BJPಗೆ ಸರ್ಕಾರ ರಚಿಸಲು ಬಹುಮತವಿಲ್ಲ, ಅವರ ಆಟವನ್ನು ನಾವು ಬಯಲುಗೊಳಿಸುತ್ತೇವೆ. BJP ಜೊತೆ ಹೋದ ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಕ್ರಮ ಎದುರಿಸಬೇಕಾಗುತ್ತದೆ ಎಂದು NCP ಮುಖಂಡ ಶರದ್ ಪವಾರ್ ಎಚ್ಚರಿಕೆ ನೀಡಿದ್ದಾರೆ.
ಇಂದು ಮುಂಬೈನಲ್ಲಿ ನಡೆದ ಎನ್‌ಸಿಪಿ – ಶಿವಸೇನೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮಗೆ ಸರ್ಕಾರ ರಚನೆಗೆ 156 ಶಾಸಕರ ಬೆಂಬಲವಿತ್ತು. ಆದರೆ ಅಜಿತ್ ಪವಾರ್‌ರವರ ಬಿಜೆಪಿ ಬೆಂಬಲದಿಂದ ಗೊಂದಲ ಉಂಟಾಗಿದ್ದು ಇದರಿಂದ ನಮಗೆ ಯಾವುದೇ ಮುಖಭಂಗವಾಗಿಲ್ಲ, ನಾವು ಸರ್ಕಾರ ರಚಿಸುತ್ತೇವೆ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲದೇ ಬೆಳಿಗ್ಗೆ ಅಜಿತ್ ಪವಾರ್ ಜೊತೆ ರಾಜ್ಯಪಾಲರ ಕಚೇರಿಗೆ ಹೋಗಿದ್ದ ಮೂವರು ಶಾಸಕರನ್ನು ವಾಪಸ್ ಕರೆತಂದಿರುವ ಅವರು, ಆ ಶಾಸಕರಿಂದಲೇ ಮಾಧ್ಯಮಗಳ ಎದುರು ಮಾತನಾಡಿಸಿ ಅವರ ಬೆಂಬಲ ಬಿಜೆಪಿಗಿಲ್ಲ, ಕೇವಲ 08-10 ಶಾಸಕರು ಮಾತ್ರ ಬಿಜೆಪಿ ಜೊತೆಗಿದ್ದು ಅವರ ಮನವೊಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಈ ರೀತಿ ಸರ್ಕಾರ ರಚಿಸುವ ಬಗ್ಗೆ ಬೆಳಿಗ್ಗೆ 6:30ಕ್ಕೆ ನಮಗೆ ಮಾಹಿತಿ ಸಿಕ್ಕಿತ್ತು ಎಂದಿರುವ ಅವರು ಸದ್ಯಕ್ಕೆ ನಾವು ಯಾರನ್ನು ಅನರ್ಹಗೊಳಿಸುವುದಿಲ್ಲ. ನವೆಂಬರ್ 30ರೊಳಗೆ ಅವರ ಮನವೊಲಿಸುತ್ತೇವೆ ಎಂದಿದ್ದಾರೆ.
ಇನ್ನು ಬೆಳಿಗ್ಗೆ ತಾನೇ ಅಜಿತ್ ಪವಾರ್ ಜೊತೆ ಹೋಗಿದ್ದ 10 ಶಾಸಕರಲ್ಲಿ ಮೂವರು ವಾಪಸ್ ಬಂದಿದ್ದು, ನಮಗೆ ಸರಿಯಾದ ಮಾಹಿತಿಯಿರಲಿಲ್ಲ ಹಾಗಾಗಿ ಹೋಗಿದ್ದೆವಷ್ಟೇ, ಆದರೆ ನಮ್ಮ ಬೆಂಬಲ ಶರದ್ ಪವಾರ್‌ರವರಿಗೆ ಎಂದು ಘೋಷಿಸಿದ್ದಾರೆ.
ಬಿಜೆಪಿ ನಾಯಕರ ಕುತಂತ್ರ ಬಯಲಾಗಿದೆ ಎಂದಿರುವ ಉದ್ಧವ್ ಠಾಕ್ರೆ, ಬಿಜೆಪಿ ಪಕ್ಷವನ್ನು ಇಬ್ಬಾಗ ಮಾಡುವ ಕೆಲಸ ಮಾಡುತ್ತಿದೆ. ನಾವು ಪಕ್ಷಗಳನ್ನು ಜೋಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.


