ಅಮೆರಿಕಾದಲ್ಲಿ ಡೆಲ್ಟಾ ರೂಪಾಂತರಿಯ ಪ್ರಾಬಲ್ಯ ಹೆಚ್ಚಾಗುತ್ತಿದ್ದು, ಕೊರೊನಾ ಪ್ರಕರಣಗಳು ವೇಗವಾಗಿ ಏರುತ್ತಿವೆ ಎಂದು ಡೇಟಾ ಖಚಿತ ಪಡಿಸಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆಗಳು ಕೂಡ ಅಮೆರಿಕಾದಲ್ಲಿ ಸ್ಥಗಿತಗೊಂಡಿವೆ ಎಂದು ವರದಿ ತಿಳಿಸಿದೆ.
ಕಳೆದ ಏಳು ದಿನಗಳ ಸರಾಸರಿ ತೆಗೆದುಕೊಂಡರೇ, ಹೊಸ ಪ್ರಕರಣಗಳ ಏರಿಕೆ ಜುಲೈ 6 ರ ವೇಳೆಗೆ 13,859 ಆಗಿದ್ದು, ಎರಡು ವಾರಗಳ ಹಿಂದಿನ ಪ್ರಕರಣಗಳಿಗೆ ಹೋಲಿಸಿದರೆ 21 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC) ತಿಳಿಸಿವೆ.
ಈ ಪ್ರಕರಣಗಳಲ್ಲಿ ಜುಲೈ 4 ರ ವಾರಾಂತ್ಯದ ರಜಾದಿನಗಳನ್ನು ಸೇರಿಸಿಲ್ಲ. ಅದನ್ನು ಸೇರಿಸಿದರೇ, ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಬಹುದು. ಡೆಲ್ಟಾ ರೂಪಾಂತರಿ ಪ್ರಕರಣಗಳು ಹೆಚ್ಚಾಗಿದ್ದು, ಇದರಿಂದಾಗಿಯೇ ಸುಮಾರು 52 ಪ್ರತಿಶತದಷ್ಟು ಪ್ರಕರಣಗಳು ಹೆಚ್ಚಾಗಿವೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ತಿಳಿಸಿವೆ.
ಇದನ್ನೂ ಓದಿ: ಡೆಲ್ಟಾ ಪ್ಲಸ್ ರೂಪಾಂತರಿ ಹೆಚ್ಚು ಸಾವುಗಳಿಗೆ ಕಾರಣವಾಗುತ್ತೆ ಎನ್ನಲು ಮಾಹಿತಿಯಿಲ್ಲ: ಡಾ. ರಂದೀಪ್ ಗುಲೇರಿಯಾ
ವಿಶ್ವದ ಎಲ್ಲಾ ದೇಶಗಳಿಗಿಂತ ಹೆಚ್ಚಿನ ಲಸಿಕೆಗಳ ಲಭ್ಯತೆ ಇದ್ದರೂ ಕೂಡ ಅಮೆರಿಕ, ಲಸಿಕಾ ಅಭಿಯಾನವನ್ನು ಏಪ್ರಿಲ್‌ನಿಂದಲೇ ಸ್ಥಗಿತಗೊಳಿಸಿತ್ತು. ಶೇಕಡಾ 70 ರಷ್ಟು ವಯಸ್ಕರಿಗೆ ಭಾಗಶಃ ಲಸಿಕೆ ಹಾಕುವ ಗುರಿಯನ್ನು ಕೂಡ ಅಮೆರಿಕಾದಲ್ಲಿ ತಲುಪಲಾಗಿಲ್ಲ. ಇಲ್ಲಿಯವರೆಗೆ ಶೇಕಡಾ 67 ರಷ್ಟು ವಯಸ್ಕರಿಗೆ ಲಸಿಕೆ ಹಾಕಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು, ಮಿಸೌರಿಯ (Missouri) ಸ್ಪ್ರಿಂಗ್‌ಫೀಲ್ಡ್ ಆಸ್ಪತ್ರೆಯಲ್ಲಿ ಈ ವಾರಾಂತ್ಯದಲ್ಲಿ ಆಸ್ಪತ್ರೆಗೆ ದಾಖಲಾದ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ವೆಂಟಿಲೇಟರ್‌ಗಳ ಕೊರತೆ ಉಂಟಾಗಿದೆ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
“ಅಮೆರಿಕಾದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಎರಡು ವಿಭಿನ್ನ ಸ್ವರೂಪಗಳಿವೆ. ಇದರಲ್ಲಿ ಒಂದು ಹೆಚ್ಚು ಲಸಿಕೆ ಪಡೆಯದ ಜನರಿರುವ ಸ್ಥಳಗಳಲ್ಲಿ ವೈರಸ್ ಹೆಚ್ಚಾಗಿದೆ. ಇನ್ನೊಂದು, ದೇಶದ ಇತರ ಭಾಗಗಳಲ್ಲಿ ಉಸಿರಾಟದ ಸಮಸ್ಯೆಯಾಗಿ ಮಾರ್ಪಟ್ಟಿದೆ” ಎಂದು ಜಾನ್ಸ್ ಹಾಪ್ಕಿನ್ಸ್ ಕೇಂದ್ರದ ಅಮೆಶ್ ಅಡಾಲ್ಜಾ ತಿಳಿಸಿದ್ದಾರೆ.
ದೇಶದಲ್ಲಿಯೂ ಡೆಲ್ಟಾ ವೈರಸ್ ಪ್ರಕರಣಗಳು ಕಂಡುಬಂದಿದ್ದು, ಡೆಲ್ಟಾ ಪ್ಲಸ್ ರೂಪಾಂತರಿ ಹೆಚ್ಚು ಸಾಂಕ್ರಾಮಿಕ ಮತ್ತು ಹೆಚ್ಚಿನ ಸಾವುಗಳಿಗೆ ಕಾರಣವಾಗುತ್ತದೆ ಎನ್ನಲು, ಡೆಲ್ಟಾ ಪ್ಲಸ್ ವೈರಸ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಎಂದು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಇದನ್ನೂ ಓದಿ: ಡೆಲ್ಟಾ ಪ್ಲಸ್ ರೂಪಾಂತರಿಯು ಮೂರನೇ ಅಲೆಗೆ ಕಾರಣವಾಗಬಹುದು: ಟಾಸ್ಕ್ ಫೋರ್ಸ್ ಎಚ್ಚರಿಕೆ


