ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಬಿಜೆಪಿ ಕುರಿತು ಟೀಕಾಪ್ರಹಾರ ನಡೆಸಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಬಿಜೆಪಿ, “ತೆಲಂಗಾಣ ರಾಷ್ಟ್ರ ಸಮಿತಿ ಅಥವಾ ಟಿಆರ್‌ಎಸ್‌ನಲ್ಲಿ ಹಲವಾರು ಏಕನಾಥ್ ಶಿಂಧೆಗಳು ಇದ್ದಾರೆ” ಎಂದಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್, “ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಏನಾಗುತ್ತದೆ ಎಂದು ಮುಖ್ಯಮಂತ್ರಿ ಕೆಸಿಆರ್‌ಗೆ ಹೇಗೆ ಗೊತ್ತು? ಬಿಜೆಪಿಗೆ ಯಾವುದೇ ತಂತ್ರವಿಲ್ಲ ಎಂದು ಹೇಳುತ್ತಿರುವ ಮುಖ್ಯಮಂತ್ರಿ ನೀವು. ಬಿಜೆಪಿಯ ಬಳಿ ಯಾವುದೇ ತಂತ್ರವಿಲ್ಲ ಎಂದಾದರೆ 18 ರಾಜ್ಯಗಳಲ್ಲಿ ಅಧಿಕಾರದಲ್ಲಿರಲು ಹೇಗೆ ಸಾಧ್ಯ? ಮುಖ್ಯಮಂತ್ರಿ ಬಳಸುತ್ತಿರುವ ಭಾಷೆ ಅತ್ಯಂತ ನಾಚಿಕೆಗೇಡಿನದ್ದಾಗಿದೆ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಕೆಸಿಆರ್ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ನೀವು ದೇಶ್ ಕಿ ನೇತಾ (ದೇಶದ ನಾಯಕ) ಆಗಿದ್ದೀರಾ? ನೀವು ನಿಮ್ಮನ್ನು ಪ್ರಧಾನಿ ಮೋದಿಯೊಂದಿಗೆ ಹೋಲಿಸುತ್ತಿದ್ದೀರಿ. ಪ್ರಧಾನಿ ಮೋದಿ ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ನೀವು ನಿಮ್ಮ ಫಾರ್ಮ್‌ಹೌಸ್‌ನಿಂದ ಹೊರಗೆ ಬರುವುದಿಲ್ಲ. ಎಲ್ಲರೂ ನಿಮ್ಮನ್ನು ನೋಡಿ ನಗುತ್ತಿದ್ದಾರೆ” ಎಂದು ಕರೀಂನಗರದ ಸಂಸದರೂ ಆಗಿರುವ ಬಂಡಿ ಸಂಜಯ್ ಟೀಕಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಗ್ಗೆ ಕೆಸಿಆರ್ ಹೇಳಿಕೆಯನ್ನು ಉಲ್ಲೇಖಿಸಿದ ಬಂಡಿ ಸಂಜಯ್, “ನೀವು ಏಕನಾಥ್ ಶಿಂಧೆ ಬಗ್ಗೆ ಮಾತನಾಡುತ್ತಿದ್ದೀರಿ, ಮೊದಲು ನಿಮ್ಮ ಸ್ವಂತ ಪಕ್ಷವನ್ನು ನೋಡಿ. ಟಿಆರ್‌ಎಸ್‌ನಲ್ಲಿ ಅನೇಕ ಏಕನಾಥ್ ಶಿಂಧೆಗಳಿದ್ದಾರೆ ಎಂದು ನಾನು ಭಾವಿಸುತ್ತೇನೆ. ಏಕನಾಥ್ ಶಿಂಧೆಯಂತಹ ನಾಯಕರು ತಮ್ಮದೇ ಪಕ್ಷದಲ್ಲಿ ಬೆಳೆಯುತ್ತಿದ್ದಾರೆ ಎಂದು ಕೆಸಿಆರ್ ಭಯಪಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
“ಅವರ ಪಕ್ಷದಲ್ಲಿ ಯಾರಾದರೂ ಏಕನಾಥ್ ಶಿಂಧೆ ಆಗಬಹುದು, ಅದು ಅವರ ಮಗ ಕೆಟಿಆರ್, ಮಗಳು (ಕೆ.ಕವಿತಾ), ಅಥವಾ ಸೋದರಳಿಯ (ಹರೀಶ್ ರಾವ್) ಆಗಬಹುದು” ಎಂದು ಭವಿಷ್ಯ ನುಡಿದಿದ್ದಾರೆ.
ಕೆಸಿಆರ್ ಅವರು ಭಾನುವಾರ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿರುಸಿನ ವಾಗ್ದಾಳಿ ನಡೆಸಿದ ನಂತರ ಬಿಜೆಪಿ ಪ್ರತಿದಾಳಿ ನಡೆಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾವ್, “ನರೇಂದ್ರ ಮೋದಿ ಸರ್ಕಾರ ಹೋಗಬೇಕು, ಬಿಜೆಪಿಯೇತರ ಸರ್ಕಾರ ಬರಬೇಕು” ಎಂದು ಹೇಳಿದ್ದರು.
ಇದನ್ನೂ ಓದಿರಿ: ಮಹಾರಾಷ್ಟ್ರ: ಉದ್ಧವ್ ಠಾಕ್ರೆ ಅಧಿಕಾರ ಕಳೆದುಕೊಳ್ಳಲು ಕಾರಣವಾಯ್ತು- ಈ ನಾಲ್ಕು ಅಂಶ
“ಇಂದಿರಾ ಗಾಂಧಿ ಅವರಿಗೆ ಧನ್ಯವಾದಗಳು, ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸುವಷ್ಟು ಧೈರ್ಯಶಾಲಿಯಾಗಿದ್ದರು. ಅದು ನೇರವಾಗಿ ಘೋಷಿಸಿದ ತುರ್ತು ಪರಿಸ್ಥಿತಿಯಾಗಿತ್ತು. ಆದರೆ ಇಂದು ಭಾರತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ” ಎಂದು ಕೆಸಿಆರ್ ಬೇಸರ ವ್ಯಕ್ತಪಡಿಸಿದ್ದರು.
ಪ್ರವಾದಿ ಮೊಹಮ್ಮದ್ ಅವರನ್ನು ಅವಹೇಳನ ಮಾಡಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಕುರಿತು ಮಾತನಾಡಿದ್ದ ಕೆಸಿಆರ್, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಡೆಯನ್ನು ಶ್ಲಾಘಿಸಿದ್ದರು.
“ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜಸ್ಟಿಸ್ ಪಾರ್ದಿವಾಲಾ ಅವರಿಗೆ ನಮಸ್ಕರಿಸುತ್ತೇನೆ. ಭಾರತವನ್ನು ಉಳಿಸಲು ದಯವಿಟ್ಟು ಅದೇ ಮನೋಭಾವವನ್ನು ಇಟ್ಟುಕೊಳ್ಳಿ. ನ್ಯಾಯಾಂಗವು ದೇಶವನ್ನು ಈ ದೇಶದ್ರೋಹಿಗಳು, ರಾಕ್ಷಸರು ಮತ್ತು ಸರ್ವಾಧಿಕಾರಿಗಳಿಂದ ರಕ್ಷಿಸಬೇಕಾಗಿದೆ” ಎಂದು ಕೆಸಿಆರ್ ಮನವಿ ಮಾಡಿದ್ದರು.


