತು ಎಂದು ಹಿರಿಯರು ಹೇಳುತ್ತಿದ್ದರು. ಹುಡುಗನಿಗೂ ಈ ರೀತಿಯ ಪ್ರಶ್ನೆ ಯಾಕೆ ಕೇಳಲಾಗುತ್ತಿತ್ತೆಂದರೆ ಕೃಷಿ ಕೂಲಿ, ಇತರ ಕೂಲಿ ಕಾರ್ಮಿಕರಾದರೆ ಜಡಿ ಮಳೆ ಸುರಿಯುವ ಎರಡ್ಮೂರು ತಿಂಗಳು ಕೆಲಸವಿರುತ್ತಿರಲಿಲ್ಲ. ಅಂತಹ ದಿನಗಳಲ್ಲಿ ಹೊಟ್ಟೆ ತುಂಬಿಸಲು ಬೀಡಿಯೇ ನೆರವಾಗುತ್ತಿತ್ತು. ಅಲ್ಲದೇ ದಿನದ ದುಡಿಮೆ ಮುಗಿಸಿ ಬಂದ ಮೇಲೆ ಪುರುಷರು ಬೀಡಿಯ ಎಲೆ ಕತ್ತರಿಸಿಕೊಡಲೋ, ಬೀಡಿಗೆ ನೂಲು ಸುತ್ತಿ ಕೊಡಲೋ ಮಡದಿಗೆ ನೆರವಾಗಬಹುದು ಎಂಬ ದೂರಾಲೋಚನೆ ಅಂದಿನ ಹಿರಿಯರದ್ದಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಡಿಯು ಮನೆಯೊಳಗಿದ್ದೇ ಮಾಡುವ ಕಸುಬಾದುದರಿಂದ ಹೊರನೋಟಕ್ಕೆ ಸುಲಭದ ಕೆಲಸದಂತೆ ಗೋಚರಿಸುತ್ತದೆ. ಬೀಡಿ ಕಾರ್ಮಿಕರ ಶ್ರಮ ಮತ್ತು ಬವಣೆಯನ್ನು ನಾನು ಹತ್ತಿರದಿಂದ ನೋಡಿ ಬಲ್ಲೆ. ದಿನವಿಡೀ ಕೂತು ಸೊಂಟ ಮುರಿದು ಸುರುಟುವ ಬೀಡಿ ಒಂದು ಕಟ್ಟಾಗಬೇಕಾದರೆ 25 ಬೀಡಿಗಳು ಸೇರಬೇಕು. ಇಂತಹ ನಲ್ವತ್ತು ಕಟ್ಟುಗಳು ಸೇರಿದರೆ ಸಾವಿರ ಬೀಡಿಗಳಾಗುತ್ತವೆ. ಅದಕ್ಕೆ ಸಿಗುವ ಕೂಲಿಯಾದರೋ ಬಹಳ ಕಡಿಮೆ. ಅರ್ಧ ಕೆ.ಜಿ. ಬೀಡಿ ಎಲೆಗೆ 1000 ಬೀಡಿಗಳಾಗಬೇಕು. ಪ್ರತೀ ಬಾರಿಯೂ ಸಾವಿರ ಬೀಡಿ ಭರ್ತಿ ಮಾಡಿಕೊಡಲಾಗುವುದಿಲ್ಲ. ಅದು ಬೀಡಿ ಗುತ್ತಿಗೆದಾರ ಕೊಡುವ ಎಲೆಯ ಗುಣಮಟ್ಟದ ಮೇಲೆ ಅವಲಂಬಿಸಿರುತ್ತದೆ. ಎಲೆಯ ಗುಣಮಟ್ಟ ಚೆನ್ನಾಗಿಲ್ಲದಿದ್ದರೆ ಅದರಿಂದುಂಟಾಗುವ ನಷ್ಟವನ್ನು ಸ್ವತಃ ಕಾರ್ಮಿಕರೇ ಭರಿಸಬೇಕು. ಬೀಡಿಗೆ ಸುತ್ತುವ ನೂಲು ಒಂದು ಉಂಡೆ ಜಾಸ್ತಿ ಕೇಳಿದರೆ ಗಾಳಿಪಟ ಹಾರಿಸಲಿಕ್ಕಿದೆಯೇ ಎಂದು ಗುತ್ತಿಗೆದಾರ ವ್ಯಂಗ್ಯವಾಗಿ ರೇಗಾಡುವುದನ್ನು ನೋಡಿದ್ದೇನೆ. ಸಾವಿರ ಬೀಡಿಯಲ್ಲಿ ಒಂದು ಕಟ್ಟು ಬಿಚ್ಚಿ ತಿರಸ್ಕರಿಸದಿದ್ದರೆ ಅವನಿಗೆ ತಿಂದದ್ದು ಕರಗುವುದಿಲ್ಲ. ಆಗೆಲ್ಲಾ ಆ ಮಹಿಳೆಯರು ಒತ್ತರಿಸಿ ಬರುವ ದುಃಖ ಕಣ್ಣೀರಾಗಿ ಹರಿಯದಂತೆ ತಡೆಯುವಾಗಿನ ಚಡಪಡಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಸಾವಿರ ಬೀಡಿಯಲ್ಲಿ ಕೊನೆಯ ಒಂದು ಕಟ್ಟು ಬೀಡಿಯನ್ನು ಭರ್ತಿ ಮಾಡಲು ಕಾರ್ಮಿಕರು ಬಹಳಷ್ಟು ಶ್ರಮ ಹಾಕುತ್ತಾರೆ. ಹರಿದ ಎಲೆಗೆ ತೇಪೆ ಹಾಕಿಯೋ, ಏನಾದರೊಂದು ಮಾಡಿ ಭರ್ತಿ ಮಾಡುತ್ತಾರೆ. ಒಬ್ಬೊಬ್ಬ ಗುತ್ತಿಗೆದಾರನ ಅಧೀನದಲ್ಲಿ ಸರಾಸರಿ ಐವತ್ತು ಮಂದಿ ಕಾರ್ಮಿಕರು ದುಡಿಯುತ್ತಾರೆ. ಹೀಗೆ ಒಬ್ಬೊಬ್ಬ ಕಾರ್ಮಿಕರ ಒಂದೊಂದು ಕಟ್ಟು ಬೀಡಿಯನ್ನು ಬಿಚ್ಚಿ ಎಸೆದರೆ ಐವತ್ತು ಕಾರ್ಮಿಕರಿಂದ 1250 ಬೀಡಿಗಳಾಗುತ್ತವೆ. ಹಾಗೆ ಬಿಚ್ಚಿ ಚೆನ್ನಾಗಿಲ್ಲ ಎಂದು ಎಸೆಯುವ ಬೀಡಿ ಯಾವತ್ತೂ ಕಸದ ಬುಟ್ಟಿ ಸೇರುವುದಿಲ್ಲ. ಮತ್ತೆ ಅವುಗಳನ್ನು ಸೇರಿಸಿ ಕಟ್ಟು ಮಾಡಿ ಗುತ್ತಿಗೆದಾರ ಅದನ್ನು ತನ್ನ ಮನೆಯವರ ಬೀಡಿ ಲೆಕ್ಕ ಪುಸ್ತಕಕ್ಕೆ ಬರೆಯುತ್ತಾನೆ. ಅನಕ್ಷರಸ್ಥ ಮಹಿಳೆಯರಾದರೆ ಅವರಿಗೆ ಇನ್ನೂ ಲಾಭ. ಲೆಕ್ಕ ಪುಸ್ತಕಕ್ಕೆ ಬರೆಯುವಾಗ ಒಂದು ಕಟ್ಟು ಕಳೆದೇ ಲೆಕ್ಕ ಪುಸ್ತಕಕ್ಕೆ ಬರೆಯುವುದು ವಾಡಿಕೆ. ಘಾಟಿ ಹೆಂಗಸರಾದರೆ ಬೀಡಿಯ ಲೆಕ್ಕವನ್ನು ನೆನಪಿಟ್ಟುಕೊಂಡು ವಾರದ ಕೊನೆಯಲ್ಲಿ ಮಜೂರಿ ಪಡೆಯುವಾಗ ಏನಾದರೂ ವ್ಯತ್ಯಾಸ ಕಂಡುಬಂದರೆ ನ್ಯಾಯಕ್ಕಾಗಿ ಜಗಳಾಡುತ್ತಾರೆ. ಆದರೂ ಅವನ ಮುಂದೆ ಅವರ ಜಗಳ ಜಯಿಸುವುದಿಲ್ಲ.
ಹೆಚ್ಚಿನ ಗುತ್ತಿಗೆದಾರರು ಪುಟ್ಟ ದಿನಸಿ ಅಂಗಡಿಯನ್ನೂ ಹೊಂದಿರುತ್ತಾರೆ. ಇದರಿಂದ ಕಾರ್ಮಿಕರಿಗೆ ಅನುಕೂಲವಾಗುವುದಕ್ಕಿಂತ ಗುತ್ತಿಗೆದಾರನಿಗೇ ಲಾಭ. ಸಾಮಾನ್ಯವಾಗಿ ಅಲ್ಲಿ ಇತರರಿಗೊಂದು ಬೆಲೆಯಾದರೆ ವಾರದ ಮಜೂರಿಯಲ್ಲಿ ಕಳೆಯಲು ಸಾಲ ಪಡೆಯುವ ಕಾರ್ಮಿಕರಿಗೊಂದು ಬೆಲೆ. ವಾರದ ಕೊನೆಯಲ್ಲಿ ಮಜೂರಿ ಕೊಡುವಾಗ ಸಾಲದ ಪಟ್ಟಿಗೆ ಒಂದಿಷ್ಟು ಸೇರಿಸಿಯೇ ಮಜೂರಿ ಕಳೆಯುವ ಕೆಲ ಕಳ್ಳ ಗುತ್ತಿಗೆದಾರರೂ ಇದ್ದಾರೆ. ಹಲವು ಬಾರಿ ವಾರದ ಕೊನೆಯಲ್ಲಿ ಮಜೂರಿಗಿಂತ ಖರೀದಿಸಿದ ದಿನಸಿಗಳ ಸಾಲವೇ ಹೆಚ್ಚಾಗಿ ಬೇಸರದಿಂದ ಸಪ್ಪೆ ಮೋರೆ ಮಾಡಿ ಬರಿಗೈಯಲ್ಲಿ ಬರುವ ಕಾರ್ಮಿಕರೂ ಇದ್ದಾರೆ. ಆಗ ಅಗತ್ಯ ದಿನಸಿ ಕೇಳಿದರೆ ಕೊಡದೇ ಖಾಲಿ ಚೀಲದೊಂದಿಗೆ ಮರಳುವ ಕಾರ್ಮಿಕರ ಅಸಹಾಯಕ ಮುಖ ಈಗಲೂ ನನ್ನ ಕಣ್ಣ ಮುಂದೆ ಬರುತ್ತದೆ.
ಗುತ್ತಿಗೆದಾರರು ಎರಡು ವಿಧದ ಬೀಡಿಯನ್ನು ಕಟ್ಟಿಸುತ್ತಾರೆ. ಒಂದು ಕ್ರಯದಬೀಡಿ ಮತ್ತು ಇನ್ನೊಂದು ಪಾಸ್ ಪುಸ್ತಕದಬೀಡಿ. ಈ ಕ್ರಯದಬೀಡಿ ಕಾರ್ಮಿಕನ ಹೆಸರು ಕಂಪೆನಿಯಲ್ಲಿ ನೋಂದಾವಣೆಯಾಗಿರುವುದಿಲ್ಲ. ಹಾಗಾಗಿ ಅವರು ಕಂಪೆನಿಯ ಅಧಿಕೃತ ಕಾರ್ಮಿಕರಲ್ಲ. ಅವರದೇನಿದ್ದರೂ ಗುತ್ತಿಗೆದಾರರ ಜೊತೆಗಿನ ವ್ಯವಹಾರವಷ್ಟೇ. ಕ್ರಯದ ಬೀಡಿಗೆ ಪಾಸ್ ಪುಸ್ತಕದ ಬೀಡಿಗಿಂತ ಮೂವತ್ತು ರೂಪಾಯಿ ಹೆಚ್ಚು ಬೆಲೆ (ಈಗಿನ ಬೀಡಿ ಮಾರುಕಟ್ಟೆ ಪ್ರಕಾರ). ಆದರೆ ಕ್ರಯದಬೀಡಿಯ ಕಾರ್ಮಿಕನಿಗೆ ಪಾಸ್ ಪುಸ್ತಕದ ಕಾರ್ಮಿಕನಂತೆ ಯಾವ ಸೌಲಭ್ಯಗಳೂ ಇರುವುದಿಲ್ಲ. ಪಾಸ್ ಪುಸ್ತಕದಬೀಡಿ ಕಾರ್ಮಿಕನಿಗೆ ಭವಿಷ್ಯ ನಿಧಿ, ಇ.ಎಸ್.ಐ, ಬೋನಸ್, ತುಟ್ಟಿ ಭತ್ಯೆ, ಮಕ್ಕಳ ಸ್ಕಾಲರ್‍ಶಿಪ್ ಇತ್ಯಾದಿಗಳು ದೊರೆಯುತ್ತವೆ. ಕ್ರಯದಬೀಡಿ ಕಾರ್ಮಿಕರು ಕೈ ಕಾಲು ಹಿಡಿದು ಬೇಡಿದರೂ ಕೆಲವು ಗುತ್ತಿಗೆದಾರರು ಅವರಿಗೆ ಪಾಸ್ ಪುಸ್ತಕ ಮಾಡಿಕೊಡಲು ಸುತಾರಾಂ ಒಪ್ಪುವುದಿಲ್ಲ. ಯಾಕೆಂದರೆ ಕ್ರಯದ ಬೀಡಿ ಕಟ್ಟುವ ಕಾರ್ಮಿಕರು ಇವರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಿದ್ದಂತೆ. ಗುತ್ತಿಗೆದಾರನ ಮನೆಯ ಸದಸ್ಯರು ಬೀಡಿ ಕಟ್ಟಲಿ, ಕಟ್ಟದಿರಲಿ ತಲೆಗೊಂದರಂತೆ ಪಾಸ್ ಪುಸ್ತಕ ಮಾಡಿಡುತ್ತಾನೆ. ಹೇಗಿದ್ದರೂ ಕ್ರಯದ ಬೀಡಿ ಕಾರ್ಮಿಕರಿಗೂ ಕಂಪೆನಿಗೂ ಸಂಪರ್ಕವಿರುವುದಿಲ್ಲ. ಕ್ರಯದ ಕಾರ್ಮಿಕರ ಬೀಡಿಯನ್ನೆಲ್ಲ್ಲಾ ಗುತ್ತಿಗೆದಾರ ತನ್ನ ಮನೆಯವರ ಪಾಸ್ ಪುಸ್ತಕಕ್ಕೆ ಬರೆಯುತ್ತಾನೆ. ಆ ಮೂಲಕ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನೆಲ್ಲಾ ತನ್ನ ಜೇಬಿಗಿಳಿಸುತ್ತಾನೆ.
ಉದ್ಯೋಗಸ್ಥ ಮಹಿಳೆಯರ ಮೇಲೆ ಕಚೇರಿಗಳಲ್ಲಿ, ಕಾರ್ಖಾನೆಗಳಲ್ಲಿ ಮತ್ತಿತರ ಕೆಲಸದ ಜಾಗದಲ್ಲಿ ಲೈಂಗಿಕ ದೌರ್ಜನ್ಯವಾಗುವಂತೆಯೇ ಬೀಡಿ ಕಾರ್ಮಿಕರ ಮೇಲೂ ಕೆಲವೊಮ್ಮೆ ಸಣ್ಣ ಮಟ್ಟದ ಲೈಂಗಿಕ ಶೋಷಣೆ ನಡೆಯುವುದೂ ಇದೆ. ಕಾರ್ಮಿಕೆಯರ ಅಸಹಾಯಕತೆಯನ್ನು ಕೆಲ ಗುತ್ತಿಗೆದಾರರು ಕೈ ಸನ್ನೆ, ಕಣ್ಸನ್ನೆಗಳ ಮೂಲಕವೂ ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಎಲೆಯನ್ನು ತೂಗಿದ ಬಳಿಕ ತಕ್ಕಡಿಯ ತಟ್ಟೆಯಿಂದ ಅವರ ಚೀಲಕ್ಕೆ ಹಾಕುವ ಬದಲು ನೆಲಕ್ಕೆ ಸುರಿಯುವ ಗುತ್ತಿಗೆದಾರರು/ಎಲೆ ತೂಗಿ ಕೊಡುವ ಕೆಲಸದಾಳುಗಳಿದ್ದಾರೆ. ಇನ್ನು ಕೆಲವರು ಎಲೆಯನ್ನು ನೆಲಕ್ಕೆಸೆದು ಆಯ್ದುಕೊಳ್ಳಿ ಎನ್ನುತ್ತಾರೆ. ಎಲೆಯನ್ನು ಹೆಕ್ಕಲು ಕಾರ್ಮಿಕೆ ಬಗ್ಗಿದಾಗ ಆತನ ಕಣ್ಣು ಸ್ಕ್ಯಾನಿಂಗ್ ಮಾಡತೊಡಗುವುದೂ ಇದೆ. ಹೀಗೆ ಬೀಡಿ ಕಾರ್ಮಿಕರ ಬವಣೆ ಹೇಳಿ ಮುಗಿಯದಷ್ಟಿದೆ.
ಬೀಡಿ ಬೋನಸ್ ಸಿಕ್ಕಾಗ ಹಳ್ಳಿಯ ಮುಗ್ಧ ಕಾರ್ಮಿಕರ ಮುಖದಲ್ಲಿ ಲಾಸ್ಯವಾಡುತ್ತಿದ್ದ ಸಂತಸದ ನಗುವನ್ನು ನಾನು ಕಣ್ತುಂಬಿಸಿಕೊಂಡಿದ್ದೇನೆ. ಆ ಹಣದಿಂದ ಅವರು ಬೆಳ್ಳಿಯ ಕಾಲ್ಗೆಜ್ಜೆ ಖರೀದಿಸುವುದು, ಅದಕ್ಕೆ ಹಿಂದಿನ ಉಳಿತಾಯ ಸೇರಿಸಿ ಚಿನ್ನದ ಪುಟ್ಟ ಕಿವಿಯೋಲೆ ಮಾಡಿಸುವುದೆಲ್ಲಾ ಇದೆ. ಅದನ್ನು ಹಳ್ಳಿ ಜನಕ್ಕೆ ತೋರಿಸಿ ಸಂಭ್ರಮಪಡುತ್ತಿದ್ದರು. ಹಿಂದೆಲ್ಲಾ ನನ್ನೂರಿನ ಅದೆಷ್ಟೋ ತರುಣಿಯರು ಹಾಗೆ ಕೂಡಿಟ್ಟ ದುಡ್ಡಿನಿಂದಲೇ ತಂತಮ್ಮ ಮದುವೆಗೆ ಚಿನ್ನ ಮಾಡಿಟ್ಟದ್ದೂ ಇದೆ. ಹಾಗೆ ಮದುವೆಯಾಗಿ ಹೋದ ಅನೇಕ ಹೆಣ್ಮಕ್ಕಳನ್ನು ನಾನು ಕಂಡಿದ್ದೇನೆ. ನನ್ನೂರಿನ ಯುವಪೀಳಿಗೆ ಉತ್ತಮ ವಿದ್ಯಾಭ್ಯಾಸ ಪಡೆದು ಒಳ್ಳೆಯ ಉದ್ಯೋಗ ಗಳಿಸಿದ್ದರ ಹಿಂದೆ ಬೀಡಿಯ ಕೊಡುಗೆ ಅಪಾರವಿದೆ.
ನಮಗೆಲ್ಲಾ ಅಮ್ಮಂದಿರ ಬೀಡಿಯ ಸೂಪು (ಗೆರಸೆ) ಬಾಲ್ಯದಲ್ಲಿ ಎಟಿಎಂನಂತಿತ್ತು. ಶಾಲಾ ದಿನಗಳ ಪಾಕೆಟ್ ಮನಿಯೂ ಬೀಡಿಯ ಸೂಪಿನಿಂದಲೇ ಸಿಗುತ್ತಿತ್ತು.
ಕುಡುಕ ಗಂಡಸರೂ ಬೀಡಿಯ ಸೂಪಿಗೆ ಕನ್ನ ಹಾಕುತ್ತಿದ್ದರು. ನನ್ನೂರಿನ ತಾಯಂದಿರಿಗೂ ಬೀಡಿಯ ಜೊತೆ ಮುರಿಯಲಾಗದ ಭಾವನಾತ್ಮಕ ನಂಟಿದೆ. ಅಮ್ಮಂದಿರ ಬೀಡಿಯಿಂದಲೇ ಕಲಿತು ಒಳ್ಳೆಯ ಉದ್ಯೋಗ ಗಳಿಸಿಕೊಂಡ ಮಕ್ಕಳು “ಇನ್ನು ಬೀಡಿ ಕಟ್ಟಿದ್ದು ಸಾಕಮ್ಮಾ” ಎಂದರೂ ಕೆಲ ತಾಯಂದಿರು ನಮ್ಮ ಬದುಕು ರೂಪಿಸಿದ ಬೀಡಿಯನ್ನು ಹೇಗೆ ತೊರೆಯಲಿ ಎಂದು ಗದ್ಗದಿತರಾದದ್ದನ್ನೂ ಕಂಡಿರುವೆ.
ಒಟ್ಟಿನಲ್ಲಿ ಕರಾವಳಿಯ ಬಡವರ, ಕೆಳ ಮಧ್ಯಮ ವರ್ಗದ ಜನತೆಯ ಬದುಕು ರೂಪಿಸಿದ ಬೀಡಿಯ ಕುರಿತಂತೆ ನನ್ನ ಅರಿವಿನ ಮಿತಿಯಲ್ಲೇ ಬರೆಯುವುದಾದರೂ ಇನ್ನೂ ಬಹಳಷ್ಟಿದೆ.
(ಸಜ್ಜನ ಬೀಡಿ ಗುತ್ತಿಗೆದಾರರ ಕ್ಷಮೆ ಯಾಚಿಸುವೆ)
ಇದನ್ನೂ ಓದಿ: ಲಾಕ್‍ಡೌನ್ – ಮನೆಯಿಂದಲೇ ಕೆಲಸ, ಮನೆಕೆಲಸ ಮತ್ತು ಮಹಿಳೆ! – ಮಲ್ಲಿಗೆ ಸಿರಿಮನೆ
ಬೀಡಿ ಕಟ್ಟುವ ಎಲೆಯ ಹೆಸರೇನು