Homeಮುಖಪುಟಶಿಂಧೆ ಬಣವೇ ನಿಜವಾದ ಶಿವಸೇನೆ ಎಂದ ಮಹಾರಾಷ್ಟ್ರ ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ...

ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದ ಮಹಾರಾಷ್ಟ್ರ ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಉದ್ಧವ್ ಠಾಕ್ರೆ ಬಣ

- Advertisement -
- Advertisement -

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ‘ನಿಜವಾದ ಶಿವಸೇನೆ’ ಎಂದು ಗುರುತಿಸಿರುವ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ಆದೇಶದ ವಿರುದ್ಧ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ), ಸ್ಪೀಕರ್ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಬೇಕು, ಸಿಎಂ ಶಿಂಧೆ ಬಣದ ಶಾಸಕರು ವಿಧಾನಸಭೆ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಿ ಮಧ್ಯಂತರ ಆದೇಶ ನೀಡಬೇಕು ಹಾಗೂ ಶಿಂಧೆ ಬಣದ ಶಾಸಕರ ಸದಸ್ಯತ್ವವನ್ನು ಅಮಾನತು ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ನ್ನು ಕೋರಿದೆ.

ಶಿಂಧೆ ಬಣದ ಪರ ಸ್ಪೀಕರ್ ನೀಡಿರುವ ಆದೇಶ ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ. ಇದು ಸಂವಿಧಾನದ ಹತ್ತನೇ ಶೆಡ್ಯೂಲ್ (ಪಕ್ಷಾಂತರ ವಿರೋಧಿ ಕಾಯ್ದೆ) ಗೆ ವಿರುದ್ದವಾಗಿದೆ. ಶಿಂಧೆ ಬಣ ಪ್ರತ್ಯೇಕವಾಗಿ ಸರ್ಕಾರ ರಚಿಸಿರುವುದು ಶಿವಸೇನೆಯ ಸಂವಿಧಾನದ ಉಲ್ಲಂಘಣೆಯಲ್ಲ ಎಂದು ಸ್ಪೀಕರ್‌ ಹೇಳಿರುವುದು ಸಂಪೂರ್ಣ ತಪ್ಪು ಎಂದು ಠಾಕ್ರೆ ಬಣ ಆರೋಪಿಸಿದೆ.

ಬಿಜೆಪಿಯ ಬೆಂಬಲದೊಂದಿಗೆ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿದ್ದಾರೆ. ಅವರ ಬಣದ ಶಾಸಕರು ಬಿಜೆಪಿಯೊಂದಿಗೆ ಒಡನಾಟ ಹೊಂದಿರುವುದು ಸ್ಪಷ್ಟವಾಗಿದೆ. ಇದನ್ನು ಸ್ಪೀಕರ್ ಪರಿಗಣಿಸಿಲ್ಲ ಎಂದು ಠಾಕ್ರೆ ಬಣ ಆಪಾದಿಸಿದೆ.

ಮಹಾರಾಷ್ಟ್ರದ ಮಹಾ ಅಘಾಡಿ ಸರ್ಕಾರದ ಭಾಗವಾಗಿದ್ದ ಶಿವಸೇನೆಯಿಂದ ಬಂಡಾಯವೆದಿದ್ದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ, ಬಿಜೆಪಿ ಜೊತೆ ಸೇರಿ ಪ್ರತ್ಯೇಕ ಸರ್ಕಾರ ರಚಿಸಿತ್ತು. ಸಿಎಂ ಶಿಂಧೆ ಸೇರಿದಂತೆ ಪಕ್ಷದ ವಿರುದ್ದ ತೊಡೆ ತಟ್ಟಿದ್ದ ಶಾಸಕರನ್ನು ಅಮಾನತುಗೊಳಿಸುವಂತೆ ಉದ್ದವ್ ಠಾಕ್ರೆ ಬಣ ಕೋರಿತ್ತು. ಆದರೆ, ಸ್ಪೀಕರ್ ಈ ಕುರಿತು ಯಾವುದೇ ಆದೇಶ ನೀಡದೆ ವಿಳಂಬ ಮಾಡಿದ್ದರು.

ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ ಬಳಿಕ, ಜನವರಿ 10 ರಂದು ಏಕನಾಥ್ ಶಿಂಧೆ ಬಣದ ಪರ ಸ್ಪೀಕರ್ ತೀರ್ಪು ನೀಡಿದ್ದರು. ಶಿಂಧೆ ನೇತೃತ್ವದ ಶಿವಸೇನೆ ಬಣವು ಬಹುಪಾಲು ಪಕ್ಷದ ಶಾಸಕರ ಬೆಂಬಲವನ್ನು ಹೊಂದಿರುವುದರಿಂದ ಕಾನೂನುಬದ್ಧವಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ : ಮೋದಿ ಮಣಿಪುರಕ್ಕೆ ಯಾಕೆ ಭೇಟಿ ನೀಡಿಲ್ಲ ಎಂದು ಜನ ನಮ್ಮನ್ನು ಕೇಳ್ತಿದ್ದಾರೆ: ಜೈರಾಮ್ ರಮೇಶ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -