Homeಮುಖಪುಟಕಿರುತೆರೆ ತರ ತರ; ಕೂಸೆ ಮುನಿಸಾಮಿ ವೀರಪ್ಪನ್ ಮತ್ತು ಮೂರು ಷೋಗಳು

ಕಿರುತೆರೆ ತರ ತರ; ಕೂಸೆ ಮುನಿಸಾಮಿ ವೀರಪ್ಪನ್ ಮತ್ತು ಮೂರು ಷೋಗಳು

- Advertisement -
- Advertisement -

1. ಕೂಸೆ ಮುನಿಸಾಮಿ ವೀರಪ್ಪನ್

ಕೆಲವು ತಿಂಗಳ ಹಿಂದೆ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿದ್ದ ’ದ ಹಂಟ್ ಫಾರ್ ವೀರಪ್ಪನ್’ ಎಂಬ ಸಾಕ್ಷ್ಯಚಿತ್ರ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿತ್ತು. ’ವರ್ಕ್‌ಶಾಪ್’ ಎಂಬ ಹೆಸರಿನಲ್ಲಿ ಎಸ್‌ಟಿಎಫ್ ಪೊಲೀಸರು, ಅದರಲ್ಲಿಯೂ ಶಂಕರ ಬಿದರಿ ತಂಡ ನಡೆಸಿದ ದೌರ್ಜನ್ಯಗಳ ಬಗ್ಗೆ ಅದರ ಭಾಗವಾಗಿಯೇ ಇದ್ದ ಪೊಲೀಸ್ ಅಧಿಕಾರಿಯೊಬ್ಬರು ನಿವೇದಿಸಿಕೊಂಡಿದ್ದರು. ಆದರೆ ವೀರಪ್ಪನ್ ಒಬ್ಬ ಕಾಡುಗಳ್ಳನಾಗಿ-ಹಂತಕನಾಗಿ ರೂಪುಗೊಂಡಿದ್ದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ಅದು ಅಷ್ಟು ಮಾತಾಡಿರಲಿಲ್ಲ. ನಾಲ್ಕು ಎಪಿಸೋಡ್ ಇದ್ದ ಈ ಸಾಕ್ಷ್ಯಚಿತ್ರ ಹಲವು ಮುಖ್ಯ ಸಂಗತಿಗಳನ್ನು ಬಿಟ್ಟಿತ್ತು.

ಈ ಕೊರತೆಯನ್ನು ತುಸು ನೀಗಿಸುವ ನಿಟ್ಟಿನಲ್ಲಿ ಈಗ ಝೀ5 ಎಂಬ ಒಟಿಟಿ ವಾಹಿನಿಯಲ್ಲಿ ’ಕೂಸೆ ಮುನಿಸಾಮಿ ವೀರಪ್ಪನ್’ ಎಂಬ ಆರು ಎಪಿಸೋಡ್‌ಗಳ ಸಾಕ್ಷ್ಯಚಿತ್ರ ಬಿಡುಗಡೆಯಾಗಿದೆ. ಇದು ಮೊದಲಭಾಗ ಮಾತ್ರವಾಗಿದ್ದು ಸೀಸನ್-2 ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ನಕ್ಕೀರನ್ ಪತ್ರಿಕೆಯ ಸಂಪಾದಕ ಗೋಪಾಲ್ ಮತ್ತು ತಂಡ ಚಿತ್ರೀಕರಿಸಿದ್ದ ವೀರಪ್ಪನ್‌ನ ವಿಡಿಯೋ ಫುಟೇಜ್‌ಗಳನ್ನು ಯಥೇಚ್ಛವಾಗಿ ಬಳಸಿ ನಿರ್ಮಿಸಿರುವ ಈ ಡಾಕ್ಯುಮೆಂಟರಿ ವೀರಪ್ಪನ್‌ನನ್ನೇ ಮುಖ್ಯ ನಿರೂಪಕನನ್ನಾಗಿ ಕೇಂದ್ರೀಕರಿಸುತ್ತದೆ. ನಾಲ್ಕನೇ ಎಪಿಸೋಡ್ ಪೊಲೀಸರ ಚಿತ್ರಹಿಂಸೆಯ ಭಯಾನಕತೆಯನ್ನು ಚಿತ್ರಿಸಿದರೆ, ಐದನೇ ಎಪಿಸೋಡ್‌ನಲ್ಲಿ ವೀರಪ್ಪನ್ ನಡೆಸುವ ಮೈಂಡ್‌ಲೆಸ್ ಕಿಲ್ಲಿಂಗ್‌ನ ಚಿತ್ರಣ ವಿವರವಾಗಿದೆ. ಒಟ್ಟಿನಲ್ಲಿ ಪೊಲೀಸರ ಮತ್ತು ವೀರಪ್ಪನ್ ದೌರ್ಜನ್ಯದ ನಡುವೆ ಸ್ಪರ್ಧೆ ಇತ್ತೇನೋ ಎಂಬಂತೆ ಭಾಸವಾಗುವಂತೆ ಈ ಸೀರೀಸ್ ಮಾಡುತ್ತದೆ. ಉಳಿದ ಎಲ್ಲಾ ಚಿತ್ರಗಳಿಗೆ ಹೋಲಿಸಿದರೆ ವೀರಪ್ಪನ್ ಮತ್ತು ಸುತ್ತಮುತ್ತಲಿನ ಘಟನೆಗಳ ಬಗ್ಗೆ ತುಸು ಹೆಚ್ಚು ವಿವರಗಳನ್ನು ಈ ಸಾಕ್ಷ್ಯಚಿತ್ರ ಕಟ್ಟಿಕೊಡುತ್ತದೆ.

2. ಲೀವ್ ದ ವರ್ಲ್ಡ್ ಬಿಹೈಂಡ್

ಸ್ಯಾಮ್ ಎಸ್ಮಾಯಿಲ್ ನಿರ್ದೇಶನದ, ಜೂಲಿಯಾ ರಾಬರ್ಟ್ಸ್, ಮಾಹರ್ಶಾಲಾ ಅಲಿ, ಈಥನ್ ಹಾಕ್ ಮತ್ತು ಮೈಹಾ ಲಾ ಹೆರಾಲ್ಡ್ ಮುಖ್ಯಭೂಮಿಕೆಯಲ್ಲಿರುವ 141 ನಿಮಿಷಗಳ ಚಲನಚಿತ್ರ ’ಲೀವ್ ದ ವರ್ಲ್ಡ್ ಬಿಹೈಂಡ್’ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಅಮೆರಿಕನ್ ಅಪೋಕ್ಯಾಲಿಪ್ಟಿಕ್ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವಾದ ’ಲೀವ್ ದ ವರ್ಲ್ಡ್ ಬಿಹೈಂಡ್’ಅನ್ನು ರುಮಾನ್ ಆಲಮ್ ಅವರ 2020ರ ಅದೇ ಹೆಸರಿನ ಕಾದಂಬರಿಯಿಂದ ಅಳವಡಿಸಿಕೊಳ್ಳಲಾಗಿದೆ.

ಟೆಕ್ನಾಲಾಜಿಕಲ್ ವಾರ್‌ಫೇರ್‌ನಿಂದ ಆಗುವ ಬ್ಲಾಕ್‌ಔಟ್‌ನಿಂದ ಉಂಟಾಗುವ ಅಲ್ಲೋಲಕಲ್ಲೋಲವನ್ನು, ಐಲ್ಯಾಂಡ್ ಒಂದರಲ್ಲಿ ವೀಕೆಂಡ್ ರಜೆ ಕಳೆಯಲು ಬಂದಿರುವ ಫ್ಯಾಮಿಲಿಯ ದೃಷ್ಟಿಕೋನದಲ್ಲಿ ಈ ಸಿನಿಮಾ ಚಿತ್ರಿಸುತ್ತದೆ. ತುರ್ತು ಸನ್ನಿವೇಶಗಳಲ್ಲಿ ತಂತ್ರಜ್ಞಾನನ ಮೇಲೆ ವಿಪರೀತ ಅವಲಂಬಿಸಿರುವ ಆಧುನಿಕ ಮನುಷ್ಯನ ಅಸಹಾಯಕತೆಯನ್ನು ಕೂಡ ಚಿತ್ರಿಸುವ ಈ ಸಿನಿಮಾ, ಒಂದು ಡಿಸ್ಟೋಪಿಯನ್ ಚಿತ್ರಣವನ್ನು ಕಣ್ಣಮುಂದೆ ತರುತ್ತದೆ. ಜಿಪಿಎಸ್ ಫೇಲ್ ಆದರೆ, ವಿಮಾನಗಳು, ಡ್ರೈವರ್‌ಲೆಸ್ ಕಾರುಗಳು ಹೇಗೆ ಕೆಟಾಸ್ಟ್ರೋಫಿಕ್ ಆಗಬಲ್ಲವು ಎಂಬ ಕರಾಳ ಭವಿಷ್ಯವನ್ನು ಚಿತ್ರಿಸುವುದರ ಜೊತೆಗೆ, ಬಿಳಿಯರ ಜನಾಂಗೀಯ ದ್ವೇಷ, ಜಗತ್ತು ಮುಳುಗುತ್ತಿರುವ ಸನ್ನಿವೇಶದಲ್ಲಿಯೂ ಕಪ್ಪು ಜನರನ್ನು ತುಚ್ಛವಾಗಿ ಕಾಣುವ, ಸಹಜೀವನಕ್ಕೆ ಮುಂದಾಗದ ಬಿಳಿ ಜನರ ಒಣಪ್ರತಿಷ್ಠೆಯನ್ನು ಈ ಸಿನಿಮಾ ಹಿಡಿದಿಡಲು ಪ್ರಯತ್ನಿಸುತ್ತದೆ. ಈ ವಾರ್‌ಫೇರ್ ಹೊರಗಿನವರಿಂದ ಆಗಿರದೆ, ರಾಜಕೀಯ ಲಾಭಕ್ಕಾಗಿ ತಮ್ಮದೇ ದೇಶದ ಸಂಪ್ರದಾಯವಾದಿ ಪಕ್ಷ ನಡೆಸಿರಬಹುದಾದ ಯುದ್ಧ ಇದಾಗಿರಬಹುದು ಎಂದು ಪಾತ್ರವೊಂದು ಹೇಳುವುದು ಗಮನ ಸೆಳೆಯುತ್ತದೆ.

ಇದನ್ನೂ ಓದಿ: ಬಿಳಿಯರ ಪಾಪನಿವೇದನೆಯ ’ಕಿಲ್ಲರ್ಸ್ ಆಫ್ ದ ಫ್ಲವರ್ ಮೂನ್’

 

3. ಟ್ರೆವರ್ ನೋವ: ವೇರ್ ವಾಸ್ ಐ

ಟ್ರೆವರ್ ನೋವ ಸೌಥ್ ಆಫ್ರಿಕಾದ ಕಾಮಿಡಿಯನ್. ಸ್ಟಾಂಡ್ ಅಪ್ ಕಾಮಿಡಿ ಶೋಗಳಿಗೆ ಹೆಸರುವಾಸಿಯಾದ ಟ್ರೆವರ್, ಅಮೆರಿಕದ ಡೆಟ್ರಾಯ್ಟ್ ನಗರದ ತುಂಬಿದ ಸಭಾಂಗಣದಲ್ಲಿ ನಡೆಸಿಕೊಟ್ಟ ಸ್ಟಾಂಡ್ ಅಪ್ ಕಾಮಿಡಿ ಶೋ ಈಗ ನೆಟ್‌ಫ್ಲಿಕ್ಸ್‌ನಲ್ಲಿ ’ಟ್ರೆವರ್ ನೋವ: ವೇರ್ ವಾಸ್ ಐ’ ಹೆಸರಿನಲ್ಲಿ ಪ್ರಸಾರವಾಗುತ್ತಿದೆ.

ತಮ್ಮ ಬರ್ಲಿನ್ ಪ್ರವಾಸದಲ್ಲಿ ನಡೆಸಿಕೊಟ್ಟ ಶೋ ಬಗೆಗಿನ ಅನುಭವದೊಂದಿಗೆ ಶುರುವಾಗುವ ಈ ಕಾರ್ಯಕ್ರಮ ನಾಜಿಗಳನ್ನು, ನಾಜಿಗಳ ರಾಷ್ಟ್ರಗೀತೆಯನ್ನು ವ್ಯಂಗ್ಯ ಮಾಡುವುದಲ್ಲದೆ, ರಾಷ್ಟ್ರಗೀತೆಯ ಸಾಹಿತ್ಯ ಬದಲಿಸಿ, ಮ್ಯೂಸಿಕ್ ಮತ್ತು ಟ್ಯೂನ್‌ಅನ್ನು ಹಾಗೆಯೇ ಉಳಿಸಿಕೊಂಡ ಪೋಸ್ಟ್ ವಾರ್ ಜರ್ಮನಿಯ ನಡೆ ಎಷ್ಟು ವಿಚಿತ್ರವಾದದ್ದು ಮತ್ತು ಉಪಯೋಗವಿಲ್ಲದ್ದು ಎಂದು ಹಾಸ್ಯ ಶೈಲಿಯಲ್ಲಿ, ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಮೂಲಕ ಟ್ರೆವರ್ ಮಾತನಾಡುತ್ತಾರೆ. ಸುಮಾರು 70 ನಿಮಿಷಗಳ ಈ ಶೋನಲ್ಲಿ ಜನಾಂಗೀಯ ತಾರತಮ್ಯ, ಲಿಂಗ ತಾರತಮ್ಯ, ಹುಸಿ ನ್ಯಾಷನಲಿಸಂ ಎಲ್ಲವೂ ಹಾದುಹೋಗುತ್ತವೆ.

2016ರಲ್ಲಿ ಟ್ರೆವರ್ ಬರೆದಿದ್ದ ’ಬಾರ್ನ್ ಇನ್ ಕ್ರೈಮ್’ (ಸ್ಟೋರೀಸ್ ಫ್ರಮ್ ಚೈಲ್ಡ್‌ಹುಡ್) ಎಂಬ ಆತ್ಮಕತೆಗಳ ಪುಸ್ತಕ ಜನಪ್ರಿಯತೆ ಪಡೆದಿತ್ತು.

4. ಚಿತ್ತ

ಅರುಣ್ ಕುಮಾರ್ ನಿರ್ದೇಶನದ ತಮಿಳು ನಟ ಸಿದ್ಧಾರ್ಥ ನಟಿಸಿರುವ ಚಿತ್ತ (ಚಿಕ್ಕಪ್ಪ) ಮೊದಲು ಥಿಯೇಟರ್‌ಗಳಲ್ಲಿ ತೆರೆಕಂಡು, ಈಗ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ. ಇದು ಮೂಲ ತಮಿಳು ಚಿತ್ರವಾದರೂ, ಕನ್ನಡ, ತೆಲುಗು, ಹಿಂದಿ ಮುಂತಾದ ಭಾಷೆಗಳಲ್ಲಿ ಸಿನಿಮಾದ ಡಬ್ ಅವತರಣಿಕೆ ಕೂಡ ಇದೆ.

ಸುಂದರಿ ಮತ್ತು ಆಕೆಯ ಚಿಕ್ಕಪ್ಪ ಈಶ್ವರನ್ (ಸಿದ್ಧಾರ್ಥ) ನಡುವಿನ ಭಾವನಾತ್ಮಕ ಸಂಬಂಧ ಸುತ್ತ ಸುತ್ತುವ ಚಿತ್ರ, ಮಕ್ಕಳನ್ನು ಅಬ್ಯೂಸ್ ಮಾಡುವ ಥ್ರಿಲ್ಲರ್ ಕಥೆಯಾಗಿ ಬದಲಾಗುತ್ತದೆ. ಈ ಥ್ರಿಲ್ಲರ್ ಸಿನಿಮಾದಲ್ಲಿ, ಕಾಣೆಯಾಗುವ ಸುಂದರಿಯನ್ನು ಈಶು ಹುಡುಕುವ ಕಥೆ ’ಹೀರೋಯಿಕ್’ ಮಾದರಿಯಲ್ಲಿ ಮೂಡಿಬಂದಿದ್ದರೂ, ಆ ಹೀರೋಯಿಸಂಗೆ ಚಿಕಿತ್ಸೆಯಾಗಿ ಸಕ್ತಿ (ನಿಮಿಶಾ ಸಜಯನ್) ಪಾತ್ರ ಕಾಡುತ್ತದೆ. ಪೌರಕಾರ್ಮಿಕಳ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಕ್ತಿ ಈಶುವಿನ ಪ್ರಿಯತಮೆ. ಸಣ್ಣವಯಸ್ಸಿನಲ್ಲಿಯೇ ಸಂಬಂಧಿಕನೊಬ್ಬನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವವಳು. ಅತ್ತ ಅಣ್ಣನ ಮಗಳ ವಿರುದ್ಧ ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಕೊಲ್ಲಲು ಮುಂದಾಗುವ ಈಶು, ಸಕ್ತಿಯ ಜತೆಗೆ ಆಗಿರುವ ದೌರ್ಜನ್ಯವನ್ನು ತಿಳಿದುಕೊಳ್ಳುವ, ಅದಕ್ಕೆ ಕೊನೆ ಪಕ್ಷ ಸಂತೈಸುವುದಕ್ಕೂ ಸಂಯಮ ಇಲ್ಲದವನು. ಒಂದು ಪುರುಷಾಧಿಕಾರದ ದೌರ್ಜನ್ಯವನ್ನು ಅದೇ ಪುರುಷ ಅಹಂಕಾರದಿಂದ ಮೆಟ್ಟಬಹುದೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವಂತೆ, ಸಕ್ತಿಯ ಪಾತ್ರ ಚಿಕ್ಕ ಅವಧಿಗೆ ಬಂದರೂ ಪ್ರೇರೇಪಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಥುರಾ ಭೂ ವಿವಾದ: ಫೆಬ್ರವರಿ 29ರಂದು ಅಲಹಾಬಾದ್ ಹೈಕೋರ್ಟಿನಲ್ಲಿ ವಿಚಾರಣೆ

0
ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಹೂಡಿರುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಫೆಬ್ರವರಿ 29ಕ್ಕೆ ನಿಗದಿಪಡಿಸಿದೆ. ಶಾಹಿ ಈದ್ಗಾ ಇಂತೇಜಾಮಿಯಾ ಸಮಿತಿಯು ಕತ್ರ...