Homeಕರ್ನಾಟಕಪ್ರತಿ ಭಾರತೀಯನೂ ನೋಡಬೇಕಾದ ಸಿನಿಮಾವಿದು: ನಟ ಕಿರಣ್‌ ವಿಡಿಯೊಕ್ಕೆ ಜನರು ಫಿದಾ

ಪ್ರತಿ ಭಾರತೀಯನೂ ನೋಡಬೇಕಾದ ಸಿನಿಮಾವಿದು: ನಟ ಕಿರಣ್‌ ವಿಡಿಯೊಕ್ಕೆ ಜನರು ಫಿದಾ

ವಿಶೇಷ ಸೂಚನೆ: ಈ ವರದಿಯನ್ನು ಪೂರ್ಣ ಓದದೆ ಕಿರಣ್ ಅವರ ಮಾತಿನ ಆಶಯಗಳು ಅರ್ಥವಾಗುವುದಿಲ್ಲ.

- Advertisement -
- Advertisement -

“ಇತ್ತೀಚೆಗೆ ಒಂದು ಸಿನಿಮಾ ಬಹಳ ಚರ್ಚೆಯಲ್ಲಿದೆ. ಆ ಸಿನಿಮಾವನ್ನು ನಾನು ನೋಡಿದೆ. ನನಗೆ ಆ ಸಿನಿಮಾ ಬಹಳ ಇಷ್ಟವಾಯಿತು. ಪ್ರತಿಯೊಬ್ಬ ಭಾರತೀಯನೂ ನೋಡಬೇಕಾದ ಸಿನಿಮಾವಿದು” ಎಂದು ನಟ, ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಕಿರಣ್ ಶ್ರೀನಿವಾಸ್‌ ಆಡಿರುವ ಮಾತುಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ.

ಇತ್ತೀಚಿನ ವಿದ್ಯಮಾನಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸಿರುವ ಕಿರಣ್ ಅವರು, ವಿಡಿಯೊ ಮೂಲಕ ಹಲವು ವಿಚಾರಗಳನ್ನು ಹಂಚಿಕೊಂಡು, ಕಡೆಯಲ್ಲೊಂದು ಟ್ವಿಸ್ಟ್‌ ನೀಡಿ ಸಮಾನತೆಯ ಹಕ್ಕನ್ನು ಪ್ರತಿಪಾದಿಸಿದ್ದಾರೆ.

“ಕೆಲವರು ಈ ಸಿನಿಮಾವನ್ನು ಪ್ರೊಪಗಾಂಡ ಸಿನಿಮಾ ಎನ್ನುತ್ತಿದ್ದಾರೆ. ರಾಜಕೀಯ ಒಳಸಂಚಿನಲ್ಲಿ ಮಾಡಿರುವಂತಹ  ಸಿನಿಮಾ ಎನ್ನುತ್ತಿದ್ದಾರೆ. ಆದರೆ ಆ ಸಿನಿಮಾವನ್ನು ನೋಡಿರುವ ಹಲವಾರು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಆ ಸಿನಿಮಾದಲ್ಲಿ ಘಟನೆಯನ್ನು ತೋರಿಸಿರುವ ರೀತಿ ಜನರ ಮನಸ್ಸನ್ನು ಮುಟ್ಟಿದೆ. ಹೀಗಾಗಿ ಈ ಸಿನಿಮಾ ಕುರಿತು ಅಷ್ಟೊಂದು ಚರ್ಚಿಸುತ್ತಾ ಇದ್ದಾರೆ, ಮಾತನಾಡುತ್ತಾ ಇದ್ದಾರೆ ಎಂಬುದು ನನ್ನ ಅಭಿಪ್ರಾಯ” ಎಂದು ಹೇಳಿದ್ದಾರೆ.

“ಒಂದು ಸಮುದಾಯ, ಒಂದು ವರ್ಗದ ಜನರ ಜೊತೆ ಯಾವ ರೀತಿ ನಾವು ನಮ್ಮ ಸ್ವಾತಂತ್ರ್ಯ ಭಾರತದಲ್ಲಿ ವರ್ತನೆ ಮಾಡಿದ್ದೇವೆ, ಮಾಡುತ್ತಿದ್ದೇವೆ ಅನ್ನೋದನ್ನು ಈ ಸಿನಿಮಾ ಮೂಲಕ ಅರ್ಥಮಾಡಿಸಲಾಗಿದೆ. ನಮ್ಮ ಕಣ್ಣ ಮುಂದೆ ಇಡಲಾಗಿದೆ. ಯಾವುದೇ ಒಬ್ಬ ಭಾರತೀಯನಲ್ಲಾದರೂ ಪ್ರಶ್ನೆ ಉಂಟು ಮಾಡುವ ವಿಷಯವಿದು” ಎಂದಿದ್ದಾರೆ.

ಇದನ್ನೂ ಓದಿರಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

“ಬೇರೆ ವರ್ಗದ ಜನರಾಗಬಹುದು, ಬೇರೆ ಸಮುದಾಯದ ಜನರಾಗಿರಬಹುದು ಈ ರೀತಿಯ ಶೋಷಣೆ ಆಗಲಿಕ್ಕೆ ನಾವು ಹೇಗೆ ಬಿಟ್ಟೆವು? ಶೋಷಣೆ ಆಗುತ್ತಿದ್ದರೂ ಇದರ ಬಗ್ಗೆ ಅರಿವು ನಮಗೆ ಹೇಗೆ ಬರಲಿಲ್ಲ? ಆದರೆ ನಂತರವಾದರೂ ಕೂಡ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಲೀ, ತೊಂದರೆ ಅನುಭವಿಸಿದ ಜನರಿಗೆ ನ್ಯಾಯ ಒದಗಿಸಲಿಕ್ಕಾಗಲೀ ಯಾಕೆ ನಾವು ಮುಂದೆ ಬಂದಿಲ್ಲ ಎಂಬ ಪ್ರಶ್ನೆಗಳನ್ನು ಈ ಸಿನಿಮಾ ಹುಟ್ಟುಹಾಕುತ್ತದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನಾನು ಹೇಳೋದಿಷ್ಟೇ. ರಾಜಕೀಯ ಏನೇ ಇರಲೀ, ನಿಮ್ಮ ಪಕ್ಷ ಯಾವುದೇ ಇರಲಿ, ಅದನ್ನೆಲ್ಲ ಬದಿಗಿಟ್ಟು ಈ ಸಿನಿಮಾವನ್ನು ನೋಡಿ. ಈ ಸಿನಿಮಾದಲ್ಲಿ ತೋರಿಸಿರುವ ಜನರ ಕಷ್ಟವನ್ನು ನಾವು ಕೇಳಲೇಬೇಕು. ಕಣ್ಣು ಮುಚ್ಚಿಕೊಂಡು ನಮಗೆ ಗೊತ್ತಿಲ್ಲ ಅನ್ನೋಕೆ, ಕಿವಿಯನ್ನು ಮುಚ್ಚಿಕೊಂಡು ಕೇಳಿಲ್ಲ ಅನ್ನೋಕೆ ಆಗುವುದಿಲ್ಲ. ಸಮಯ ಬಂದಿದೆ. ನಾವೆಲ್ಲರೂ ಭಾರತೀಯರು. ಈ ಸಿನಿಮಾವನ್ನು ಒಂದು ಪಾಯಿಂಟ್‌ ಆಫ್ ವೀವ್‌ ರೀತಿ ನೋಡಬೇಕು. ಈ ರೀತಿಯ ಶೋಷಣೆ ಆಗುವುದಕ್ಕೆ ಆಸ್ಪದ ನೀಡಕೂಡದು” ಎಂದು ಆಗ್ರಹಿಸಿದ್ದಾರೆ.

ಯಾರ್‍ಯಾರಿಗೆ ಶೋಷಣೆ, ಅನ್ಯಾಯವಾಗಿದೆ ಅವರಿಗೆ ನ್ಯಾಯ ದೊರಕಿಸಲೇಬೇಕು ಅನ್ನೋದನ್ನು ನಾವೆಲ್ಲರೂ ಒಪ್ಪಿಕೊಂಡು ಮುಂದೆ ಹೋಗೋಣ ಎಂದಿದ್ದಾರೆ.

“ನಾನು ಯಾವ ಸಿನಿಮಾದ ಬಗ್ಗೆ ಮಾತನಾಡುತ್ತಿರುವುದು ಎಂದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಕನ್‌ಫ್ಯೂಷನ್‌ ಇರದೇ ಇರಲಿ ಅಂತ ಮತ್ತೊಂದು ಆ ಸಿನಿಮಾದ ಹೆಸರನ್ನು ಹೇಳುತ್ತಿದ್ದೇನೆ. ನಾನು ಮಾತನಾಡುತ್ತಿವುದು- ‘ಜೈ ಭೀಮ್’ ಬಗ್ಗೆ. ಅಮೆಜಾನ್ ಫ್ರೈಮ್‌ನಲ್ಲಿದೆ. ಕನ್ನಡ, ತಮಿಳು, ಹಿಂದಿ ಸೇರಿದಂತೆ ಹಲವಾರು ಭಾಷೆಯಲ್ಲಿದೆ. ಪ್ರತಿಯೊಬ್ಬ ಭಾರತೀಯರು ಇದನ್ನು ನೋಡಲೇಬೇಕು” ಎಂದು ಕಿರಣ್ ಒತ್ತಾಯಿಸಿದ್ದಾರೆ.

ನಾವು ಭಾರತೀಯರಾಗಿ ಹೇಗೆ ನಮ್ಮ ದೇಶದವರಿಗೆ ದೌರ್ಜನ್ಯವನ್ನು ಮಾಡಿಕೊಂಡು ಬಂದಿದ್ದೇವೆ, ಮಾಡ್ತಾ ಇದ್ದೀವಿ, ಮುಂದೆ ನಡೆಯುವುದಕ್ಕೆ ಆಸ್ಪದ ನೀಡುತ್ತಿದ್ದೇವೆ ಅನ್ನೋದನ್ನು ಈ ಸಿನಿಮಾ ತಿಳಿಸುತ್ತದೆ. ಪ್ರತಿಯೊಬ್ಬ ಭಾರತೀಯನೂ ಸಮಾಜದಲ್ಲಿ ಸಮಾನತೆಯಿಂದ ಇರುವ ಕನಸನ್ನು ನೆರವೇರಿಸಲಿಕ್ಕೆ ಮುಂದಾಗಬೇಕು. ಈ ವಿಡಿಯೊ ನೋಡಿದಕ್ಕೆ ಧನ್ಯವಾದ- ಜೈ ಕರ್ನಾಟಕ, ಜೈ ಭೀಮ್‌ ಎಂದು ಘೋಷಣೆ ಕೂಗಿ ಮಾತು ಮುಗಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಈ ವಿಡಿಯೊವನ್ನು ಪೂರ್ಣ ವೀಕ್ಷಿಸಿರುವ ಅನೇಕರು ಕಿರಣ್‌ ಶ್ರೀನಿವಾಸ್ ಅವರಿಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ವಾಸ್ತವ ವಿಚಾರಗಳ ಕುರಿತು ಮಾತನಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ವೆಂಕಟೇಶ್ ಕೆ.ವಿ. ಎಂಬವರು ಕಮೆಂಟ್ ಮಾಡಿದ್ದು, “ಕಾಶ್ಮೀರಿ ಫೈಲ್‌ ಅಂದ್ಕೊಂಡು ನನ್ನೊಳಗಿನ ಭಕ್ತ ಖುಷಿಯಾದ. ಆದರೆ ಪ್ರತಿಯೊಬ್ಬ ಭಾರತೀಯ ನೋಡಲೇಬೇಕಾದ ಚಿತ್ರ ಜೈಭೀಮ್ ಅಂದಮೇಲೆ, ನನ್ನೊಳಗಿನ ಭಾರತೀಯ ಜಾಗೃತನಾದ, ಪ್ರಬುದ್ಧನಾದ” ಎಂದಿದ್ದಾರೆ.

“ನಿಮ್ಮ ಮಾತು ಅಂದರೆ ಅದಕ್ಕೆ ಒಂದು ಘನತೆ, ಗೌರವ ಇದೆ. ಹಾಗಾಗಿ ಪೂರ್ತಿ ಕೇಳಿಯೇ ಬಿಡೋಣ ಅನ್ಕೋಂಡೆ! ಕೇಳಿ ನಿಮ್ಮ ಬಗ್ಗೆ ಗೌರವ ಮತ್ತಷ್ಟು ಹೆಚ್ಚಾಯಿತು” ಎಂದು ಹನೀಫ್‌‌ ಇರ್‍ದೆ ಅಭಿಪ್ರಾಯಪಟ್ಟಿದ್ದಾರೆ.

ಕಮೆಂಟ್ ಮಾಡಿರುವ ಹತ್ತಾರು ಜನರು ಕಿರಣ್ ಅವರಿಗೆ ಜನ್ಮದಿನದ ಶುಭ ಕೋರುವ ಜೊತೆಗೆ ‘ಜೈ ಭೀಮ್‌’ ಹೇಳಿದ್ದಾರೆ. (ಕಿರಣ್‌ ಶ್ರೀನಿವಾಸ್‌ ಅವರ ಫೋಸ್ಟ್‌ ಇಲ್ಲಿ ನೋಡಬಹುದು.)


ಇದನ್ನೂ ಓದಿರಿ: ಸಿನಿಮಾ ವಿಮರ್ಶೆ: ಅತಿ ಭಾವುಕತೆ ಮತ್ತು ಲಾಜಿಕ್ ಕೊರತೆಯ ಅದ್ದೂರಿತನದಲ್ಲಿ ‘RRR…’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...