Homeಕರ್ನಾಟಕಸಾಮರಸ್ಯದ ಸಾಗರಕೆ ಸಾವಿರಾರು ನದಿಗಳು

ಸಾಮರಸ್ಯದ ಸಾಗರಕೆ ಸಾವಿರಾರು ನದಿಗಳು

ಉಡುಪಿಯಲ್ಲಿ ಮೇ 14ರಂದು ನಡೆದ ‘ಸಾಮರಸ್ಯ ನಡಿಗೆ ಸಹಬಾಳ್ವೆ ಸಮಾವೇಶ’ದ ಸಂಪೂರ್ಣ ವರದಿ...

- Advertisement -
- Advertisement -

ಯಾವ ನೆಲದಲ್ಲಿ ಕೋಮು ಸಂಘರ್ಷವನ್ನು ನೆಲೆಸಲು ಯತ್ನಿಸಲಾಯಿತೋ, ಅದೇ ನೆಲದಿಂದ ಸಾಮರಸ್ಯದ ಸಿಂಚನ ಹರಿದಿದೆ. ಈ ನೆಲ ಎಂದಿಗೂ ಸಾಮರಸ್ಯ, ಸೌಹಾರ್ದತೆಯ ತವರೇ ಹೊರತು ದ್ವೇಷ, ಮತ್ಸರದ ನೆಲವೀಡಲ್ಲ ಎಂಬುದನ್ನು ಸಾರಿ ಸಾರಿ ಹೇಳಲಾಯಿತು.

ಶಾಲಾ ಕಾಲೇಜು ಮಕ್ಕಳು ಹಿಜಾಬ್‌ ಧರಿಸುವುದನ್ನು ವಿರೋಧಿಸುವ ಮೂಲಕ ಹುಟ್ಟಿ ಹಾಕಲಾದ ದ್ವೇಷ, ಮುಸ್ಲಿಮರ ವ್ಯಾಪಾರಕ್ಕೆ ನಿಷೇಧ, ಹಲಾಲ್‌ ಕಟ್‌ಗೆ ಬದಲಾಗಿ ಜಟ್ಕಾ ಕಟ್‌, ಆಜಾನ್‌ಗೆ ವಿರುದ್ಧವಾಗಿ ಹನುಮಾನ್‌ ಚಾಲೀಸ್‌ ಹೀಗೆ ಮುಂದುವರಿಯುತ್ತಲೇ ಇದೆ. ಇದಕ್ಕೆ ಅಡಿಗಲ್ಲು ಹಾಕಿದ್ದು ಉಡುಪಿ ಎಂಬ ಅಳುಕು ಎಲ್ಲ ಜೀವಪರರ ಎದೆಗೊತ್ತಿದ್ದ ಮುಳ್ಳಿನಂತೆ ಭಾಸವಾಗಿತ್ತು. ಆದರೆ ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನು ಉಳಿಸಿಕೊಳ್ಳಲು ಉಡುಪಿಯಲ್ಲಿ ಶನಿವಾರ ಜರುಗಿದ ‘ಸಾಮರಸ್ಯ ನಡಿಗೆ ಹಾಗೂ ಸಹಬಾಳ್ವೆ ಸಮಾವೇಶ’ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಉಡುಪಿಯ ಅಜ್ಜರ ಕಾಡು- ಹುತಾತ್ಮರ ಚೌಕದಿಂದ ಹೊರಟ ಸಾಮರಸ್ಯ ನಡಿಗೆ ಸುಮಾರು ಮೂರು ಕಿಮೀಯಷ್ಟು ದೂರ ಕ್ರಮಿಸಿ ಕ್ರಿಶ್ಚಿಯನ್‌ ಶಾಲೆ ಮೈದಾನವನ್ನು ಸೇರಿತು. ಉಡುಪಿಯ ಜನತೆ ಹಾಗೂ ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ವಿವಿಧ ಬಣ್ಣದ ಬಾವುಟಗಳನ್ನು ಪ್ರದರ್ಶಿಸಿ ಬಹುತ್ವವನ್ನು ಸಾರಲಾಯಿತು. ರಾಷ್ಟ್ರಪಿತ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ಸ್ವಾಮಿ ವಿವೇಕಾನಂದ, ಬಸವಣ್ಣ, ನಾರಾಯಣಗುರು, ಹಾಜಿ ಅಬ್ದುಲ್ಲಾ ಮೊದಲಾದವರ ಸ್ಥಬ್ಧ ಚಿತ್ರಗಳು ಮುಂದೆ ಸಾಗಿದವು. ದಫ್‌ ನೃತ್ಯ, ಹುಲಿವೇಷದ ನೃತ್ಯ, ಚಂಡೆ, ನಾಸಿಕ್‌ ಬ್ಯಾಂಡ್‌, ಕೊರವ ನೃತ್ಯ ಸೇರಿದಂತೆ ತುಳುನಾಡ ಪರಂಪರೆ ದಾರಿಯುದ್ಧಕ್ಕೂ ಪ್ರದರ್ಶನವಾಯಿತು.

ಸಾಮರಸ್ಯ ಸಾರಿದ ವೇದಿಕೆ ಕಾರ್ಯಕ್ರಮ

ಸಹಬಾಳ್ವೆ ಸಮಾವೇಶದ ಸಂಚಾಲಕ ಸಮಿತಿಯ ಯಾಸಿನ್‌ ಮಲ್ಪೆ ವೇದಿಕೆ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು.

“ಉಡುಪಿ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಅಹಿತಕರ ಘಟನೆಗಳಿಗೆ ಸುದ್ದಿಯಾಗಿತ್ತು. ದ್ವೇಷ ಹಾಗೂ ನಂಜಿನ ಕಾರಣಕ್ಕೆ ಚರ್ಚಿಸಲ್ಪಟ್ಟಿತು. ಇದು ಜಗತ್ತಿಗೆ ಕೇಳುವಂತೆ ಸಹಬಾಳ್ವೆ ಸಾಮರಸ್ಯವನ್ನು ಮಾಡುತ್ತಿರುವುದು ಸುಂದರ ಮುಂಜಾವಿನ ಸಂಕೇತ” ಎಂದು ಬಣ್ಣಿಸಿದರು.

ದೇಶವು ಅಭಿವೃದ್ಧಿ ಹಾಗೂ ಶಾಂತಿಯಿಂದ ಇರಬೇಕೆಂದರೆ ಸಹಬಾಳ್ವೆ ಅಗತ್ಯ. ನಮ್ಮ ಮೇಲೆ ಯಾರು ದಾಳಿ ಮಾಡಬೇಕಾಗಿಲ್ಲ. ನಮ್ಮ ದೇಶದ ನಾಶಕ್ಕೆ ನಾವೇ ಕಾರಣವಾಗುತ್ತಿದ್ದೇವೆ. ಈ ದೇಶದ ಸಂಪತ್ತು ನಾಶ ಮಾಡುತ್ತಿರುವುದು ಹೊರಗಿನವರಲ್ಲ. ಇದೇ ದೇಶದವರು. ನಮ್ಮಲ್ಲಿನ ಮತಾಂಧತೆಯೇ ಇದಕ್ಕೆ ಕಾರಣ. ಜಾತಿ, ಮತಗಳ ಆಧಾರದಲ್ಲಿ ವಿಭಜಿಸುವವರನ್ನು ದಿಟ್ಟವಾಗಿ ಎದುರಿಸಬೇಕಾಗಿದೆ. ಈ ದೇಶದ ಇತಿಹಾಸ ಕೂಡಿ ಬಾಳುವ ಇತಿಹಾಸವೇ ಹೊರತು ದ್ವೇಷದ ಇತಿಹಾಸವಲ್ಲ. ಒಂದುಗೂಡಿ ಕಟ್ಟಿದ ದೇಶ ನಮ್ಮದು ಎಂದರು.

ಜಾತಿ ಧರ್ಮಗಳ ಸಂಕುಚಿತ ದೃಷ್ಟಿಯಿಂದ ಹೊರಬನ್ನಿ ಎಂದರು ಕುವೆಂಪು. ಇವನಾವರ ಎನ್ನದೆ ಇವ ನಮ್ಮವ ಎಂಬ ಸಂದೇಶವನ್ನು ಸಾರಿದ್ದು ಬಸವಾದಿ ಶರಣರು ಎಂದು ಸ್ಮರಿಸಿದ ಅವರು, ಉಡುಪಿಯನ್ನು ಕಟ್ಟಿದ ಪೈಗಳು, ನಾರಾಯಣಗುರುಗಳು, ವಡ್ಡರ್ಸೆ ರಘುರಾಮ ಶೆಟ್ಟರು, ಕ್ರೈಸ್ತ ಶಾಲೆಗಳು, ಉಡುಪಿಯ ಹಾಜಿ ಅಬ್ದುಲ್ಲಾ ಸಾಹೇಬರ ಕೊಡುಗೆ ಮೊದಲಾದವುಗಳನ್ನು ನೆನೆದರು.

ಇದು ಕೊನೆಯ ಸಮಾವೇಶವಲ್ಲ, ಆರಂಭವಷ್ಟೇ. ಮುಂದಿನ ತಿಂಗಳುಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಸಮಾವೇಶವನ್ನು ಯೋಜಿಸಲು ಚಿಂತಿಸಲಾಗಿದೆ. ಬೆಂಕಿ ಹಚ್ಚುವ, ರಕ್ತ ಹರಿಸುವ ಮಾತು ಕೇಳಿದ್ದು ತುಂಬಾ ಆಯಿತು. ಇನ್ನಾದರೂ ಸಾಮರಸ್ಯ ಬೆಸೆಯುವ ಚರ್ಚೆ ಆರಂಭಿಸದೆ ಹೋದರೆ ದೇಶ ವಿನಾಶದ ಹಾದಿಗೆ ಹೊರಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಹಬಾಳ್ವೆ ಸಮಾವೇಶದ ಸಂಚಾಲಕ ಸಮಿತಿಯ ಕೆ.ಎಲ್‌.ಅಶೋಕ್‌ ಮಾತನಾಡಿ, “ವೈವಿಧ್ಯತೆ ಅನಾವರಣವಾಗಿದೆ.  ಒಂದು ಭಾಷೆ, ಒಂದು ಧರ್ಮ ಶ್ರೇಷ್ಠ ಎಂಬುದೆಲ್ಲ ಇಲ್ಲ. ಸಹಬಾಳ್ವೆ ಪ್ರಕೃತಿಯ ತತ್ವ. ಯಾರನ್ನೂ ದ್ವೇಷಿಸಬಾರದು. ನಾವೆಲ್ಲ ಒಂದಾಗಿದ್ದೇವೆ. ಮನುಷ್ಯಜಾತಿ ತಾನೊಂದೇ ವಲಂ ಎಂದು ಆದಿಕವಿ ಪಂಪ ಸಾರಿದರೆ ವಿಶ್ವಮಾನವತೆಯನ್ನು ಆಧುನಿಕ ಕವಿ ಕುವೆಂಪು ಸಾರಿದ್ದಾರೆ. ಹೀಗೆ ನಮ್ಮ ಸಾಹಿತ್ಯದಲ್ಲಿ ಸಹಬಾಳ್ವೆ ಸಂದೇಶ ಬೆಳೆದುಬಂದಿದೆ” ಎಂದರು.

‘ಮನುಷ್ಯ ಜಾತಿ ತಾನೊಂದೆ ವಲಂ’ ಅನಾವರಣ

“ಮನುಷ್ಯ ಜಾತಿ ತಾನೊಂದೇ ವಲಂ” ಸಂದೇಶವನ್ನು ಸಾರುವ ಮೂಲಕ ವೇದಿಕೆ ಕಾರ್ಯಕ್ರಮವನ್ನು ವಿನೂತನವಾಗಿ ಉದ್ಘಾಟಿಸಲಾಯಿತು. ಮುಖಂಡರಾದ ಬಾಲಕೃಷ್ಣ ಶೆಟ್ಟಿಯವರು ಉದ್ಘಾಟನೆಯ ನಿರೂಪಣೆ ಮಾಡಿದರು.

ಬಾಲ್ಕಿಯ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ಮಾತನಾಡಿ, “ಬಸವಣ್ಣನವರರನ್ನು ಕೇಳಿದ್ದೇವೆ, ಓದಿದ್ದೇವೆ. ಅನುಭವ ಮಂಟಪವೇ ಇಡೀ ಉಡುಪಿಗೆ ಬಂದಂತೆ ಭಾಸವಾಗುತ್ತಿದೆ. ಎಲ್ಲ ಜಾತಿ, ಧರ್ಮದ ಜನರು ಇಲ್ಲಿಗೆ ಬಂದಿದ್ದಾರೆ” ಎಂದು ವರ್ಣಿಸಿದರು.

“ಒಂದನ್ನೊಂದು ಬೆಸೆಯುವ ಕೆಲಸವನ್ನು ಧರ್ಮ ಮಾಡುತ್ತದೆ. ಬಸವಣ್ಣನವರು ಧರ್ಮವನ್ನು ಪ್ರೀತಿ, ಸಾಮರಸ್ಯದಿಂದ ಕಟ್ಟಿದರು. ಭಾರತಕ್ಕೆ ಗೌರವ ಬಂದಿದ್ದು ಬುದ್ಧ, ಬಸವ, ಅಂಬೇಡ್ಕರ್‌, ಯೇಸು,  ಅಲ್ಲಾ, ಗುರುನಾನಕರ ತತ್ವಗಳಿಂದ. ಒಂದು ಕುಟುಂಬದೊಳಗೆ ಸಾಮರಸ್ಯ  ಪ್ರೀತಿ ಇದ್ದರೆ ಮಾತ್ರ ಆ ಕುಟುಂಬಕ್ಕೆ ಏಳಿಗೆಯಾಗುತ್ತದೆ. ಭಾರತವೊಂದು ಕುಟುಂಬದಂತೆ ಇರಬೇಕು. ಬಸವಣ್ಣನವರು ಎಲ್ಲ ಜನವರ್ಗವನ್ನು ಪ್ರೀತಿಸಿದರು. ಎಲ್ಲರನ್ನೂ ಮೆಚ್ಚಿಕೊಂಡಾಗ ದೇವರು ಮೆಚ್ಚುತ್ತಾನೆ” ಎಂದು ಸ್ವಾಮೀಜಿ ಹೇಳಿದರು.

ಉಡುಪಿಯ ಝೈನುಲ್‌ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್‌ ಮಾಣಿ ಮಾತನಾಡಿ, “ಈ ಸಭೆಯ ಬಗ್ಗೆ ತಂಬಾ ಖುಷಿ ಇದೆ. ಭಾರತೀಯ ಎಂಬುದಕ್ಕೆ ಬಹಳ ಹೆಮ್ಮೆ ಇದೆ. ನಾನು ತುಂಬಾ ದೇಶಗಳನ್ನು ಸುತ್ತಿದ್ದೇನೆ. ಆದರೆ ಭಾರತದಂತಹ ದೇಶವನ್ನು ನಾನು ಎಂದಿಗೂ ನೋಡಿಲ್ಲ. ಇದು ನಮಗೆ ಸೃಷ್ಟಿಕರ್ತ ನೀಡಿದ ಅನುಗ್ರಹ” ಎಂದರು.

ಪುತ್ತೂರು ಮಲಂಕರ ಕ್ಯಾಥೋಲಿಕ್‌ ಚರ್ಚ್ ಬಿಷಬ್‌ ಅ.ವಂ. ಜೀ ವರ್ಗೀಸ್‌ ಮಾರ್‌ ಮಕರಿಯೋಸ್‌ ಮಾತನಾಡಿ,  “ಏಸು ಕ್ರಿಸ್ತರು ಕೊಟ್ಟಿರುವ ಸಂದೇಶವನ್ನು ಸಾರುತ್ತಾ ಶಾಂತಿ, ಸಾಮರಸ್ಯದ ಕೆಲಸ ಮಾಡುತ್ತಿದ್ದೇವೆ. ನೀನು ನಿನ್ನ ದೇವರನ್ನು, ಪೂರ್ಣ ಆತ್ಮದಿಂದ, ಪೂರ್ಣ ಮನಸ್ಸು ಮತ್ತು ಹೃದಯದಿಂದ ಪ್ರೀತಿಸು ಎಂದು ಧರ್ಮ ಹೇಳುತ್ತದೆ. ನೆರೆಹೊರೆಯವರನ್ನು ಪ್ರೀತಿಸು ಎನ್ನುತ್ತದೆ. ಕ್ರೈಸ್ತ ಧರ್ಮೀಯರು ಈ ನೆಲೆಯಲ್ಲಿ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ನಾವೆಲ್ಲರೂ ಸಮಭಾವನೆ, ಸಮಬಾಳ್ವೆ ಸಂದೇಶದಲ್ಲಿ ಸಾಗುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿನ ವಿಚಾರಧಾರೆ ಇಡೀ ಭಾರತದ ಮೂಲೆ ಮೂಲೆಗೂ ತಲುಪಲಿ” ಎಂದು ಆಶಿಸಿದರು.

ಸೆಕ್ಯುಲರಿಸಂ ಭಾರತದಲ್ಲೇ ಹುಟ್ಟಿ ಬೆಳೆದದ್ದೇ ಹೊರತು ಹೊರಗಿನದ್ದಲ್ಲ: ಯೋಗೇಂದ್ರ ಯಾದವ್‌

ರೈತ ನಾಯಕ, ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್‌ ಮಾತುಗಳು ಇಂದಿನ ಸನ್ನವೇಶಕ್ಕೆ ಕನ್ನಡಿ ಹಿಡಿದವು.

“ನನಗೆ ಕನ್ನಡ ಬರದಿದ್ದರೂ ನೀವು ಹೇಳುತ್ತಿರುವುದು ಅರ್ಥವಾಗುತ್ತಿದೆ. ಯಾಕೆಂದರೆ ಅದು ಹೃದಯದ ಭಾಷೆಯಾಗಿದೆ” ಎಂದು ಮಾತು ಆರಂಭಿಸಿದರು.

“ಅವರು ಒಡೆಯುತ್ತಾರೆ, ನಾವು ಕೂಡಿಸುತ್ತೇವೆ. ಒಂದು ಸಮುದಾಯವನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಲು ಯತ್ನಿಸುತ್ತಾರೆ. ಹಿಂದಿ ರಾಷ್ಟ್ರ ಭಾಷೆ ಎಂದು ಕೆಲವರು ಹೇಳುತ್ತಾರೆ. ಯಾವುದೇ ಭಾಷೆ ರಾಷ್ಟ್ರೀಯ ಭಾಷೆ ಎಂದು ಸಂವಿಧಾನ ಹೇಳಿಲ್ಲ. ಕನ್ನಡ  ಭಾಷೆಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದ್ದರೆ, ಹಿಂದಿ ನಾಲ್ಕು ನೂರು ವರ್ಷ ಹಳೆಯದ್ದಷ್ಟೇ” ಎಂದು ತಿಳಿಸಿದರು.

“ಉಡುಪಿಯಲ್ಲಿ ಘೋಷಿಸುತ್ತೇವೆ. ಯಾರ್‍ಯಾರ ಪೂರ್ವಿಕರ ರಕ್ತ ಇಲ್ಲಿದೆಯೋ ಅವರೆಲ್ಲರೂ ಈ ದೇಶದ ಮಾಲೀಕರೇ ಹೊರತು ಗುಲಾಮರಲ್ಲ. ಸಂವಿಧಾನದಲ್ಲಿ ಸೆಕ್ಯುಲರಿಸಂ ಮೊದಲು ಇರಲಿಲ್ಲ, ಆಮೇಲೆ ಸೇರಿಸಲಾಯಿತು ಎನ್ನುತ್ತಾರೆ. ಆದರೆ ಸಂವಿಧಾನದಲ್ಲಿ ಸೆಕ್ಯುಲರಿಸಂ ಮೊದಲೇ ಇತ್ತು. ಸಂವಿಧಾನದ ಹಲವು ವಿಧಿಗಳು ಜಾತ್ಯತೀತತೆಯನ್ನು ಸಾರಿವೆ” ಎಂದು ವಿವರಿಸಿದರು.

“ಗೌತಮ ಬುದ್ಧ, ಅಕ್ಬರ್‌ ಮೈತ್ರಿ ಬಗ್ಗೆ ಹೇಳುತ್ತಾರೆ. ಸೆಕ್ಯುಲರಿಂ ಬ್ರಿಟಿಷರ ಕೊಡುಗೆ ಅಲ್ಲ. ಐದು ಸಾವಿರ ವರ್ಷಗಳಿಂದ ಈ ದೇಶ ಹೀಗೆಯೇ ನಡೆಯುತ್ತಿದೆ. ಮುಂಚೆಯೂ ದೇಶ ಹೀಗೆಯೇ ಇತ್ತು, ಮುಂದೆಯೂ ಇರುತ್ತದೆ. ಎಲ್ಲರನ್ನೂ ಗೌರವಿಸುವ, ಒಟ್ಟಿಗೆ ಕರೆದೊಯ್ಯುವುದು ಈ ದೇಶದ ಧರ್ಮ” ಎಂದು ವರ್ಣಿಸಿದರು.

“ದೇಶದ್ರೋಹದ ಬಗ್ಗೆ ಮಾತನಾಡುತ್ತಾರೆ. ಅವರೇ ದೇಶದ್ರೋಹದ ಸರ್ಟಿಫಿಕೇಟ್ ಕೊಡುತ್ತಾರೆ. ನಾನು ಒಂದೇ ಸರ್ಟಿಫಿಕೇಟ್‌ ಕೊಡುತ್ತೇನೆ. ಈ ದೇಶವನ್ನು ಯಾರು ಕಟ್ಟುತ್ತಾರೋ ಅವರು ದೇಶಪ್ರೇಮಿಗಳು. ಹಿಂದೂ, ಮುಸ್ಲಿಂ, ಹಿಂದೂ ಸಿಖ್ಖರ ನಡುವೆ ಜಗಳ ತರುವವರು ದೇಶದ್ರೋಹಿಗಳು. ಹಿಂದೂಸ್ಥಾನದ ಮೇಲೆ, ಸಂವಿಧಾನದ ಮೇಲೆ ಬುಲ್ಡೋಜರ್‌ ಚಲಾಯಿಸಲಾಗುತ್ತಿದೆ. ಈ ದೇಶದ ಬುನಾದಿಯನ್ನು ಉಳಿಸಲು ಯತ್ನಿಸುವವರು ದೇಶಪ್ರೇಮಿಗಳು” ಎಂದರು.

“ಬುಲ್ಡೋಜರ್‌ ಚಲಾವಣೆ ಮಾಡುತ್ತಿರುವವರ ಕೈಲಿ ಮಿಡಿಯಾ ಇದೆ. ಒಳ್ಳೆಯ ಮಿಡಿಯಾ ಆಗಿದ್ದರೆ ಉಡುಪಿ ಸಮಾವೇಶ ಕುರಿತು ಹೆಚ್ಚು ವರದಿ ಮಾಡುತ್ತದೆ. ಬುಲ್ಡೋಜರ್‌ ಚಲಾವಣೆ ಮಾಡುವವರ ಕೈಲಿ ಮಾಧ್ಯಮಗಳ ಕುತ್ತಿಗೆ ಪಟ್ಟಿ ಇದೆ. ಅವರ ಕೈಲಿ ಪೊಲೀಸರ ಲಾಠೀ ಇದೆ. ನಮ್ಮ ಕೈಯಲ್ಲಿ ಏನಿದೆ- ಬುದ್ಧ ಚಿಂತನೆ, ಸೂಪಿಗಳ ಸಂದೇಶ ಹಾಗೂ ಈ ದೇಶದ ಮಣ್ಣು ನಮ್ಮ ಬಳಿ ಇದೆ” ಎಂದು ಮಾರ್ಮಿಕವಾಗಿ ಹೇಳಿದರು.

ಜನ್ನಿ ಗಾಯನ

ಹೋರಾಟಗಾರ ಜನಾರ್ದನ್‌ (ಜೆನ್ನಿ) ಅವರು ಹುಲಿಕುಂಟೆ ಮೂರ್ತಿ ರಚಿಸಿರುವ ‘ಸಹಬಾಳ್ವೆ- ಸಾಮರಸ್ಯ ನಮ್ಮ ನೆಲದ ಅಂತಸತ್ವ ’ ಹಾಡನ್ನು ಹಾಡಿದರು.

ಮೈಸೂರು ಬಸವ ಜ್ಞಾನ ಮಂದಿರದ ಡಾ.ಮಾತೆ ಬಸವಾಂಜಲಿ ದೇವಿ ಮಾತನಾಡಿ, ‘ಯಾವುದೇ ಮನುಷ್ಯನ ಮೈಯಲ್ಲಿ ಹರಿಯುತ್ತಿರುವುದು ಕೆಂಪು ರಕ್ತ. ಯಾರೂ ಭೇದ ಮಾಡಬಾರದು. ಆದರೆ ಮನುಷ್ಯ ಮನುಷ್ಯನನ್ನು ಕೊಲ್ಲುತ್ತಿದ್ದಾನೆ. ಅಸತ್ಯದ ವಿರುದ್ಧ ನಿಂತು ಹೋರಾಡಬೇಕಾಗಿದೆ” ಎಂದು ಗುಡುಗಿದರು.

ಕೊಲ್ಲುವುದಾಗಿ ಪತ್ರ ಬರೆದಿದ್ದಾರೆ: ಬಸವ ಪ್ರಕಾಶ ಸ್ವಾಮೀಜಿ

ಬೆಳಗಾವಿಯ ಬಸವ ಧರ್ಮ ಪೀಠದ ಬಸವ ಪ್ರಕಾಶ ಸ್ವಾಮೀಜಿ ಮಾತನಾಡಿ, “ತಮಗೆ ಕೊಲೆ ಬೆದರಿಕೆ ಬಂದಿವೆ” ಎಂದು ತಿಳಿಸಿದರು.

“ನಮಗೆ ಹಿಂದುತ್ವ ಬೇಕಾಗಿಲ್ಲ. ಸರ್ವಜನಾಂಗದ ಶಾಂತಿಯ ತೋಟ ಬೇಕಾಗಿದೆ.  ನನ್ನ ಮಠಕ್ಕೂ ಪತ್ರ ಬಂದಿವೆ. ಸಂವಿಧಾನ ಎಂದು ಹೇಳುತ್ತಾ ಓಡಾಡುತ್ತಿದ್ದೀರಾ. ಗುಂಡಿಗೆ ಬಲಿಯಾಗುತ್ತೀರಿ ಎಂದು ಬರೆದಿದ್ದಾರೆ. ಭಾರತದ ಸಂವಿಧಾನದ ಇರುವಾಗ ಯಾವುದೇ ಭಯವಿಲ್ಲ” ಎಂದು ಪ್ರತಿಕ್ರಿಯೆ ನೀಡಿದರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಎಲ್ಲರ ಧರ್ಮಾಚರಣೆಗೂ ಅವಕಾಶ ಕಲ್ಪಿಸಿದ್ದಾರೆ. ಹಿಂದೂ ಎಂಬ ಶಬ್ಧದಿಂದ ಬಡಿದಾಡೋದು ಬೇಡ, ನಾವೆಲ್ಲ ಒಂದೇ ಎಂದು ಸಾಗೋಣ. ಸಮಾನತೆ, ಸಮನ್ವಯತೆಯ ತತ್ವದಲ್ಲಿ ಬದುಕೋಣ ಎಂದು ಆಶಿಸಿದರು.

“ದೇವನೊಬ್ಬ ನಾಮ ಹಲವು ಎಂದಿರುವ ದೇಶ ಎಂದಿರುವ ದೇಶ ನಮ್ಮದು. ನಮಗೆ ಹಿಂದುತ್ವ ಬೇಕಾಗಿಲ್ಲ. ಮಾನವ ಬಂಧುತ್ವ ಬೇಕಾಗಿದೆ.  ನಮ್ಮ ಗುರಿಯೊಂದೇ ಆಗಿರಬೇಕು. ಹಿಂದೂ, ಮುಸ್ಲಿಂ, ಲಿಂಗಾಯತ ಎಂಬುದನ್ನೆಲ್ಲ ಮಂದಿರ, ಮಸೀದಿ, ಮಠದಲ್ಲಿ ಬಿಟ್ಟು ಬರೋಣ. ನಾವು ಭಾರತೀಯರಾಗಿ ನಡೆಯೋಣ” ಎಂದು ತಿಳಿಸಿದರು.

ಡಾ.ಎಂ.ಎಸ್.ಎಂ.ಅಬ್ದುಲ್‌ ರಶೀದ್ ಸಖಾಫಿ ಝೈನಿ ಕಾಮಿಲ್‌ ಮಾತನಾಡಿ, “ಇದೊಂದು ಪುಟ್ಟ ಭಾರತ. ಎಲ್ಲ ಜಾತಿ, ಜನಾಂಗದ ಒಟ್ಟಾಗಿ ಸೇರಿ ಬದುಕಿದರೆ ಹೇಗಿರಬಹುದು ಎಂಬುದಕ್ಕೆ ಉದಾಹರಣೆಯಾಗಿ ಈ ಕಾರ್ಯಕ್ರಮ ಕಾಣುತ್ತಿದೆ. ಈ ಕಾರ್ಯಕ್ರಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಬೇಕು. ಆಡಳಿತ ಶಕ್ತಿಯಾಗಿ ಸಹಬಾಳ್ವೆ ಬೆಳೆಯಬೇಕು” ಎಂದು ಒತ್ತಾಯಿಸಿದರು.

ರೆವರೆಂಡ್ ಡಾ.ಹಬರ್ಟ್ ಎಂ. ವಾಟ್ಸನ್‌ , ಸಹಬಾಳ್ವೆಯ ಕುರಿತು ಸಂದೇಶ ಸಾರಿದರು. ಮೌಲಾನ ಯುಕೆ ಅಬ್ದುಲ್‌ ಅಝೀಜ್‌ ದಾರಿಮಿ ಚೊಕ್ಕಬೆಟ್ಟ ಮಾತನಾಡಿ, “ಕಡಲು ಹೆಣವನ್ನು ಎತ್ತಿ ಬಿಸಾಕಿದಂತೆ ದ್ವೇಷವನ್ನು ಈ ಸಮಾವೇಶ ಎತ್ತಿ ಬಿಸಾಕಿದೆ” ಎಂದು ಅಭಿಪ್ರಾಯಪಟ್ಟರು.

ಉಡುಪಿ ಧರ್ಮಪ್ರಾಂತ ಸಾರ್ವಜನಿಕ ಸಂಪರ್ಕಾಧಿಕಾರಿ ಫಾದರ್‌ ಚೇತನ್‌ ಲೋಬೋ ಮಾತನಾಡಿ, “ಟೀಕಾಕಾರರ ಮುಂದೆ ಆಕಾಶದೆತ್ತರಕ್ಕೆ ಬೆಳೆದಿದ್ದೇವೆ. ಉಡುಪಿಗೆ ಬಂದಿದ್ದ ಕುಖ್ಯಾತಿಯನ್ನು ಕಿತ್ತೆಸೆಯಲಾಗಿದೆ” ಎಂದು ಘೋಷಿಸಿದರು.

ನಿನ್ನ ದೇವರು, ಧರ್ಮ ಅಶಾಂತಿ ತರುವುದಾದರೆ ಅದನ್ನು ಬಿಟ್ಟು ಬಿಡು. ನಿನಗೊಂದು ಹೊಸಧರ್ಮ, ಹೊಸ ದೇವರ ಅಗತ್ಯವಿದೆ. ಯಾವುದೇ ಧರ್ಮ ದ್ವೇಷವನ್ನು ಕಲಿಸುವುದಿಲ್ಲ. ಮನುಷ್ಯ ತಪ್ಪಾಗಿ ಧರ್ಮವನ್ನು ಅರ್ಥ ಮಾಡಿಕೊಂಡಿದ್ದಾನೆ. ಮೌನವಾಗಿರುವುದು ಅಪಾಯಕಾರಿ. ಪ್ರತಿಯೊಬ್ಬರೂ ತುಟಿಬಿಚ್ಚಿ ಮಾತನಾಡಬೇಕು ಎಂದು ಆಗ್ರಹಿಸಿದರು. ಮಣಿಪಾಲ ಗುರುದ್ವಾರದ ಜ್ಞಾನಿ ಬಲರಾಜ್‌ ಸಿಂಗ್‌ ಧರ್ಮ ಸಂದೇಶ ನೀಡಿದರು.

ಮೇಲು ಕೀಳಿನ ಮನಸ್ಥಿತಿಯೇ ದೇಶ ವಿರೋಧಿ: ಸಸಿಕಾಂತ್ ಸೆಂಥಿಲ್‌

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಐಎಸ್‌ಐ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌, “ನಾನು ತಮಿಳಿಗ. ಆದರೆ ಕನ್ನಡ ಕಲಿತು ಮಾತನಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಇಂದು ಮಾತನಾಡುತ್ತಿದ್ದೇನೆ. ಇದು ಭಾರತ” ಎಂದು ಮಾತು ಆರಂಭಿಸಿ ಹಲವಾರು ಒಳನೋಟಗಳನ್ನು ಹಂಚಿಕೊಂಡರು.

“ಇಂದು ನೋಡುತ್ತಿರುವುದು ಧರ್ಮಗಳ ಸಮಸ್ಯೆಯನ್ನಲ್ಲ. ಅದು ಮೇಲು ಕೀಳು ಎಂಬ ಮನಸ್ಥಿತಿಯ ಸಮಸ್ಯೆ. ಇದು ಎಲ್ಲ ಧರ್ಮದಲ್ಲೂ ಇದೆ. ಪೊಲೀಸ್, ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಈ ಮನಸ್ಥಿತಿ ಇದೆ. ಇದರ ವಿರುದ್ಧ ಹೋರಾಟ ಮಾಡಬೇಕು. ಈ ಮನಸ್ಥಿತಿಯು ಭಾರತೀಯತೆಗೆ ವಿರುದ್ಧವಾದದ್ದು. ಈ ಸಮಸ್ಯೆಯು ಭಾರತವನ್ನು ನಂಬದೆ ಇರುವವರಿಂದ ಹುಟ್ಟಿದೆ” ಎಂದು ವಿಶ್ಲೇಷಿಸಿದರು.

“ಈ ಮನಸ್ಥಿತಿಯ ಜನರು ಕೇವಲ ಹತ್ತು ಪರ್ಸೆಂಟ್ ಇದ್ದಾರೆ. ಆದರೆ ದ್ವೇಷವನ್ನು ತಮ್ಮ ಆಸ್ತಿ ಎಂದು ಅವರು ಭಾವಿಸಿದ್ದಾರೆ. ಅದರ ವಿರುದ್ಧ ದನಿ ಎತ್ತಬೇಕಾಗಿದೆ” ಎಂದು ತಿಳಿಸಿದರು.

“ನಿಜವಾದ ಭಾರತವನ್ನು ಆಚರಣೆ ಮಾಡುವುದನ್ನು ನಾವು ಮರೆತಿದ್ದೇವೆ. ನಾವು ಇನ್ನು ಮುಂದೆ ಆಚರಣೆ ಮಾಡಬೇಕಾಗಿದೆ. ಈ ಆಚರಣೆ ಇಲ್ಲಿಂದ ಶುರುವಾಗಬೇಕಿದೆ. ಈ ಸಹೋದರತ್ವ, ಬಂಧುತ್ವವನ್ನು ಆಚರಿಸಬೇಕಿದೆ” ಎಂದು ಆಶಿಸಿದರು.

“ದ್ವೇಷ‘- ಹರಡುವವರ ಸಮಸ್ಯೆಯಲ್ಲ, ಅದನ್ನು ನೋಡಿಕೊಂಡು ಸುಮ್ಮನಿರುವುದು ಸಮಸ್ಯೆಯಾಗಿದೆ. ಎಲ್ಲರೂ ಒಳ್ಳೆಯವರೇ  ಆದರೆ ಮಾತನಾಡುತ್ತಿಲ್ಲ. ನಮ್ಮನ್ನು ಎಲ್ಲಿ ಸಿಕ್ಕಿ ಹಾಕಿಸುತ್ತಾರೊ ಎಂಬ ಭಯ. ಹಿಂದೂ ಮುಸ್ಲಿಂ ಸಮಸ್ಯೆ ಎನ್ನುತ್ತಿರುವುದರಿಂದ ಮೌನವಾಗಿದ್ದಾರೆ. ಭಾರತೀಯರು ಮತ್ತು ಭಾರತವನ್ನು ಒಪ್ಪದೆ ಇರುವವರ ಸಮಸ್ಯೆ ಎಂದು ಮಾತನಾಡಬೇಕು. ಅದು ನಿಜವಾದ ಪ್ರತಿಪಾದನೆ” ಎಂದು ತಿಳಿಸಿದರು.

“ಭಾರತವನ್ನು ನಂಬದೆ ಇರುವವರು ಕೇವಲ ಹತ್ತು ಪರ್ಸೆಂಟ್‌ ಮಾತ್ರ ಇದ್ದಾರೆ. ಭಾರತವನ್ನು ನಂಬುವವರು ಮತ್ತು ನಂಬದಿರುವವರ ಸಮಸ್ಯೆ ಎಂದು ಮಾತನಾಡಬೇಕು. ಈ ಸಹೋದರತೆಯನ್ನು ಆಚರಣೆ ಮಾಡಬೇಕು. ಇದನ್ನು ಮಾಡದೆ ಇರುವುದರಿಂದ ನಾವು ಡಲ್ ಆಗಿದ್ದೇವೆ” ಎಂದು ಎಚ್ಚರಿಸಿದರು.

“ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವು ಮಾತನಾಡಬೇಕಿದೆ. ಇದು ಐತಿಹಾಸಿಕ ಸಮಾವೇಶ. ಯುವಶಕ್ತಿಯ ಮೂಲಕ ಇಲ್ಲಿನ ಆಶಯವನ್ನು ಹಳ್ಳಿಹಳ್ಳಿಗೆ ತಲುಪಿಸಬೇಕು” ಎಂದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...