Homeಕರ್ನಾಟಕಕುಣಿಗಲ್ ಬಿಜೆಪಿ ಟಿಕೆಟ್ ಮಿಸ್; ದುರಂತ ನಾಯಕ ಮುದ್ದಹನುಮೇಗೌಡ ಪಕ್ಷೇತರರಾಗಿ ಸ್ಪರ್ಧೆ

ಕುಣಿಗಲ್ ಬಿಜೆಪಿ ಟಿಕೆಟ್ ಮಿಸ್; ದುರಂತ ನಾಯಕ ಮುದ್ದಹನುಮೇಗೌಡ ಪಕ್ಷೇತರರಾಗಿ ಸ್ಪರ್ಧೆ

- Advertisement -
- Advertisement -

ಕುಣಿಗಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸ್‌ಪಿ ಮುದ್ದಹನುಮೇಗೌಡ  ಅವರಿಗೆ ಈ ಬಾರಿಯೂ ಟಿಕೆಟ್ ನೀಡದಿದ್ದಕ್ಕೆ ಬೇಸರಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲು ನಿರ್ಧರಿಸಿದ್ದಾರೆ.

ಮುದ್ದಹನುಮೇಗೌಡ ಅವರು ಸ್ಪರ್ಧೆ ಉದ್ದೇಶದಿಂದಲೇ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ್ದರು. ಆದರೆ ಇಲ್ಲಿಯೂ ಟಿಕೆಟ್‌ ಸಿಗದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ರಾಜಕೀಯದ ಆರಂಭದಿಂದ ಈ ವರೆಗೂ ಎಸ್‌ಪಿ ಮುದ್ದಹನುಮೇಗೌಡ ಅವರು ನಿರಂತರವಾಗಿ ‘ವಿಶ್ವಾಸ ದ್ರೋಹ’ ಹಾಗೂ ಸಮಯದ ಕೈಗೊಂಬೆಗೆ ತುತ್ತಾಗಿರುವ ನಾಯಕರಾಗಿದ್ದಾರೆ. ಇದೀಗ ಯಾವ ಪಕ್ಷದ ಹಂಗು ಇಲ್ಲದೇ ‘ಸ್ವತಂತ್ರ’ರಾಗಲು ತೀರ್ಮಾನ ಮಾಡಿದ್ದಾರೆ.

ಈ ಬಗ್ಗೆ ನೋವು ಹೊರಹಾಕಿಕೊಂಡಿರುವ ಅವರು, ”ಬಹಳ ನೋವಿನಿಂದ ಹೇಳಿಕೊಳ್ಳುತ್ತೇನೆ. ಕಾಂಗ್ರೆಸ್‌ನವರು 3 ಬಾರಿ, ಜೆಡಿಎಸ್‌ನವರು 1 ಬಾರಿ ಅನ್ಯಾಯ ಮಾಡಿದ್ದರು. ಈಗ ಬಿಜೆಪಿ ಟಿಕೆಟ್‌ ಕೂಡ ನೀಡಿಲ್ಲ. ಪರವಾಗಿಲ್ಲ ಜನ ಸ್ಪರ್ಧೆಗೆ ಒತ್ತಾಯಿಸುತ್ತಿದ್ದಾರೆ. ಯಾರು ಏನೇ ಮಾಡಿದರೂ ಜನರ ತೀರ್ಪು ಅಂತಿಮ. ನಾನು ಜನತಾ ನ್ಯಾಯಾಲಯದಲ್ಲೇ ನ್ಯಾಯ ಕೋರುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟಿಕೆಟ್ ಕೈತಪ್ಪಲು ಸಿ.ಟಿ ರವಿ ಕಾರಣ: ಬಿಜೆಪಿಗೆ ಗುಡ್ ಬೈ ಹೇಳಿದ ಎಂ.ಪಿ ಕುಮಾರಸ್ವಾಮಿ

ತುಮಕೂರು ರಾಜಕಾರಣದ ದುರಂತ ನಾಯಕ

1989ರ ಕುಣಿಗಲ್‌ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಎಸ್‌ಪಿ ಮುದ್ದಹನುಮೇಗೌಡರಿಗೆ  ಕಾಂಗ್ರೆಸ್ ಪಕ್ಷ ಬಿ ಫಾರಂ ಕೊಟ್ಟಿತ್ತು.  ಆದರೆ ಆ ನಂತರ ಲಕ್ಕಪ್ಪ ಅವರಿಗೆ ಸಿ ಫಾರಂ ನೀಡಿ ಕಣಕ್ಕಿಳಿಸಿತ್ತು. ಅದಾದ ಬಳಿಕ 1994 ಮತ್ತು 1999ರಲ್ಲಿ ಕಾಂಗ್ರೆಸ್‌ನಿಂದ ಸತತ ಎರಡು ಬಾರಿ ಚುನಾಯಿತರಾದ ಎಸ್‌ಪಿ ಮುದ್ದಹನುಮೇಗೌಡ 2004ರಲ್ಲಿ ಪರಾಭವಗೊಂಡರು.

2004ರಲ್ಲಾದ ಒಂದೇ ಒಂದು ಸೋಲಿನಿಂದಾಗಿ ಅವರಿಗೆ ಮತ್ತೆ ಎರಡನೇ ಅವಕಾಶವೇ ಸಿಗಲೇ ಇಲ್ಲ. 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದಾಗ ಕುಣಿಗಲ್‌ ಅಥವಾ ತುಮಕೂರು ಗ್ರಾಮಾಂತರ ಎರಡರಲ್ಲಿ ಒಂದು ಕ್ಷೇತ್ರಕ್ಕಾದರೂ ಕಾಂಗ್ರೆಸ್‌ ಎಸ್‌ಪಿಎಂಗೆ ಟಿಕೆಟ್‌ ನೀಡಬಹುದಿತ್ತು. ಆದರೆ, ಎರಡೂ ಕ್ಷೇತ್ರಕ್ಕೂ ಇವರನ್ನು ಕಡೆಗಣಿಸಲಾಯಿತು.

2009ರಲ್ಲಿ ಜೆಡಿಎಸ್‌ನಿಂದ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಪರಾಜಯಗೊಂಡಿದ್ದ ಎಸ್‌ಪಿ ಮುದ್ದಹನುಮೇಗೌಡಗೆ ಜೆಡಿಎಸ್‌ ಪಕ್ಷವು ಕುಣಿಗಲ್‌ ಕ್ಷೇತ್ರದ ಟಿಕೆಟ್‌ ನೀಡುವ ಭರವಸೆ ನೀಡಿ ಕೈಕೊಟ್ಟಿತು. ಬಿ ಫಾರಂ ನೀಡಿ ಆನಂತರ ಡಿ ನಾಗರಾಜಯ್ಯ ಅವರಿಗೆ ಸಿ ಫಾರಂ ಕೊಟ್ಟು ಜೆಡಿಎಸ್‌ ಕಣಕ್ಕಿಳಿಸಿತು.

2014ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆದ್ದ ಎಸ್‌ಪಿ ಮುದ್ದಹನುಮೇಗೌಡ ಅತ್ಯುತ್ತಮ ಸಂಸದೀಯ ಪಟುವಾಗಿ ಜನಪ್ರಿಯತೆ ಹೆಚ್ಚಿಸಿಕೊಂಡರು. ಹಾಲಿ ಸಂಸದರಾಗಿದ್ದರೂ 2019ರ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯ ನೆಪದಲ್ಲಿ ಎಚ್‌ಡಿ ದೇವೇಗೌಡರನ್ನು ಕಣಕ್ಕಿಳಿಸಿ ಎಸ್‌ಪಿ ಮುದ್ದಹನುಮೇಗೌಡರಿಗೆ ಕೈಕೊಟ್ಟಿತು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಕಾರಣವಿಲ್ಲದೆ ತಪ್ಪಿದ್ದಕ್ಕೆ ಕುಣಿಗಲ್‌ನಿಂದ ಕೈ ಟಿಕೆಟ್‌ಗೆ ಪಟ್ಟು ಹಿಡಿದಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸಂಬಂಧಿ ಹಾಲಿ ಶಾಸಕ ಡಾ ಎಚ್‌ಡಿ ರಂಗನಾಥ್‌ಗೆ ಟಿಕೆಟ್‌ ನೀಡುವುದು ಖಾತ್ರಿಯಾಗಿದ್ದರಿಂದ, ಈ ಚುನಾವಣೆಯಲ್ಲಿ ಸ್ಪರ್ಧಿಸಿ ಪಾಠ ಕಲಿಸಬೇಕು ಎಂದು ಪಣತೊಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು.

ಮುದ್ದಹನುಮೇಗೌಡ ಅವರು ಕಾಂಗ್ರೆಸ್‌ನಿಂದ 3 ಬಾರಿ, ಜೆಡಿಎಸ್‌ನಿಂದ ಒಂದು ಬಾರಿ ‘ವಿಶ್ವಾಸದ ಹೊಡೆತ’ ತಿಂದಿದ್ದ ಅವರು, ಈ ಬಾರಿ ಬಿಜೆಪಿಯಿಂದ ಕುಣಿಗಲ್‌ ಟಿಕೆಟ್‌ ನಿರೀಕ್ಷಿಸಿದ್ದರು. ಆದರೆ ಬಿಜೆಪಿಯು 3 ಬಾರಿ ಸೋತಿರುವ ಡಿ ಕೃಷ್ಣಕುಮಾರ್‌ಗೆ ಮಣೆ ಹಾಕಿದೆ. ಹೀಗಾಗಿ ಎಸ್‌ಪಿ ಮುದ್ದಹನುಮೇಗೌಡ ಬೇಸರದಿಂದ ಸ್ವತಂತ್ರ ಅಭ್ಯರ್ಥಿಯಾಗಲು ಮುಂದಾಗಿದ್ದಾರೆ.

ಚುನಾವಣಾ ರಾಜಕೀಯ ಜೀವನದುದ್ದಕ್ಕೂ ‘ದುರಂತ’ ನಾಯಕರಾಗಿರುವ ಎಸ್‌.ಪಿ.ಮುದ್ದಹನುಮೇಗೌಡ ಈ ಬಾರಿ ಕುಣಿಗಲ್‌ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...