ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ತನ್ನ ಚಾನೆಲ್ ಕಾರ್ಯಕ್ರಮಗಳಲ್ಲಿ ಪೊಲೀಸರನ್ನು ದಬಾಯಿಸುವ ಮೂಲಕ ‘ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ’ ಎಂದು ಆರೋಪಿಸಿ ಮಹಾರಾಷ್ಟ್ರ ಸರ್ಕಾರ ಮುಂಬೈ ಪೊಲೀಸ್ ಉಪ ಆಯುಕ್ತರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ರಿಪಬ್ಲಿಕ್ ಭಾರತ್ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ‘ಕೋಮು ದ್ವೇಷವನ್ನು ಪ್ರಚೋದಿಸಿದ್ದಾರೆ’ ಎಂಬ ದೂರುಗಳ ಆಧಾರದ ಮೇಲೆ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕರ ವಿರುದ್ಧ ನೋಂದಾಯಿಸಲಾದ ಎಫ್ಆರ್‌ಐಗಳನ್ನು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅರ್ನಾಬ್ ವಿರುದ್ಧ ಪಾಲ್ಘರ್ ಲಿಂಚಿಂಗ್ ಘಟನೆಯನ್ನು ಕೋಮುವಾದೀಕರಿಸಿದ್ದರು ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ವಯಕ್ತಿಕ ತೇಜೋವಧೆ ನಡೆಸಿದ್ದರು ಎಂಬ ಆರೋಪಗಳಿವೆ.
ಏಪ್ರಿಲ್ 24 ರಂದು, ಸುಪ್ರೀಂ ಕೋರ್ಟ್ ಅರ್ನಾಬ್‌ಗೆ ಮೂರು ವಾರಗಳ ಕಾಲ ಬಂಧನದಿಂದ ರಕ್ಷಣೆ ನೀಡಿತು ಮತ್ತು ಇತರ ರಾಜ್ಯಗಳಲ್ಲಿ ಎಫ್‌ಐಆರ್‌ಗಳು ದಾಖಲಾಗದಂತೆ ತಡೆಹಿಡಿದಿತ್ತು.
ಸುಪ್ರೀಂ ಕೋರ್ಟ್‌ಗೆ ಮುಂಬೈ ಸರ್ಕಾರ ಸಲ್ಲಿಸಿದ್ದ ಅರ್ಜಿಯಲ್ಲಿ, ಗೋಸ್ವಾಮಿ ಅವರು ತಮ್ಮ ವಿರುದ್ಧ ಪೊಲೀಸರು ಪಕ್ಷಪಾತ ನಡೆಸುತ್ತಿದ್ದಾರೆಂದು ಹೇಳಲು ರಿಪಬ್ಲಿಕ್‌ನ ಟ್ವಿಟ್ಟರ್ ಹ್ಯಾಂಡಲ್‌ಗಳನ್ನು ಬಳಸಿದ್ದಾರೆ. ಅವರ ‘ಪುಚ್ತಾ ಹೈ ಭಾರತ್’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಅವರು ಇಂಡಿಯಾಬುಲ್ಸ್‌ಗೆ ಸಂಬಂಧಿಸಿದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ತಿಳಿಸಲಾಗಿದೆ.
ಗೋಸ್ವಾಮಿ ಅವರು ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ದಿನ, ಅವರು ತಮ್ಮ ಮಾಧ್ಯಮ ತಂಡವನ್ನು ತೊಂದರೆ ಸೃಷ್ಟಿಸಲು ಬಳಸಿದರು. ತಮ್ಮ ಪ್ರಭಾವವನ್ನು ಪೊಲೀಸ್ ಠಾಣೆಯಲ್ಲಿ ಬಳಸಲು ಪ್ರಯತ್ನಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
“ಅರ್ನಾಬ್ ವರದಿಗಾರರು, ಕ್ಯಾಮೆರಾಮನ್ ಮುಂತಾದವರನ್ನು ಪೊಲೀಸ್ ಠಾಣೆಯೊಳಗೆ ಕರೆದೊಯ್ದು ತನ್ನ ಕಥೆಯನ್ನು ವಿವರಿಸುತ್ತಾ ಪ್ರಸಾರ ಮಾಡುತ್ತಿದ್ದರು. ಅಲ್ಲಿ ಅವರು ಕೆಲವು ನಿರ್ದಿಷ್ಟ ಕೆಲಸಗಳನ್ನು ಮಾಡಲು ಮತ್ತು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವಂತೆ ಪೊಲೀಸರಿಗೆ ಆಜ್ಞಾಪಿಸಿದನು. ಪ್ರಕರಣ ಸಂಭವಿಸಿದ ಮತ್ತು ನೋಂದಾಯಿಸಿದಾಗಿನಿಂದ, ಅರ್ಜಿದಾರನು ಪ್ರತಿ ಹಂತದಲ್ಲೂ ಇಡೀ ಘಟನೆಯನ್ನು ತನ್ನ ಮಾಧ್ಯಮದಲ್ಲಿ ಪ್ರದರ್ಶಿಸಿದ್ದಾನೆ” ಎಂದು ಮಹಾರಾಷ್ಟ್ರ ಸರ್ಕಾರ ಆರೋಪಿಸಿದೆ.
ಗೋಸ್ವಾಮಿ ಅವರು ಪತ್ರಕರ್ತ ಮತ್ತು ರಿಪಬ್ಲಿಕ್ ಟಿವಿಯ ಸಂಪಾದಕರಾಗಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಈ ಆಧಾರದ ಮೇಲೆ, ಅರ್ನಾಬ್ ಅವರಿಗೆ ನ್ಯಾಯಾಲಯವು ನೀಡಿದ ಮಧ್ಯಂತರ ರಕ್ಷಣೆಯನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು ಮತ್ತು ಅವರಿಂದ “ಯಾವುದೇ ಒತ್ತಡ, ಬೆದರಿಕೆ ಅಥವಾ ಬಲಾತ್ಕಾರದಿಂದ ತನಿಖೆಯನ್ನು ಕುಂಠಿತಗೊಳಿಸದಂತೆ” ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಇದರಿಂದ ತನಿಖೆಯನ್ನು ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ನಡೆಸಬಹುದು ಎಂದು ತಿಳಿಸಿದೆ.
ಮುಂಬೈನ ಬಾಂದ್ರಾದ ರೈಲು ನಿಲ್ದಾಣದ ಎದುರು ಏಪ್ರಿಲ್ 14 ರಂದು ವಲಸೆ ಕಾರ್ಮಿಕರು ದೊಡ್ಡ ಪ್ರಮಾಣದಲ್ಲಿ ಒಟ್ಟುಗೂಡಿದ್ದನ್ನು, ಮಸೀದಿ ಎದುರು ಗುಂಪುಗೂಡಿದ್ದಾರೆ ಎಂದು ತನ್ನ ಕಾರ್ಯಕ್ರಮದಲ್ಲಿ ಕೋಮು ದ್ವೇಷವನ್ನು ಪ್ರಚೋದಿಸಿದ ದೂರಿನ ಆಧಾರದ ಮೇಲೆ ಗೋಸ್ವಾಮಿ ವಿರುದ್ಧ ಮುಂಬೈ ಪೊಲೀಸರು ಮೇ 2ರ ಶನಿವಾರ ಹೊಸ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಸಫೂರ ಜರ್ಗರ್ ಮದುವೆಯಾಗದೆ ಗರ್ಭಿಣಿಯಾಗಿದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಬಿಜೆಪಿ ನಾಯಕ


