8ನೇ ಮೇ ಸಾಹಿತ್ಯ ಮೇಳ ಶುಕ್ರವಾರ ಉದ್ಘಾಟನೆಗೊಂಡಿದೆ. ಈ ವೇಳೆ ದಿಕ್ಸೂಚಿ ಮಾತುಗಳನ್ನಾಡಿದ ಹಿರಿಯ ಪತ್ರಕರ್ತ ಪಿ.ಸಾಯಿನಾಥ್, “ಭಾರತದಲ್ಲಿ ವಾಕ್ ಸ್ವಾತಂತ್ಯ್ರ ಇದೆ. ಮಾತಿನ ಸ್ವಾತಂತ್ಯ್ರ ಇದೆ. ಮಾತಿನ ನಂತರ ಸ್ವಾತಂತ್ಯ್ರ ಇಲ್ಲ” ಎಂದು ಹೇಳಿದ್ದಾರೆ. ಈ ಹೇಳಿಕೆಗೆ ನನ್ನನ್ನು ದೂಷಿಸಬೇಡಿ ಎಂದಿರುವ ಅವರು ಜಾಗತಿಕ ಪತ್ರಿಕಾ ಸಂಸ್ಥೆಯ ಅಧ್ಯಯನದ ಪ್ರಕಾರ ಭಾರತ ಪತ್ರಿಕಾ ಸ್ವಾತಂತ್ಯ್ರ 105ನೇ ಸ್ಥಾನದಲಿತ್ತು, ಅದು ಈಗ 142ಕ್ಕೆ ಬಂದಿದೆ ಎಂದು ಸೂಚಿಸಿದರು.
ಎರಡು ದಿನಗಳ ಕಾಲ ನಡೆಯಲಿರುವ ಈ ಸಾಹಿತ್ಯದ ಹಬ್ಬವನ್ನು ಶ್ರೀರಾಮ ಸೇನೆಯಿಂದ ದಾಳಿಗೊಳಗಾದ ಧಾರವಾಡದ ಕಲ್ಲಂಗಡಿ ಹಣ್ಣಿನ ವ್ಯಾಪಾರಿ ನಬೀಸಾಬ್ ಕಿಲ್ಲೇದಾರ್ ಉದ್ಘಾಟಿಸಿದ್ದಾರೆ. ಈ ವೇಳೆ ಮಾತನಾಡಿದ ಸಾಯಿನಾಥ್, “ಇಷ್ಟು ಅದ್ಭುತ ವ್ಯಕ್ತಿಗಳನ್ನು ಒಂದೆಡೆ ಸೇರಿಸಿದ್ದಕ್ಕೆ ಸಂಘಟಕರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ನಾನು ಬರಹಗಾರರು ಮತ್ತು ಕವಿಗಳು ಸೇರಿರುವ ಈ ಸಭೆಗೆ ಸಂದೇಶದೊಂದಿಗೆ ಬಂದಿದ್ದೇನೆ. ನನಗೆ ಕನ್ನಡ ಗೊತ್ತಿಲ್ಲ, ಆದರೆ ನನ್ನ ಅಜ್ಜಿ ಬಳ್ಳಾರಿಯವರಾಗಿದ್ದು ಕನ್ನಡದಲ್ಲಿ ಕವಿತೆಗಳನ್ನು ಬರೆಯುತ್ತಿದ್ದರು. ಸಾಹಿತ್ಯ ಸಭೆಗಳಿಗೆ ನಾನು ಹೋಗುವುದಿಲ್ಲ, ನನ್ನ ಪುಸ್ತಕಗಳು ಬಂದಿರಬಹುದು ಆದರೂ ನನಗೆ ಸಾಹಿತ್ಯಿಕ ಸಾಧನೆಗಳಿಲ್ಲ” ಎಂದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಆದರೂ, ಈ ಸಾಹಿತ್ಯಿಕ ಸಭೆಗೆ ನಾನು ಬರಲೇಬೇಕಿತ್ತು. ಏಕೆಂದರೆ ಎಂಎಂ ಕಲಬುರ್ಗಿ ಮತ್ತು ಗೌರಿ ಲಂಕೇಶ್ ಥರದ ಕರ್ನಾಟಕದ ಬರಹಗಾರರು ಮತ್ತು ಕವಿಗಳು ಅಭಿವ್ಯಕ್ತಿಯ ಹಕ್ಕಿನ ರಕ್ಷಣೆಗಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು ದ್ವೇಷ ಬಿತ್ತುವ ಪ್ರಯತ್ನದ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ನಾನು ಇಲ್ಲಿಗೆ ಬರಲೇಬೇಕು ಎಂದು ನನಗೆ ಖಚಿತವಾಗಿ ಗೊತ್ತಾದದ್ದು ನೀವು ಕಲ್ಲಂಗಡಿ ವ್ಯಾಪಾರಿ ನಬೀಸಾಬ್ ಅವರನ್ನು ಕರೆದಿದ್ದೀರೆಂದು ಗೊತ್ತಾದಾಗ.
ಇದನ್ನೂ ಓದಿ: ಟಿಪ್ಪು ಮತ್ತು ಮೈಸೂರು ಚರಿತ್ರೆ ಕುರಿತ ಎರಡು ಅಮೂಲ್ಯ ಬರಹಗಳು
ನೀವು ಘನತೆ ಮತ್ತು ಮಾನವತೆಯನ್ನು ಎತ್ತಿಹಿಡಿಯುವ ಮೂಲಕ ನಮ್ಮೆಲ್ಲರಿಗೂ ಗೌರವ ತಂದಿದ್ದೀರಿ. ಅವರಿಗೆ ಅವರ ಕಥೆಯನ್ನು ಹೇಳಲು ಆವಕಾಶ ಕೊಡುವ ಮೂಲಕ ನಾನು ಇಲ್ಲಿಗೆ ಬರುವಂತೆ ಮಾಡಿದದ್ದೀರಿ. ಕರ್ನಾಟಕದ ಬರಹಗಾರರು ನಿಮ್ಮ ಈ ಕೆಲಸಗಳಿಗೆ ಆಗುವ ಪರಿಣಾಮಗಳ ಬಗ್ಗೆ ಗೊತ್ತಿದ್ದೂ ಇದನ್ನು ಮಾಡುತ್ತಿದ್ದೀರಿ” ಎಂದು ಬಣ್ಣಿಸಿದರು.
ಕರ್ನಾಟಕದ ಬರಹಗಾರರು ಝೋಲಾನ ಕೆಲಸ ಮಾಡುತ್ತಿದ್ದು, ನಬೀಸಾಬ್ ಕಿಲ್ಲೇದಾರ್ ‘ನಿಮ್ಮ ಡ್ರೇಫಸ್’!
ಕರ್ನಾಟಕದ ಬರಹಗಾರರು ಝೋಲಾನ ಕೆಲಸ ಮಾಡುತ್ತಿದ್ದೀರಿ. ಈ ನಬೀಸಾಬ್ ನಿಮ್ಮ ಡ್ರೇಫಸ್, ಇದು ನನ್ನ ಸಂದೇಶ ಈ ಸಭೆಗೆ ಎಂದು ಪಿ. ಸಾಯಿನಾಥ್ ಅವರು ಹೇಳಿದರು.
“ಫ್ರಾನ್ಸ್‌ನ ದೊಡ್ಡ ಬರಹಗಾರ ಎಲಿನ್ ಝೋಲಾ ಅಲ್ಲಿನ ದುರಂತಕ್ಕೊಳಗಾದ ವ್ಯಕ್ತಿಗಳ ಪರವಾಗಿ ದನಿಯೆತ್ತುವ ಮೂಲಕ ಹೀಗೆ ಮಾಡಿದ್ದರು. ‘ನಾನು ಆರೋಪಿಸುತ್ತೇನೆ’ ಎಂದು ಅವರು ಅಧ್ಯಕ್ಷರಿಗೆ ಬರೆದಿದ್ದ ಬಹಿರಂಗ ಪತ್ರವು ಪತ್ರಿಕೆಗಳ ಮುಖಪುಟದಲ್ಲಿ ಬಂದಿತ್ತು. ಅದು ಪ್ರಾನ್ಸ್‌ನ ಕುಲೀನ ಆಳ್ವಿಕೆಗೆ ಸವಾಲೊಡ್ಡಿತ್ತು. ಒಬ್ಬ ಮುಗ್ಧ ನಿರಪರಾಧಿ ಮಿಲಿಟರಿ ಅಧಿಕಾರಿ ಡ್ರೇಫಸ್‌ನ ನಿರಪರಾಧಿತ್ವದ ಪರವಾಗಿ ಅವನ ಜೀವಾವಧಿ ಶಿಕ್ಷೆಯ ವಿರುದ್ಧವಾಗಿ ಝೋಲಾ ಬರೆಯುತ್ತಾರೆ”
“1894ರಲ್ಲಿ ನರಕದಂತಿರುವ ಡೆವಿಲ್ ದ್ವೀಪಗಳಿಗೆ ಆ ಸೈನಿಕನನ್ನು ಕಳಿಸುವುದರ ವಿರುದ್ಧ ಈ ಬರಹಗಾರನ ಸಾವಿಲ್ಲದ ಬರಹವು ಎಲ್ಲದರ ನಡುವೆಯೂ ನಿಲ್ಲದೆ ಮುಂದುವರೆಯಿತು. 1906ರಲ್ಲಿ ಡ್ರೇಫಸ್‌ನನ್ನು ಆರೋಪಮುಕ್ತಗೊಳಿಸಿ ನಾಗರೀಕ ನ್ಯಾಯಾಲಯ ಆದೇಶ ನೀಡಿದರೂ ಸೈನ್ಯ ಇದನ್ನು ನೂರು ವರ್ಷಗಳ ನಂತರ ಒಪ್ಪಿಕೊಂಡಿತು”
“ಆದರೆ ಝೋಲಾ ತನ್ನ ಪ್ರತಿರೋಧಕ್ಕಾಗಿ ಫ್ರಾನ್ಸ್‌ನಿಂದ ಪಲಾಯನ ಮಾಡಬೇಕಾಯಿತು. ಆತನಿಗೆ ನೀಡಲಾಗಿದ್ದ ಎಲ್ಲ ಪದವಿಗಳನ್ನೂ ವಾಪಾಸ್ ಪಡೆದು ಅವಮಾನಿಸಲಾಯಿತು, ದೇಶಭ್ರಷ್ಟನನ್ನಾಗಿ ಮಾಡಲಾಯಿತು. 1903ರಲ್ಲಿ ಲಂಡನ್‌ನ ತನ್ನ ಮನೆಯ ಚಿಮಣಿಯ ಕಾರ್ಯನಿರ್ವಹಣೆಯ ಸಮಸ್ಯೆಯಿಂದ ಝೋಲಾ ಉಸಿರುಕಟ್ಟಿ ಸಾವಿಗೀಡಾದರು”
ಇದನ್ನೂ ಓದಿ: ಬಹುಜನ ಭಾರತ; ದಲಿತ ನಾಗರಾಜುವಿನ ಹತ್ಯೆ ಹಿಂದೆ ಹಲವು ಪ್ರಶ್ನೆಗಳಿವೆ..
“4 ದಶಕಗಳ ನಂತರ ಚಿಮಣಿಯನ್ನು ಬೇಕೆಂದೇ ಬಂದು ಮಾಡಿದ್ದಾಗಿ ಚಿಮಣಿ ಸ್ವಚ್ಛಗೊಳಿಸುವ ಕೆಲಸಗಾರ ಒಪ್ಪಿಕೊಂಡ. ಝೋಲಾನ ಅಂತ್ಯಕ್ರಿಯೆಯಲ್ಲಿ ಡ್ರೇಫಸ್‌ನ ಮೇಲೆ ಬಲಪಂಥೀಯ ಕೊಲೆಗಾರ ದಾಳಿ ಮಾಡಿ ಗುಂಡು ಹಾರಿಸಿ ಗಾಯಗೊಳಿಸಿದರೂ ನ್ಯಾಯಾಂಗ ಗಂಭೀರವಾಗಿ ಪರಿಗಣಿಸಲಿಲ್ಲ”
“ಇವೆಲ್ಲವೂ ಇಂದಿಗೆ ನಮಗೆ ಏನನ್ನು ನೆನಪಿಸುತ್ತದೆ. ಕರ್ನಾಟಕದ ಬರಹಗಾರರು ಝೋಲಾನ ಕೆಲಸ ಮಾಡುತ್ತಿದ್ದೀರಿ. ಈ ನಬೀಸಾಬ್ ನಿಮ್ಮ ಡ್ರೇಫಸ್, ಇದು ನನ್ನ ಸಂದೇಶ ಈ ಸಭೆಗೆ” ಎಂದು ಪಿ. ಸಾಯಿನಾಥ್ ಹೇಳಿದರು.
ಇತಿಹಾಸವನ್ನು ಕೋಟ್ಯಾಂತರ ರೂಗಳನ್ನು ಖರ್ಚು ಮಾಡಿ ಮರು ಮುದ್ರಿಸಲಾಗುತ್ತಿದೆ
“ಕರ್ನಾಟಕದ ಬರಹಗಾರರು ತಮ್ಮ ಪದವಿಗಳನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿಸಲಿಲ್ಲ, ತಾವೇ ಅದನ್ನು ಪ್ರತಿರೋಧವಾಗಿ ಮರಳಿಸಿ ದೊಡ್ಡತನ ಮೆರೆದರು. ಈಗ ಇತಿಹಾಸವನ್ನು ಕೋಟ್ಯಾಂತರ ರೂಗಳನ್ನು ಖರ್ಚು ಮಾಡಿ ಮರು ಮುದ್ರಿಸಲಾಗುತ್ತಿದೆ. ಅವರ ಇತಿಹಾಸವನ್ನು ಬರೆಯಲಿಕ್ಕಾಗಿ ಪಠ್ಯಗಳನ್ನು ತಿರುಚಲಾಗುತ್ತಿದೆ”
“1926ರಲ್ಲಿ ನಿಷೇಧಿಸಲ್ಪಟ್ಟು ನಂತರ 40ರಲ್ಲಿ ಮತ್ತೆ ಪ್ರಕಟಗೊಂಡು ಸಂಘಪರಿವಾರದಿಂದ ಮುಂದೊತ್ತಲ್ಪಟ್ಟ ಸಾವರ್ಕರ್ ಕುರಿತ ಪುಸ್ತಕವೊಂದನ್ನು ಚಿತ್ರಗುಪ್ತ ಎಂಬ ಬರಹಗಾರ ಬರೆದಿದ್ದರು. 1911ರವರೆಗೆ ಸಾವರ್ಕರ್ ಅವರು ಕ್ರಾಂತಿಕಾರಿಯಾಗಿದ್ದರು, ಆ ನಂತರ ಜೈಲಿಗೆ ಹೋದ ಮೇಲೆ ಅವರ ಧೋರಣೆ ಬದಲಾಯಿತು ಎಂದು ಹೇಳುತ್ತಾರೆ. ಸಾವರ್ಕರ್ ಬಗ್ಗೆ ಬರೆದಿದ್ದ ಚಿತ್ರಗುಪ್ತ ಎಂಬವರು ಬೇರೆ ಯಾರೂ ಅಲ್ಲ ಸ್ವತಃ ಸಾವರ್ಕರ್ ಅವರೇ ಎಂದು ಅವರ ಸಹೋದರನಿಂದ ನಂತರ ತಿಳಿಯಿತು” ಎಂದು ಸಾಯಿನಾಥ್ ತಿಳಿಸಿದರು.
ಇದನ್ನೂ ಓದಿ: ಮಾತು ಮರೆತ ಭಾರತ; ಅಸ್ಪೃಶ್ಯರು ಪರಿಶಿಷ್ಟ ಜಾತಿಗಳಾಗಿದ್ದು ಹೇಗೆ?
ಮಾತಿನ ನಂತರ ಸ್ವಾತಂತ್ಯ್ರ ಇಲ್ಲ
“ಈ ಹಿಂದೆಯೂ ಹಲವರು ಹೇಳಿದಂತೆ ಭಾರತದಲ್ಲಿ ವಾಕ್ ಸ್ವಾತಂತ್ಯ್ರ ಇದೆ. ಮಾತಿನ ಸ್ವಾತಂತ್ಯ್ರ ಇದೆ. ಮಾತಿನ ನಂತರ ಸ್ವಾತಂತ್ಯ್ರ ಇಲ್ಲ, ಈ ಹೇಳಿಕೆಗೆ ನನ್ನನ್ನು ದೂಷಿಸಬೇಡಿ. ಜಾಗತಿಕ ಪತ್ರಿಕಾ ಸಂಸ್ಥೆಯ ಅಧ್ಯಯನದ ಪ್ರಕಾರ ಭಾರತ ಪತ್ರಿಕಾ ಸ್ವಾತಂತ್ಯ್ರ 105ನೇ ಸ್ಥಾನದಲಿತ್ತು, ಅದು ಈಗ 142ಕ್ಕೆ ಬಂದಿದೆ” ಎಂದು ಸಾಯಿನಾಥ್ ಸೂಚಿಸಿದ್ದಾರೆ.
“ಯುಎಪಿಎ ಕಾಲದಲ್ಲಿ ನಾವು ವಾಕ್ ಸ್ವಾತಂತ್ಯ್ರದ ಬಗ್ಗೆ ಮಾತಾಡುತ್ತಿದ್ದೇವೆ. ಸಿದ್ಧಿಕಿ ಕಪ್ಪನ್ ಎಂಬ ಪತ್ರಕರ್ತ ಜೈಲಿನಲ್ಲಿ ಕಾರಣವಿಲ್ಲದೇ ನರಳುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಿ ಮಂಚಕ್ಕೆ ಸರಪಣಿಯಿಂದ ಬಿಗಿದು, ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡು ಎಂದಾತನಿಗೆ ಹೇಳಿದ್ದರು” ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದಿಂದ ಮಾಧ್ಯಮದ ಮೇಲೆ ನಿಗಾ ಇಡುವ ಒಂದು ಸಮಿತಿ
“ಕೇಂದ್ರ ಸಚಿವಾಲಯವು ವಾರ್ತಾ ಪ್ರಸಾರ ಇಲಾಖೆಗೆ ಪತ್ರ ಬರೆದು, ಮಾಧ್ಯಮದ ಮೇಲೆ ನಿಗಾ ಇಡುವ ಒಂದು ಸಮಿತಿ ರಚಿಸಬೇಕು ಎಂದು ಆದೇಶಿಸಿತು. 13 ಜನ ಅಧಿಕಾರಶಾಹಿಗಳನ್ನು ಅದರಲ್ಲಿ ಹಾಕಿದ್ದರು. ಅದಕ್ಕೆ ಕೊನೆಗೆ ಅವರಿಗೆ ಯಾರೋ ಸಲಹೆ ಕೊಟ್ಟಂತೆ ಅವರು ನನ್ನನ್ನು ಸಂಪರ್ಕಿಸಿದರು. ನನ್ನೊಂದಿಗಿದ್ದ ಇನ್ನೊಂದು ಪತ್ರಕರ್ತ ರಜತ್ ಶರ್ಮಾ”
“ನಮ್ಮ ಪತ್ರಕರ್ತರ ಪರಿಸ್ಥಿತಿಯನ್ನು ಅರಿತುಕೊಳ್ಳಲು ಕೆಲಸ ಮಾಡೋಣ ಎಂದು ಸಲಹೆ ಕೊಟ್ಟೆ. ಅದರಂತೆ ಪತ್ರಕರ್ತರ ಪರಿಸ್ಥಿತಿಗಳು ಹೊರಬಂದವು. ವಿಪತ್ತು ನಿಯಂತ್ರಣ ಕಾಯ್ದೆಯ ಕೆಳಗೂ ಅನೇಕ ಪತ್ರಕರ್ತರನ್ನು ಎನ್‌ಡಿಎ ಸರ್ಕಾರ ಬಂಧಿಸಿದೆ ಎಂದು ಗೊತ್ತಾಯಿತು”
“1861ಲ್ಲಿ ಬಾಲಗಂಗಾಧರ ತಿಲಕರನ್ನೂ ಇದೇ ಕಾಯ್ದೆಯ ಕೆಳಗೆ ಬಂಧಿಸಲಾಗಿತ್ತು. ತಮಿಳುನಾಡಿದ ಒಬ್ಬ ಪತ್ರಕರ್ತರನ್ನೂ ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸೂಕ್ತ ಉಪಕರಣಗಳಿಲ್ಲ ಎಂದು ಬರೆದಿದ್ದಕ್ಕೆ ಬಂಧಿಸಲಾಯಿತು. ಅಂಡಮಾನ್‌ನಲ್ಲಿ ಕ್ವಾರಂಟೈನ್ನಲ್ಲಿ ಇದ್ದ ಕುಟುಂಬವನ್ನು ಮಾತಾಡಿಸಿದ್ದಕ್ಕೆ ಒಬ್ಬ ಪತ್ರಕರ್ತನನ್ನು ಬಂಧಿಸಲಾಯಿತು”
ಇದನ್ನೂ ಓದಿ: ಎರಡೂವರೆ ಸಾವಿರ ಕೋಟಿ ಹುಣಸಿ ಪಿಕ್ಕ ಅನಕೊಂಡಿರೇನ!
“ಈ ಸಮಿತಿಯಲ್ಲಿ ನಾನು ಕಂಡ ವಿಚಿತ್ರವೆಂದರೆ, ಆ ಸಮಿತಿಯ ಸಭೆಗಳಲ್ಲಿ ಮಾತಾಡುತ್ತಿದ್ದ ಏಕೈಕ ವ್ಯಕ್ತಿ ನಾನು. ರಜತ್ ಶರ್ಮಾ ನನ್ನ ಹಳೇ ಸಹೋದ್ಯೋಗಿ, ಅವರಿಗೆ ವಾಕ್ ಸ್ವಾತಂತ್ಯ್ರದ ಬಗ್ಗೆ ಏನು ಅಭಿಪ್ರಾಯ ಇತ್ತೋ ಗೊತ್ತಿಲ್ಲ, ಅವರು ಮಾತಾಡಲೇ ಇಲ್ಲ. ಎರಡನೇ ಸಭೆಯಲ್ಲಿ ತನಗೆ ಬಿಡುವಿಲ್ಲದ ಕಾರಣ ಸಮಿತಿಯಿಂದ ಹೊರಗುಳಿಯುವುದಾಗಿ ಹೇಳಿದರು. ಅವರ ಬದಲಿಗೆ ಬಂದ 2 ಪತ್ರಕರ್ತರು ಮುಂದಿನ ಸಭೆಗಳಳ್ಲಿ ಒಂದೂ ಮಾತಾಡಲಿಲ್ಲ”
“ವರದಿಯ ಕರಡು ಬರಲು ಕಾಯುತ್ತಿದೆ. ಈ ಕರಡಿನ ಆಸಕ್ತಿದಾಯಕ ಸಂಗತಿಯೆಂದರೆ, ಇದನ್ನು ‘ವರದಿ’ ಎಂದು ಕರೆಯಲಾಗಿತ್ತೇ ಹೊರತು ‘ಕರಡು’ ಎಂದಲ್ಲ. ನನ್ನನ್ನು ಆಕಾಶದೆತ್ತರಕ್ಕೆ ಹೊಗಳಲಾಗಿತ್ತು. ಆದರೆ, ನಂತರ ಒಳಭಾಗದಲ್ಲಿ ನಾನು ಚರ್ಚಿಸಿದ್ದ ಒಂದೂ ಮಾತು ಇರಲಿಲ್ಲ. ಜಮ್ಮು ಕಾಶ್ಮೀರದ ಉಲ್ಲಂಘನೆಗಳ ಬಗ್ಗೆ ನಾನು ಹೇಳಿದ್ದು, ‘ಅಲ್ಲಿನ ಮಿಲಿಟರಿಯು ಪತ್ರಕರ್ತರನ್ನು ಕಾಪಾಡಲು ಸಾಹಸದ ಪಾತ್ರ ವಹಿಸುತ್ತಿದೆ’ ಎಂದು ಬದಲಾಗಿತ್ತು”
“ನನ್ನ ಮಾತುಗಳು ಎಲ್ಲೂ ಇರಲಿಲ್ಲ. 17 ಅನುಬಂಧಗಳಿದ್ದವು, ಈ ಅಧ್ಯಯನವು 18 ಮಂದಿ ಪತ್ರಿಕಾ ಅಧ್ಯಯನ ನಡೆಸುತ್ತಿದ್ದ ಹೊರ ದೇಶಗಳ (ಆಫ್ರಿಕಾ ಇತ್ಯಾದಿ ದೇಶಗಳ) ಸಂಶೋಧನಾರ್ಥಿಗಳನ್ನು ಮಾತಾಡಿಸಿ, ಭಾರತದ ವಾಕ್ ಸ್ವಾತಂತ್ಯ್ರ ಮತ್ತು ಪತ್ರಕರ್ತರ ಪರಿಸ್ಥಿತಿ ಅದ್ಭುತ ಎಂದು ಮಾಹಿತಿ ನೀಡಿದ್ದರು. ನಾನು ಇದನ್ನು ವಿರೋಧಿಸಿ ನೋಟ್ ಕಳಿಸಿದೆ. ಮೂರು ಬಾರಿ ಕಳಿಸಿದರೂ ಪ್ರತಿಕ್ರಿಯೆ ಇಲ್ಲ. ನಂತರ ನಾನೇ ಸಂಪರ್ಕಿಸಿದೆ.
“ಅದರ ಮರುದಿನ ಆ ಕಮಿಷನ್‌ನ ಇ ಮೇಲ್ ಐಡಿ ಕೆಲಸ ಮಾಡುವುದು ನಿಲ್ಲಿಸಿತು. ನಂತರ ಕಮಿಷನ್ ಕೂಡಾ.
ಕ್ಯಾಬಿನೆಟ್ ಸೆಕ್ರೆಟರಿ, ಕೇವಲ ಮೋದಿ ಮತ್ತು ಶಾ ಇಬ್ಬರಿಂದ ಮಾತ್ರವೇ ಆದೇಶ ಪಡೆಯುವ ವ್ಯಕ್ತಿ ನೇಮಿಸಿದ್ದ ಸಮಿತಿ ಕಾಣೆಯಾಯಿತು. ನಮ್ಮ ಅಭಿವ್ಯಕ್ತಿ ಸ್ವಾತಂತ್ಯ್ರದ ಸ್ಥಿತಿ ಇಂತಹದ್ದು. ಅದು ಕಾಣೆಯಾಗಿದೆ. ಈ ವರದಿ ಬೇಕೆಂದು ಸ್ನೇಹಿತರು ಆರ್‌ಟಿಐ ಹಾಕಿ ಕೇಳಿದರು. ಅದಕ್ಕೆ ಬಂದ ಉತ್ತರ, ‘ಹೌದು ಅಂತಹ ಸಮಿತಿ ಇತ್ತು, ಅದು 4 ಸಭೆ ನಡೆಸಿತು’ ಅಷ್ಟೇ.”
ಇದನ್ನೂ ಓದಿ: ‘ದ್ವೇಷ ಭಾಷಣ’: ಕೇರಳದ ಮಾಜಿ ಶಾಸಕ ಪಿ ಸಿ ಜಾರ್ಜ್‌ಗೆ 14 ದಿನಗಳ ನ್ಯಾಯಾಂಗ ಬಂಧನ
ಕೊರೊನಾದ 12 ತಿಂಗಳಿನಲ್ಲಿ 102 ರಿಂದ 166ಕ್ಕೆ ಡಾಲರ್ ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚಿದೆ
“ಭಾರತದ ಸಮಾಜದಲ್ಲಿನ ಅಸಮಾನತೆಗಳು ಮಾಧ್ಯಮದಲ್ಲಿ ಮತ್ತು ನ್ಯಾಯಾಂಗದಲ್ಲಿ ಪ್ರತಿಫಲಿಸಬೇಕು. ಯಾರು ಭಾರತದ ಮಾಧ್ಯಮಗಳ ದೊಡ್ಡ ಮಾಲೀಕ?- ಮುಖೇಶ್ ಅಂಬಾನಿ. ಯಾರು ಏಶ್ಯಾದ ಬಿಲಿಯನೇರ್?- ಅಂಬಾನಿ ಈಗ ಅಧಾನಿ ಕೂಡಾ”
“1992ರಲ್ಲಿ ಡಾಲರ್ ಕೋಟ್ಯಾಧಿಪತಿ ಭಾರತದಲ್ಲಿ ಒಬ್ಬರೂ ಇರಲಿಲ್ಲ. 2012-13ರಲ್ಲಿ 15 ಮಂದಿ ಇದ್ದರು. ಈ ವರ್ಷವನ್ನೇ ಯಾಕೆ ಆರಿಸಬೇಕು? 18 ಕೋಟಿ ಗ್ರಾಮೀಣ ಕುಟುಂಬಗಳಿವೆ, ಅದರಲ್ಲಿ ಮೂರನೇ ಎರಡು ಭಾಗದಲ್ಲಿ ಮುಖ್ಯ ಆದಾಯ ಗಳಿಸುವವರು ತಿಂಗಳಿಗೆ 10 ಸಾವಿರಕ್ಕಿಂತ ಕಡಿಮೆ ಆದಾಯ ಗಳಿಸುತ್ತಿದ್ದರು. ದಲಿತರು ಮತ್ತು ಆದಿವಾಸಿಗಳು ಇದರಲ್ಲಿ 4% ಮಾತ್ರ”
“2019ರಲ್ಲಿ ಜಾಗತಿಕ ಸಾಂಕ್ರಾಮಿಕ ಆರಂಭವಾದಾಗ ದೇಶದ ಸಂಪತ್ತು ಧರೆಗಿಳಿಯಿತು, ಆದರೆ ಅಂಬಾನಿ ಮತ್ತು ಅದಾನಿಗಳ ಖಾಸಗಿ ಆದಾಯ 400 ಪಟ್ಟಿಗಿಂತ ಹೆಚ್ಚು ಹೆಚ್ಚಾಯಿತು. ಆರೋಗ್ಯ ಕ್ಷೇತ್ರ, ಆನ್‌ಲೈನ್ ಶಿಕ್ಷಣ, ಬೈಜು ಆಪ್ ಇತ್ಯಾದಿ ಎಲ್ಲದರ ಲಾಭ ಯಾರಿಗೆ ಹೋಗಿರಬಹದು?”
“ಆದಿವಾಸಿ ಮತ್ತು ಗ್ರಾಮೀಣ ಶಿಕ್ಷಣದ ಕತೆ ಏನಾಯಿತು? ನಿಮಗೆ ತನ್ನದೇ ಆದ ಸ್ವಂತ ಸ್ಮಾರ್ಟ್ ಫೋನ್ ಇರುವ ಒಬ್ಬ ದಲಿತ, ಆದಿವಾಸಿ ಹುಡುಗಿಯರು ಎಷ್ಟು ಮಂದಿ ಗೊತ್ತಿದಾರೆ? ಸಾಂಕ್ರಮಿಕದ 12 ತಿಂಗಳಿನಲ್ಲಿ 102 ರಿಂದ 166ಕ್ಕೆ ಡಾಲರ್ ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚಿತು. ಜಿಡಿಪಿಯ ನಾಲ್ಕು ಪಟ್ಟು ಸಂಪತ್ತು ಜನಸಂಖ್ಯೆಯ ನಾಲ್ಕರಲ್ಲಿ ಒಂದು ಭಾಗ ಇರುವ ಕೋಟ್ಯಾಧಿಪತಿಗಳು ಪ್ರತಿನಿಧಿಸುತ್ತಾರೆ. ಇಂತಹ ಚಿತ್ರಣಗಳೂ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಬರುವುದಿಲ್ಲ”
ಇದನ್ನೂ ಓದಿ: ದ್ವೇಷ ಪ್ರಚೋದನೆ; ಕನ್ನಡ ಸುದ್ದಿವಾಹಿನಿಗಳ ವಿರುದ್ಧ 17 ದೂರು ನೀಡಿದರೂ ಪೊಲೀಸರಿಂದ ಸಿಗದ ಪ್ರತಿಕ್ರಿಯೆ- ಸಿಎಎಚ್‌ಎಸ್
“ರೈತರು ದೆಹಲಿಯಲ್ಲಿ ಆಂದೋಲನದಲ್ಲಿ ತೊಡಗಿದ್ದಾಗ, ಪ್ರತಿ ಎರಡನೇ ಘೋಷಣೆಯು ಅಂಬಾನಿ ಅದಾನಿಗೆ ಧಿಕ್ಕಾರ ಇತ್ತು. ಆದರೆ ಅದನ್ನು ಮಾಧ್ಯಮಗಳು ವರದಿ ಮಾಡುವುದು ಸಾಧ್ಯವಿಲ್ಲ. ಈ ನಿಜ ಚಿತ್ರಗಳನ್ನು ನಿಮ್ಮಂತಹ ಬರಹಗಾರರು ಕವಿಗಳು ವಿದ್ಯಾರ್ಥಿಗಳು ಹೊರತರುತ್ತೀರಿ. ಬಂಗಾಳದ ಬರದ ಸಮಯದಲ್ಲಿ, ಜಲಿಯನ್ ವಾಲಾ ಬಾಗ್ ಸಮಯದಲ್ಲಿ ಹೀಗೆ ಇತಿಹಾಸದಲ್ಲಿ ಅನೇಕ ಬಾರಿ ಸತ್ಯವನ್ನು ಹೊರತಂದವರು ಇಂತಹ ಬರಹಗಾರರೇ, ಅವರೇ ತಮ್ಮ ಪತ್ರಿಕೆಗಳನ್ನು ಆರಂಭಿಸಿದರು. ನಬೀಸಾಬ್ ಕಿಲ್ಲೇದಾರ್ ಕಥೆ ಏನು ಎಂಭುದನ್ನು ಹೊರತರಲು ನಿಮ್ಮ ಸೃಜನಶೀಲತೆಯನ್ನು ಬಳಸಿ”
“ಈ ಐತಿಹಾಸಿಕ ಜವಾಬ್ದಾರಿಯನ್ನು ಈಡೇರಿಸಲು ಮುಂದಾಗಬೇಕೆಂದು ನಾನು ಕರ್ನಾಟಕದ ಬರಹಗಾರರು, ಚಿಂತಕರು, ಕವಿಗಳನ್ನು ಕೇಳಿಕೊಳ್ಳುತ್ತೇನೆ. ಇಡೀ ಭಾರತಕ್ಕೆ ತೋರಿಸಿಕೊಡಿ-ನಾವು ಹೋರಾಡುತ್ತೇವೆ, ನಾವು ಗೆಲ್ಲುತ್ತೇವೆ- ಎಂದು!!” ಎಂದು ಪಿ. ಸಾಯಿನಾಥ್ ಹೇಳಿದ್ದಾರೆ.


