ಲೈಂಗಿಕ ಉದ್ದೇಶವಿಲ್ಲದೆ ಮಗುವಿನ ಕೆನ್ನೆಗಳನ್ನು ಮುಟ್ಟಿದರೆ ಫೋಕ್ಸೋ ಕಾಯಿದೆಯಡಿ “ಲೈಂಗಿಕ ದೌರ್ಜನ್ಯ”ದ ಅಪರಾಧವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿದ್ದ 46 ವರ್ಷದ ವ್ಯಕ್ತಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
46 ವರ್ಷದ ಕೋಳಿ ಮಾರಾಟಗಾರ ಮೊಹಮ್ಮದ್ ಉಲ್ಲಾ ಅವರು ಕಳೆದ 13 ತಿಂಗಳಿನಿಂದ ಈ ಆರೋಪದಲ್ಲಿ ಜೈಲಿನಲ್ಲಿದ್ದರು. ಪ್ರಾಥಮಿಕ ದಾಖಲೆ ಪ್ರಕಾರ ಆರೋಪಿಯು ಲೈಂಗಿಕ ಉದ್ದೇಶದಿಂದ ಅಪ್ತಾಪ್ತೆಯ ಕೆನ್ನೆಯನ್ನು ಮುಟ್ಟಿರುವುದನ್ನು ಸೂಚಿಸಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸಂದೀಪ್ ಶಿಂಧೆ ಏಕ ಸದಸ್ಯ ಪೀಠ, “ನನ್ನ ಅಭಿಪ್ರಾಯದಲ್ಲಿ ಲೈಂಗಿಕ ಉದ್ದೇಶವಿಲ್ಲದೆ ಮಕ್ಕಳ ಕೆನ್ನೆಗಳನ್ನು ಮುಟ್ಟುವುದು ಲೈಂಗಿಕ ದೌರ್ಜನ್ಯದ ಅಪರಾಧವಾಗುವುದಿಲ್ಲ. ಪೋಕ್ಸೋ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ಈ ಬಗ್ಗೆ ವ್ಯಾಖ್ಯಾನಿಸಲಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: 18 ವರ್ಷದ ದಲಿತ ಯುವತಿ ಮೇಲೆ ಅತ್ಯಾಚಾರ, ಪ್ರಕರಣ ದಾಖಲು
“ಆದರೆ, ನ್ಯಾಯಾಲಯದ ಇಂದಿನ ಅಭಿಪ್ರಾಯ ಆರೋಪಿಯ ಜಾಮೀನಿಗಾಗಿ ಮಾತ್ರ ಎಂದು ಅರ್ಥೈಸಿಕೊಳ್ಳಬೇಕು. ಇತರ ವಿಷಯಗಳ ವಿಚಾರಣೆಯ ಮೇಲೆ ಇದು ಯಾವುದೇ ರೀತಿಯಲ್ಲಿ ಪ್ರಭಾವ ಬೀರುವುದಿಲ್ಲ” ಎಂದು ಹೇಳಿದ್ದಾರೆ.
ಠಾಣೆ ಜಿಲ್ಲೆಯ ರಾಬೋಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಕೋಳಿ ಮಾಂಸ ಮಾರಾಟಗಾರ ಮೊಹಮ್ಮದ್ ಉಲ್ಲಾ ತಮ್ಮ ಅಂಗಡಿಗೆ ಬಂದಿದ್ದ 8 ವರ್ಷದ ಬಾಲಕಿಯ ಕೆನ್ನೆ ಸವರಿದ್ದರೆಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಮಹಿಳೆಯೊಬ್ಬರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಉಲ್ಲಾನನ್ನು ಕಳೆದ ವರ್ಷ ಜುಲೈ 2020 ನಲ್ಲಿ ಬಂಧಿಸಿದ್ದ ಪೊಲೀಸರು ನವಿಮುಂಬೈನ ತಲೋಜಾ ಜೈಲಿನಲ್ಲಿರಿಸಿದ್ದರು.
ಈ ಹಿಂದೆ ಆರೋಪಿಯ ಜಾಮೀನು ಅರ್ಜಿಗಳನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ವಕೀಲ ರಾಮ್ ಪ್ರಸಾದ್ ಗುಪ್ತಾ ಆರೋಪಿಯ ಪರವಾಗಿ ಹಾಜರಾಗಿ, ವ್ಯಾಪಾರದ ಪೈಪೋಟಿಯ ಮೇಲೆ ಆರೋಪಿಯನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಅರ್ಜಿ ಸಲ್ಲಿಸಿದ್ದರು.
ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಪತಿ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ ಎಂದು ಛತ್ತೀಸಗಢ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ. ಛತ್ತೀಸಗಢ ಹೈಕೋರ್ಟ್ ತೀರ್ಪಿಗೆ ನಟಿ ತಾಪ್ಸಿ ಪನ್ನು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಹಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತುಮಕೂರು: ದನ ಮೇಯಿಸಲು ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರ, ಕೊಲೆ- ತನಿಖೆಗೆ ತಂಡ ರಚನೆ


