Homeಮುಖಪುಟಸಿನಿಮಾ ವಿಮರ್ಶೆ: ಅತಿ ಭಾವುಕತೆ ಮತ್ತು ಲಾಜಿಕ್ ಕೊರತೆಯ ಅದ್ದೂರಿತನದಲ್ಲಿ ‘RRR...’

ಸಿನಿಮಾ ವಿಮರ್ಶೆ: ಅತಿ ಭಾವುಕತೆ ಮತ್ತು ಲಾಜಿಕ್ ಕೊರತೆಯ ಅದ್ದೂರಿತನದಲ್ಲಿ ‘RRR…’

RRR ಮನರಂಜನೆಯ ಗಡಿಯನ್ನೂ ಬಿಟ್ಟು ಪ್ರೇಕ್ಷಕರಿಗೆ ಬೇರೆಯದೇ ಆದ ರೀತಿಯಲ್ಲಿ ಅಪೀಲ್ ಆಗುವ ಅಪಾಯವನ್ನು ಹೊಂದಿದೆ...

- Advertisement -
- Advertisement -

ವೈವಿಧ್ಯಮಯ ಪ್ರೇಕ್ಷಕರನ್ನು ವ್ಯಾಪಕವಾಗಿ ತಲುಪುವ ಸಲುವಾಗಿ ಮತ್ತು ಆ ಮೂಲಕ ಸಾಮೂಹಿಕ ಭಾಗವಹಿಸುವಿಕೆಯಂದ ಯಶಸ್ಸು ಕಾಣಲು ‘ಕಮರ್ಶಿಯಲ್’, ‘ಜನಪ್ರಿಯ’ ಎಂಬಿತ್ಯಾದಿ ಹೆಸರುಗಳಲ್ಲಿ ಕರೆಸಿಕೊಳ್ಳುವ ಚಲನಚಿತ್ರಗಳನ್ನು ತೆಗೆಯಲು ಹೆಚ್ಚು ನಿರ್ದೇಶಕರು ಮುಂದಾಗುವುದು ಸಾಮಾನ್ಯವಾದದ್ದೆ. ಇಂಥ ಚಲನಚಿತ್ರಗಳು ವಿವಿಧ ಅಭಿರುಚಿಯ ಪ್ರೇಕ್ಷಕರನ್ನು ಸೆಳೆಯಲು ಹಾಸ್ಯ, ನೃತ್ಯ, ಹಾಡುಗಳು ಮತ್ತು ಭವ್ಯವಾದ ಸೆಟ್ಟಿಂಗ್‌ಗಳನ್ನು ಒಳಗೊಂಡಿರುತ್ತವೆ ಮತ್ತು ಅವುಗಳನ್ನು ವಿವಿಧ ರೀತಿಯ ಲೊಕೇಶನ್‌ಗಳಲ್ಲಿ ಚಿತ್ರೀಕರಿಸಲಾಗಿರುತ್ತದೆ. ಈ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಜನಪ್ರಿಯ ನಟರು ಮತ್ತು ನಟಿಯರು ಮುಖ್ಯ ಪಾತ್ರಗಳನ್ನು ನಿರ್ವಹಿಸಿರುತ್ತಾರೆ. ಕಥೆಯ ಹರವನ್ನು ಅವಲಂಬಿಸಿ ಚಿತ್ರದಲ್ಲಿ ಅನೇಕ ಪ್ರಮುಖ ಕಲಾವಿದರನ್ನೊಳಗೊಂಡಂತೆ ಜನಪ್ರಿಯ ತಾರಾಗಣ ಕೂಡ ಇರುತ್ತದೆ. ನಿರ್ಮಾಣ ತಂಡವು ಗಾಯಕರು, ನೃತ್ಯ ಸಂಯೋಜಕರು, ಸಂಗೀತಗಾರರು ಇತ್ಯಾದಿಯಾಗಿ ಒಳಗೊಂಡು, ಸಿನಿಮಾವನ್ನು ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತದೆ. ಅಷ್ಟೇ ಅಲ್ಲದೆ, ಬೃಹತ್ ಪ್ರಚಾರಗಳು, ಜಾಹೀರಾತುಗಳು ಮತ್ತು ಸ್ಟಾರ್ ಶಿಫಾರಸ್ಸುಗಳು ಬಿಡುಗಡೆಗಾಗಿ ಮುಂಚೆ ಸಾಮಾನ್ಯ. ಅತ್ಯಂತ ಸಂಕೀರ್ಣವಾದ ಮಾಹಿತಿಗಳನ್ನು ಸಹ ಆಕರ್ಷಕವಾಗಿ ಮತ್ತು ಸರಳವಾಗಿ ಗ್ರಹಿಸಲು ಸಾಧ್ಯವಾಗುವ ರೀತಿಯಲ್ಲಿ ಜನರಿಗೆ ತಲುಪಿಸಬಹುದಾದ ಮಾರ್ಗ ಇದಾಗಿರುವುದರಿಂದ ಎಲ್ಲ ಭಾಷೆಯ ಚಿತ್ರರಂಗದಲ್ಲಿ ಜನಪ್ರಿಯ ಮಾದರಿಯ ಸಿನಿಮಾಗಳು ಸರ್ವೇಸಾಮಾನ್ಯ.

ರಾಜಮೌಳಿಯಂತ ನಿರ್ದೇಶಕರು ಸಿನಿ ಜಗತ್ತಿಗೆ ಕಾಲಿಟ್ಟಿರುವುದೇ ಇಂತಹ ಸಿನಿಮಾಗಳ ಮೂಲಕ. ಇವರ ಹಳೆಯ ಸಿನಿಮಾಗಳನ್ನು ಗಮನಿಸಿದಾಗ ಈ ಮೇಲಿನ ಎಲ್ಲಾ ಅಂಶಗಳೂ ದಟ್ಟವಾಗಿ ಗೋಚರಿಸುತ್ತವೆ.

‘ಈಗ ‘ ಚಿತ್ರದ ನಂತರ ಮಾರುಕಟ್ಟೆಯ ಆಳಗಲವನ್ನು ಹಿಗ್ಗಿಸಿಕೊಂಡ ಈ ನಿರ್ದೇಶಕ ತನ್ನ ಸಿನಿಮಾಗಳನ್ನು ಭಾರತದ ಉದ್ದಗಲಕ್ಕೆ ಮಾರ್ಕೆಟ್ ಮಾಡುವ ಮೂಲಕ ಇತರ ಭಾಷೆಗಳಿಗೂ ಹತ್ತಿರವಾಗಿದ್ದಾರೆ; ಅರ್ಥಾತ್ ಬಹುತೇಕ ಭಾರತೀಯ ಸಿನಿಪ್ರೇಮಿಗಳಿಗೆ ಈ ನಿರ್ದೇಶಕನ ಹೆಸರು ಪರಿಚಯವಾಗಿದೆ.

ಇಂತಹ ನಿರ್ದೇಶಕರ ಹೊಸ ಸಿನಿಮಾ ಬಂದಾಗ, ಆ ಸಿನಿಮಾದಲ್ಲಿ ಸಾರ್ವಜನಿಕರಿಗೆ ಅಪೀಲ್ ಆಗುವಂತಹುದ್ದು ಏನಿರಬಹುದು ಎಂಬ ಕುತೂಹಲ ಹೆಚ್ಚಿನ ಜನಕ್ಕೆ ಮೂಡುವುದು ಸಹಜ. ಇಂತಹ ಕುತೂಹಲವನ್ನೇ ಬಂಡವಾಳ ಮಾಡಿಕೊಂಡಿರುವ ರಾಜಮೌಳಿ ಈಗ ‘RRR…’ ಎನ್ನುವ ಗಾಳಿಗೋಪುರವನ್ನು ಸಿನಿಮಾದ ಹೆಸರಿನಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಕಮರ್ಶಿಯಲ್ ಕಾರ್ಡ್‌ಅನ್ನು ಸಹಿಸಿಕೊಂಡು ಸಿನಿಮಾ ವೀಕ್ಷಣೆಗೆ ಕುಳಿತರೂ ಸಹ ಮೊದಲಾರ್ಧ ಮುಗಿಯುವವರೆಗೂ ಕಥೆ ಶುರುವಾಗುವ ಯಾವ ಲಕ್ಷಣಗಳೂ ಕಾಣಿಸುವುದಿಲ್ಲ. ಟೊಳ್ಳು ಚಿತ್ರಕತೆಯಿಂದ ಮಂದಗತಿಯಲ್ಲಿ ಸಾಗುವ ಸಿನಿಮಾ, ಇಡೀ ಅವಧಿಯಲ್ಲಿ ರಾಮ್ ಚರಣ್ ಮತ್ತು ಎನ್.ಟಿ.ಆರ್ ರ ಅಭಿಮಾನಿಗಳಿಗೆ ಅವರನ್ನು ಎಸ್ಟಾಬ್ಲಿಷ್ ಮಾಡುವುದರಲ್ಲಿಯೇ ಕಾಲಹರಣ ಮಾಡುತ್ತದೆ.

ನಿರ್ಮಾಪಕರು ಧಾರಾಳವಾಗಿ ಸುರಿದಿರುವ ದುಡ್ಡು, ದೊಡ್ಡ ಪರದೆಯ ತುಂಬ ಜನಗಳನ್ನು ಸೇರಿಸುವುದರಲ್ಲಿ ಮಾತ್ರ ಯಶಸ್ವಿಯಾಗಿದೆ. ಅವಶ್ಯಕತೆಯಿಲ್ಲದ ದೃಶ್ಯ ಸಂಯೋಜನೆ, ಅತಿಯಾದ ಭಾವನೆಗಳ (ಇವ್ಯಾವುದೂ ನೈಜವಾಗಿ ಪ್ರೇಕ್ಷಕನನ್ನು ಕಾಡುವುದಿಲ್ಲ) ಜತೆಗಿನ ಗುದ್ದಾಟ, ಕೊಂಚವೂ ಲಾಜಿಕ್ ಇಲ್ಲದಂತೆ ಜರುಗುವ ಸನ್ನಿವೇಶಗಳನ್ನೇ ಹೊತ್ತು ಮೆರೆದಿರುವ RRR… ಮನರಂಜನೆಯ ಗಡಿಯನ್ನೂ ಬಿಟ್ಟು ಪ್ರೇಕ್ಷಕರಿಗೆ ಬೇರೆಯದೇ ಆದ ರೀತಿಯಲ್ಲಿ ಅಪೀಲ್ ಆಗುವ ಅಪಾಯವನ್ನು ಹೊಂದಿದೆ…

ಜಾತಿ, ಧರ್ಮ ಮತ್ತು ಅಧಿಕಾರದಿಂದ ಮನುಷ್ಯ ಘನತೆಯನ್ನು ಅಳೆಯುವ/ನಿರಾಕಸಿರುವ ಸದ್ಯದ ವಾತಾವರಣದಲ್ಲಿ, ಮಿತಿಮೀರಿದ ಅಸಹನೆ ನಮ್ಮುಗಳ ಮಧ್ಯೆ ಬೆಳೆದು ಉಸಿರುಗಟ್ಟಿಸುತ್ತಿವೆ. ಸುತ್ತಮುತ್ತಲ ಘಟನೆಗಳನ್ನು ಸಮಾಜವು ನೋಡುವ ಮತ್ತು ಸ್ವೀಕರಿಸುವ ಶೈಲಿ ವಿಷಮಗೊಳ್ಳುತ್ತಿರುವ ಸಂದರ್ಭದಲ್ಲಿ, ಕಲೆ ಅಂತಹ ಸೂಕ್ಷ್ಮಗಳನ್ನು ಅರಿತು ಹೊಸ ದಿಕ್ಕಿನ ಆಲೋಚನೆಗಳ ಕಡೆಗೆ ನಮ್ಮನ್ನು ಕರೆದೊಯ್ಯುವುದು ಅತ್ಯವಶ್ಯಕ. ಇದು ಸಿನಿಮಾ ನಿರ್ದೇಶಕನಿಗೆ ಇರಬೇಕಾದ ಬಹುಮುಖ್ಯ ಅರ್ಹತೆ ಎಂದರೆ ತಪ್ಪಾಗಲಾರದು. ಆದರೆ ಈ ನಡುವೆ ಬರುತ್ತಿರುವ ಕಮರ್ಷಿಯಲ್ ಸಿನಿಮಾಗಳು ಅಂತಹ ಅಪೇಕ್ಷೆಗೆ ವಿರುದ್ಧವಾಗಿ ನಡೆಯುತ್ತಿರುವುದು ದುರಂತ. ಅಂತಹ ಸಿನಿಮಾಗಳು ಸಮಾಜದಲ್ಲಿ ಪ್ರಭಾವಿಸಬಹುದಾದ ಆತಂಕಕಾರಿ ಬದಲಾವಣೆಗಳನ್ನು ಗಮನಿಸಿದರೆ, ಊಹಿಸಿಕೊಂಡರೆ ಕಲೆಯ ಮೂಲ ಉದ್ದೇಶ ಎಲ್ಲಿಗೆ ಬಂದು ನಿಂತಿದೆ ಎಂಬುದು ಆತಂಕದ ವಿಷಯ. ಅದಕ್ಕೆ ಹೊಸ ಸೇರ್ಪಡೆ ರಾಜಮೌಳಿ ಯ RRR…

ಸಿನಿಮಾದ ಕಥಾನಾಯಕರಿಬ್ಬರಿಗೂ ಇರುವ ಹಿನ್ನೆಲೆಯನ್ನು ಗಮನಿಸಿದರೆ ಒಬ್ಬ ಕಾಡಿನ ಮಧ್ಯೆ ವಾಸಿಸುವ ಬುಡಕಟ್ಟು ಜನಾಂಗದವನು, ವಿದ್ಯಾರ್ಹತೆ ಇಲ್ಲದವನು, ನಗರದ ರೀತಿ ರಿವಾಜುಗಳನ್ನು ತಿಳಿಯದವನು, ಇಂತವನಿಗೆ ಬ್ರಿಟಿಷ್ ಆಡಳಿತದ ಮುಖ್ಯಸ್ಥನ ಮನೆಯ ಹುಡುಗಿಯೊಬ್ಬಳೊಂದಿಗೆ ಸ್ನೇಹವಾಗಿ ಪ್ರೇಮವೂ ಆಗುತ್ತದೆ. ಅದಕ್ಕೆ ಸಂಪರ್ಕ ಕೊಂಡಿಯಾಗಿ ಮೊದಲು ಬರುವ ಕಥೆಯ ಎಳೆಯಲ್ಲಿ ಮಾರುವೇಶದಲ್ಲಿ ಬರುವ ಈ ಕಥಾನಾಯಕ ಮುಸ್ಲಿಂ ಆಗಿ ಪ್ರೇಕ್ಷಕರೆದುರಿಗೆ ಕಾಣಿಸುತ್ತಾನೆ.

ಮತ್ತೊಬ್ಬ, ಜನಿವಾರಧಾರಿ, ಇಂಗ್ಲೀಷ್ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡುವವನು, ಬ್ರಿಟೀಷರ ಸರ್ಕಾರದಲ್ಲಿ ಉನ್ನತ ಹುದ್ದೆ ಪಡೆಯುವುದಕ್ಕಾಗಿ ಅವರಿಗೆ ಬಹಳ ನಿಷ್ಠವಂತವನಾಗಿ ಇರುವಂತೆ ನಟಿಸಿ ಗುರುತಿಸಿಕೊಳ್ಳುವವನು. ತನ್ನ ಕಾರ್ಯದಲ್ಲಿ ಯಶಸ್ವಿಯಾದಮೇಲೆ ತನ್ನ ಜನರಿಗಾಗಿ ಕೆಲಸ ಮಾಡುವ ಯೋಜನೆ ಹಾಕಿರುವವನು. ಆ ಪಾತ್ರದ ಹೆಸರು ರಾಮನಾಗಿದ್ದು, ಆತನ ಪ್ರೇಯಸಿಯನ್ನು ಸೀತೆಯಾಗಿ ನಿರ್ದೇಶಕರು ನಮ್ಮ ಮುಂದೆ ನಿಲ್ಲಿಸುತ್ತಾರೆ.
ರಾಮನ ಈ ಅಜ್ಞಾತವಾಸಕ್ಕೆ, ನಿಷ್ಠಾವಂತತೆಗೆ ಬಲವಾದ ಕಾರಣ ಕೊಡುವ ನಿರ್ದೇಶಕರು, ಬುಡಕಟ್ಟು ಜನಾಂಗದ ಮತ್ತು ಹಿಂದುಳಿದ ಜನರ ನಾಯಕನ ಪಾತ್ರ ಕಟ್ಟುವಾಗ, ಆತನ ಮೇಲೆ ತಪ್ಪು ತಿಳುವಳಿಕೆ ಮೂಡುವಂತೆ ಮಾಡಿ ಯಾವ ಸೀಮೆ ಕಥೆ ಹೇಳಲು ಹೊರಟಿದ್ದಾರೋ ತಿಳಿಯದು. ಇಲ್ಲಿ ಜನಿವಾರಧಾರಿ ಪಾತ್ರದ ಬಗ್ಗೆ ಇರುವ ತಪ್ಪು ತಿಳಿವಳಿಕೆಯನ್ನು ಬಿಟ್ಟುಬಿಡಿ ಎಂದು ಕೂಗಿಕೂಗಿ ಹೇಳುತ್ತಿರುವಂತೆ ಭಾಸವಾಗುತ್ತದೆ, ಸಾಲದ್ದಕ್ಕೆ ಸಿನಿಮಾ ಶುರುವಿನಲ್ಲಿ ಯಾವುದೋ ಕಾರಣಕ್ಕೆ ಹೋರಾಟನಿರತ ಜನರಿಂದ ಅವನಿಗೆ ಜನವಿರೋಧಿ ಎನ್ನುವಂತೆ ಬೈಯಿಸಿ ನಂತರದಲ್ಲಿ ಆ ಪಾತ್ರವನ್ನ ಬಹಳ ನಾಜೂಕಿನಿಂದ ಭಾವತೀವ್ರತೆಗೆ ತಳ್ಳುತ್ತಾರೆ.
ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ನಾವು ವಿನಾಯಕ ದಾಮೋದರ್ ಸಾವರ್ಕರ್ (ವೀರ ಸಾವರ್ಕರ್ ರಸ್ತೆ ಎಂಬುದಾಗಿ ಬೆಂಗಳೂರಿನ ಮೇಲುಸೇತುವೆಗೆ ಆತನ ಹೆಸರಿದೆ) ಕುರಿತಾಗಿ ಒಂದು ಉತ್ಪ್ರೇಕ್ಷಿತ ಕತೆಯನ್ನು ಓದಿರುತ್ತಿರುತ್ತೇವೆ, ಇತಿಹಾಸದಲ್ಲಿ ತಪ್ಪಾಗಿ ಬಿತ್ತರಿಸಿರುವ ಸಾವರ್ಕರ್ ನಿಜವಾಗಿ ಒಬ್ಬ ಹೋರಾಟಗಾರ, ಆತ ಬ್ರಿಟಿಷರ ಎದುರು ಕ್ಷಮೆ ಕೇಳಿದ್ದು, ಅಲ್ಲಿಂದ ಪಾರಾಗಿ ಬಂದು ಪುನಃ ದೇಶ ಸೇವೆ ಮಾಡಲು ಮಾತ್ರ, ಬ್ರಿಟಿಷರೊಂದಿಗೆ ರಾಜಿಯಾಗಲು ಅಲ್ಲ, ಇತ್ಯಾದಿ ಇತ್ಯಾದಿ… ಎಂದು.

RRR ಸಿನಿಮಾದ ರಾಮ್ ಪಾತ್ರವೂ ಬಹಳವಾಗಿ ಇಂಥದ್ದೆ ಕಥೆಗೆ ಪರ್ಯಾಯವಾಗಿ ನಿಲ್ಲುತ್ತದೆ.
ಬುಡಕಟ್ಟು ಜನಾಂಗದ ಹಿನ್ನೆಲೆಯಿಂದ ಬಂದ ಅಕ್ತರ್/ಭೀಮ್ ಪಾತ್ರವನ್ನು ರಾಮ್ ಪಾತ್ರದ ಎದುರುಗಡೆ ನಿಲ್ಲಿಸಿ, ಅವನಿಗಿಂತ ಕೆಳಸ್ಥರಕ್ಕೆ ತಳ್ಳಿ, ನನಗೆ ವಿದ್ಯೆ ಇಲ್ಲ, ರಾಮ ಮತ್ತು ಸೀತೆಯನ್ನು ಒಂದು ಮಾಡುವುದೇ ನನ್ನ ಧ್ಯೇಯ ಎಂದು ಒತ್ತಿ ಹೇಳುವಂತೆ ಮಾಡುವುದನ್ನು ನಿರ್ದೇಶಕ ನಾಜೂಕಾಗಿ ಚಿತ್ರಿಸಲು ಪ್ರಯತ್ನಿಸಿದ್ದಾರೆ.

ಆ ಕೆಲಸ ಮಾಡಿಸಿದ ಮೇಲೆ ನನಗೆ ಶಿಕ್ಷಣವನ್ನು ಕೊಡು ಎಂದು ರಾಮನ ಬಳಿ ವರ ಕೇಳುವಂತೆ ಮಾಡುವುದು, ಸದ್ಯದ ರಾಜಕೀಯ ವಾತಾವರಣಕ್ಕೆ ಸಂಕೇತವಾಗಿಲ್ಲ ಎಂಬುದನ್ನು ಖಂಡಿತವಾಗಿ ನಿರ್ದೇಶಕ ಸಾಬೀತು ಮಾಡಲಾರ. ಅಥವಾ ಈ ಸನ್ನಿವೇಶಗಳನ್ನ ಬರಿಯ ಮನರಂಜನೆಯೆಂದೇ ತೆಗೆದುಕೊಂಡರೂ ರಾಮ್ ಚರಣ್ ಪಾತ್ರವನ್ನ ಸಿನಿಮಾದ ಕೊನೆಯಲ್ಲಿ ರಾಮಾಯಣ ಕಥೆಯ ರಾಮನ ಅವತಾರದಲ್ಲೇ ನಿಲ್ಲಿಸಿ ಅನವಶ್ಯಕ ಹೊಳಹುಗಳನ್ನು ನೀಡುವ ಮರ್ಮವನ್ನಾದರೂ ಆತ ತಿಳಿಸಿಕೊಡಬೇಕಾಗುತ್ತದೆ.

ಇನ್ನು ಈ ಪುರುಷ ಪ್ರಧಾನ ಸಿನೆಮಾದಲ್ಲಿ ಮಹಿಳಾ ಪಾತ್ರಗಳ ಬಗ್ಗೆ ಹೇಳುವುದಕ್ಕೆ ಏನೂ ಉಳಿಸಿಲ್ಲ, ಮೇಕಪ್ ಹಾಕಿ ಮುಖ ತೋರಿಸಿ ಹೋಗಿ ಎನ್ನುವಂತಿದೆ ಅವರಿಗೆ ಕೊಟ್ಟಿರುವ ಅವಕಾಶ. ಕನಿಷ್ಠ ಚಿತ್ರಕತೆಯ ವೇಗಕ್ಕಾದರೂ ಅವರನ್ನು ಹೆಸರಿಸಿದ್ದರೆ ಸಮಾಧಾನವಾಗಿರುತ್ತಿತ್ತು.

ರಾಜಮೌಳಿಯ ಈ ಹಿಂದಿನ ಸಿನಿಮಾಗಳಲ್ಲಿ ಇದ್ದ ಅಲ್ಪಸ್ವಲ್ಪ ಕಥೆ ಹೆಣೆಯುವ ಕೆಲಸವೂ ಇಲ್ಲಿ ಕಾಣೆಯಾಗಿದೆ. ಈ ಸಿನಿಮಾದಲ್ಲಿ ಸಂಗೀತ, ಅಂತಹ ಕಿಕ್ ಕೊಡುವುದಿಲ್ಲ. ಪಾತ್ರಗಳ ನಟನೆ, ಸಂಕಲನದ ಕೆಲಸವಂತೂ ಅವರಿಗೇ ಪ್ರೀತಿ. ಅದ್ದೂರಿತನವೇ, ಮಾರ್ಕೆಟಿಂಗ್ ಗಿಮಿಕ್ಕೇ ಒಂದು ಸಿನಿಮಾವನ್ನು ಗೆಲ್ಲಿಸಬಹುದು ಎಂಬ ಹಂತಕ್ಕೆ ಇಂದು ಚಿತ್ರೋದ್ಯಮ ಬಂದು ನಿಂತಿರುವುದು ವಿಷಾದನೀಯ ಬೆಳವಣಿಗೆ.

ನಾನ್ನೂರೋ ಆರುನೂರೋ ಕೋಟಿ ವೆಚ್ಚದ ಸಿನಿಮಾ ಸಹಜವಾಗಿ ಎಲ್ಲಾ ಬಾಷೆಯ ಚಿತ್ರ ಮಾರುಕಟ್ಟೆಗೂ ಲಗ್ಗೆಯಿಟ್ಟಿರುವುದರಲ್ಲಿ ಅನುಮಾನವಿಲ್ಲ, ಭಾರತೀಯ ಸಿನಿ ಇತಿಹಾಸದಲ್ಲಿ, ಪುರಾಣ ಇತಿಹಾಸಗಳನ್ನು ಕಲಸುಮೇಲೋಗರ ಮಾಡೊ ಕಟ್ಟಿರುವ ಕಪೋಲಕಲ್ಪಿತ ಹಲವು ಸಿನಿಮಾಗಳು ಬಂದಿರಬಹುದು ಮತ್ತು ಮುಂದೆ ಬರಲೂಬಹುದು. ಮನರಂಜನೆ ಜತೆಗೆ ಒಂದು ಮೆಸೇಜ್ ಎಂದು ಹೇಳಿಕೊಂಡು ಬರುವ ಇಂತಹ ಜಡ್ಡು ಸಿನಿಮಾಗಳನ್ನು ಪ್ರೇಕ್ಷಕರು ಯಾವ ಕಾರಣಕ್ಕಾಗಿಯಾದರೂ ನೋಡಬೇಕು ಎಂಬುದೇ ಸದ್ಯದ ಪ್ರಶ್ನೆ.

ಎನ್. ಧನಂಜಯ್ 

ಸೇಲ್ಸ್ ವಲಯದ ಕೆಲಸದಲ್ಲಿ ತೊಡಗಿಸಿಕೊಂಡಿರುವ ಧನಂಜಯ್ ಅವರಿಗೆ ನಟನೆ, ಸಿನಿಮಾ, ರಂಗಭೂಮಿ ಮತ್ತು ಸಾಹಿತ್ಯ ಆಸಕ್ತಿಯ ಕ್ಷೇತ್ರಗಳು.


ಇದನ್ನೂ ಓದಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಠ್ಯ ಪರಿಷ್ಕರಣೆ ವಿವಾದಕ್ಕೆ ಕಾರ್ಟೂನ್‌ಗಳು ಸ್ಪಂದಿಸಿದ್ದು ಹೀಗೆ…

0
ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆ ವಿವಾದ ತಾರಕಕ್ಕೆರಿದೆ. ಕರ್ನಾಟಕ ಸರ್ಕಾರ ನೇಮಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪರಿಷ್ಕರಣೆಗಳು ಸಂವಿಧಾನ ವಿರೋಧಿಯಾಗಿದ್ದು, ಒಂದು ಸಮುದಾಯವನ್ನು ಮಾತ್ರ ಪರಿಗಣಿಸಿವೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಎಳೆಯ...