ಜೈಲಿನಲ್ಲಿದ್ದಾಗಲೂ ಅವಳು ಹೋರಾಟ ಮಾಡುತ್ತಲೇ ಇದ್ದಳು. ದೇವಂಗನಾ ಹೋರಾಟಗಾರ್ತಿ
PC: outlookindia

ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿ ಬಂಧಿತರಾಗಿದ್ದ ಪಿಂಜ್ರಾ ತೋಡ್ ಕಾರ್ಯಕರ್ತರಾದ ನತಾಶಾ ನರ್ವಾಲ್‌, ದೇವಂಗನಾ ಕಾಳಿತಾ ಮತ್ತು ಆಸಿಫ್ ಇಕ್ಬಾಲ್‌ ತನ್ಹಾ ಅವರಿಗೆ ದೆಹಲಿ ಹೈಕೋರ್ಟ್‌ ಜಾಮೀನು ನೀಡಿದೆ. ಕೋರ್ಟ್‌ ನೀಡಿರುವ ಜಾಮೀನು ಪ್ರಶ್ನಿಸಿ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಮೂವರು ಸಾಮಾಜಿಕ ಕಾರ್ಯಕರ್ತರು ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದು, ಈಗ ಜಾಮೀನು ಮಂಜೂರಾಗಿದೆ.

ತಮ್ಮ ಮಕ್ಕಳ ಹೋರಾಟದ ಬಗ್ಗೆ ಪಿಂಜ್ರಾ ತೋಡ್ ಕಾರ್ಯಕರ್ತೆ ದೇವಂಗನಾ ಕಾಳಿತಾ ಅವರ ತಾಯಿ ಡಾ. ಕಲ್ಪನಾ ಡೆಕ್ಕಾ ಕಾಳಿತಾ ಮಾತನಾಡಿದ್ದಾರೆ. ಮಗಳ ಕೆಲಸದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಆಕೆಯ ಹೋರಾಟಕ್ಕೆ ಬೆಂಬಲ ನೀಡಿದ ಬಗ್ಗೆ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ದೇವಂಗನಾ ಅವರು ಯಾವಾಗ ರಾಜಕೀಯ ಹೋರಾಟಗಳತ್ತ ಹೆಜ್ಜೆ ಹಾಕಿದರು..?

ದೇವಂಗನಾ ತನ್ನ ಶಾಲಾ ದಿನಗಳಲ್ಲಿಯೂ ಸಹ ಆಕೆ ನ್ಯಾಯ ಮತ್ತು ಅನ್ಯಾಯದ ನಡುವಿನ ವ್ಯತ್ಯಾಸಗಳ ಬಗ್ಗೆ ಅರಿವು ಹೊಂದಿದ್ದಳು. ಆಕೆಗೆ ರಾಜಕೀಯ ಮತ್ತು ಮಹಿಳೆಯರ ಹಕ್ಕುಗಳ ಬಗ್ಗೆ ತಿಳಿದಿತ್ತು. ತಪ್ಪು ನಡೆಯುತ್ತಿದ್ದರೆ ಅದರ ವಿರುದ್ಧ ಮಾತನಾಡುತ್ತಿದ್ದಳು. ಸಾಮಾಜಿಕ ಹೋರಾಟ ಅವಳ ಸ್ವಂತ ಜಾಗೃತ ನಿರ್ಧಾರವಾಗಿತ್ತು. ಅವಳ ನಿರ್ಧಾರವನ್ನು ನಾವೆಲ್ಲರೂ ಬೆಂಬಲಿಸಿದ್ದೇವೆ. ಅವಳು ಸ್ವತಂತ್ರ ಹುಡುಗಿಯಾಗಿದ್ದು, ಯಾವಾಗಲೂ ತಾನೇನು ಮಾಡಬೇಕು ಎಂದು ತಾನೇ ನಿರ್ಧರಿಸುತ್ತಾಳೆ. ಮುಂದಿನ ದಿನಗಳಲ್ಲಿಯೂ ಅವಳು ಹಾಗೆ ಮುಂದುವರಿಯುತ್ತಾಳೆ.

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿದ ಬಗ್ಗೆ ನಿಮಗೆ ತಿಳಿದಿದೆಯೇ..?

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ದೇವಂಗನಾ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ನಮಗೆ ತಿಳಿದಿತ್ತು. ಆದರೆ ಅದೇ ಸಮಯದಲ್ಲಿ, ಅವಳು ಎಂದಿಗೂ ಯಾವುದೇ ಹಿಂಸೆ, ಗಲಭೆ ಅಥವಾ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂಬ ವಿಶ್ವಾಸ ನಮಗಿತ್ತು.

ನಾವು ಅಸ್ಸಾಂನ ಜನರು, ಎನ್ಆರ್‌ಸಿಯನ್ನು ಬಹಳ ಹತ್ತಿರದಿಂದ ನೋಡಿದ್ದೇವೆ. ನಮ್ಮ ಸುತ್ತಲಿನ ಹಲವಾರು ಜನರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ತಮ್ಮ ಇರುವಿಕೆಯ ಬಗ್ಗೆ ಯಾವುದೇ ದಾಖಲೆಗಳಿಲ್ಲದ ಕಾರಣ ಅವರು ಎಲ್ಲವನ್ನೂ ಕಳೆದುಕೊಂಡರು. ಅಸ್ಸಾಂನಲ್ಲಿ ಸಿಎಎ-ಎನ್ಆರ್‌ಸಿ ವಿರುದ್ಧ ಭಾರಿ ಪ್ರತಿಭಟನೆಗಳು ನಡೆದಿವೆ. ನಾನು ಪ್ರಾಧ್ಯಾಪಕಿ. ನನ್ನ ವಿಶ್ವವಿದ್ಯಾಲಯದಲ್ಲಿಯೂ ಸಹ ಎಲ್ಲಾ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ನಾನು ಕೂಡ ಭಾಗವಹಿಸಿದ್ದೇನೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ತಪ್ಪಲ್ಲ.

ಇದನ್ನೂ ಓದಿ: ಜಾಮೀನು ಸಿಕ್ಕರೂ ಬಿಡುಗಡೆಯಿಲ್ಲ!-ಹೈಕೋರ್ಟ್‌ ಕದ ತಟ್ಟಿದ ವಿದ್ಯಾರ್ಥಿಗಳು

ಆಕೆಯನ್ನು ಬಂಧಿಸಿದ ದಿನ ಏನಾಯಿತು..?

ಅವಳು ಸೆರೆವಾಸ ಅನುಭವಿಸಬಹುದು ಎಂಬ ಕಲ್ಪನೆ ನಮಗಿರಲಿಲ್ಲ. 2020 ರ ಮೇ 23 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಚಾರಣೆ ನಡೆಸಲಾಗುವುದು ಎಂದುಆಸಿಫ್ ಇಕ್ಬಾಲ್ ತನ್ಹಾ ಎಸ್‌ಐಟಿ ತಿಳಿಸಿತ್ತು. ಆಗ, ಮಧ್ಯಾಹ್ನ 2:30 ರ ಸುಮಾರಿಗೆ ಆಕೆ ನಮಗೆ ವಿಡಿಯೋ ಕಾಲ್‌ ಮಾಡಿದಳು. ನಾನು ಅವಳಿಗೆ ‘ಭಯಪಡುವ ಅಗತ್ಯವಿಲ್ಲ. ನೀವು ಯಾವುದೇ ತಪ್ಪು ಮಾಡಿಲ್ಲ. ನೀವು ಸಿಎಎ ವಿರುದ್ಧ ಪ್ರತಿಭಟಿಸಿದ್ದೀರಿ. ಹೋಗಿ ಪ್ರಶ್ನೆಗಳಿಗೆ ಧೈರ್ಯವಾಗಿ ಉತ್ತರಿಸಿ ಎಂದು ಹೇಳಿದ್ದೆ.

ಆಕೆ ಜೈಲಿನಲ್ಲಿದ್ದಾಗ ಆಕೆಯನ್ನು ಮಾತನಾಡಿಸಲು ನೀವು ಬಂದಿದ್ದೀರಾ..?

ಆರಂಭದಲ್ಲಿ, 10-15 ದಿನಗಳಲ್ಲಿ ಕೇವಲ ಹತ್ತು ನಿಮಿಷಗಳ ಕಾಲ ಆಕೆಯೊಂದಿಗೆ ಮಾತನಾಡಲು ನಮಗೆ ಅವಕಾಶ ನೀಡಲಾಯಿತು. ಆದರೆ, ದೇವಂಗನಾ ಮತ್ತು ನತಾಶಾ ಈ ಸಮಯಾವಕಾಶದ ಬಗ್ಗೆ ವಿರೋಧಿಸಿದರು. ನಂತರ, ತಿಹಾರ್ ಜೈಲಿನಲ್ಲಿರುವ ಎಲ್ಲ ಕೈದಿಗಳಿಗೆ ವಾರಕ್ಕೊಮ್ಮೆ 30 ನಿಮಿಷಗಳ ಕಾಲ ವಿಡಿಯೋ ಕರೆಗಳಲ್ಲಿ ತಮ್ಮ ಕುಟುಂಬಗಳೊಂದಿಗೆ ಮಾತನಾಡಲು ಅವಕಾಶ ನೀಡಲಾಯಿತು. ಪ್ರತಿದಿನ ಐದು ನಿಮಿಷಗಳ ಫೋನ್ ಕರೆಗಳನ್ನು ಮಾಡಲು ಸಹ ಅವರಿಗೆ ಅವಕಾಶ ನೀಡಲಾಯಿತು. ಜೈಲಿನಲ್ಲಿದ್ದಾಗಲೂ ಅವಳು ಹೋರಾಟ ಮಾಡುತ್ತಲೇ ಇದ್ದಳು. ಆಕೆ ಹೋರಾಟಗಾರ್ತಿ.

ಪ್ರತಿ ಬಾರಿಯೂ ನಾವು ಅವಳನ್ನು ವಿಡಿಯೋ ಕರೆಯಲ್ಲಿ ನೋಡುತ್ತಿದ್ದೆವು. ಅದು ನಮಗೆ ಒಂದು ಉತ್ತಮ ಕ್ಷಣವಾಗಿತ್ತು. ಆಕೆಯ ಕಿರಿಯ ಸಹೋದರ ವಿಡಿಯೋ ಕರೆಯಲ್ಲಿ ಪಿಯಾನೋ ನುಡಿಸುತ್ತಿದ್ದ. ಅದು ಅವಳನ್ನು ಹುರಿದುಂಬಿಸುತ್ತಿತ್ತು ಮತ್ತು ಅವಳು ಅದನ್ನು ತುಂಬಾ ಪ್ರೀತಿಸುತ್ತಿದ್ದಳು. ‘ನೀವು ಹಾಡುವುದನ್ನು ನೋಡಲು ನಾನು ಹೊರಗೆ ಬರಬೇಕು’ ಎಂದು ಹೇಳುತ್ತಿದ್ದಳು.

ಇದನ್ನೂ ಓದಿ: JNU ವಿದ್ಯಾರ್ಥಿನಿ ದೇವಾಂಗನಾ ಕಾಳಿತಾ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ: ಜಾಮೀನು ಮಂಜೂರು

ಕಂಬಿಗಳ ಹಿಂದೆ ಇರುವ ಎಲ್ಲಾ ರಾಜಕೀಯ ಕೈದಿಗಳ ಕುಟುಂಬಗಳಿಗೆ ನಿಮ್ಮ ಸಂದೇಶ ಏನು..?

ರಾಜಕೀಯ ಹೋರಾಟ, ಜನಪರ ಹೋರಾಟಗಳಿಂದಾಗಿ ಸುಳ್ಳು ಪ್ರಕರಣಗಳಿಂದ ಜೈಲು ಸೇರಿರುವ ಮಕ್ಕಳ ತಾಯಂದಿರಿಗೆ ನಾನು ಇದನ್ನು ಹೇಳಲು ಬಯಸುತ್ತೇನೆ. “ನಾವು ದೃಢವಾಗಿರಬೇಕು ಮತ್ತು ಸ್ವಲ್ಪ ಸಮಯದವರೆಗೆ ಕಾಯಬೇಕು. ನಮ್ಮ ಮಕ್ಕಳು ತಪ್ಪಿತಸ್ಥರಲ್ಲ. ಅವರಿಗೆ ನ್ಯಾಯ ಸಿಗುತ್ತದೆ. ಈ ಭಾರತಕ್ಕೆ ಹೆಚ್ಚು ದೇವಂಗಾನರು, ಹೆಚ್ಚು ನತಾಶಾಗಳು, ಹೆಚ್ಚು ಗಲ್ಫಿಷಾಗಳು ಬೇಕಾಗಿದ್ದಾರೆ.

ದೇವಂಗಾನ ಮತ್ತು ಅವಳ ಸ್ನೇಹಿತರ ಬಗ್ಗೆ ತಮ್ಮ ಚಾನೆಲ್‌ಗಳಲ್ಲಿ ಭೇಟೆಯಾಗಿದ ಮಾಧ್ಯಮಗಳಿಗೆ ನೀವು ಏನು ಹೇಳಲು ಬಯಸುತ್ತೀರಾ..?

ಟಿವಿ ಚಾನೆಲ್‌ಗಳು ದೇವಂಗಾನಳ ಮೇಲೆ ಹೇಗೆ ದಾಳಿ ನಡೆಸುತ್ತಿವೆ ಎಂದು ನಮ್ಮ ಸಂಬಂಧಿಕರು ನಮಗೆ ತಿಳಿಸಿದರು. ಆ ಟಿವಿ ನಿರೂಪಕರಿಗೆ ನಾನು ಹೇಳಲು ಒಂದು ವಿಷಯವಿದೆ – ನಿಮಗೆ ಬೇಕಾದುದನ್ನು ನೀವು ಹೇಳಬಹುದು. ಆದರೆ ನನಗೆ, ದೆಹಲಿ ಹೈಕೋರ್ಟ್‌ನ ತೀರ್ಪು ಭಾರತದಲ್ಲಿ ಪ್ರಜಾಪ್ರಭುತ್ವದ ವಿಜಯವಾಗಿದೆ.

ನೀವು ಸರ್ಕಾರಕ್ಕೆ ಏನು ಹೇಳಲು ಬಯಸುತ್ತೀರಿ..?

ಉತ್ತಮ ದೇಶವನ್ನು ನಿರ್ಮಿಸಲು, ಎಲ್ಲಾ ರೀತಿಯ ಜನರ ಧ್ವನಿಯನ್ನು ಕೇಳುವ ತಾಳ್ಮೆ ನಿಮಗೆ ಇರಬೇಕು ಎಂಬುದು ಸರ್ಕಾರಕ್ಕೆ ನನ್ನ ಸಂದೇಶ. ವಿಮರ್ಶೆ ಮತ್ತು ಚರ್ಚೆಗಳಿಗೆ ಅವಕಾಶ ನೀಡಿ. ನನ್ನ ಮಗಳು ತನಗಾಗಿ ಪ್ರತಿಭಟಿಸಲಿಲ್ಲ, ಅವಳು ತನ್ನ ದೇಶಕ್ಕಾಗಿ ಹೋರಾಟ ಮಾಡಿದಳು.

ನಿಮ್ಮ ಮಗಳ ಬಗ್ಗೆ ನಿಮಗೆ ಹೆಚ್ಚು ಹೆಮ್ಮೆ ಎನಿಸುತ್ತದೆಯೇ..?

ದೇವಂಗನಾ ತುಂಬಾ ಪ್ರಾಮಾಣಿಕ ಮತ್ತು ಕರುಣಾಮಯಿ. ನಾನು ಪ್ರತಿದಿನ ಅವಳಿಂದ ಸ್ಫೂರ್ತಿ ಪಡೆದಿದ್ದೇನೆ. ಅವಳು ಜೈಲುವಾಸವನ್ನು ಎದುರಿಸಬೇಕಾಗಿ ಬಂದ ನಂತರ, ಅವಳು ಇನ್ನೂ ಬಲಶಾಲಿ ಮಹಿಳೆಯಾಗಿ ಹೊರಬರುತ್ತಾಳೆ ಎಂದು ನನಗೆ ಖಾತ್ರಿಯಿದೆ. ನಾನು ಅವಳ ಬಗ್ಗೆ ಹೆಮ್ಮೆಪಡುತ್ತೇನೆ. ಅವಳು ತನ್ನ ಹೋರಾಟವನ್ನು ಮುಂದುವರಿಸಬೇಕು. ನಮ್ಮ ಹೆಣ್ಣುಮಕ್ಕಳಿಗೆ ನಿರ್ಧಾರ ತೆಗೆದುಕೊಳ್ಳುವ ಮತ್ತು ರಾಜಕೀಯದಲ್ಲಿ ಭಾಗವಹಿಸಲು ಮತ್ತು ಅನ್ಯಾಯದ ವಿರುದ್ಧ ದನಿ ಎತ್ತುವುದು ಮತ್ತಷ್ಟು ಅಗತ್ಯವಿದೆ. ಹೆಣ್ಣು ಮಕ್ಕಳು ಸ್ವತಂತ್ರರಾಗಿರಲಿ ಮತ್ತು ತಮ್ಮದೇ ಆದ ಆಯ್ಕೆಗಳನ್ನು ಮಾಡಿಕೊಳ್ಳಲಿ. ಪಂಜರಗಳನ್ನು ಮುರಿಯಲು ನಾವು ಅವರಿಗೆ ಅವಕಾಶ ನೀಡಬೇಕು (ಪಿಂಜ್ರಾ ಟೋಡ್ನೆ ದೋ).

ಅವಳು ಮನೆಗೆ ಹಿಂತಿರುಗಿದಾಗ ನೀವು ಮಾಡುವ ಮೊದಲ ಕೆಲಸ ಯಾವುದು..?

ನಾನು ಒಂದು ವರ್ಷಕ್ಕೂ ಹೆಚ್ಚು ಕಾಲ ಅವಳನ್ನು ನೋಡಿಲ್ಲ. ಅವಳು ಕರೆಯಲ್ಲಿ ಹೇಳುತ್ತಿದ್ದಳು, ‘ಮಾ, ನಾನು ಒಂದು ವರ್ಷದಿಂದ ಒಂದು ಮೊಟ್ಟೆಯನ್ನೂ ತಿಂದಿಲ್ಲ’. ತಿಹಾರ್ ಜೈಲಿನಲ್ಲಿ ಸಸ್ಯಾಹಾರಿ ಆಹಾರವನ್ನು ಮಾತ್ರ ನೀಡುತ್ತಾರೆ. ಅವಳು ಮಾಂಸಾಹಾರಿ ಮತ್ತು ನಮ್ಮ ಸಾಂಪ್ರದಾಯಿಕ ಅಸ್ಸಾಮೀಸ್ ಭೋಜನಗಳನ್ನು ತುಂಬಾ ಇಷ್ಟಪಡುತ್ತಾಳೆ. ಅವಳು ಹಿಂತಿರುಗಿದಾಗ, ನಾನು ಅವಳ ನೆಚ್ಚಿನ ಮೀನಿನ ಅಡುಗೆ ಮಾಡಿ ಕೊಡುತ್ತೇನೆ.’

ಮೂಲ: ಔಟ್‌ಲುಕ್‌

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ:ಯುಪಿ ಮುಸ್ಲಿಂ ವೃದ್ದನ ಮೇಲಿನ ದಾಳಿ ಪ್ರಕರಣ: ಪೊಲೀಸರ ಪ್ರತಿಪಾದನೆ ನಿರಾಕರಿಸಿದ ಕುಟುಂಬ

1 COMMENT

LEAVE A REPLY

Please enter your comment!
Please enter your name here