Homeಚಳವಳಿ`ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇರುವವರು ಮಾವೋವಾದಿಗಳಲ್ಲ' - ಡಾ. ಮೆಲ್ವಿನ್ ಪಿಂಟೊ

`ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇರುವವರು ಮಾವೋವಾದಿಗಳಲ್ಲ’ – ಡಾ. ಮೆಲ್ವಿನ್ ಪಿಂಟೊ

ವಿಜಯ ಕರ್ನಾಟಕ ಪತ್ರಿಕೆಯ ಅಂಕಣ ಬರಹಕ್ಕೆ ಪ್ರತಿಕ್ರಿಯೆ

- Advertisement -
- Advertisement -

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ದಿನಾಂಕ 9-7-2021 ರಂದು ಪ್ರಕಟವಾದ ‘ನಾಡಿಗೆ ದ್ರೋಹ
ಬಗೆದವರ ವೈಭವೀಕರಣ ಬೇಡ’ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಲೇಖಕರು ಈ ಲೇಖನವನ್ನು ಪತ್ರಿಕೆಗೆ ಕಳುಹಿಸಿದ್ದರು. ಆದರೆ ಪತ್ರಿಕೆಯು ಲೇಖನವನ್ನು ಪ್ರಕಟಿಸದ ಕಾರಣ, ನಾನುಗೌರಿ.ಕಾಂ ‘ವಿಜಯ ಕರ್ನಾಟಕ’ ಪತ್ರಿಕೆಯ ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಪ್ರಕಟಿಸುತ್ತಿದೆ.

ಡಾ. ರೋಹಿಣಾಕ್ಷ ಶಿರ್ಲಾಲು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ದಿನಾಂಕ 9-7-2021 ರಂದು ಬರೆದ ಲೇಖನ ‘ನಾಡಿಗೆ ದ್ರೋಹ ಬಗೆದವರ ವೈಭವೀಕರಣ ಬೇಡ’ ಕಪೋಕಲ್ಪಿತ ವಿಚಾರ ಮತ್ತು ವಾದಗಳ ಸರಮಾಲೆ; ಹಾಗೂ ಕಾಮಾಲೆ ಕಣ್ಣಿನ ನೋಟವೇ ಹೊರತು, ವಸ್ತುನಿಷ್ಟ ಅವಲೋಕನವಲ್ಲ. ಇಂಥ ಲೇಖನದಿಂದ ಅಮಾಯಕರ ಹಾದಿ ತಪ್ಪಿಸುವ ಕೆಲಸವನ್ನು ಲೇಖಕರು ಮಾಡಿದ್ದಾರೆಯೇ ಎನ್ನುವ ಸಂಶಯ ಮೂಡುತ್ತದೆ.

ಫಾದರ್ ಸ್ಟ್ಯಾನ್ ಸ್ವಾಮಿಯವರನ್ನು ಬಂಧಿಸಿರುವುದು ಎಲ್ಗರ್ ಪರಿಷತ್ ಪ್ರಕರಣದ ಸಂಬಂಧವಾಗಿ ಎಂಬುದು ಸರಿ. ಆದರೆ ತನಗೂ ಈ ಪರಿಷತ್ತಿಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಫಾದರ್ ಸ್ಟ್ಯಾನ್ ಸ್ವಾಮಿಯವರು ಅಫಿಡವಿತ್ತಿನ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ತಾನಿರುವುದು ಜಾರ್ಖಂಡ್‌‌ನ ಆದಿವಾಸಿ ಜನರ ಜೊತೆ. ಮಹರಾಷ್ಟ್ರದ ಭೀಮಾ ಕೊರೆಗಾಂವ್ ಕುರಿತು ತನಗೆ ಅರಿವಿಲ್ಲ ಮತ್ತು ತಾನು ನಿರ್ದೋಷಿ ಎನ್ನುವುದನ್ನು ಸ್ವಾಮಿಯವರು ಕೊನೆ ತನಕವೂ ಹೇಳುತ್ತಾ ಬಂದಿದ್ದಾರೆ. ನ್ಯಾಯಾಲಯ ಸ್ಟ್ಯಾನ್ ಸ್ವಾಮಿಯ ವ್ಯಾಖ್ಯಾನವನ್ನು ಆಲಿಸುವ ತಾಳ್ಮೆ ವಹಿಸಿಲ್ಲ ಎಂಬುದು ಇಲ್ಲಿಯ ದುರಂತ.

ಇದನ್ನೂ ಓದಿ: ಸ್ಟ್ಯಾನ್ ಸ್ವಾಮಿ ಸಾವು ಮತ್ತು ದಮನಕಾರಿ ಕಾನೂನುಗಳ ಕರಾಳ ಕಥೆ

ಅಷ್ಟಕ್ಕೂ ಅಂಬೇಡ್ಕರ್ ಅವರನ್ನು ಪುಂಖಾನುಪುಂಖವಾಗಿ ಉಲ್ಲೇಖಿಸಿ ಅಭಿಮಾನ ಸಾರುವ ಲೇಖಕರು ಭೀಮಾ ಕೊರೆಗಾಂವ್ ಸಮರ ಯಾಕಾಗಿ ನಡೆಯಿತು ಅನ್ನುವುದನ್ನು ಮರೆತಂತಿದೆ. ಅದು ನಡೆದದ್ದು ಮೇಲ್ಜಾತಿಯವರು ದಲಿತರ ವಿರೋಧವಾಗಿ ಮಾಡುತ್ತಿದ್ದ ಅನ್ಯಾಯ ಮತ್ತು ಅತ್ಯಾಚಾರದ ಪ್ರತೀಕಾರವಾಗಿ. ದಲಿತರು ಬ್ರಿಟಿಷರ ವಿರುದ್ಧ ಸೇರಿ ಮರಾಠ ಪಡೆಯನ್ನು ಚಾರಿತ್ರಿಕ ಮೂರನೇ ಆಂಗ್ಲೋ-ಬ್ರಿಟಿಷ್ ಯುದ್ಧದಲ್ಲಿ ಸೋಲಿಸಿದ್ದನ್ನು 1927 ರಿಂದ ಪ್ರತಿ ವರ್ಷ ದಲಿತ ಸಂಘಟನೆಗಳು ಆಚರಿಸುತ್ತಲೇ ಬಂದಿವೆ ಎಂಬುದನ್ನು ಮರೆಯಬಾರದು.

ಫಾದರ್ ಸ್ಟ್ಯಾನ್ ಸ್ವಾಮಿ : ಚಿತ್ರ ಕೃಪೆ PTI

ಬಿ.ಆರ್. ಅಂಬೇಡ್ಕರ್ ಅವರು 1927ರಲ್ಲಿ ದಲಿತರ ಜೊತೆ ಸೇರಿ ಈ ಆಚರಣೆಯಲ್ಲಿ ಭಾಗಿಯಾದ ತರುವಾಯ ಈ ಆಚರಣೆಯನ್ನು ವರ್ಷಂಪ್ರತಿ ಸ್ಮರಿಸಲಾಗುತ್ತಿತ್ತು. ಇದರ ಅರ್ಥ ಅಂಬೇಡ್ಕರ್ ಅವರು ಕೂಡ ಈ ಭೀಮಾ ಕೊರೆಗಾಂವ್ ಸಂಘರ್ಷವನ್ನು ಸೈದ್ಧಾಂತಿಕವಾಗಿ ಸಮರ್ಥಿಸಿದ್ದಾರೆ ಎಂದಾಯಿತು. 2018ರಲ್ಲಿ ನಡೆದ ಭೀಮಾ ಕೊರೆಗಾಂವ್ ಯುದ್ಧದ 200ನೇ ವರ್ಷದ ಆಚರಣೆಯಲ್ಲಿ ಅಂಬೇಡ್ಕರ್ ಅವರ ಮೊಮ್ಮಗ ಮತ್ತು ರಾಜಕಾರಣಿ ಪ್ರಕಾಶ್ ಅಂಬೇಡ್ಕರ್ ಅವರು ಭಾಗಿಯಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಈಗ ಡಾ. ರೋಹಿಣಾಕ್ಷ ಅವರು ಲೇಖನದಲ್ಲಿ ಚರ್ಚಿಸುವ ಪ್ರಮುಖ ವಿಷಯವನ್ನು ಅವಲೋಕಿಸುವುದಾದರೆ, ಅವರ ಪ್ರಕಾರ ಸ್ಟ್ಯಾನ್‌ ಸ್ವಾಮಿ ಒಬ್ಬ ‘ಮಾವೋವಾದಿ’ ಆತ ಬುಡಕಟ್ಟು ಜನರ ಅಭ್ಯುದಯದ ಹೆಸರಿನಲ್ಲಿ ‘ಮತಾಂತರ ನಡೆಸುತ್ತಿದ್ದ’ ಮತ್ತು ಸರಕಾರಗಳು ಬುಡಕಟ್ಟು ಜನರ ಅಭ್ಯುದಯಕ್ಕಾಗಿ ಸೃಷ್ಟಿಸಿದ್ದ ಪ್ರತೀ ಯೋಜನೆಗಳನ್ನು ಆತ ವಿರೋಧಿಸುತ್ತಿದ್ದ. ಲೇಖಕರ ಬಳಿ ಈ ಕುರಿತಂತೆ ಯಾವ ಪುರಾವೆಗಳಿವೆ ಅಥವಾ ಅವರು ಯಾವ ಸಾಕ್ಷ್ಯಾಧಾರಗಳಿಂದ ಇದನ್ನು ಸಮರ್ಥಿಸುತ್ತಾರೆ ಎಂಬುದು ಸ್ಪಷ್ಟವಿಲ್ಲ.

ಇದನ್ನೂ ಓದಿ: ಸ್ಟ್ಯಾನ್ ಸ್ವಾಮಿ ಶ್ರದ್ಧಾಂಜಲಿ; ವಿಚಾರಣಾಧೀನ ಕೈದಿಯಾಗಿ ಭಾರತರತ್ನವೊಂದರ ಸಾವು

ಲೇಖನದ ಉದ್ದಕ್ಕೂ ಪೋಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಹತ್ತು ಸಾವಿರ ಪುಟಗಳ ಚಾರ್ಜ್ ಶೀಟ್ ಅನ್ನೇ ಅವರು ಉಲ್ಲೇಖಿಸುತ್ತಾರೆ. ಪೋಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದ ಮಾತ್ರಕ್ಕೆ ಅದರಲ್ಲಿರುವುದೆಲ್ಲಾ ಸತ್ಯವಾಗುವುದಿಲ್ಲ ಎಂಬುದು ಲೇಖಕರಿಗೆ ತಿಳಿದಂತಿಲ್ಲ. ಹಾಗಾಗಿದ್ದರೆ, ಯುಎಪಿಎ ಕಾನೂನಿನ ಅಡಿಯಲ್ಲಿ ಬಂಧಿತರೆಲ್ಲರಿಗೂ ಶಿಕ್ಷೆಯಾಗಬೇಕಿತ್ತು. ಆದರೆ 2016 ರಿಂದ 2019ರ ನಡುವೆ ಬಂಧಿತರಾದವರ ಪೈಕಿ ಶಿಕ್ಷೆಯಾದವರ ಪ್ರಮಾಣ ಕೇವಲ 2.2 ಪ್ರತಿಶತ ಎಂಬುದನ್ನು ಸರಕಾರವೇ ಹೇಳಿದೆ. ಇದು ಯಾಕೆ ಹೀಗೆ ಎಂಬುದನ್ನು ಲೇಖಕರು ಮತ್ತು ಅವರಂತ ಮನಸ್ಥಿತಿಯುಳ್ಳವರು ಕೇಳಬೇಕಾದ ಪ್ರಶ್ನೆ.

ಸ್ಟ್ಯಾನ್ ಸ್ವಾಮಿ ಒಬ್ಬ ಮಾವೋವಾದಿ ಎಂಬುದರ ಕುರಿತು ಮಾದ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅತಿರಂಜಿತ ಸುಳ್ಳು ಸುದ್ದಿಗಳು ನಿತ್ಯವೂ ಹರಿದಾಡುತ್ತಲೇ ಇವೆ. ಪೋಲೀಸರು ಕೂಡಾ ಇಂಥ ಸುಳ್ಳು ಸಾಕ್ಷ್ಯಾಧಾರಗಳನ್ನು ಸಲ್ಲಿಸುವಲ್ಲಿ ನಿಸ್ಸೀಮರು ಎಂಬುದು ಎಲ್ಗರ್ ಪರಿಷತ್ ಪ್ರಕರಣದಲ್ಲಿ ಕೂಡಾ ಸಾಬೀತಾಗಿದೆ. ಬಂಧಿತರ ಪೈಕಿ ಒಬ್ಬರಾದ ರೋನಾ ವಿಲ್ಸನ್ ಇವರ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಿ ಅದರಲ್ಲಿ ದಸ್ತಾವೇಜುಗಳನ್ನು ಅಕ್ರಮವಾಗಿ ಸೇರಿಸಲಾಗಿತ್ತು ಎಂದು ಅಮೇರಿಕಾದ ಪ್ರತಿಷ್ಟಿತ ಅರ್ಸೆನಾಲ್ ಕನ್ಸಲ್ಟಿಂಗ್ ಎಂಬ ವಿಧಿವಿಜ್ಞಾನ ಸಂಸ್ಥೆಯ ತನಿಖೆ ಜಾಹೀರು ಮಾಡಿದೆ.

ಅಷ್ಟು ಮಾತ್ರವಲ್ಲ, ಮಾನವ ಹಕ್ಕುಗಳ ಹೋರಾಟಗಾರ ಸುರೇಂದ್ರ ಗ್ಯಾಡ್ಲಿಂಗ್ ಅವರ ಕಂಪ್ಯೂಟರ್ ಅನ್ನು ಕೂಡ ಭಯ ಹುಟ್ಟಿಸುವ ರೀತಿಯಲ್ಲಿ ಹ್ಯಾಕ್ ಮಾಡಲಾಗಿದೆ ಎಂಬುದನ್ನು ಈ ಸಂಸ್ಥೆ ತಿಳಿಸಿದೆ. ಫಾದರ್ ಸ್ಟ್ಯಾನ್ ಸ್ವಾಮಿಯವರು ಪೋಲೀಸರು ತನ್ನ ಕಂಪ್ಯೂಟರ್‌ನಲ್ಲಿ ಶೋಧಿಸಿದ ಹಲವಾರು ದಸ್ತಾವೇಜುಗಳು ಹೇಗೆ ಅಲ್ಲಿ ಸೇರಿಕೊಂಡವು ಎಂಬುದು ಸ್ವತಃ ತನಗೆಯೇ ಅರಿವಿಲ್ಲ ಎಂದು ಹೇಳಿದ್ದಾರೆ ಮತ್ತು ಇದರ ಕುರಿತು ತನಿಖೆ ಆಗಬೇಕಿದೆ.

ಇದನ್ನೂ ಓದಿ: ಬಹುಜನ ಭಾರತ; ಸ್ಟ್ಯಾನ್ ಸ್ವಾಮಿಯವರ ಬಲಿ ಪಡೆದದ್ದು ಬಲಪಂಥೀಯ ಸೈದ್ಧಾಂತಿಕ ದ್ವೇಷ

ಲೇಖಕರು ಹೇಳುವಂತೆ ಸ್ಟ್ಯಾನ್ ಸ್ವಾಮಿಯವರು ಬುಡಕಟ್ಟು ಜನರಿಗೆ ಆಯುಧಗಳನ್ನು ಕೊಟ್ಟು ಹಿಂಸೆಗೆ ಪ್ರಚೋಧನೆ ನೀಡುತ್ತಿದ್ದರು ಎಂಬುದು ಅವರ ಅತಿರೇಕದ ಕಲ್ಪನಾಲೋಕದ ಸುಳ್ಳು ಸುದ್ದಿಯೇ ಹೊರತು ಇದು ಎಲ್ಲಿಯೂ ಸಾಬೀತಾಗಿಲ್ಲ. ಮಾವೋವಾದಿಗಳಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ಮಾವೋವಾದಿಗಳು ಹಿಂಸೆಯ ಮೂಲಕ ಹಕ್ಕುಗಳ ಹೋರಾಟ ಮಾಡುವವರು. ಆದರೆ ಸ್ಟ್ಯಾನ್ ಸ್ವಾಮಿಯವರಿಗೆ ತನ್ನ ಕೊನೆ ಉಸಿರಿನವರೆಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತೀವ ನಂಬಿಕೆಯಿತ್ತು. ಎಲ್ಲೂ ಅವರು ಪೋಲೀಸರ ಹಾಗೂ ನ್ಯಾಯಾಲಯದ ವಿರುದ್ಧ ಅಸಹಕಾರ ತೋರಿಸಲಿಲ್ಲ.

 

ಯುಎಪಿಎ ಕಾನೂನು ಸರಕಾರದ ವಿರುದ್ಧ ದನಿ ಎತ್ತಿದವರ ಮೇಲೆ ಚಲಾಯಿಸುವ ದ್ವೇಷದ ಅಸ್ತ್ರ ಎಂಬುದು ಅವರಿಗೆ ತಿಳಿದಿತ್ತು. ಆದಾಗ್ಯೂ ಯಾವುದೇ ಅಪರಾಧ ಎಸಗದ ತನಗೆ ಇದರಿಂದ ಯಾವುದೇ ಶಿಕ್ಷೆಯಾಗುವುದಿಲ್ಲ ಎಂಬ ನಂಬಿಕೆ ಅವರಲ್ಲಿತ್ತು. ಹಾಗಾಗಿಯೇ ಅವರು ಎಲ್ಲಿಯೂ ನ್ಯಾಯಾಲಯ ಹಾಗೂ ನ್ಯಾಯ ವ್ಯವಸ್ಥೆಯ ವಿರುದ್ಧ ದನಿ ಎತ್ತಲಿಲ್ಲ. ಜೈಲಿನಿಂದ ನಿರ್ದೋಷಿಯಾಗಿ ಹೊರಗೆ ಬರುವ ಮೊದಲೇ ಅವರು ನಿಧನರಾದರು ಎಂಬುದು ದುಃಖದ ಸಂಗತಿ.

ಮತಾಂತರ

ಫಾದರ್ ಸ್ಟ್ಯಾನ್ ಸ್ವಾಮಿಯವರು ಮತಾಂತರಗೊಳಿಸುತ್ತಿದ್ದರು ಎಂಬುದು ಲೇಖಕ ರೋಹಿಣಾಕ್ಷ ಅವರ ಇನ್ನೊಂದು ಪುರಾವೆಗಳಿಲ್ಲದ ಆರೋಪ. ಇದರ ಕುರಿತೂ ಅವರು ಪಟ್ಟಭದ್ರ ಹಿತಾಸಕ್ತಿಗಳಿಂದ ಪ್ರಭಾವಿತರಾದ ಹಾಗೆ ತೋಚುತ್ತದೆ. ಭಾರತದ ಸಂವಿಧಾನದ ಪ್ರಕಾರ ಮತಾಂತರಗೊಳಿಸುವುದು ಅಪರಾಧವಲ್ಲ. ಸಂವಿಧಾನದ 25ನೇ ಅನುಚ್ಛೇದದ ಪ್ರಕಾರ ಪ್ರತಿ ಭಾರತೀಯ ನಾಗರಿಕನಿಗೆ ತನ್ನ ಧರ್ಮವನ್ನು ಆಚರಿಸುವ ಮತ್ತು ಭೋದಿಸುವ ಹಕ್ಕಿದೆ. ಇದು ನ್ಯಾಯವ್ಯವಸ್ಥೆಯ ಒಳಗೇ ನಡೆಯಬೇಕು ಮತ್ತು ಶಾಂತಿ ಸುವ್ಯವಸ್ಥೆಗೆ ಬಾಧಕವಾಗಬಾರದು.

ಇದನ್ನೂ ಓದಿ: ಅವರ ಹಾಡಿನೊಂದಿಗೇ ಅವರನ್ನು ಮೆಲ್ಲನೆ ಮುಗಿಸುವುದು; ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಶೋಕಗೀತೆ

ಫಾದರ್ ಸ್ವಾಮಿಯವರು ಬುಡಕಟ್ಟು ಜನರನ್ನು ಮತಾಂತರಗೊಳಿಸಿದ್ದರ ಕುರಿತು ಎಲ್ಲಿಯೂ ಸಾಕ್ಷಾಧಾರಗಳಿಲ್ಲ. ಹಾಗೆ ಮಾಡಿದ್ದರೂ ಕೂಡಾ ಅದು ಸಂವಿಧಾನದ ಪ್ರಕಾರ ಅಪರಾಧವಲ್ಲ. ಆದರೆ ಫಾದರ್ ಸ್ಟ್ಯಾನ್ ಅವರ ಆದ್ಯತೆ ಬುಡಕಟ್ಟು ಜನರ ಮತಾಂತರಕ್ಕಿಂತ ಅವರ ಹಕ್ಕುಗಳ ರಕ್ಷಣೆಯಾಗಿತ್ತು ಎಂಬುದನ್ನು ಯಾರೂ ಮರೆಯುವಂತಿಲ್ಲ.

ಬುಡಕಟ್ಟು ಜನರಿಗಾಗಿ ಸರಕಾರ ಅನುಷ್ಟಾನಗೊಳಿಸುತ್ತಿದ್ದ ಪ್ರತಿ ಯೋಜನೆಯನ್ನು ಫಾದರ್ ಸ್ಟ್ಯಾನ್ ಅವರು ವಿರೋಧಿಸುತ್ತಿದ್ದರು ಎಂಬುದು ಲೇಖಕರ ಇನ್ನೊಂದು ಆರೋಪ. ಫಾದರ್ ಸ್ಟ್ಯಾನ್ ಅವರು ವಿರೋಧಿಸುತ್ತಿದ್ದ ಯೋಜನೆಗಳು ಯಾವುದು ಎಂಬುದರ ಕುರಿತು ಲೇಖಕರು ತಿಳಿಸಿಲ್ಲ. ಹಾಗೆ ನೋಡಿದರೆ ಅನುಷ್ಟಾನಗಳನ್ನು ವಿರೋಧಿಸುವುದಕ್ಕಿಂತ ಸರಕಾರ ಮತ್ತು ಸಂವಿಧಾನದ ನಿಬಂಧನೆಗಳನ್ನು ನಿಜಾರ್ಥದಲ್ಲಿ ಅನುಷ್ಟಾನಗೊಳಿಸಿ ಎಂದು ಫಾದರ್ ಸ್ಟ್ಯಾನ್ ಸ್ವಾಮಿ ಹೋರಾಡಿದ್ದೇ ಹೆಚ್ಚು.

ಉದಾಹರಣೆಗೆ ಬುಡಕಟ್ಟು ಪ್ರದೇಶಗಳ ಆಡಳಿತ ಮತ್ತು ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಸಂವಿಧಾನದ ಐದನೇ ಪರಿಚ್ಛೇದದ ಕಾರ್ಯಸೂಚಿಯನ್ನು ಅನುಷ್ಟಾನಗೊಳಿಸಬೇಕು, ಅಲ್ಲದೆ ಅರಣ್ಯ ಹಕ್ಕು ಕಾಯಿದೆಯನ್ನು ಜಾರಿಗೊಳಿಸಬೇಕೆಂದು ಅವರು ಹೋರಾಡಿದರು. ಅಷ್ಟು ಮಾತ್ರವಲ್ಲದೆ, ನಕ್ಸಲೀಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆಂದು ಸುಳ್ಳು ಆರೋಪ ಹೇರಿಸಲ್ಪಟ್ಟು ಪೋಲೀಸರಿಂದ ಅಮಾನುಷವಾಗಿ ಯುಎಪಿಎ ಕಾಯ್ದೆಯಡಿ ಬಂಧಿತರಾದ ನೂರಾರು ಅಮಾಯಕ ಬುಡಕಟ್ಟು ಜನರನ್ನು ಬಿಡುಗಡೆಗೊಳಿಸಬೇಕೆಂದು ಕೋರಿ ಅವರು ಸುಪ್ರೀಂ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಕೂಡ ಹೂಡಿದ್ದರು. ಬಹುಷ ಇದೆಲ್ಲವೂ ಲೇಖಕ ರೋಣಿತಾಕ್ಷ ಅವರಿಗೆ ಫಾದರ್ ಸ್ಟ್ಯಾನ್ ಅವರು ಮಾಡಿದ ಅಪರಾಧ ಮತ್ತು ಮಾವೋವಾದಿತನದಂತೆ ಕಾಣುತ್ತಿರಬಹುದು.

ಅಂದ ಮೇಲೆ ಫಾದರ್ ಸ್ಟ್ಯಾನ್ ಸ್ವಾಮಿಯ ವಿರೋಧ ಯಾವುದಕ್ಕಿತ್ತು?

ಜಾರ್ಖಂಡ್‌ನ ಶ್ರೀಮಂತ ಗಣಿಗಾರಿಕಾ ಉದ್ಯಮಕ್ಕಾಗಿ ಬುಡಕಟ್ಟು ಜನರ ಅರಣ್ಯವನ್ನು ಕೋರ್ಪೋರೇಟ್‍ಗಳಿಗೆ ಹಸ್ತಾಂತರಿಸಲು ಸುಲಭ ಸಾಧ್ಯವಾಗುವಂತೆ ತಿದ್ದುಪಡಿ ಮಾಡಲಾದ, ಜಾರ್ಖಂಡ್‌ ರಾಜ್ಯದ ಭೂ ಸ್ವಾದೀನ ಕಾಯಿದೆ 2017ಕ್ಕೆ ಅವರ ವಿರೋಧವಿತ್ತು. ಈ ಸಂಬಂಧ ಅವರು ಬುಡಕಟ್ಟು ಜನರನ್ನು ಸಂಘಟಿಸಿ ಯಾವುದೇ ಹಿಂಸೆಯಿಲ್ಲದೆ ಹೋರಾಡಿದರು. ಸರಕಾರದ ಅಮಾನವೀಯ ಮತ್ತು ಅಪ್ರಜಾತಾಂತ್ರಿಕ ನಿಲುವು ಮತ್ತು ಕಾನೂನುಗಳನ್ನು ಸಾಂವಿಧಾನಿಕವಾಗಿ ವಿರೋಧಿಸುವುದೇ ಫಾದರ್ ಸ್ವಾಮಿ ಮಾಡಿದ ತಪ್ಪಾಯಿತೇ?

ಇದನ್ನೂ ಓದಿ: ಸ್ಟ್ಯಾನ್ ಸ್ವಾಮಿ ನಿಧನಕ್ಕೆ ದೇಶ ವಿದೇಶಗಳ ಗಣ್ಯರ ಕಂಬನಿ: ಭಾರತ ಸರ್ಕಾರದ ವಿರುದ್ಧ ಆಕ್ರೋಶ

ಲೇಖಕರ ಪ್ರಕಾರ ಈ ದೇಶದಲ್ಲಿ ದಲಿತರು ಮತ್ತು ಬುಡಕಟ್ಟು ಜನರ ಜೊತೆಗೆ ಕೆಲಸ ಮಾಡುವುದೆಂದರೆ ಅವರಿಗೆ ಆಸ್ಪತ್ರೆಗಳನ್ನು, ಶಾಲೆಗಳನ್ನು ಕಟ್ಟಿಕೊಡುವುದು. ಹಾಗಾದರೆ ಅವರ ಹಕ್ಕುಗಳಿಗಾಗಿ ಹೋರಾಡುವುದು ಸರಿಯಲ್ಲ ಎಂದಾಯಿತಲ್ಲವೇ? ಆಸ್ಪತ್ರೆಗಳನ್ನು, ಶಾಲೆಗಳನ್ನು ಕಟ್ಟಿಕೊಡುವುದು ನಿಜವಾಗಿ ಸರಕಾರದ ಕೆಲಸ. ಆ ಕೆಲಸದಲ್ಲಿ ಸರಕಾರ ಬಹುತೇಕ ಸೋತಿದ್ದರಿಂದಲೇ ಇವತ್ತು ವಿದ್ಯೆ ಮತ್ತು ಆರೋಗ್ಯದ ಎಗ್ಗಿಲ್ಲದ ಖಾಸಗೀಕರಣವಾಗಿ ಬಡವರಿಗೆ ಮೂಲಭೂತ ಸೌಲಭ್ಯಗಳು ದುರ್ಲಭವಾಗಿವೆ. ಇದರ ವಿರುದ್ಧ ಹೋರಾಡಿದರು ಕೂಡ ಇಂದು ಯುಎಪಿಎ ಕಾಯಿದೆಯಡಿ ಬಂಧನಕ್ಕೊಳಗಾಗುವ ಸಾಧ್ಯತೆಗಳು ಕಡಿಮೆಯೇನಿಲ್ಲ. ಯಾಕೆಂದರೆ ಈ ಕಾಯಿದೆಯೇ ಅಷ್ಟು ಭಯಾನಕವಾಗಿದೆ.

ಮುಕ್ತಾಯಗೊಳಿಸುವ ಮುಂಚೆ ಒಂದು ಮಾತನ್ನಂತೂ ಸ್ಪಷ್ಟಪಡಿಸಬೇಕಾಗಿದೆ. ಇವತ್ತು ಸ್ಟ್ಯಾನ್ ಸ್ವಾಮಿಯ ಸಾವಿನ ಕುರಿತಂತೆ ದೇಶ ವಿದೇಶಗಳಿಂದ ವ್ಯಾಪಕವಾಗಿ ಸಂತಾಪ ಮತ್ತು ಆಕ್ರೋಶ ವ್ಯಕ್ತವಾಗುತ್ತಾ ಇದೆ. ಮಾನವ ಹಕ್ಕುಗಳ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ವೃದ್ಧ ಸಾಮಾಜಿಕ ಕಾರ್ಯಕರ್ತನಿಗೆ ಒದಗಿ ಬಂದ ವಿಪತ್ತನ್ನು ಕಂಡು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟವರು ನಿರಾಶೆ ಪಡುವಂತಾಗಿದೆ. ಆದಾಗ್ಯೂ ಇಂದು ವಿವಿಧ ಸ್ತರಗಳಲ್ಲಿ ಆಗುತ್ತಿರುವ ಚರ್ಚೆಗಳು, ಮೂಡಿಬರುವ ವಿಚಾರಧಾರೆಗಳು ಭರವಸೆ ಮೂಡಿಸುತ್ತಿವೆ.

ಆ ಚರ್ಚೆಗಳಲ್ಲಿ ಪೂರ್ವಾಗ್ರಹಪೀಡಿತರಾಗದೆ ಭಾಗವಹಿಸಿ ತಮ್ಮ ಸಂಕುಚಿತ ನಿಲುವನ್ನು ಮರುಪರಿಶೀಲನೆ ಮಾಡುವುದು ಇಂದಿನ ಅಗತ್ಯವೂ, ಅನಿವಾರ್ಯತೆಯೂ ಆಗಿದೆ. ಇಂದು ನಮ್ಮ ನ್ಯಾಯಾಲಯಗಳು ಕೆಲವರಿಗೆ ಹೆಚ್ಚು ಪ್ರಯಾಸವಿಲ್ಲದೆ ಆರೋಗ್ಯದ ಕಾರಣಗಳಿಗಾಗಿ ಜಾಮೀನು ನೀಡುತ್ತವೆಯಾದರೆ ಸ್ಟ್ಯಾನ್ ಸ್ವಾಮಿಯಂಥ ವಿಪರೀತ ಕಾಯಿಲೆಯ ವ್ಯಕ್ತಿಗೆ ಯಾಕೆ ಆರೋಗ್ಯದ ದೃಷ್ಟಿಯಲ್ಲಾದರೂ ತಾತ್ಕಾಲಿಕ ಜಾಮೀನು ಕೂಡ ನೀಡಲಿಲ್ಲ ಎಂಬುದರ ಕುರಿತು ಚರ್ಚೆ ನಡೆಯಬೇಕಾಗಿದೆ.

  • ಡಾ. ಮೆಲ್ವಿನ್ ಪಿಂಟೊ

(ಲೇಖಕರು ಸಂತ ಅಲೋಶಿಯಸ್ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕರು.)

ಇದನ್ನೂ ಓದಿ: ಫಾದರ್ ಸ್ಟಾನ್ ಸ್ವಾಮಿಯವರನ್ನು ಕೊಲ್ಲಲಾಗಿದೆ: ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪ


ವಿಡಿಯೊ ನೋಡಿ: ಮಗನನ್ನು ಕಳೆದುಕೊಂಡೆ, ವ್ಯಾಪಾರವೂ ಕೈ ಹಿಡಿದಿಲ್ಲ: ಹೂ ಮಾರುವವರ ಬದುಕಲ್ಲಿ ಪರಿಮಳವೇ ಇಲ್ಲದಂತಾಗಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...