‘ನಾವು ಕಣಿವೆಯಲ್ಲಿನ ವಸ್ತುಸ್ಥಿತಿ ಮತ್ತು ನೈಜ ಸಂಗತಿಗಳನ್ನು ತಿಳಿದುಕೊಳ್ಳಲು ಬಂದಿದ್ದೇವೆಯೇ ಹೊರತು, ಭಾರತದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲು ಅಲ್ಲ’ ಎಂದು ಯೂರೋಪಿಯನ್ ಒಕ್ಕೂಟ ನಿಯೋಗ ಸ್ಪಷ್ಟನೆ ನೀಡಿದೆ. 23 ಮಂದಿಯನ್ನೊಳಗೊಂಡ ನಿಯೋಗ ಕಾಶ್ಮೀರ ಭೇಟಿಗೆ ಬಂದಿದೆ. ಯೂರೋಪಿಯನ್ ಒಕ್ಕೂಟ ನಿಯೋಗಕ್ಕೆ ಅನುಮತಿ ನೀಡಿರುವ ಕ್ರಮಕ್ಕೆ ವಿಪಕ್ಷಗಳು ಕೆಂಡಕಾರುತ್ತಿವೆ. ಹೀಗಾಗಿ ಕಾಶ್ಮೀರ ಭೇಟಿಗೆ ಬಂದಿರುವ ನಿಯೋಗ ತಮ್ಮ ನಿಲುವು ಹಾಗೂ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದೆ.

ಕಾಶ್ಮೀರದ ಕುಲ್ಗಾಂ ನಲ್ಲಿ 6ಮಂದಿ ಕಾರ್ಮಿಕರನ್ನು ಹತ್ಯೆಗೈದಿರುವ ಕ್ರಮವನ್ನು ನಿಯೋಗ ಖಂಡಿಸಿದೆ. ಅಲ್ಲದೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನಾವು ನಿಮ್ಮ ಸ್ನೇಹಿತರು. ಇಲ್ಲಿನ ಸತ್ಯಾಸತ್ಯತೆ ತಿಳಿದು ವರದಿ ನೀಡಲು ಬಂದಿದ್ದೇವೆ ಎಂದು ಹೇಳಿದೆ. ಸಾರ್ವಜನಿಕರನ್ನು ಭೇಟಿ ಮಾಡಿ, ಶಾಲೆ-ಕಾಲೇಜುಗಳು ಆರಂಭಗೊಳ್ಳುವುದು, ಭ್ರಷ್ಟಾಚಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಭೆ ನಡೆಸುವುದಾಗಿ ತಿಳಿಸಿತು.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನಿಯೋಗ, ಭಯೋತ್ಪಾದನೆ ಎನ್ನುವುದು ಫ್ರಾನ್ಸ್, ಯೂರೋಪ್ ನಲ್ಲೂ ಇದೆ. ಕಾಶ್ಮೀರ ಮತ್ತೊಂದು ಅಫ್ಘಾನಿಸ್ತಾನ ಆಗುವುದು ಬೇಡ. ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಕೇವಲ ಭಾರತದ ಸಮಸ್ಯೆ ಅಲ್ಲ. ಇದು ಅಂತಾರಾಷ್ಟ್ರೀಯ ಸಮುದಾಯದ ಸಮಸ್ಯೆ. ಉಗ್ರರ ವಿರುದ್ಧ ಭಾರತ ತೆಗೆದುಕೊಳ್ಳುವ ಪರಿಹಾರ ಕ್ರಮಗಳಿಗೆ ನಿಯೋಗ ಬೆಂಬಲ ಸೂಚಿಸಲಿದೆ ಎಂದು ಹೇಳಿದರು. ಕಾಶ್ಮೀರದ ಸ್ಥಿತಿ ಉತ್ತಮವಾಗಿದೆ. ಮುಂದಿನ ಬಾರಿ ಇನ್ನಷ್ಟು ನಾಗರಿಕರನ್ನು ಭೇಟಿ ಮಾಡುತ್ತೇವೆ ಎಂದರು.
ಇನ್ನು ಕಾಶ್ಮೀರಕ್ಕೆ ಭೇಟಿ ನೀಡಿರುವ ಯೂರೋಪಿಯನ್ ಒಕ್ಕೂಟ ನಿಯೋಗದ ಕಾರ್ಯಕ್ರಮಗಳು ಲೈವ್ ಅಲ್ಲ. ರೆಕಾರ್ಡ್ ಮಾಡಿರುವ ಕಾರ್ಯಕ್ರಮವನ್ನು ಬಿತ್ತರಿಸಲಾಗುತ್ತಿದೆ. ಕೆಲ ಮಾಧ್ಯಮಗಳಿಗೆ ಮಾತ್ರ ವರದಿಗೆ ಅವಕಾಶ ನೀಡಲಾಗಿದೆ. ಸ್ಥಳೀಯ ಕಾಶ್ಮೀರ ಮಾಧ್ಯಮದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ವರದಿಗೆ ಅವಕಾಶ ನೀಡಿಲ್ಲ ಎಂದು ಖ್ಯಾತ ಪತ್ರಕರ್ತೆ ನಿಧಿ ರಾಜದನ್ ಟ್ವೀಟ್ ಮಾಡಿದ್ದಾರೆ.
Press meet of EU MPs in Srinagar is not live. Is a recording. Only some media invited, many local journalists not invited.
— Nidhi Razdan (@Nidhi) October 30, 2019
ಆಗಸ್ಟ್ 5ರಂದು 370 ಆರ್ಟಿಕಲ್ ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ನಿಯೋಗವೊಂದು ಕಾಶ್ಮೀರಕ್ಕೆ ಭೇಟಿ ನೀಡಿದೆ. ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ನಂತರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಶಾಲೆ, ಕಾಲೇಜು, ವ್ಯಾಪಾರ-ವಹಿವಾಟು, ಇಂಟರ್ನೆಟ್ ಬಂದ್ ಮಾಡಲಾಗಿತ್ತು. ಮತ್ತು ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ನಿರ್ಬಂಧ ಹೇರಲಾಗಿತ್ತು.


