“ಜೈನ ಧರ್ಮದವರು, ಕೆಲವು ಹಿಂದೂ ಮಹಿಳೆಯರು ತಲೆ ಮೇಲೆ ಸೆರಗು ಹಾಕಲ್ವಾ, ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಸಾಕಲ್ವಾ, ಮುಸ್ಲಿಂ ಹೆಣ್ಣುಮಕ್ಕಳು ತಲೆ ಮೇಲೆ ದುಪ್ಪಟ ಹಾಕಿಕೊಂಡರೆ ನಿಮಗೇನು ತೊಂದರೆ. ಈ ವಿವಾದವನ್ನು ಸೃಷ್ಟಿಸಿದ್ದೇ ಬಿಜೆಪಿ. ಎರಡು ಧರ್ಮದವರನ್ನು ಕರೆದು ಬಗೆಹರಿಸಬಹುದಿತ್ತಲ್ಲ” ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯನವರು ವಿವಾದ ಸೃಷ್ಟಿಸಿದ್ದಾರೆಂದು ಬಿಂಬಿಸಲಾಗುತ್ತಿದೆ.
‘ಹಿಜಾಬ್ ಸಮರ್ಥಿಸುವ ಭರದಲ್ಲಿ ಸಿದ್ದರಾಯ್ಯ ಲೂಸ್ ಟಾಕ್’ ಎಂದು ಮಾಧ್ಯಮಗಳು ಬಿಂಬಿಸಿ, ಸಿದ್ದರಾಮಯ್ಯನವರ ವಿರುದ್ಧ ಜನರನ್ನು ಎತ್ತಿಕಟ್ಟಲು ಯತ್ನಿಸುತ್ತಿರುವುದನ್ನು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರಶ್ನೆ ಎತ್ತಿರುವ ಪತ್ರಕರ್ತ ಆದಿತ್ಯ ಭಾರದ್ವಾಜ್, “ಸಿದ್ಧರಾಮಯ್ಯನವರೇನೋ ಆಡಬಾರದ ಮಾತಾಡಿದ್ದಾರೆ ಎಂಬಂತೆ ನಮ್ಮ ಮಾಧ್ಯಮಗಳು, ಬಿಜೆಪಿ ಮತ್ತು ಸ್ವತಃ ಕಾಂಗ್ರೆಸ್ ಆಡುತ್ತಿದೆ. ಈ ಪಾಟಿ ಹಿಂದುತ್ವವನ್ನು ಒಪ್ಪಿಯೇ ರಾಜಕಾರಣ ಮಾಡುವುದಾದರೆ ಬಿಜೆಪಿಗೂ ಕಾಂಗ್ರೆಸ್ಸಿಗೂ ಫರಕ್ಕೇನು?” ಎಂದು ಕೇಳಿದ್ದಾರೆ.
ಮುಂದುವರಿದು, “ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿ ತಲೆ ಮೇಲೆ ಬಟ್ಟೆ ಹೊದೆಯುವ ಆಚಾರ, ಪರಿಪಾಠ ಇದೆ. ಅದನ್ನೇ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಅವರು ಹೇಳಿದ್ದರಲ್ಲಿ ಸ್ವಾಮೀಜಿಗಳಿಗೆ ಅಪಮಾನಕರವಾದದ್ದೇನಿದೆ ಅಂತ ಎಷ್ಟೇ ತಲೆ ಕೆರೆದುಕೊಂಡರೂ ಹುಣ್ಣಾಯಿತೇ ಹೊರತು ಅರ್ಥವಾಗಲಿಲ್ಲ! ಈ ರಾಜ್ಯದಲ್ಲಿಂದು ಸ್ವಾಮೀಜಿಗಳ ಪ್ರಸ್ತಾಪವೇ ಮಾಡುವ ಹಾಗಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರು ಮಾತಾಡಿದ ಕೆಲವೇ ನಿಮಿಷಗಳಲ್ಲಿ ನಮ್ಮ ಟಿವಿ ವಾಹಿನಿಗಳು ರಣಹದ್ದುಗಳಂತೆ ಮುಗಿಬಿದ್ದವು, ಸಿದ್ದರಾಮಯ್ಯರಿಂದ ಹಿಂದೂಗಳಿಗೆ, ಸ್ವಾಮೀಜಿಗಳಿಗೆ ಅಪಮಾನ, ಹಿಜಾಬ್ ಬೆಂಕಿಗೆ ಸಿದ್ದರಾಮಯ್ಯರಿಂದ ಪೆಟ್ರೋಲ್, ತುಪ್ಪ ಅಂತ ಅರಚಾಡಿದವು. ನಿರೀಕ್ಷೆಯಂತೆ ಹಿಂದೂಗಳ ಪ್ರತಿನಿಧಿಯಾಗಿ ಪ್ರಮೋದ್ ಮುತಾಲಿಕ್ ಥರದವರನ್ನು ಕರೆಸಿ ರಾಡಿ ಎಬ್ಬಿಸಿದರು. As a Hindu I feel deeply insulted to be represented by Pramod Muthalik and the likes. ಬಿಜೆಪಿಯ ಸಮಸ್ತ ನಾಯಕರೂ ಹಿಂದೂಗಳಿಗೆ ಆದ ಅಪಮಾನ ಎಂದು ಹುಯಿಲೆಬ್ಬಿಸಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ದಿನದ ಹಿಂದೆ ಹುಟ್ಟೂರು ಸಿದ್ದರಾಮಯ್ಯನ ಹುಂಡಿ ಜಾತ್ರೆಯಲ್ಲಿ ಮೈಮರೆತು ವೀರಮಕ್ಕಳ ಕುಣಿತ ಆಡುತ್ತಿದ್ದ ಸಿದ್ದರಾಮಯ್ಯ ಹಿಂದೂ ವಿರೋಧಿ ಆಗಿಬಿಟ್ಟರು! ಇನ್ನು ಇತ್ತ ಬ್ರಾಹ್ಮಣ್ಯ, ಹಿಂದುತ್ವದ ಮಾಧ್ಯಮಗಳು, ಬಿಜೆಪಿ ಅವರ ಮೇಲೆ ಕ್ರೂರ ದಾಳಿ ನಡೆಸಿದರೆ ಕಾಂಗ್ರೆಸ್ಸು ಅವರನ್ನು ಏಕಾಕಿ ಮಾಡಿಬಿಡ್ತು. ಸಿದ್ದರಾಮಯ್ಯನವರು ನೀಡುತ್ತಿರುವ ಸ್ಪಷ್ಟೀಕರಣ, ಅವರ ಬಾಡಿ ಲಾಂಗ್ವೇಜ್ ನೋಡಿ ನಿಜಕ್ಕೂ ಅಯ್ಯೋ ಎನಿಸಿತು. ಎಲ್ಲಿಗೆ ಬಂತು ಕರ್ನಾಟಕ? ಎಂದು ವಿಷಾದಿಸಿದ್ದಾರೆ.
ಇದನ್ನೂ ಓದಿರಿ: ಪ್ರತಿ ಭಾರತೀಯನೂ ನೋಡಬೇಕಾದ ಸಿನಿಮಾವಿದು: ನಟ ಕಿರಣ್ ವಿಡಿಯೊಕ್ಕೆ ಜನರು ಫಿದಾ
ಆದಿತ್ಯ ಭಾರದ್ವಾಜ್ ಅವರಂತೆಯೇ ಅನೇಕ ನಾಗರಿಕರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಾಗರಾಜ್ ಮೂರ್ತಿಗೌಡ ಅವರು, “ಈ ಮಾಧ್ಯಮಗಳು ಕಳೆದ ಏಳು ವರ್ಷದಿಂದ ನಿರಂತರವಾಗಿ ಬಿಜೆಪಿ ಪರವಾಗಿ ಮತ್ತು ಸಿದ್ದರಾಮಯ್ಯರ ವಿರುದ್ದ ನಿರಂತರವಾಗಿ ಸುಳ್ಳುಗಳನ್ನು ಹೇಳುತ್ತಿವೆ. ಈ ಸುಳ್ಳುಗಳಿಂದ ಮಾಧ್ಯಮಗಳಿಗೆ ಹೊಟ್ಟೆ ತುಂಬಾ ಅನ್ನ ಸಿಗಬಹುದು ಆದ್ರೆ ಬಡ ಜನತೆಯ ಹೊಟ್ಟೆಗೆ ತಣ್ಣಿರು ಬಟ್ಟೆ ಅಷ್ಟೇ ಸಿಕ್ಕಿದೆ…” ಎಂದು ಟೀಕಿಸಿದ್ದಾರೆ.
“ಮಾಧ್ಯಮಗಳು ಮೊದಲಿನಿಂದಲೂ ಇವರು ವಿರುದ್ಧ ನಿರಂತರವಾಗಿ ಸುಳ್ಳುಗಳನ್ನ ಹೇಳಿ ಅಪಪ್ರಚಾರ ಮಾಡುತ್ತಿವೆ ಇದೇನು ಹೊಸತಲ್ಲ ಮುಂದೇಯೂ ಮಾಡುತ್ತವೆ ಆದ್ರೆ ಜನರು ಮಾಧ್ಯಮಗಳನ್ನು Boycott ಮಾಡಬೇಕು ಅಷ್ಟೇ” ಎಂದು ಅಭಿಪ್ರಾಯಪಟ್ಟಿದ್ದಾರೆ.
ರವಿಕುಮಾರ್ ನರಭೋಳಿ ಅವರು, “ವಿಷಯ ಇಷ್ಟೊಂದು ಗಂಭೀರತೆ ಪಡೆದುಕೊಳ್ಳುತ್ತಿರುವುದೇ ಕೆಲ ಮಾಧ್ಯಮದ ಅತಿರಂಜಕತೆಯ ವರದಿಗಳಿಂದಾಗಿ. ಟಿವಿಗಳಲ್ಲಿ ಹದಿನೈದು ದಿನ ಸುದ್ದಿ ಪ್ರಸಾರವಾಗದೇ ಇದ್ದರೆ ವಾತಾವರಣ ತಾನಾಗೆ ತಿಳಿಯಾಗುತ್ತದೆ” ಎಂದಿದ್ದಾರೆ.
“ಒಬ್ಬ ಜನಪರ ಇರುವ ನಾಯಕನನ್ನ ಹೇಗೆಲ್ಲ ಅವಮಾನಿಸಿ ಅಪಪ್ರಚಾರ ಮಾಡಿ ಸೋಲಿಸಬಹುದು. ಅಷ್ಟನ್ನು ಕಳೆದ ಚುನಾವಣೆಯಲ್ಲಿ ಮಾಡಿವೆ. ಇದರಿಂದ ಸಿದ್ದರಾಮಯ್ಯರವರಿಗೆ ಒಂದು ಚೂರು ಅನ್ಯಾಯ ಆಗಿಲ್ಲ. ಅನ್ಯಾಯ ಆಗಿರೋದು ಈ ರಾಜ್ಯದ ಬಡವರಿಗೆ, ನಿರ್ಗತಿಕರಿಗೆ, ಧೀನ ದಲಿತರಿಗೆ ಮತ್ತು ರಾಜ್ಯದ ಒಟ್ಟಾರೆ ಬಡವರಿಗೆ. ರಾಜ್ಯ ಅಭಿವೃದ್ಧಿ ಬಗ್ಗೆ ಈ ಮಾಧ್ಯಮಗಳು ಒಂದು ದಿನಾನು ಚರ್ಚೆ ಮಾಡ್ತಿಲ್ಲ. ದಿನ ಬೆಳಾಗದರೆ ಹಿಜಾಬ್, ಧರ್ಮ, ಮಂದಿರ, ಮಸೀದಿ, ಚರ್ಚ್, ಮುಸ್ಲಿಂ, ಮಠ, ಮಠಾಧೀಶರ ಬಗ್ಗೆ ಚರ್ಚೆ ಮಾಡಿ ಜನರನ್ನ ದಿಕ್ಕು ತಪ್ಪಿಸಿ ರಾಜ್ಯ ಮತ್ತು ದೇಶವನ್ನ ಹಾಳು ಮಾಡುತ್ತಿವೆ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರಿಯ ಪತ್ರಕರ್ತ ಶಶಿಧರ್ ಭಟ್ ಅವರು, “ಮಠಾಧಿಪತಿಗಳು ತಲೆಯ ಮೇಲೆ ಬಟ್ಟೆ ಹಾಕಿ ಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದು ತಪ್ಪೆ? ಮುಸ್ಲಿಮರು ಕಪ್ಪು ಬಟ್ಟೆ ಹಿಜಾಬ್‌ಗೆ ಬಳಸಿದರೆ ಹಿಂದೂಗಳು ಕೇಸರಿ ಬಳಸುತ್ತಾರೆ ಎರಡೂ ಒಂದೇ ಅಲ್ಲವೆ? ಬಿಜೆಪಿ ಮಾಧ್ಯಮಗಳ ಪ್ರಕಾರ ಇದು ಘೋರ ಅಪರಾಧ! ಸಿದ್ದರಾಮಯ್ಯ ಅವರ ವಿರುದ್ಧ ತಿರುಗಿ ಬಿದ್ದ ಗೋದಿ ಮೀಡಿಯಾ.. ಬಿಜೆಪಿ ನಾಯಕರು ಕೆಲವು ಋಷಿಕುಮಾರ್ ಸ್ವಾಮಿಯಂತಹ ಸ್ವಾಮೀಜಿಗಳು” ಎಂಬ ಅಂಶಗಳನ್ನು ಒಳಗೊಂಡು ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಯುವ ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್ ಈ ಕುರಿತು ವಿಸ್ತೃತವಾಗಿ ಬರೆದಿದ್ದಾರೆ. “ಸಿದ್ದರಾಮಯ್ಯನವರ ವಿಷಯದಲ್ಲಿ ಕೆಲವೊಂದು ಮಾಧ್ಯಮಗಳಿಗೆ ಸಮೂಹ ಸನ್ನಿ ಹಿಡಿದಿದೆ. ನಾನು ಸೂಕ್ಷ್ಮವಾಗಿ ಗ್ರಹಿಸಿದಂತೆ ಮಾಧ್ಯಮಗಳು ಬೆಲೆ ಏರಿಕೆ, ಲಾಕ್ ಡೌನ್ ಸಂಕಷ್ಟಗಳು ಇತ್ಯಾದಿಗಳಿಂದ ಜನ ಸಾಮಾನ್ಯರಿಗೆ ಸರ್ಕಾರದ ದುರಾಡಳಿತದಿಂದ ಆಗುತ್ತಿರುವ ತೊಂದರೆಗಳನ್ನು ಪ್ರಶ್ನಿಸದೇ ಸೀದಾ ಸಿದ್ದರಾಮಯ್ಯ ಅವರ ಬಳಿಗೆ ಬಂದು ತಮಗೆ ಬೇಕಾದ ಪ್ರಶ್ನೆಗಳನ್ನು ಕೇಳಿ, ಅದಕ್ಕೆ ಸಿದ್ದರಾಮಯ್ಯ ಅವರಿಂದ ಬರುವ ಉತ್ತರವನ್ನು ಅವರಿಗೆ ಬೇಕಾದಂತೆ ಬಳಸಿಕೊಳ್ಳುತ್ತಿರುವುದು ಅತ್ಯಂತ ಸ್ಪಷ್ಟವಾಗಿದೆ” ಎಂದಿದ್ದಾರೆ.
ಇದನ್ನೂ ಓದಿರಿ: ಹಿಂದೂ ದೇವಾಲಯಗಳ ಬಳಿ ಮುಸ್ಲಿಮರ ವ್ಯಾಪಾರಕ್ಕೆ ನಿಷೇಧ; ಕಾನೂನು ಏನು ಹೇಳುತ್ತದೆ?
“ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ/ಪ್ರಜಾಪ್ರಭುತ್ವದ ಕಾವಲುಗಾರ ಎಂದು ಹೇಳುತ್ತಾರೆ. ಆದರೆ ಇವರು ಕಾಂಗ್ರೆಸ್ ನವರನ್ನು ಕೇಳುವ ಪ್ರಶ್ನೆಗಳನ್ನು ಗಮನಿಸಿದರೆ ಇವರು ಮಾಧ್ಯಮ ಕಚೇರಿಗಳಿಂದ ಬರುತ್ತಾರೋ ಇಲ್ಲವೇ ಬಿಜೆಪಿ ಕಚೇರಿಯಿಂದ ಬರುತ್ತಾರೋ ಎಂದು ಗೊಂದಲವಾಗುತ್ತಿದೆ” ಎಂದು ವ್ಯಂಗ್ಯವಾಡಿದ್ದಾರೆ.
“2018ರ ಸಂದರ್ಭದಲ್ಲಿ ಉತ್ತಮ ಆಡಳಿತಕ್ಕೆ ವಿರುದ್ಧವಾಗಿ ಧರ್ಮದ ಹೆಸರಲ್ಲಿ ದೊಡ್ಡ ಮಟ್ಟದ ಅಪ ಪ್ರಚಾರ ನಡೆಸುವಾಗಲೂ ಅವರಿಗೆ ಯಾವುದೇ ರೀತಿಯಲ್ಲಿ ಅಡೆ ತಡೆ ಉಂಟು ಮಾಡದೇ ಮಾಧ್ಯಮ ಸ್ವಾತಂತ್ರ್ಯ ಗೌರವಿಸಲಾಗಿತ್ತು. ಒಂದು ವೇಳೆ ನಮಗೆ ಮಾಡಿದಂತೆ ಈಗಿನ ಬಿಜೆಪಿಯ ಸರ್ವಾಧಿಕಾರಿ ಮನಸ್ಥಿತಿಯ ಪರಿಸ್ಥಿತಿಯಲ್ಲಿ ಮಾಧ್ಯಮಗಳು ಅವರ ವಿರುದ್ಧ ದನಿ ಎತ್ತಿದರೆ ಮಾಧ್ಯಮಗಳಿಗೆ ಉಳಿಗಾಲ ಉಂಟೇ?” ಎಂದು ಪ್ರಶ್ನಿಸಿದ್ದಾರೆ.
ಇದೇ ರೀತಿಯ ಹಲವಾರು ಬರಹಗಳು, ಕಟು ಟೀಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಮಾಧ್ಯಮಗಳು ವಿರೋಧ ಪಕ್ಷದ ವಿರೋಧ ಪಕ್ಷಗಳಂತೆ ವರ್ತಿಸುತ್ತಿರುವುದನ್ನು ಜನರು ಗುರುತಿಸುತ್ತಿದ್ದಾರೆ.
ಇದನ್ನೂ ಓದಿರಿ: ಸಾಂವಿಧಾನಿಕ ಜವಾಬ್ದಾರಿ ಮರೆತ ಮಾಧ್ಯಮಗಳು: ಎಚ್.ಸಿ.ಮಹದೇವಪ್ಪ ಛಡಿಯೇಟು


