ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಕನಿಷ್ಠ 10 ವರ್ಷಗಳು ಕಡ್ಡಾಯ ಸೇವೆ ಸಲ್ಲಿಸಬೇಕು, ಇಲ್ಲದಿದ್ದರೇ ಸರ್ಕಾರಕ್ಕೆ 1 ಕೋಟಿ ರೂಪಾಯಿ ಪಾವತಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ.
ಉತ್ತರ ಪ್ರದೇಶದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ರಾಜ್ಯದ ಪಿಜಿ ವೈದ್ಯಕೀಯ ವಿದ್ಯಾರ್ಥಿಗಳು 10 ವರ್ಷ ಪೂರೈಸುವ ಮೊದಲು ಸರ್ಕಾರಿ ಆಸ್ಪತ್ರೆಗಳ ಕೆಲಸದಿಂದ ಹೊರಗುಳಿದರೆ ಅವರಿಗೆ 1 ಕೋಟಿ ರೂ.ಗಳ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಂದಿನ ಮೂರು ವರ್ಷಗಳವರೆಗೆ ಅಂತಹ ವಿದ್ಯಾರ್ಥಿಗಳನ್ನು ಕೋರ್ಸ್‌ನಿಂದ ನಿರ್ಬಂಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉತ್ತರಪ್ರದೇಶ: ಬಲವಂತದ ಮತಾಂತರಕ್ಕೆ 1-10 ವರ್ಷ ಜೈಲು, 25000 ದಂಡ!
ವರದಿಗಳ ಪ್ರಕಾರ, ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿ ತಜ್ಞ ವೈದ್ಯರ ಕೊರತೆಯನ್ನು ನಿಭಾಯಿಸಲು ಉತ್ತರ ಪ್ರದೇಶ ಸರ್ಕಾರ ಈ ಕಡ್ಡಾಯ ಸೇವೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. “ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗಾಗಿ 15,000 ಕ್ಕೂ ಹೆಚ್ಚು ಹುದ್ದೆಗಳನ್ನು ರಚಿಸಲಾಗಿದೆ ಮತ್ತು ಪ್ರಸ್ತುತ 11,000 ಎಂಬಿಬಿಎಸ್ ವೈದ್ಯರು ಈ ಹುದ್ದೆಗಳನ್ನು ಅಲಂಕರಿಸಿದ್ದಾರೆ’ ಎಂದು ಅಮಿತ್ ಮೋಹನ್ ಪ್ರಸಾದ್ ಹೇಳಿದ್ದಾರೆ.
ಗ್ರಾಮೀಣ ಸರ್ಕಾರಿ ಆಸ್ಪತ್ರೆಯಲ್ಲಿ ಕನಿಷ್ಠ ಒಂದು ವರ್ಷ ಉದ್ಯೋಗದಲ್ಲಿರುವ ಎಂಬಿಬಿಎಸ್ ವೈದ್ಯರಿಗೆ ನೀಟ್ ಪರೀಕ್ಷೆಯಲ್ಲಿ ರಿಯಾಯಿತಿ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಅಂತೆಯೇ, ಗ್ರಾಮೀಣ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ವರ್ಷಗಳ ಅನುಭವ ಹೊಂದಿರುವವರು ನೀಟ್ ಪರೀಕ್ಷೆಯಲ್ಲಿ 20 ಅಂಕಗಳ ರಿಯಾಯಿತಿ ಪಡೆದರೆ, ಮೂರು ವರ್ಷಗಳ ಅನುಭವ ಹೊಂದಿರುವವರಿಗೆ 30 ಅಂಕಗಳ ರಿಯಾಯಿತಿ ಸಿಗುತ್ತದೆ.


