ಭಾರತ ಸರ್ಕಾರ ಜಾರಿಗೆ ತಂದಿರುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂತೆಗೆದುಕೊಳ್ಳಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾಳೆ (ಡಿ.9) ಬೆಂಗಳೂರಿನಲ್ಲಿ ಬೆಳಿಗ್ಗೆ 11 ಗಂಟೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಆವರಣದಿಂದ ಹೊರಡುವ ಕಾಲ್ನಡಿಗೆ ಜಾಥಾ, ಸ್ವಾತಂತ್ರ್ಯ ಉದ್ಯಾನದವರೆಗೆ ಸಾಗಲಿದೆ. ಸಾವಿರಾರು ಕರವೇ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕರವೇ ಮಾಹಿತಿ ನೀಡಿದೆ.
ಪ್ರತಿಭಟನೆಯ ನಂತರ ಕರವೇ ಪ್ರತಿನಿಧಿಗಳ ನಿಯೋಗ, ರಾಜ್ಯಪಾಲರನ್ನು ಭೇಟಿ ಮಾಡಿ, ಅವರ ಮೂಲಕ ರಾಷ್ಟ್ರಪತಿಗಳಿಗೆ ಆಗ್ರಹ ಪತ್ರ ಸಲ್ಲಿಸಲಿದೆ. ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ, ಕರಾಳ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ನಿಯೋಗ ಒತ್ತಾಯಿಸಲಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ: ರೈತ ಇದ್ರೇನೆ ದೇಶ: ರೈತ ಹೋರಾಟಕ್ಕೆ ನಟ ಶಿವರಾಜ್‌ಕುಮಾರ್ ಬೆಂಬಲ
ದಿನಾಂಕ 9-12-2020ರಂದು ಬೆಳಿಗ್ಗೆ 11 ಗಂಟೆಗೆ ದೇಶದ ಅನ್ನದಾತ ರೈತರನ್ನು ಬೆಂಬಲಿಸಿ ಬೆಂಗಳೂರಿನ ಬಿಬಿಎಂಪಿ ಬಳಿಯ, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮುಂಭಾಗದಿಂದ ಫ್ರೀಂಡಂ ಪಾರ್ಕ್ ವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ#ರೈತರೊಂದಿಗೆ_ಕರವೇ#FarmersProtest pic.twitter.com/6rsWdccpLz
— ಕರವೇ (KRV) (@karave_KRV) December 8, 2020
ಭಾರತ ಒಕ್ಕೂಟ ಸರ್ಕಾರ ಅಸಾಂವಿಧಾನಿಕವಾಗಿ, ಜಾರಿಗೆ ತಂದಿರುವ ಮೂರು ಜನವಿರೋಧಿ, ಕಾರ್ಪೊರೇಟ್ ಸ್ನೇಹಿ ಮಸೂದೆಗಳನ್ನು ಹಿಂತೆಗೆದುಕೊಳ್ಳಲು ದೇಶದ ರೈತ ಸಮುದಾಯ ನಡೆಸುತ್ತಿರುವ ಐತಿಹಾಸಿಕ ಹೋರಾಟಕ್ಕೆ ಕರವೇ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಘೋಷಿಸಿದೆ.
ಪ್ರತಿಭಟನಾನಿರತ ರೈತರ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯ ಹಾಗು ಹೋರಾಟಕ್ಕೆ ಇಳಿದಿರುವ ರೈತರಿಗೆ ಭಯೋತ್ಪಾದಕರ ಹಣೆಪಟ್ಟಿ ಹಚ್ಚುತ್ತಿರುವ ದುಷ್ಟಶಕ್ತಿಗಳ ಕುತಂತ್ರವನ್ನು ಕರವೇ ಖಂಡಿಸುತ್ತದೆ. ರೈತರ ಹೋರಾಟಕ್ಕೆ ದೇಶದ ಪ್ರತಿಯೊಬ್ಬ ಪ್ರಜೆಯೂ ಬೆಂಬಲಿಸಿ, ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಕರವೇ ಒತ್ತಾಯಿಸುತ್ತದೆ ಎಂದು ಹೇಳಿದೆ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದಿನ ಭಾರತ್ ಬಂದ್ ಸಂದರ್ಭದಲ್ಲಿ, ರೈತ ಸಂಘಟನೆಗಳ ಜತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ನಾಳೆ ಕೂಡ ರಾಜ್ಯದ ಮೂವತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಆಗ್ರಹ ಪತ್ರ ಸಲ್ಲಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.


