ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಬೆಂಗಾವಲು ವಾಹನದ ಮೇಲೆ ನಡೆದ ದಾಳಿಯ ಹಿನ್ನಲೆಯಲ್ಲಿ ಐಪಿಎಸ್ ಅಧಿಕಾರಿಗಳನ್ನು ವಿಚಾರಣೆಗೆ ಕಳುಹಿಸದ ಪಶ್ಚಿಮ ಬಂಗಾಳ ಸರ್ಕಾರದ ಕ್ರಮಕ್ಕೆ ಕೇಂದ್ರ ಗೃಹ ಸಚಿವಾಲಯ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಈ ವರ್ಗಾವಣೆಯನ್ನು ಕೇಂದ್ರದ ನಿರ್ದಯ ಹಸ್ತಕ್ಷೇಪ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದರು. ಈಗ ಮಮತಾ ಬ್ಯಾನರ್ಜಿ ಬೆಂಬಲಕ್ಕೆ ನಿಂತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೇಂದ್ರದ ಕ್ರಮವನ್ನು ಟೀಕಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನೇಮಕಗೊಂಡ ಮೂವರು ಐಪಿಎಸ್ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರವನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಂಗಾಳದಲ್ಲಿ ಕೇಂದ್ರದ ನಿರ್ದಯ ಹಸ್ತಕ್ಷೇಪವನ್ನು ಖಂಡಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ನಡ್ಡಾ ಕಾರಿಗೆ ಕಲ್ಲು ಪ್ರಕರಣ: 3 ಐಪಿಎಸ್ ಅಧಿಕಾರಿಗಳನ್ನು ಡೆಪ್ಯೂಟೇಷನ್ ಮಾಡಿದ ಕೇಂದ್ರ
I condemn the Centre’s blatant interference in the Bengal administration. Encroaching on the rights of states by attempting to transfer police officers to Centre just before elections, is an assault on federalism and an attempt to destabilize. https://t.co/sbxpZl0Nn2
— Arvind Kejriwal (@ArvindKejriwal) December 18, 2020
“ಪಶ್ಚಿಮ ಬಂಗಾಳದ ಆಡಳಿತದಲ್ಲಿ ಕೇಂದ್ರದ ನಿರ್ದಯ ಹಸ್ತಕ್ಷೇಪವನ್ನು ನಾನು ಖಂಡಿಸುತ್ತೇನೆ. ಚುನಾವಣೆ ಹತ್ತಿರುವಿರುವಾಗ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೇಂದ್ರಕ್ಕೆ ವರ್ಗಾಯಿಸಲು ಪ್ರಯತ್ನಿಸುವ ಮೂಲಕ ರಾಜ್ಯಗಳ ಹಕ್ಕುಗಳನ್ನು ಅತಿಕ್ರಮಿಸುತ್ತಿದೆ. ಈ ಮೂಲಕ ಒಕ್ಕೂಟ ವ್ಯವಸ್ಥೆ ಮೇಲೆ ಆಕ್ರಮಣ ಮಾಡಿ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದೆ” ಎಂದು ಟ್ವೀಟ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕಳ್ಳರ ಪಕ್ಷ, ಅವರಿಗಿಂತ ದೊಡ್ಡ ಕಳ್ಳರು ಎಲ್ಲೂ ಇಲ್ಲ- ಮಮತಾ ಬ್ಯಾನರ್ಜಿ ವಾಗ್ದಾಳಿ
ಟ್ವೀಟ್ ಜೊತೆಗೆ ಮಮತಾ ಬ್ಯಾನರ್ಜಿಯವರು ನಿನ್ನೆ ಕೇಂದ್ರದ ಕ್ರಮವನ್ನು ಟೀಕಿಸಿ ಮಾಡಿದ್ದ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದಾರೆ. ಈ ಮೂಲಕ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿರುವ ಗುದ್ದಾಟದಲ್ಲಿ ಮಮತಾ ಬ್ಯಾನರ್ಜಿ ಪರ ನಿಂತಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಬೆಂಗಾವಲು ವಾಹನದ ಮೇಲೆ ನಡೆದ ದಾಳಿಯ ಹಿನ್ನಲೆಯಲ್ಲಿ, ಪೊಲೀಸ್ ಮಹಾ ನಿರ್ದೇಶಕ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ವಿಚಾರಣೆಗೆ ಹಾಜರಾಗಬೇಕು ಎಂದು 2 ಬಾರಿ ನೋಟಿಸ್ ನೀಡಿತ್ತು. ಆದರೆ ಪಶ್ಚಿಮ ಬಂಗಾಳ ಸರ್ಕಾರ ಯಾರನ್ನೂ ವಿಚಾರಣೆಗಾಗಿ ಕಳುಹಿಸಿರಲಿಲ್ಲ. ನಾವು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಘಟನೆ ಕುರಿತು ವಿವರಣೆ ನೀಡಿದ್ದೇವೆ ಎಂದು ಹೇಳಿ ಸುಮ್ಮನಾಗಿತ್ತು. ಈ ಹಿನ್ನೆಲೆ ಕೇಂದ್ರ ಗೃಹ ಸಚಿವಾಲಯ ಈಗ ಮೂವರು ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ ಮಾಡಿ ಆದೇಶಿಸಿದೆ.
ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಸರ್ಕಾರ, ಕಳೆದ ಕೆಲವು ತಿಂಗಳಿನಿಂದ ಹಲವು ರ್‍ಯಾಲಿಗಳನ್ನು ಆಯೋಜಿಸುತ್ತಿದೆ. ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ಸಂಸದ ತೇಜಸ್ವಿ ಸೂರ್ಯ ಅನೇಕ ಸಾರ್ವಜನಿಕ ಸಭೆ, ರ್‍ಯಾಲಿಗಳನ್ನು ಆಯೋಜಿಸಿ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಟಿಎಂಸಿಯ ಮುಖಂಡರನ್ನು ತಮ್ಮ ಪಕ್ಷದತ್ತ ಸೆಳೆಯುತ್ತಾ ಆಪರೇಷನ್ ಕಮಲ ಶುರು ಮಾಡಿದೆ.
ಇದನ್ನೂ ಓದಿ: ಬಿಜೆಪಿ ನನ್ನ ಜೈಲಿಗೆ ಹಾಕಿದರೂ, ಅಲ್ಲಿಂದಲೇ ಪಕ್ಷವನ್ನು ಗೆಲ್ಲಿಸುವೆ-ಮಮತಾ ಬ್ಯಾನರ್ಜಿ


