ಕೋವ್ಯಾಕ್ಸಿನ್ ತುರ್ತು ಬಳಕೆಯ ಅನುಮತಿಗಾಗಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಲ್ಲಿಸಿದ ಪ್ರಸ್ತಾಪವನ್ನು ಅಮೆರಿಕಾದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ) ತಿರಸ್ಕರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕಾದಲ್ಲಿ ಭಾರತ್ ಬಯೋಟೆಕ್ ಪಾಲುದಾರ ಒಕುಜೆನ್ (Ocugen) ಕಂಪನಿಯು ಕೋವಾಕ್ಸಿನ್ ಬಳಕೆಗೆ ಸಂಪೂರ್ಣ ಅನುಮೋದನೆ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿತ್ತು.
ತುರ್ತು ಬಳಕೆ ಪ್ರಸ್ತಾವನೆಗೆ ಅನುಮತಿ ದೊರೆಯದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಒಕುಜೆನ್‌ನ ಸಹ ಸಂಸ್ಥಾಪಕ ಶಂಕರ್ ಮುಸುನೂರಿ, “ಇದು ನಮ್ಮ ಸಮಯವನ್ನು ವಿಸ್ತರಿಸುತ್ತದೆ, ಆದರೆ ಕೋವಾಕ್ಸಿನ್ ಅನ್ನು ಅಮೆರಿಕಾಕ್ಕೆ ತರಲು ನಾವು ಬದ್ಧರಾಗಿದ್ದೇವೆ” ಎಂದಿದ್ದಾರೆ.
ಪ್ರಸ್ತುತ, ಅನೇಕ ದೇಶಗಳಲ್ಲಿ ಕೋವಾಕ್ಸಿನ್ ಬಳಕೆಗೆ ಅನುಮತಿ ನೀಡಲಾಗಿಲ್ಲ. ಇರಾನ್, ಫಿಲಿಪೈನ್ಸ್, ಮಾರಿಷಸ್, ಮೆಕ್ಸಿಕೊ, ನೇಪಾಳ, ಗಯಾನಾ, ಪರಾಗ್ವೆ ಮತ್ತು ಜಿಂಬಾಬ್ವೆ ಕೋವಾಕ್ಸಿನ್ ಲಸಿಕೆ ಅನ್ನು ಅನುಮೋದಿಸಿದ ಕೆಲವು ದೇಶಗಳಾಗಿವೆ.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಕೊವೀಡ್ ಲಸಿಕೆ ಪಡೆದ ಮೇಲೆ ಮ್ಯಾಗ್ನೆಟಿಕ್ (ಅಯಸ್ಕಾಂತೀಯ) ಶಕ್ತಿ ದೊರೆಯುತ್ತದೆಯೇ?
ಭಾರತದಲ್ಲಿ ಲಸಿಕೆಯ ತುರ್ತು ಬಳಕೆಯ ಅನುಮತಿಯನ್ನು ನೀಡಿದ ಆರು ತಿಂಗಳ ನಂತರವೂ ಭಾರತ್ ಬಯೋಟೆಕ್ ತನ್ನ ಮೂರನೇ ಹಂತದ ಪ್ರಯೋಗ ದತ್ತಾಂಶವನ್ನು ಹಂಚಿಕೊಳ್ಳದಿರುವ ಬಗ್ಗೆ ಟೀಕೆಗಳನ್ನು ಎದುರಿಸುತ್ತಿದೆ. ಈ ಸಮಯದಲ್ಲಿ ಅಮೆರಿಕಾ ಕೂಡ ಲಸಿಕೆಯ ಪ್ರಸ್ತಾಪ ತಿರಸ್ಕರಿಸಿದೆ. ಮಾರ್ಚ್ ವೇಳೆಗೆ ಪರಿಣಾಮಕಾರಿತ್ವದ ಫಲಿತಾಂಶಗಳನ್ನು ಸಲ್ಲಿಸುವುದಾಗಿ ಕಂಪನಿ ಜನವರಿಯಲ್ಲಿ ಹೇಳಿತ್ತು. ಆದರೆ, ಕೋವಾಕ್ಸಿನ್‌ನ 3 ನೇ ಹಂತದ ಪ್ರಯೋಗ ದತ್ತಾಂಶವನ್ನು ಜುಲೈನಲ್ಲಿ ಮಾತ್ರ ಸಾರ್ವಜನಿಕಗೊಳಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
“ಹಂತ 3 ಅಧ್ಯಯನಗಳ ಅಂತಿಮ ವಿಶ್ಲೇಷಣೆಯ ಮಾಹಿತಿಯು ಲಭ್ಯವಾದ ನಂತರ, ಭಾರತ್ ಬಯೋಟೆಕ್ ಕೋವಾಕ್ಸಿನ್‌ಗೆ ಸಂಪೂರ್ಣ ಪರವಾನಗಿಗಾಗಿ ಅರ್ಜಿ ಸಲ್ಲಿಸುತ್ತದೆ” ಎಂದು ಕಂಪನಿ ತಿಳಿಸಿದೆ.
ಕೋವಾಕ್ಸಿನ್ ಮತ್ತು ಕೋವಿಶೀಲ್ಡ್‌ಗಳ ಬಗ್ಗೆ ನಡೆದ ಅಧ್ಯಯನದಲ್ಲಿ, ಜೂನ್ 6 ರಂದು ವರದಿಯಾದ ಅಧ್ಯಯನವು ಕೋವಿಶೀಲ್ಡ್‌ನ ಒಂದು ಡೋಸ್ ಕೋವಾಕ್ಸಿನ್ ಗಿಂತ 10 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ. ಲಸಿಕೆಗಳ ಎರಡನೇ ಡೋಸ್ ಪಡೆದ ನಂತರ, ಕೋವಿಶೀಲ್ಡ್‌ನ ಎರಡು ಡೋಸ್‌ಗಳು ಕೋವಾಕ್ಸಿನ್‌ಗಿಂತ ಆರು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿವೆ ಎಂದು ಅಧ್ಯಯನ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಕೊರೊನಾ ಲಸಿಕೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಯತ್ನಿಸುತ್ತಿರುವ ಭಾರತ್ ಬಯೋಟೆಕ್, ಏಪ್ರಿಲ್ 18 ರಂದು ಭಾರತ್ ಬಯೋಟೆಕ್ ಸಂಸ್ಥೆ Expression of Interest ವ್ಯಾಕ್ಸಿನ್ ತುರ್ತು ಬಳಕೆಯ ಅನುಮತಿ ಕೋರಿ ವಿಶ್ವ ಸಂಸ್ಥೆಗೆ ಅರ್ಜಿ ಸಲ್ಲಿಸಿತ್ತು. ಆದರೆ, ಮೇ 18ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆಯ ಕುರಿತು ಹೆಚ್ಚುವರಿ ಮಾಹಿತಿ ನೀಡುವಂತೆ ಕೇಳಿತ್ತು. ಸದ್ಯ ಅಮೆರಿಕಾ ಕೂಡ ಕೋವಾಕ್ಸಿನ್ ತುರ್ತು ಬಳಕೆಗೆ ಅನುಮತಿ ನಿರಾಕರಿಸಿದೆ.
ಇದನ್ನೂ ಓದಿ: ಹಿಂದೂ ಸಂಘಟನೆಗಳ ವಿರೋಧ: ಮಸೀದಿ, ಮದರಸಾಗಳಿಗೆ ಬಿಡುಗಡೆ ಮಾಡಿದ್ದ ಗೌರವಧನ ಹಿಂಪಡೆದ ಸರ್ಕಾರ


