HomeUncategorizedಶ್ರದ್ಧಾಂಜಲಿ; ಡಾ.ಸಿದ್ಧಲಿಂಗಯ್ಯ: ’ಮಾರ್ಗ ಪ್ರವರ್ತಕ ಕಾವ್ಯ'ದ ರೂವಾರಿ

ಶ್ರದ್ಧಾಂಜಲಿ; ಡಾ.ಸಿದ್ಧಲಿಂಗಯ್ಯ: ’ಮಾರ್ಗ ಪ್ರವರ್ತಕ ಕಾವ್ಯ’ದ ರೂವಾರಿ

- Advertisement -
- Advertisement -

2019ರ ನವೆಂಬರ್ ತಿಂಗಳ ಒಂದು ದಿನ. ನವೆಂಬರ್ ಎಂದರೆ ಸರ್ಕಾರಿ ಸಂಸ್ಥೆಗಳ ಕನ್ನಡ ಪುಸ್ತಕಗಳಿಗೆ ಅರ್ಧದಷ್ಟು ಡಿಸ್ಕೌಂಟ್ ಎಂದರ್ಥ. ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ’ಸಿರಿಗನ್ನಡ ಪುಸ್ತಕ ಮಳಿಗೆ’ಯಲ್ಲಿ ನನಗೆ ಅಗತ್ಯವಿರುವ ಪುಸ್ತಕಗಳ ಶೋಧಕಾರ್ಯದಲ್ಲಿ ಮುಳುಗಿದ್ದೆ. ಒಂದಿಷ್ಟು ಪುಸ್ತಕಗಳನ್ನು ಬುಟ್ಟಿಯಲ್ಲಿ ತುಂಬಿದೆ. ಅಷ್ಟರಲ್ಲಿ ಕುರುಚಲು ಗಡ್ಡದ ಸಾದಾಸೀದಾ ವ್ಯಕ್ತಿಯೊಬ್ಬರು ಪುಸ್ತಕ ಮಳಿಗೆಯೊಳಗೆ ಪ್ರವೇಶಿಸಿದರು. ಕವಿ ಸಿದ್ಧಲಿಂಗಯ್ಯನವರು. ಪರಸ್ಪರ ವೈಯಕ್ತಿಕ ಪರಿಚಯ ಇಲ್ಲದ್ದಿದ್ದರಿಂದ ದೂರದಿಂದಲೇ ಅವರನ್ನು ಗಮನಿಸುತ್ತಿದ್ದೆ. ಅವರು ಕೆಲವು ಪುಸ್ತಕಗಳನ್ನು ಎತ್ತಿಕೊಂಡರು. ಬಿಲ್ಲಿಂಗ್ ಕೌಂಟರ್ ಪಕ್ಕದಲ್ಲಿಯೇ
ಚೇರಿನಲ್ಲಿ ಕುಳಿತುಕೊಂಡರು. ನಾನು ಆರಿಸಿ ಇಟ್ಟಿದ್ದ ಪುಸ್ತಕಗಳಿಗೆ ಡಿಸ್ಕೌಂಟ್ ಕಳೆದು ಎರಡು ಸಾವಿರದ ಇನ್ನೂರು ರೂಪಾಯಿ ಬಿಲ್ ಆಗಿತ್ತು. ನನ್ನ ಪರ್ಸಿನಲ್ಲಿ ಎರಡು ಸಾವಿರ ಅಷ್ಟೇ ಇತ್ತು. ಒಂದು ಪುಸ್ತಕವನ್ನು ತೆಗೆಯಲು ಸೂಚಿಸಿದೆ. ಆದರೆ ತಕ್ಷಣಕ್ಕೆ ಕವಿಗಳು ’ಆ ಪುಸ್ತಕ ಬಿಡಬೇಡಿ; ಅದು ಭಾಳ ಒಳ್ಳೆಯ ಪುಸ್ತಕ; ಜ್ಯೋತಿರಾವ್ ಫುಲೆ ಎಂಥಾ ಕ್ರಾಂತಿಕಾರಿ ವ್ಯಕ್ತಿ’ ಎಂದವರೇ ತಮ್ಮ ಜೇಬಿನಿಂದ ಐನೂರರ ನೋಟ್‌ನ್ನು ತೆಗೆದು ನನ್ನ ಕೈಗೆ ನೀಡಲು ಬಂದರು. ಆ ಕ್ಷಣದಲ್ಲಿ ನಿಜಕ್ಕೂ ನನಗೆ ಮುಜುಗರವಾಯಿತು. ಪುಸ್ತಕಗಳ ವಿಷಯದಲ್ಲಿ ಲಜ್ಜೆಯನ್ನು ಬಿಟ್ಟು ಅವರಿಂದ ಹಣವನ್ನು ಸ್ವೀಕರಿಸಿದೆ. ಕೈಬಿಟ್ಟು ಹೋಗುವುದರಲ್ಲಿದ್ದ ಆ ಪುಸ್ತಕವನ್ನು ಕೂಡ ಸೇರಿಸಿ ಬಿಲ್ ಮಾಡಿಸಿದೆ. ಕವಿಗಳಿಗೆ ನನ್ನ ಪರಿಚಯ ಮಾಡಿಕೊಂಡು, ಮೊಬೈಲ್ ನಂಬರನ್ನು ಪಡೆದುಕೊಂಡೆ ಹಾಗೂ ಹಣ ವಾಪಸ್ಸು ಕೊಡುವುದಾಗಿ ಹೇಳಿದೆ.

ಯಾವುದೋ ಮಾತಿನಲ್ಲಿ ತೊಡಗಿದ್ದ ಕವಿಗಳ ಸೂಕ್ಷ್ಮ ದೃಷ್ಟಿಯು ಅನಾಮಿಕನೊಬ್ಬ ಕೊಳ್ಳುವ ಪುಸ್ತಕಗಳ ಕಡೆಯು ಹರಿದಿದ್ದು ಮತ್ತು ಅಂದು ನನ್ನ ಯಾವ ವೈಯಕ್ತಿಕ ಗುರುತಿಲ್ಲದಿದ್ದರೂ ಒಂದು ಪುಸ್ತಕಕ್ಕಾಗಿ ನನಗೆ ಇದ್ದಕ್ಕಿದ್ದಂತೆಯೇ ಹಣವನ್ನು ಕೊಡಲು ಹೆಸರಾಂತ ಕವಿಗಳಾದ ಡಾ.ಸಿದ್ಧಲಿಂಗಯ್ಯನವರುಮುಂದಾಗಿದ್ದು ನನಗಂತು ಮರೆಯಲಾಗದ ಪ್ರಸಂಗವಾಗಿದೆ. ಅವರ ಉದಾರತೆಯ ಗುಣ ಹಾಗೂ ಪುಸ್ತಕ ಪ್ರೀತಿಯನ್ನು ಕಂಡು ನನಗೆ ಅಚ್ಚರಿಯಾಯಿತು. ಅಂದು ಅವರಾಗಿಯೇ ನನ್ನ ಬಗ್ಗೆ ವಿಚಾರಿಸಿದಾಗ ’ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗಿದ್ದೇನೆ’ ಎಂದು ಹೇಳಿದೆ. ಅದಕ್ಕೆ ಅವರು ’ಈ ಕಾಲದಲ್ಲಿ ಮೇಷ್ಟ್ರುಗಳು ಓದುವುದೇ ಇಲ್ಲ; ಅಂತಹದರಲ್ಲಿ ತಾವು ಇಷ್ಟೊಂದು ಪುಸ್ತಕಗಳನ್ನು ಖರೀದಿಸುತ್ತಿರುವುದು ಸಂತೋಷದ ವಿಚಾರ’ ಎಂದರು.

ಅಲ್ಲಿ ಬಿಲ್ ಮಾಡುವ ಮೇಡಂ ಅವರು ಕವಿಗಳಿಗೆ ಪ್ರಶ್ನೆಗಳನ್ನು ಎಸೆದು ಮಾತಿಗೆ ಎಳೆಯುತ್ತಿದ್ದರು. ಅವುಗಳಿಗೆ ಕವಿಗಳು ತಮ್ಮದೇ ಶೈಲಿಯಲ್ಲಿ ತಮಾಷೆಯಾಗಿ ಉತ್ತರಿಸುತ್ತಿದ್ದರು. ಅಲ್ಲಿದ್ದ ಇತರರು ಅವರ ಹಾಸ್ಯಭರಿತ ಮಾತುಗಳನ್ನು ಎಂಜಾಯ್ ಮಾಡುತ್ತಿದ್ದರು. ನಾನು ಅವರದೇ ಕವಿತೆಯನ್ನು ಓದಲು ಕೋರಿಕೆಯನ್ನು ಸಲ್ಲಿಸಿದಾಗ, ಈಗ ಮೊದಲಿನ ಫೋರ್ಸ್ ಇಲ್ಲವೆಂದು ಮುಗುಳ್ನಗುತ್ತಲೇ ಒಪ್ಪಿಕೊಂಡರು. ಅವರು ’ನನ್ನ ಜನ’ ಕವಿತೆಯನ್ನು ಓದುವಾಗ ನಾನು ಅದನ್ನು ರೆಕಾರ್ಡ್ ಮಾಡಿಕೊಂಡೆ. ನಂತರದಲ್ಲಿ ’ನೇಗಿಲ ಯೋಗಿ’ ಎಂಬ ಪುಸ್ತಕದ ಮಹತ್ವವನ್ನು ವಿವರಿಸಲು ತೊಡಗಿದರು. ಹೀಗೆ ತುಂಬಾ ಹೊತ್ತು ಪಟ್ಟಾಂಗ ನಡೆದಿತ್ತು. ಇನ್ನೂ ಅನೇಕ ಸಂಗತಿಗಳ ಬಗ್ಗೆ ಮಾತನಾಡಿದರು.

ಒಂದೂವರೆ ವರ್ಷದ ಹಿಂದೆ ನಡೆದ ಈ ಪ್ರಸಂಗದಲ್ಲಿ ಸಿದ್ಧಲಿಂಗಯ್ಯನವರ ವ್ಯಕ್ತಿತ್ವದ ಹಲವು ಮುಖಗಳಿವೆ. ಅವರಿಗೆ ತಾನೊಬ್ಬ ದೊಡ್ಡ ಕವಿ ಎನ್ನುವ ಅಹಮ್ಮಿಕೆ ಇರಲಿಲ್ಲ; ಎರಡು ಬಾರಿ ಶಾಸಕರಾಗಿದ್ದರೂ ರಾಜಕಾರಣಿಯ ಹುಸಿತನ ಅವರ ಮೈಗೆ ಅಂಟಿಕೊಂಡಿರಲಿಲ್ಲ; ಅವರು ನೋಡಲು ಅವರದೇ ಕವಿತೆಯ ’ಆಕ್ರೋಶದ, ಉರಿಯುತ್ತಿರುವ ಕಣ್ಣಿನ’ ನಾಯಕನಂತೆಯು ಕಾಣುತ್ತಿರಲಿಲ್ಲ; ಸಾವಿರಾರು ವರ್ಷಗಳಿಂದ ಅಸ್ಪೃಶ್ಯತೆ ಹಾಗೂ ಜಾತಿ ವ್ಯವಸ್ಥೆಯಿಂದ ಅನುಭವಿಸಿದ ನೋವು, ವೇದನೆಗಳು ಅವರ ಮುಖದಲ್ಲಿ ಮಡುಗಟ್ಟಿದ್ದವು; ಅವರು ತಮ್ಮೊಳಗಿನ ಅಪಾರ ಸಂಕಟ ಹಾಗೂ ಆಕ್ರೋಶವನ್ನು ಕಾವ್ಯವವನ್ನಾಗಿ ಝಳಪಿಸಿದರು. ಆ ಕಾವ್ಯವು ಕನ್ನಡ ಸಾಹಿತ್ಯದ ದಿಕ್ಕು-ದೆಸೆಗಳನ್ನು ಬದಲಿಸುವಷ್ಟು ಪ್ರಖರವಾಗಿ ಮೂಡಿಬಂದಿತು. ದಲಿತ ಸಮುದಾಯಗಳು ಅನುಭವಿಸುತ್ತ ಬಂದಿದ್ದ ಹೊರೆಯನ್ನು ಅದರೆಲ್ಲ ಮುಖಗಳೊಂದಿಗೆ ಪ್ರತಿನಿಧಿಸಿತು. ಹೋರಾಟದ ಹಾದಿಗೆ ಸಾವಿರಾರು ನದಿಗಳನ್ನು ಜೋಡಿಸಿತು. ದಲಿತ ಬಂಡಾಯ ಚಳವಳಿಯನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು ಹೊತ್ತಿತು. ಇವೆಲ್ಲವು ಕೂಡ ಚಾರಿತ್ರಿಕ ಸಂಗತಿಗಳೇ ಆಗಿವೆ.

ಕವಿಗಳು ಕೋವಿಡ್ ಕಾರಣದಿಂದಾಗಿ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದರು. ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ (11-06-2021) ಸಿದ್ಧಲಿಂಗಯ್ಯನವರು ಇನ್ನಿಲ್ಲ ಎಂಬ ಸಂದೇಶವು ನನ್ನ ಮೊಬೈಲಿಗೆ ಬಂದು ಅಪ್ಪಳಿಸಿತು. ಆ ಕ್ಷಣದಲ್ಲಿ ಅವರಿಲ್ಲ ಎನ್ನುವುದನ್ನು ನನ್ನ ಮನಸ್ಸು ಒಪ್ಪಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಾವಿನ ಸುದ್ದಿಯು ಕ್ಷಿಪ್ರವಾಗಿಯೇ ಹರಿದಾಡಿತು. ಕನ್ನಡನಾಡಿನ ಅಸಂಖ್ಯಾತ ಜನರು ಕವಿಗಳ ಜೊತೆಯಲ್ಲಿರುವ ಫೋಟೋಗಳನ್ನು ಶೇರ್ ಮಾಡಿಕೊಂಡು ವಿಷಾದಿಸುತ್ತಿದ್ದರು. ಇದನ್ನೆಲ್ಲ ನೋಡುತ್ತಿರುವಾಗ ನಮ್ಮ ಕಾಲದ ಕವಿಯೊಬ್ಬರಿಗೆ ಇಷ್ಟೊಂದು ಜನರ ಪ್ರೀತಿ ಸಿಕ್ಕಿದ್ದು ಅಭಿಮಾನದ ಸಂಗತಿಯೂ ಹೌದು; ಯಾರಿಗೆ ’ಇಕ್ರಲಾ ಒದಿರ್ಲಾ…’ ಎಂದು ಬರೆದಿದ್ದರೋ ಅವರಿಂದಲೂ ಗೌರವವನ್ನು ಪಡೆದಿದ್ದರು.

ದೂರದರ್ಶನದ ಸುದ್ದಿವಾಹಿನಿಗಳು ಪೈಪೋಟಿಗೆ ಬಿದ್ದ ಹಾಗೆ ’ದಲಿತ’ ಕವಿ ಸಿದ್ಧಲಿಂಗಯ್ಯ ಅಸ್ತಂಗತ ಎಂದು ಪ್ರಸಾರ ಮಾಡುತ್ತಿದ್ದವು. ಮಾತುಮಾತಿಗೆ ’ದಲಿತ’ ಪದವನ್ನು ಬಳಸುತ್ತಿದ್ದವು. ಒಂದು ಸುದ್ದಿವಾಹಿನಿಯು ’ಹೊಲೆ ಮಾದಿಗರ ಕವಿ’ ಎಂದು ಕರೆದು ತನ್ನ ಅಜ್ಞಾನವನ್ನು ಪ್ರದರ್ಶಿಸಿತು. ಇವು ಸಂತಾಪ ಸೂಚಿಸುವುದಕ್ಕಿಂತ ಜಾತಿಯನ್ನು ಎತ್ತಿ ಆಡುತ್ತಿದ್ದವು. ಲಜ್ಜೆಗೆಟ್ಟ ಸುದ್ದಿವಾಹಿನಿಗಳು ಕಾಟಾಚಾರಕ್ಕೆ ಸುದ್ದಿಯನ್ನು ಬಿತ್ತರಿಸುತ್ತಿದ್ದವು. ಆದರೆ ದಮನಿತ ಸಮುದಾಯಗಳ ಸಾಹಿತಿಗಳನ್ನು ಅವರ ಜಾತಿಯಿಂದಲೇ ಗುರುತಿಸುವ ಹೀನ ಮನಸ್ಥಿತಿ ಇನ್ನೂ ಜೀವಂತವಾಗಿದೆ. ಅದೇ ಶೋಷಕ ಜಾತಿಯ ಸಾಹಿತಿಗಳನ್ನು ಅವರ ಜಾತಿಯಿಂದ ಕರೆಯಲಾಗುತ್ತದೆಯೇ? ಬರಿ ಸಾಹಿತಿಗಳಲ್ಲದೇ ಶೋಷಿತ ಜಾತಿಗಳ ಮನುಷ್ಯರಿಗೂ ಜಾತಿಯ ಹಣೆಪಟ್ಟಿಯನ್ನು ಅಂಟಿಸಿಯೇ ಮಾತನಾಡಲಾಗುತ್ತದೆ. ಸಿದ್ಧಲಿಂಗಯ್ಯನವರು ಕನ್ನಡ ಭಾಷೆಯ ಕ್ರಾಂತಿಕಾರಿ ಕವಿ, ಕನ್ನಡ ನಾಡಿನ ಧೀಮಂತ ಕವಿ, ನೊಂದವರಿಗೆ ಧ್ವನಿಯಾದ ಕವಿ ಎಂಬುದನ್ನು ಈ ವಾಹಿನಿಗಳು ಮರೆಮಾಚಿ ದುರುದ್ದೇಶದಿಂದಲೇ ’ದಲಿತ’ ಎಂಬುದನ್ನೇ ಮುಂಚೂಣಿಗೆ ತಂದವು. ಇಂಥವುಗಳನ್ನೆಲ್ಲ ಮೀರಿ ಸಿದ್ಧಲಿಂಗಯ್ಯನವರು ಕನ್ನಡಿಗರ ಜನಮಾನಸದಲ್ಲಿ ಬೇರೂರಿದ ಕವಿಗಳಾಗಿದ್ದಾರೆ ಎಂಬ ಸಂಗತಿಯು ಪ್ರಜ್ಞಾವಂತರಿಗೆ ಗೊತ್ತಿದೆ.

PC : The News Minute

ಆನ್‌ಲೈನ್ ನುಡಿನಮನ ಕಾರ್ಯಕ್ರಮದಲ್ಲಿ ಎಚ್.ಎಸ್. ಶಿವಪ್ರಕಾಶ್ ಅವರು ಸಿದ್ಧಲಿಂಗಯ್ಯನವರನ್ನು ’ಮಾರ್ಗ ಪ್ರವರ್ತಕ ಕವಿ’ ಎಂದು ಹೇಳಿದ್ದು ಅರ್ಥಪೂರ್ಣವಾಗಿದೆ. 21ನೇ ಶತಮಾನದ ಕನ್ನಡ ಕಾವ್ಯ ಪರಂಪರೆಯಲ್ಲಿ ಬೇಂದ್ರೆ ಹಾಗೂ ಕೆ.ಎಸ್. ನರಸಿಂಹಸ್ವಾಮಿಯವರನ್ನು ಹೊರತುಪಡಿಸಿದರೆ ಸಿದ್ಧಲಿಂಗಯ್ಯನವರ ಕಾವ್ಯವು ಹೆಚ್ಚು ಜನಪ್ರಿಯವಾಗಿದೆ. ಅಂತರ್ಮುಖಿಯಾಗಿದ್ದ ನವ್ಯ ಕಾವ್ಯಕ್ಕೆ ಸೆಡ್ಡು ಹೊಡೆದ ಅವರ ಕಾವ್ಯವು ಹೊಸಪಥವನ್ನು ಕಂಡುಕೊಂಡಿತು. ನವೋದಯ ಕಾವ್ಯದ ’ರಮ್ಯತೆ’ಯನ್ನು ಹಾಗೂ ನವ್ಯ ಕಾವ್ಯದ ’ವ್ಯಕ್ತಿನಿಷ್ಠತೆ’ಯನ್ನು ನಿರಾಕರಿಸಿ ಜನಮುಖಿಯಾಗಿ, ಸಮುದಾಯಮುಖಿಯಾಗಿ ಹರಿಯಿತು. ಅವರ ಕಾವ್ಯವವನ್ನು ಜನಸಮುದಾಯಗಳು ಅಪ್ಪಿಕೊಂಡವು; ಈ ಕಾವ್ಯದಲ್ಲಿ ತಮ್ಮ ವಿಮೋಚನೆಯನ್ನು ಕನಸನ್ನು ಕಂಡವು.

ಕವಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿಯವರ ಜೊತೆಯಲ್ಲಿ ಮೊದಲ ಬಾರಿಗೆ ಸಿದ್ಧಲಿಂಗಯ್ಯನವರ ಮನೆಗೆ ಹೋಗಿದ್ದೆ. ರಾಜರಾಜೇಶ್ವರಿ ನಗರದಲ್ಲಿನ ಅವರ ಮನೆಯು ಸಾಕಷ್ಟು ವಿಶಾಲವಾಗಿದೆ. ಅವತ್ತು ಸಿದ್ಧಲಿಂಗಯ್ಯನವರು ಲವಲವಿಕೆಯಿಂದಲೇ ತಮ್ಮ ಖಾಸಗಿ ಗ್ರಂಥಾಲಯವನ್ನು ತೋರಿಸಿದ್ದರು. ಎರಡನೇ ಮಹಡಿಗೆ ನಡೆದುಕೊಂಡು ಹೋಗುತ್ತಿರುವಾಗ ಅಲ್ಲಲ್ಲಿ ಪುಸ್ತಕದ ರ್‍ಯಾಕುಗಳಿದ್ದವು. ಅವರ ಅಗಾಧವಾದ ಪುಸ್ತಕ ಸಂಗ್ರಹವನ್ನು ಕಂಡು ಮೂಕವಿಸ್ಮಿತನಾಗಿದ್ದೆ. ಇದರ ಬಗ್ಗೆ ಒಂದು ಸಲ ಆಕೃತಿ ಗುರುಪ್ರಸಾದ್ ಅವರ ಹೊಟ್ಟೆ ಉರಿಸಲು ಹೇಳಿದೆ. ಕವಿಗಳನ್ನು ಸಂಧಿಸುವ ಮತ್ತೊಂದು ಕಾರಣವನ್ನು ಹುಡುಕಿದೆ. ನನ್ನ ಅನುವಾದದ ಪುಸ್ತಕವನ್ನು ಕೊಡುವ ನೆಪದಲ್ಲಿ ಗುರುಪ್ರಸಾದ್ ಹಾಗೂ ನಾನು ಮತ್ತೊಮ್ಮೆ ಕವಿಗಳ ಮನೆಗೆ ಹೋದೆವು. ಅವರ ಗ್ರಂಥಾಲಯಕ್ಕೆ ಮುತ್ತಿಗೆ ಹಾಕಿದೆವು. ಒಂದು ಕಡೆಯಿಂದ ಕಣ್ಣಾಡಿಸಿಕೊಂಡು ಹೋಗುತ್ತಿರುವಾಗ ನನ್ನ ಅನುವಾದದ ’ಬದುಕಿನ ಅರ್ಥವನು ಹುಡುಕುತ್ತ…’ ಪುಸ್ತಕವನ್ನು ಕಂಡು ಕವಿಗಳಿಗೆ ತೋರಿಸಿದೆ. ಆಗವರು ಎಲ್ಲೋ ಅಂಕಿತ ಪುಸ್ತಕದಂಗಡಿಯಲ್ಲಿ ಕೊಂಡ ನೆನಪು ಎಂದರು.

ಸಿದ್ಧಲಿಂಗಯ್ಯನವರ ಪುಸ್ತಕ ಪ್ರೇಮ ಹಾಗೂ ಅವುಗಳ ಬಗೆಗಿನ ವ್ಯಾಮೋಹ ಎಂತಹದ್ದು ಎಂಬುದನ್ನು ಅವರ ಗ್ರಂಥಾಲಯವನ್ನು ನೋಡಿದವರಿಗೆ ಗೊತ್ತಿರುತ್ತದೆ. ಒಂದು ಇಡೀ ರೂಮು ತುಂಬ ಪುಸ್ತಕಗಳೇ ಹರಡಿಕೊಂಡಿವೆ. ಪುಸ್ತಕಗಳನ್ನು ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ಜೋಡಿಸಲು ಗೋಡೆಯ ಸುತ್ತಲೂ ಮರದ ಹಲಗೆಯಲ್ಲಿ ಖಾನೆಗಳನ್ನು ಕೆತ್ತಿಸಲಾಗಿದೆ. ಕೈಗೆ ಎಟುಕದಿರುವಷ್ಟು ಎತ್ತರದವರೆಗೂ ಪುಸ್ತಕಗಳನ್ನು ಒಂದರ ಪಕ್ಕ ಒಂದರಂತೆ ನೀಟಾಗಿ ಇಡಲಾಗಿದೆ. ಮಧ್ಯಭಾಗದಲ್ಲಿ ಪುಸ್ತಕಗಳನ್ನು ಇಡಲು ಮರದ ರ್‍ಯಾಕುಗಳನ್ನು ನಿರ್ಮಿಸಲಾಗಿದೆ. ಒಂದೆರಡು ತಾಸುಗಳಲ್ಲಿ ಎಷ್ಟು ಪುಸ್ತಕಗಳ ಮೇಲೆ ಕಣ್ಣಾಡಿಸಲು ಸಾಧ್ಯ? ಮತ್ತೊಮ್ಮೆ ಬಂದು ಎಲ್ಲ ಪುಸ್ತಕಗಳನ್ನು ನೋಡುವುದಾಗಿ ಹೇಳಿ ಕವಿಗಳ ಮನೆಯಿಂದ ಬಂದೆವು. ಆದರೆ ಕೋವಿಡ್ ಕವಿಗಳಿಗೆ ಆಸ್ಪತ್ರೆಯಿಂದ ತಮ್ಮ ಮನೆಗೆ ವಾಪಸ್ಸಾಗುವ ಅವಕಾಶವನ್ನೇ ನೀಡಲಿಲ್ಲ. ನಾನು ಅವರನ್ನು ಮತ್ತೊಮ್ಮೆ ಭೇಟಿಯಾಗುವುದನ್ನು ನಿರ್ದಯಿ ಕೋವಿಡ್ ಶಾಶ್ವತವಾಗಿ ತಪ್ಪಿಸಿತು. ಆದರೆ ಅವರೊಂದಿಗಿನ ತೀರ ಕಡಿಮೆ ಅವಧಿಯ ಒಡನಾಟವಾಗಿದ್ದರೂ, ಆ ನೆನಪುಗಳು ನನ್ನ ಎದೆಯಲ್ಲಿ ಎಂದಿಗೂ ಜೀವಂತವಾಗಿರುತ್ತವೆ.

ಬೆಂಗಳೂರಿನಂತಹ ಮಹಾನಗರದಲ್ಲಿ ಸಾವಿರಾರು ಪುಸ್ತಕಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಬಹುದೊಡ್ಡ ಸಮಸ್ಯೆಯಾಗಿರುತ್ತದೆ. ಆದರೆ ಕವಿಗಳಿಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಅವರು ಭೂತಾನ್‌ಗೆ ಹೋಗಿದ್ದಾಗ ಅಲ್ಲಿಂದ ಮೂವತ್ತು ಸಾವಿರ ರೂಪಾಯಿಗಳ ಪುಸ್ತಕಗಳನ್ನು ತಂದಿರುವುದಾಗಿ ಹೇಳಿದ್ದರು. ಅವರು ಬೇರೆ ರಾಜ್ಯ ಅಥವಾ ನಗರಗಳಿಗೆ ಹೋದಾಗ ಅಲ್ಲಿಯ ಪುಸ್ತಕದಂಗಡಿಗಳಿಗೆ ಭೇಟಿ ನೀಡುತ್ತಿದ್ದರು; ಅಪರೂಪದ ಪುಸ್ತಕಗಳನ್ನು ಕಂಡರೆ ಅವುಗಳನ್ನು ಪ್ಯಾಕ್ ಮಾಡಿಸಿ ತಮ್ಮ ವಿಳಾಸಕ್ಕೆ ಕಳಿಸಲು ಹೇಳುತ್ತಿದ್ದರು. ಇಂತಹ ಅನೇಕ ಸಂಗತಿಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರು. ಅವರಿಂದ ಇನ್ನೂ ಎಷ್ಟೊಂದು ಮಾತುಗಳನ್ನು ಆಲಿಸುವುದಿತ್ತು; ಅವರ ಜೀವನ ಪ್ರಸಂಗಗಳನ್ನು ಕೇಳುವುದಿತ್ತು.

ಎಷ್ಟೋ ಜನ ಸಿದ್ಧಲಿಂಗಯ್ಯನವರನ್ನು ಹಾಸ್ಯ ಸಾಹಿತಿ ಎಂದೇ ಭಾವಿಸಿದ್ದರು. ಅವರು ಹೇಳುತ್ತಿದ್ದ ವೈನೋದಿಕ ಪ್ರಸಂಗಗಳನ್ನು ಕೇಳುವುದಕ್ಕಾಗಿಯೇ ಜನರು ಅವರ ಭಾಷಣಗಳಿಗಾಗಿ ಮುಗಿ ಬೀಳುತ್ತಿದ್ದರು. ಗಂಭೀರವಾಗಿದ್ದ ಅವರ ಕಾವ್ಯಕ್ಕೂ ಹಾಗೂ ಹಾಸ್ಯದಿಂದ ಕೂಡಿದ ಅವರ ಮಾತುಗಳು ತದ್ವಿರುದ್ಧವಾಗಿದ್ದವು. ಅವು ಒಬ್ಬನೇ ವ್ಯಕ್ತಿಯ ವೈರುಧ್ಯಗಳಾಗಿಯೂ ಕಾಣುತ್ತವೆ. ’ಊರು ಕೇರಿ’ ಆತ್ಮಕತೆಯ ಪ್ರಕಟನೆಯೊಂದಿಗೆ ಅವರಲ್ಲಿ ದೊಡ್ಡ ಪಲ್ಲಟವಾಯಿತು. ತಮ್ಮ ಜೀವನವನ್ನು ಕಣ್ಣೀರ ಕತೆಯನ್ನಾಗಿ ನಿರೂಪಿಸದೇ ಅದಕ್ಕೊಂದು ತೀಕ್ಷ್ಣವಾದ ವ್ಯಂಗ್ಯ ಹಾಗೂ ಮೊನಚಾದ ವಿಡಂಬನೆಯ ರೂಪವನ್ನು ನೀಡಿದರು. ತಾವು ಅನುಭವಿಸಿದ ಜಾತಿ ಅಪಮಾನಗಳನ್ನು ಲಘು ಹಾಸ್ಯ ಶೈಲಿಯಲ್ಲಿ ನಿರೂಪಿಸುವುದರ ಮೂಲಕ ಓದುಗರಲ್ಲಿ ಕಚಗುಳಿ ಇಡುವುದರಲ್ಲಿ ಸಫಲರಾದರು. ಸಿದ್ಧಲಿಂಗಯ್ಯನವರು ತಮ್ಮನ್ನು ತಾವು ಗೇಲಿ ಮಾಡಿಕೊಳ್ಳುವ ಕಾಮಿಕ್ ಶೈಲಿಯನ್ನು ರೂಢಿಸಿಕೊಂಡರು ಹಾಗೂ ಅದರಿಂದ ತಮ್ಮ ಇತಿಮಿತಿಗಳನ್ನು ಮೀರಲು ಪ್ರಯತ್ನಿಸುತ್ತಿದ್ದರು. ಅವರು ಮಾತಿನ ಶೈಲಿಯನ್ನು ಬರವಣಿಗೆಗೆ ಇಳಿಸಿಕೊಂಡರು. ಇದರಿಂದಾಗಿಯೇ ಒಂದು ವರ್ಷದ ಕೆಳಗಷ್ಟೇ ಅವರ ’ಊರು ಕೇರಿ’ ಆತ್ಮಕತೆಯ ಮೂರನೇ ಭಾಗವು ಪ್ರಕಟವಾಗಿದೆ. ಮೊದಲ ಭಾಗದಲ್ಲಿದ್ದ ಸಮುದಾಯದ ನೋವು, ತಲ್ಲಣಗಳು ಇತ್ತೀಚಿನ ಭಾಗದಲ್ಲಿ ಕಣ್ಮರೆಯಾಗಿದ್ದವು; ಹಾಸ್ಯವು ಕೂಡ ಒಂದು ವ್ಯಸನವಾಗಿ ಅವರಿವರ ಜೊತೆಗಿನ ಮೋಜಿನ ಪ್ರಸಂಗಗಳಿಂದಲೇ ತುಂಬಿ ಹೋಗುವಂತಾಯಿತು.

ಸಿದ್ಧಲಿಂಗಯ್ಯನವರ ’ಹೊಲೆ ಮಾದಿಗರ ಹಾಡು’ ಸಂಕಲನದಲ್ಲಿದ್ದ ದಲಿತ ಸಮುದಾಯ ಬಗೆಗಿನ ಕಾಳಜಿ, ಸಾಮಾಜಿಕ ಬದ್ಧತೆ ಹಾಗೂ ಸತ್ಯವನ್ನು ಹೇಳುವ ಕೆಚ್ಚೆದೆಯು ಅವರ ಜೀವನದ ಕೊನೆಯವರೆಗೂ ಉಳಿಯಲಿಲ್ಲ. ಒಂದು ಕಾಲದ ದಲಿತ ಬಂಡಾಯ ಚಳವಳಿಗೆ ಅವರ ಕಾವ್ಯವು ಶಕ್ತಿ ಸಂವರ್ಧನೆ ಮಾಡಿತ್ತು. ಅದರೆ ಅವರ ಸಾಮಾಜಿಕ ಹಾಗೂ ರಾಜಕೀಯ ಚಿಂತನೆಗಳು ಕಾವ್ಯದಂತೆ ಪ್ರಖರವಾಗಿರಲಿಲ್ಲ. ವೇದಿಕೆಗಳಲ್ಲಿ ಅವರು ಯಾವುದೇ ವಿಷಯವನ್ನು ಕುರಿತು ಮಾತನಾಡಿದರೂ ಅದರಲ್ಲಿ ಜೋಕುಗಳೇ ತುಂಬಿರುತ್ತಿದ್ದವು. ಅವರ ಅನೇಕ ಸ್ನೇಹಿತರು ಈ ಜೋಕು ಮೊದಲೇ ಕೇಳಿದ್ದೆವು ಎನ್ನುತ್ತಿದ್ದರು. ಹೀಗಾಗಿ ಅವರು ಪ್ರೇಕ್ಷಕರಿಗೆ ಕೇವಲ ಹಾಸ್ಯದ ರಸದೌತಣವನ್ನು ಉಣಬಡಿಸುವುಕ್ಕಷ್ಟೇ ಸೀಮಿತರಾದರು. ಗಂಭೀರ ಚಿಂತನೆಗಳನ್ನು ಹಾಗೂ ಹೊಸ ವಿಚಾರಗಳನ್ನು ಬಯಸುವ ಜನರು ಅವರಿಂದ ವಿಮುಖರಾದರು. ಪ್ರೇಕ್ಷಕರು ಬರಿ ಹಾಸ್ಯವನ್ನು ನಿರೀಕ್ಷೀಸುತ್ತಾರೆಂದು ಪರಿಭಾವಿಸುವುದರಿಂದ ಅದಕ್ಕೆ ತಕ್ಕಂತೆಯೇ ವೇಷವನ್ನು ಹಾಕಿ ಕುಣಿಯಬೇಕಾಗುತ್ತದೆ. ಇದರಿಂದಾಗಿ ಸಿದ್ಧಲಿಂಗಯ್ಯನವರ ಗಂಭೀರ ವ್ಯಕ್ತಿತ್ವ ಮರೆಯಾಗಿ ಹೋಯಿತು. ಜನರು ಕೂಡ ಅವರನ್ನು ನಕ್ಕುನಗಿಸುವ ಸಾಹಿತಿ ಎಂದಷ್ಟೇ ನೋಡುವಂತಾಯಿತು.

ಸಿದ್ಧಲಿಂಗಯ್ಯನವರ ಬದುಕು ವಿವಾದಗಳಿಂದ ಮುಕ್ತವಾಗಿರಲಿಲ್ಲ. ಹಾಗಂತ ಅವರು ತಮ್ಮ ಬದುಕನ್ನು ಸಾರ್ವಜನಿಕರಿಂದ ಎಂದಿಗೂ ಮುಚ್ಚಿಟ್ಟವರಲ್ಲ. ರಾಜಕೀಯ ಅಧಿಕಾರಕ್ಕಾಗಿ ಅವರು ರಾಜಿ ಮಾಡಿಕೊಂಡಿದ್ದರ ಬಗ್ಗೆ ಹಲವು ಆರೋಪಗಳು ಕೇಳಿಬಂದವು. ಕೋಮುವಾದಿ ಪಕ್ಷದೊಂದಿಗೆ ಅವರು ಗುರುತಿಸಿಕೊಂಡಿದ್ದಕ್ಕೆ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು. ಕೆಲವು ವರ್ಷಗಳ ಹಿಂದೆ ಸಿದ್ಧಲಿಂಗಯ್ಯನವರ ಮನೆಗೆ ಅಮಿತ್ ಶಾ ಅವರು ಭೇಟಿ ನೀಡಿದ್ದರು. ಒಂದು ಕಾಲಘಟ್ಟದಲ್ಲಿ ತನ್ನ ಜನ ಸಮುದಾಯದವರ ಸಮಾನತೆ, ಹಕ್ಕು, ಘನತೆ ಹಾಗೂ ಗೌರವಕ್ಕಾಗಿ ಗುಡುಗಿದ್ದ ಕವಿಗಳು ರಾಜಕೀಯ ಅಧಿಕಾರಕ್ಕಾಗಿ ಬದಲಾಗಿದ್ದು ವೈರುಧ್ಯದ ಸಂಗತಿಯೇ ಆಗಿದೆ. ಆದರೆ ಅವರೆಂದಿಗೂ ಯಾರನ್ನು ಕೂಡ ದ್ವೇಷಿಸಲಿಲ್ಲ; ಎಲ್ಲರನ್ನೂ ಪ್ರೀತಿಸುವ ಮನುಷ್ಯನಾಗಿಯೇ ಉಳಿದರು.

ಡಾ. ಸುಭಾಷ್ ರಾಜಮಾನೆ

ಡಾ. ಸುಭಾಷ್ ರಾಜಮಾನೆ
ಬೆಂಗಳೂರಿನ ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಇವರು, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ಜೈಲಿನಲ್ಲಿದ್ದಾಗಲೂ ಅವಳು ಹೋರಾಟ ಮಾಡುತ್ತಲೇ ಇದ್ದಳು, ಆಕೆಯ ಬಗ್ಗೆ ಹೆಮ್ಮೆಯಿದೆ: ದೇವಂಗನಾ ಬಗ್ಗೆ ತಾಯಿಯ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...