ರೈತರ ಆಂದೋಲನದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ನೀಡಿರುವ ಸಲಹೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಸರ್ಕಾರ, ರಾಜ್ಯವು ಗಡಿಯಲ್ಲಿ ಪ್ರತಿಭಟನಾಕಾರರಿಗೆ ಸೇರಲು ಅವಕಾಶ ನೀಡುತ್ತಿದೆ ಎಂದು ಹೇಳುವುದು ಸಂಪೂರ್ಣ ತಪ್ಪು ಎಂದು ಹೇಳಿದೆ.
ಹರಿಯಾಣ ಪೊಲೀಸರ ಅಶ್ರುವಾಯು ಶೆಲ್‌ಗಳು, ರಬ್ಬರ್ ಬುಲೆಟ್‌ಗಳು, ಡ್ರೋನ್‌ಗಳು ಮತ್ತು ದೈಹಿಕ ಬಲದ ಬಳಕೆಯಿಂದಾಗಿ 160ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರೂ, ಪಂಜಾಬ್ ಸರ್ಕಾರವು ‘ಜವಾಬ್ದಾರಿಯಿಂದ’ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡಿದೆ ಎಂದು ಅದು ಹೇಳಿಕೊಂಡಿದೆ.
ಬುಧವಾರದಂದು ‘ದೆಹಲಿ ಚಲೋ’ ಮೆರವಣಿಗೆಯನ್ನು ಪುನರಾರಂಭಿಸುವ ಮುನ್ನ 14,000 ಕ್ಕೂ ಹೆಚ್ಚು ಜನರು 1,200 ಟ್ರಾಕ್ಟರ್-ಟ್ರಾಲಿಗಳು ಮತ್ತು ಇತರ ವಾಹನಗಳೊಂದಿಗೆ ಪಂಜಾಬ್-ಹರಿಯಾಣ ಗಡಿಯಲ್ಲಿ ಜಮಾಯಿಸುತ್ತಿದ್ದಾರೆ ಎಂಬ ವರದಿಗಳ ನಂತರ, ಗೃಹ ವ್ಯವಹಾರಗಳ ಸಚಿವಾಲಯ ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೇಳಿದೆ.
ಪಂಜಾಬ್ ಮುಖ್ಯ ಕಾರ್ಯದರ್ಶಿ ಅನುರಾಗ್ ವರ್ಮಾ ಅವರು ಬುಧವಾರ ಬರೆದ ಪತ್ರದಲ್ಲಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹಿಂದಿನ ದಿನ ಹೊರಡಿಸಿದ ಆದೇಶಗಳನ್ನು ಸ್ವೀಕರಿಸಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಅದರಲ್ಲಿ ರೈತರು ರಸ್ತೆಯ ಮೇಲೆ ಟ್ರ್ಯಾಕ್ಟರ್-ಟ್ರಾಲಿಗಳನ್ನು ಬಳಸದಂತೆ ಕೇಳಿಕೊಂಡಿದೆ. ನ್ಯಾಯಾಲಯದ ವೆಬ್‌ಸೈಟ್‌ನಲ್ಲಿಯೂ ಆದೇಶವನ್ನು ಅಪ್‌ಲೋಡ್ ಮಾಡಲಾಗಿಲ್ಲ ಎಂದು ಹೇಳಿದ್ದಾರೆ.
ರೈತರು ಪ್ರತಿಭಟಿಸಲು ದೆಹಲಿಗೆ ಹೋಗುತ್ತಿದ್ದಾರೆ ಮತ್ತು ಪಂಜಾಬ್ ಮತ್ತು ಹರಿಯಾಣದ ಗಡಿಯಲ್ಲಿ ಅವರನ್ನು ತಡೆದಿದ್ದರಿಂದ ಅವರನ್ನು ಅಲ್ಲಿಯೆ ನಿಲ್ಲಿಸಲಾಯಿತು ಎಂದು ವರ್ಮಾ ಹೇಳಿದ್ದಾರೆ.
‘ಹರಿಯಾಣ ಪೊಲೀಸರು ಬಳಸಿದ ಅಶ್ರುವಾಯು, ರಬ್ಬರ್ ಬುಲೆಟ್‌ಗಳು, ದೈಹಿಕ ಬಲ ಮತ್ತು ಡ್ರೋನ್‌ಗಳಿಂದ ಇದುವರೆಗೆ 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅದರ ನಂತರವೂ ಪಂಜಾಬ್ ಸರ್ಕಾರವು ಕಾನೂನು ಸುವ್ಯವಸ್ಥೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದೆ’ ಎಂದು ಪಂಜಾಬ್ ತನ್ನ ಪತ್ರದಲ್ಲಿ ತಿಳಿಸಿದೆ.
ರೈತರ ಬಗ್ಗೆ ಹೆಚ್ಚು ಸಹಾನುಭೂತಿ ತೋರಿಸಲು ಕರೆ ನೀಡಿದ ಮುಖ್ಯ ಕಾರ್ಯದರ್ಶಿ, ಪಂಜಾಬ್ ಗಡಿ ರಾಜ್ಯವಾಗಿರುವುದರಿಂದ ಪ್ರತಿಭಟನೆಯ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹೆಚ್ಚು ಸೂಕ್ಷ್ಮವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಪಂಜಾಬ್ ಸರ್ಕಾರವು ಮಾತುಕತೆಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಒತ್ತಿ ಹೇಳಿದ್ದು, ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕೇಂದ್ರ ಮತ್ತು ರೈತರ ನಡುವಿನ ನಾಲ್ಕು ಸಭೆಗಳಲ್ಲಿ ಮೂರರಲ್ಲಿ ಭಾಗವಹಿಸಿದ್ದರು. ಮಾನ್ ಅವರು ಭಾಗವಹಿಸಲು ಸಾಧ್ಯವಾಗದ ಏಕೈಕ ಸಭೆಗೆ ಕ್ಯಾಬಿನೆಟ್ ಸಚಿವರು ಮತ್ತು ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಕಳುಹಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪಂಜಾಬ್ ಪೊಲೀಸ್‌ನ ಡಿಐಜಿ ಶ್ರೇಣಿಯ ಐಪಿಎಸ್ ಮತ್ತು ಪ್ರಾಂತೀಯ ಪೊಲೀಸ್ ಸೇವಾ ಅಧಿಕಾರಿಗಳು ಸೇರಿದಂತೆ 2,000 ಪೊಲೀಸರು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕೆಲಸ ಮಾಡುತ್ತಿದ್ದಾರೆ. ನಾವು ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ ಮತ್ತು ಅಗತ್ಯವಿದ್ದರೆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತರಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ರೈತರು ದೆಹಲಿಯತ್ತ ಮೆರವಣಿಗೆ ನಡೆಸಲು ಯತ್ನಿಸಿದ ನಂತರ ಬುಧವಾರ ಶಂಭು ಗಡಿಯಲ್ಲಿ ಮತ್ತೆ ಅಶ್ರುವಾಯು ಪ್ರಯೋಗಿಸಲಾಯಿತು. ಮಣ್ಣು ಅರೆಯುವ ಯಂತ್ರಗಳೊಂದಿಗೆ ಸಾಲುಗಟ್ಟಿ ನಿಂತಿದ್ದ ರೈತರ ವಿರುದ್ಧ ಹರಿಹಾಯ್ದ ಹರ್ಯಾಣ ಪೊಲೀಸರು ರೈತರನ್ನು ಕೆಳಗಿಳಿಸುವಂತೆ ಎಚ್ಚರಿಕೆ ನೀಡಿದ್ದಾರೆ.
‘ಮಾತುಕತೆಗಳನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿರುವ ಅಶಿಸ್ತಿನ ಅಂಶಗಳ’ ವಿರುದ್ಧ ಎಚ್ಚರಿಕೆ ನೀಡಿದ ಕೃಷಿ ಸಚಿವ ಅರ್ಜುನ್ ಮುಂಡಾ, ಐದನೇ ಸುತ್ತಿನ ಚರ್ಚೆಗಾಗಿ ರೈತರನ್ನು ಸಂಧಾನದ ಮೇಜಿಗೆ ಮರಳಿ ಆಹ್ವಾನಿಸಿದ್ದಾರೆ; ಶಾಂತಿಯುತವಾಗಿರಲು ಪ್ರತಿಭಟನಾಕಾರರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ; ದೆಹಲಿ ಚಲೋ ರೈತರ ಪ್ರತಿಭಟನೆ: ತಲೆಗೆ ಪೆಟ್ಟು ಬಿದ್ದು ಪ್ರತಿಭಟನಾನಿರತ ಯುವ ರೈತ ಸಾವು


