Homeಕರ್ನಾಟಕಸಾಂವಿಧಾನಿಕ ಜವಾಬ್ದಾರಿ ಮರೆತ ಮಾಧ್ಯಮಗಳು: ಎಚ್‌.ಸಿ.ಮಹದೇವಪ್ಪ ಛಡಿಯೇಟು

ಸಾಂವಿಧಾನಿಕ ಜವಾಬ್ದಾರಿ ಮರೆತ ಮಾಧ್ಯಮಗಳು: ಎಚ್‌.ಸಿ.ಮಹದೇವಪ್ಪ ಛಡಿಯೇಟು

- Advertisement -
- Advertisement -

ತೈಲ ಬೆಲೆ ಏರಿಕೆ ಆದಾಗ ಜನರಿಗೆ ತೊಂದರೆ ಆಗುತ್ತಿದೆ, ಅದರ ಬಗ್ಗೆ ಗಮನ ಹರಿಸಿ ಅದನ್ನು ಬಿಟ್ಟು ಕಾಶ್ಮೀರ ಫೈಲ್ಸು, ಆ ಫೈಲ್ಸು ಈ ಫೈಲ್ಸು ಅಂತೀರಲ್ಲ ಅಂತ ಒಂದು ಗಟ್ಟಿಯಾದ ನಿಲುವು ತೆಗೆದುಕೊಳ್ಳೊವುದಿರಲಿ, ಕನಿಷ್ಠ ಪಕ್ಷ ಆ ಬಗ್ಗೆ ಒಂದು ಪ್ರಶ್ನೆಯನ್ನೂ ಕೇಳದ ಸ್ಥಿತಿಗೆ ಕೆಲವು ಮಾಧ್ಯಮಗಳು ಬಂದು ಬಿಟ್ಟಿವೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ವಿಷಾದಿಸಿದ್ದಾರೆ.

ಮಾಧ್ಯಮಗಳ ವರ್ತನೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಕಟುವಾಗಿ ಬರೆದಿರುವ ಅವರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಮಾಧ್ಯಮಗಳು ಅನುಸರಿಸಬೇಕಾದ ಸಾಂವಿಧಾನಿಕ ಮೌಲ್ಯಗಳನ್ನು ನೆನಪಿಸಿದ್ದಾರೆ.

“ಇಷ್ಟು ವರ್ಷ ಇಲ್ಲದ ಹಿಜಾಬ್ ಸಮಸ್ಯೆಯನ್ನು ಈಗೇಕೆ ಉಲ್ಬಣಗೊಳಿಸುತ್ತಿದ್ದೀರಿ, ಇದರಿಂದ ಮಕ್ಕಳ ಶಿಕ್ಷಣ ಹಾಳಾಗುತ್ತದೆ, ಶಿಕ್ಷಣ ಪಡೆಯುವ ಸ್ಥಳದ ವಾತಾವರಣ ಕೆಡುತ್ತದೆ ಎಂಬ ತಿಳುವಳಿಕೆಯ ಪರ ಒಬ್ಬರಾದರೂ ನಿಂತರೇ?” ಎಂದು ಪ್ರಶ್ನಿಸಿದ್ದಾರೆ.

ದಿನಕ್ಕಿಷ್ಟು ಎಂಬಂತೆ ದಲಿತರ ಮೇಲೆ ಹಲ್ಲೆ, ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮತ್ತು ದಲಿತರ ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದು, ಗೊತ್ತಾದ ಪ್ರಕರಣಗಳಲ್ಲಿಯೂ ಅವರಿಗೆ ನ್ಯಾಯ ಸಿಗುವ ಸಾಧ್ಯತೆ ಕಡಿಮೆ ಆಗಿದೆ ಎಂದು ಎನ್‌ಸಿಆರ್‌ಬಿ (ರಾಷ್ಟ್ರೀಯ ಅಪರಾಧ ವರದಿ ಸಂಸ್ಥೆ) ವರದಿ ಹೇಳುತ್ತಿದೆ. ಈ ಬಗ್ಗೆ ಒಬ್ಬರಾದರೂ ಆ ಸತ್ತವರಿಗೆ ಇಲ್ಲವೇ ಹಲ್ಲೆಗೆ ಒಳಗಾದ ದಲಿತರಿಗೆ ನ್ಯಾಯ ಸಿಗುವ ತನಕ ತಮ್ಮ ವೇದಿಕೆಯನ್ನು ಬಳಸಿಕೊಂಡು ಹೋರಾಟ ನಡೆಸಿದ ಉದಾಹರಣೆ ಇದೆಯೇ? ಎಂದು ಕೇಳಿದ್ದಾರೆ.

ಇದನ್ನೂ ಓದಿರಿ: ದಲಿತ ಮುಖ್ಯಮಂತ್ರಿ: ಬಿಜೆಪಿಗೆ ಡಾ.ಎಚ್‌.ಸಿ.ಮಹದೇವಪ್ಪ ತಿರುಗೇಟು

ಇನ್ನು ಹೊನ್ನಾಳಿಯ ಶಾಸಕ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನೇ ಪಡೆದರೂ ಅದು ಅಸಂವಿಧಾನಿಕ ಎಂದು ಗಟ್ಟಿಯಾಗಿ ಹೇಳುವ ಧೈರ್ಯವನ್ನು ತೋರಲಿಲ್ಲ. ಮೊನ್ನೆ ವಿಧಾನ ಸಭಾ ಸ್ಪೀಕರ್ ಅದ ಕಾಗೇರಿ ಅವರು ತಾವು ಎಂತಹ ಸ್ಥಾನದಲ್ಲಿ ಕೂತಿದ್ದೇವೆ ಎಂಬುದನ್ನು ಮರೆತು ಸದನದ ಸದಸ್ಯರನ್ನು ಎಚ್ಚರಿಸಬೇಕಾದ ಜವಾಬ್ದಾರಿತನ್ನೇ ಮರೆತು “ನಾವು ಆರ್‌ಎಸ್‌ಎಸ್‌ನವರು” ಎಂದು ಬಾಲಿಶವಾಗಿ ಮಾತನಾಡುತ್ತಿದ್ದಾಗ ಅದು ಅಸಂವಿಧಾನಿಕ ನಡೆ, ಓರ್ವ ಸ್ಪೀಕರ್ ಹಾಗೆ ವರ್ತಿಸಬಾರದು ಎಂದು ಒಬ್ಬರಾದರೂ ತಮ್ಮ ಪ್ರತಿರೋಧವು ರಿಜಿಸ್ಟರ್ ಆಗುವಂತೆ ಹೇಳಿದರೇ? ಎಂದು ಪ್ರಶ್ನಿಸಿದ್ದಾರೆ.

ಪುಲ್ವಾಮ ಘಟನೆ ನಡೆದು ಎಷ್ಟು ದಿನವಾಯಿತು? ಮಡಿದ ಸೈನಿಕರ ಸಾವಿಗೆ ಕಾರಣ ಹುಡುಕಿ ಎಂದು ಒಬ್ಬರಾದರೂ ಪಟ್ಟು ಹಿಡಿಯುವ ಧೈರ್ಯ ತೋರಿದರೇ? ಇನ್ನು ಸಮಾಜವಾದಿ ನಾಡಿನ ಸಮಾಜ ವ್ಯಾಧಿ ಎನ್ನಬಹುದಾದ ಶಾಸನಬದ್ಧ ಜನ ಪ್ರತಿನಿಧಿ ಈಶ್ವರಪ್ಪ ಎಂಬಾತ ರಾಷ್ಟ್ರಧ್ವಜದ ಬಗ್ಗೆ ಅಗೌರವ ತೋರಿದಾಗ, ಅದು ಅಸಂವಿಧಾನಿಕ ನಡೆ ಎಂದು ತಾವೇ ಒಂದು ಹೆಜ್ಜೆ ಮುಂದೆ ಹೋಗಿ ಆತನಿಗೆ ತಿಳಿ ಹೇಳಬೇಕಿದ್ದ ಮಾಧ್ಯಮಗಳು “ಸದನದಲ್ಲಿ ರಾಷ್ಟ್ರಧ್ವಜ ಗದ್ದಲ, ಕಾಂಗ್ರೆಸ್ ನಿಂದ ಈಶ್ವರಪ್ಪ ರಾಜೀನಾಮೆಗೆ ಆಗ್ರಹ” ಎಂಬ ಮಾಹಿತಿಯನ್ನಷ್ಟೇ ಪ್ರಸಾರ ಮಾಡುತ್ತಿರುವಾಗ ಇವರಿಗೆ ಸಂವಿಧಾನದ ಕುರಿತು ತಿಳಿವಳಿಕೆ ಮತ್ತು ಗೌರವ ಇಲ್ಲ ಎಂದುಕೊಳ್ಳಬೇಕೋ ಅಥವಾ ಇದೆ ಎಂದುಕೊಳ್ಳಬೇಕೋ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲವೊಂದು ಧಾರ್ಮಿಕ ಸಂಘಟನೆಗಳ ವಿಷ ಜಂತುಗಳು ಬೀದಿಯಲ್ಲಿ ನಿಂತು ಬೇರೆ ಧರ್ಮದವರ ಅಂಗಡಿಗಳನ್ನು ತೆರವುಗೊಳಿಸುತ್ತೇವೆ, ಶಸ್ತ್ರ ಹಿಡಿಯಬೇಕು ಎಂದೆಲ್ಲಾ ಮಾತನಾಡುವಾಗ ಅವರು

“ಅನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದು, ಸಮಾಜದ ಸಾಮರಸ್ಯ ಕೆಡಿಸುತ್ತಿದ್ದಾರೆ, ಸರ್ಕಾರ ಕೂಡಲೇ ಅಂಥವರನ್ನ ಬಂಧಿಸಬೇಕು” ಎಂಬ ಅರಿವನ್ನು ಮೂಡಿಸಲು ಇವರಿಗೆ ಆಗದೇ ಇದ್ದ ಮೇಲೆ ಸಮಾಜಕ್ಕೆ ಇವರ ಅವಶ್ಯಕತೆ ಏನು? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಧರ್ಮ ಯಾವುದು, ಬದುಕಿನ ಕ್ರಮ ಯಾವುದು, ಸಂವಿಧಾನ ಏನು ಹೇಳುತ್ತದೆ? ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದಕ್ಕೆ ಪೂರಕವಾಗಿ ನಾವೇನು ಮಾಡಬೇಕು ಎಂದು ತಿಳಿಸಬೇಕಾದ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತು ಇನ್ಯಾವುದೋ ಸಂಗತಿಯಲ್ಲಿ ಮುಳುಗಿರುವುದು ಕಡು ಬೇಸರದ ಸಂಗತಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿರಿ: ಎಸ್‌.ಎಲ್‌.ಭೈರಪ್ಪ ಯಾವುದೋ ಮಾನಸಿಕ ಕಾಯಿಲೆಯಿಂದ ಬಳಲುತ್ತಿರಬಹುದು: ಎಚ್.ಸಿ.ಮಹದೇವಪ್ಪ

ಸರ್ಕಾರವು 40% ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸ್ವತಃ ಗುತ್ತಿಗೆದಾರರೇ ಹೇಳುತ್ತಿದ್ದರೂ ಆ ಬಗ್ಗೆ ಸೊಲ್ಲೆತ್ತದ ಇವರು ಮುಖ್ಯಮಂತ್ರಿಗಳನ್ನು ಕೇಳಬೇಕಾದ ಬಹಳಷ್ಟು ಪ್ರಶ್ನೆಗಳನ್ನು ವಿಪಕ್ಷೀಯ ನಾಯಕರಿಗೆ ಕೇಳುತ್ತಿದ್ದರೆ ಇವರಿಗೆ ಏನು ಹೇಳೋಣ? ಎಂದು ವ್ಯಂಗ್ಯವಾಡಿದ್ದಾರೆ.

ಸಾಲದು ಎಂಬಂತೆ ಹರ್ಷ ಎಂಬಂತಹ ನಿರುದ್ಯೋಗಿ ಹುಡುಗರ ತಲೆ ಕೆಡಿಸಿ ಅವನನ್ನು ರೌಡಿ ಶೀಟರ್ ಆಗಿಸಿ ಕೊನೆಗೆ ಹಿಂಸಾ ಮಾರ್ಗದಲ್ಲೇ ಬಲಿಯಾಗುವಂತೆ ಮಾಡಿದ ಮಾರ್ಗವು ತಪ್ಪು, ಅದು ಧರ್ಮವಲ್ಲ ಮೂರ್ಖತನ ಎಂದು ಹೇಳಿದ ಒಂದೇ ಒಂದು ಮುಖ್ಯ ವಾಹಿನಿಯ ಮಾಧ್ಯಮಗಳನ್ನು ನಾನು ಕಾಣಲಿಲ್ಲ ಎಂಬುದು ಸತ್ಯ ಎಂದು ತಿಳಿಸಿದ್ದಾರೆ.

ನಾನು ಗಮನಿಸಿದಂತೆ ಮಾಧ್ಯಮ ವಲಯದಲ್ಲಿ ಸಂವಿಧಾನದ ಕುರಿತ ತಿಳಿವಳಿಕೆ ತೀರಾ ಕಡಿಮೆ ಮಟ್ಟದಲ್ಲಿ ಇದೆ. ಹೀಗಾಗಿಯೇ ಅವರಿಗೆ ಸಮಾಜ, ಸರ್ಕಾರ ಮತ್ತು ರಾಜಕೀಯದಲ್ಲಿ ಯಾವುದು ಸಂವಿಧಾನ ಬಾಹಿರ ನಡೆ ಎಂದು ಗುರುತಿಸಲು ಮತ್ತು ಆ ಬಗ್ಗೆ ಧೈರ್ಯದಿಂದ ದನಿ ಎತ್ತಲು ವಿಶ್ವಾಸವು ಸಾಲುತ್ತಿಲ್ಲ ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ.

ಹೀಗಾಗಿ ಇನ್ನು ಮುಂದೆ ನಾವೆಲ್ಲರೂ ಪ್ರಜಾಪ್ರಭುತ್ವದ ಕಾವಲುಗಾರಿಕೆ ಮಾಡುತ್ತಾರೆ ಎಂದು ನಂಬಿರುವ ಮಾಧ್ಯಮಗಳು ತಮ್ಮ ಕಚೇರಿಯಲ್ಲಿ ತಮ್ಮ ಸಿಬ್ಬಂದಿಗಳಿಗೆ ಸಂವಿಧಾನವನ್ನು ತಪ್ಪದೇ ಬೋಧಿಸಲಿ ಎಂದು ವಿನಂತಿಸಿಕೊಳ್ಳುತ್ತೇನೆ. ಸಂವಿಧಾನದ ತಿಳಿವಳಿಕೆ ಇಲ್ಲದೇ, ಪ್ರಜಾಪ್ರಭುತ್ವದಲ್ಲಿ ಅನಾರೋಗ್ಯ ಹೆಚ್ಚಾಗುತ್ತಿದ್ದರೂ ಆ ಕುರಿತು ದನಿ ಮಾಡದ, ಸಂವಿಧಾನಾತ್ಮಕವಾದ ವಾತಾವರಣವನ್ನು ಕಾಪಾಡದ ಮಾಧ್ಯಮಗಳು ಇದ್ದರೆಷ್ಟು ಹೋದರೆಷ್ಟು ಎಂದು ಕಟುವಾಗಿ ಟೀಕಿಸಿದ್ದಾರೆ.

ಇನ್ನು ಕೇವಲ ಮಾಧ್ಯಮ ಅಷ್ಟೇ ಅಲ್ಲದೇ, ಶಾಲೆ ಕಾಲೇಜು, ಧಾರ್ಮಿಕ ಸಂಘಟನೆಗಳು, ಸೇವಾ ಸಂಸ್ಥೆಗಳು, ಕಲಾವಿದರ ಸಂಸ್ಥೆಗಳು, ಉದ್ಯಮಿಗಳು ಮತ್ತು ವ್ಯಾಪಾರಸ್ಥರ ಆದಿಯಾಗಿ ಎಲ್ಲರೂ ಕೂಡಾ ಸಂವಿಧಾನದ ಕುರಿತು ಸಮರ್ಪಕವಾದ ತಿಳಿವಳಿಯನ್ನು ಹೊಂದಬೇಕು, ಆಗಷ್ಟೇ ತಪ್ಪು ಮಾಹಿತಿಯನ್ನು ಹರಡುತ್ತಾ ಸಮಾಜದ ಹಿತ ಕೆಡಿಸುತ್ತಿರುವ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂಬುದು ನನ್ನ ಬಲವಾದ ನಂಬಿಕೆ ಎಂದಿದ್ದಾರೆ.


ಇದನ್ನೂ ಓದಿರಿ: ಕೊರಗರದ್ದು ಇನ್ನೊಂದು ‘ಜೈ ಭೀಮ್‌’ ಕಥೆ ಆಗದಿರಲಿ: ಎಚ್‌.ಸಿ.ಮಹದೇವಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...