Homeಕರ್ನಾಟಕಉತ್ತರ ಕನ್ನಡ: ಪರೇಶ್ ಮೇಸ್ತ “ಪ್ರಕರಣ”ದ ಪುಂಡರಿಗೆ ಬಿಡುಗಡೆ ಭಾಗ್ಯ!!

ಉತ್ತರ ಕನ್ನಡ: ಪರೇಶ್ ಮೇಸ್ತ “ಪ್ರಕರಣ”ದ ಪುಂಡರಿಗೆ ಬಿಡುಗಡೆ ಭಾಗ್ಯ!!

- Advertisement -
- Advertisement -

2017ರ ಡಿಸೆಂಬರ್‍ನ ಅಂತ್ಯಾರ್ಧದ ಅತ್ಯಂತ ಆತಂಕದ ದಿನಗಳವು! ಇಡೀ ಉತ್ತರ ಕನ್ನಡ ಕೋಮು ಕಿಚ್ಚಿನಲ್ಲಿ ಬೆಂದು ಬಸವಳಿದ ಸಂದರ್ಭವದು!! ಹೊನ್ನಾವರದ ಮೀನುಗಾರ ಕುಲದ ಪರೇಶ್ ಮೇಸ್ತಾ ನಿಗೂಢವಾಗಿ ಸತ್ತದ್ದನ್ನು ಸಂಘಪರಿವಾರದ ಧರ್ಮಾಕಾರಣ ಪಂಡಿತರು ಎದುರಾಗಿದ್ದ ಅಸೆಂಬ್ಲಿ ಇಲೆಕ್ಷನ್‍ಗೆ ಅಸ್ತ್ರವಾಗಿ ಮಾಡಿಕೊಂಡಿದ್ದರು. ಪರೇಶ್‍ನನ್ನು ಸಾಬರ ಸೈತಾನರು ಕೊಂದು ಕೆರೆಗೆಸೆದಿದ್ದಾರೆಂದು ಹುಸಿ ಹುಯಿಲೆಬ್ಬಿಸಿದ ಬಿಜೆಪಿ ಕೊಳ್ಳಿ ದೆವ್ವಗಳು ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಶಿರಸಿ, ಯಲ್ಲಾಪುರದಂಥ ಆಯಕಟ್ಟಿನ ತಾಲ್ಲೂಕುಗಳಲ್ಲಿ ಕೋಮುಗಲಭೆ ಎಬ್ಬಿಸಿ ಕೇಕೆ ಹಾಕಿದವು. ಸಾಬರ ಅಟ್ಟಾಡಿಸಿ ಕಾಡಿತು; ಐಜಿಪಿ ಕಾರಿಗೆ, ಚಾಲಕನಿಗೇ ಬೆಂಕಿ ಹಾಕಲಾಯಿತು….

ಪರೇಶ್‍ನ ಪ್ರಕರಣ ಸಿಬಿಐ ವಹಿಸಬೇಕೆಂದು ಕೂಗು ಮಾರಿ ಶೋಭಕ್ಕ, ಅಸಡ್ಡಾಳ ಹಲಬುಗಾರ ಅನಂತ್ಮಾಣಿ ಆಗಿಯಾಗಿ ಯಡ್ಡಿ ಸಕಲ ಚೆಡ್ಡಿಗಳೆಲ್ಲ ಏಕಕಂಠದಲ್ಲಿ ಬೊಬ್ಬೆಹೊಡೆದರು. ಅಂದಿನ ಸಿದ್ದು ಸರ್ಕಾರ ಪ್ರತಿಷ್ಟೆಗೆ ಬೀಳದೆ ಪ್ರಕರಣ ಸಿಬಿಐಗೆ ವಹಿಸಿತು. ಮೋದಿ-ಶಾ ಮೂಗಿನಡಿಯೇ ಇರುವ ಸಿಬಿಐ ಮಾತ್ರ ಇವತ್ತಿಗೂ ಪರೇಶನ ಮುಸ್ಲಿಮರು ಹತ್ಯೆ ಮಾಡಿದ್ದಾರೋ ಅಥವಾ ಆತನೇ ಕಾಲು ಜಾರಿ ಕೆರೆಗೆ ಬಿದ್ದು ಸತ್ತನೋ ಎಂಬ ತನಿಖೆ ಮಾಡುತ್ತಲೇ ಇಲ್ಲ. ಆದರೆ ಬಿಜೆಪಿ ಪರೇಶ್ ಮೇಸ್ತಾನ ಮರಣ ಮಹಿಮೆಯನ್ನೇ ಪ್ರಣಾಳಿಕೆ ಮಾಡಿಕೊಂಡು ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಬಂಪರ್ ಎಮ್ಮೆಲ್ಲೆ ಕೊಯ್ಲು ಮಾಡಿತು. ಶಾಸಕರಾಗುವ ಕನಿಷ್ಠ ಯೋಗ್ಯತೆಯೂ ಇಲ್ಲದ ಕಾರವಾರದ ರೂಪಾಲಿ ನಾಯ್ಲ್, ಕುಮಟೆಯ ದಿನಕರ ಶೆಟ್ಟಿ, ಭಟ್ಕಳದ ಸುನೀಲ್ ನಾಯ್ಕ್ ಮತ್ತು ಶಿರಸಿಯ ಕಾಗೇರಿ ಮಾಣಿಗಳೆಲ್ಲ ಖುದ್ದು ದಿಗಿಲು ಬೀಳುವಂತೆ ವಿಧಾನಸೌಧಕ್ಕೆ ಎಂಟ್ರಿ ಹೊಡೆದಿದ್ದರು. ಸಾಯುವತನಕ ಪರೇಶನ ಫೋಟೋಕ್ಕೆ ಪೂಜೆ ಸಲ್ಲಿಸುವ ಋಣಕ್ಕೆ ಬಿದ್ದಿದ್ದರು.

ಹೊನ್ನಾವರದ ಶೆಟ್ಟಿಕೆರೆಯಲ್ಲಿ ಪರೇಶನ ಪಾರ್ಥಿವ ಶರೀರ ಕಂಡ ಕ್ಷಣವೇ ಶೂದ್ರ ಹುಡುಗರ ಮತಾಂಧ ಮಸಲತ್ತಿಗಿಳಿದ ಬಿಜೆಪಿಯ ಜನಿವಾರ ಲೀಡರ್‍ಗಳು ಚುನಾವಣೆಯ ಗೆಲುವಿನ ಗಣಿತ ಹಾಕತೊಡಗಿದ್ದರು. ಕಾರವಾರ, ಕುಮಟಾ, ಹೊನ್ನಾವರ ಮತ್ತು ಶಿರಸಿಯ ಸುಮಾರು 2,000 ಶೂದ್ರ ಹುಡುಗರು ಕಮ್ಯುನಲ್ ಕ್ರಿಮಿನಲ್ ಕೇಸ್‍ಗೆ ಬಿದ್ದರು. ಕೋರ್ಟ್-ಕಚೇರಿ ಅಲೆಯುತ್ತ ಉದ್ಯೋಗ, ವ್ಯವಹಾರ ಹಾಳು ಮಾಡಿಕೊಂಡರು. ಸರ್ಕಾರಿ ನೌಕರಿ ಸಿಗದಂತಾಯಿತು. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ತಮ್ಮಿಂದ ಶಾಸಕರಾದವರ ಕೊರಳಪಟ್ಟಿ ಹಿಡಿದು ಕೇಸ್ ಖತಮ್ ಮಾಡಿಸುವಂತೆ ಒತ್ತಾಯಿಸತೊಡಗಿದರು. ಯಡ್ಡಿ ಜತೆಗಿನ “ಸಲಿಗೆ” ಬಳಸಿ ಸಿಎಂ ಒಪ್ಪಿಗೆಯೂ ಸೂಚಿಸಿದರು. ರೂಪಾಲಿಗೆ ಜಿಲ್ಲೆಯ ಬಿಜೆಪಿ ಪುರುಷ ಶಾಸಕರಿಗಿಂತ “ಗ್ರೇಟ್”ಎಂಬ ಪ್ರಶಂಸೆ ಬಂತು.

ಒಂದು ಹಂತದಲ್ಲಿ ಬಿಜೆಪಿಯ “ಗಂಡು ಎಮ್ಮಲ್ಲೆ”ಗಳೆಲ್ಲ ರೂಪಾಲಿ ಮೇಲೆ ಮುರುಕೊಂಡು ಬಿದ್ದರು. ಆಕೆ ಮಹಿಳಾ ಕೋಟಾದಲ್ಲಿ ಮಂತ್ರಿಗಿರಿಗೆ, ನಿಗಮದ ಪೀಠಕ್ಕೆ ಪ್ರಯತ್ನ ಪಟ್ಟಂತೆಲ್ಲಾ ಕಲ್ಲು ಹಾಕಿದರು. ಬಿಜೆಪಿಯಲ್ಲಿ ಶಾಸಕರ ಸಮರ ಜೋರಾಯಿತು. ತಂತಮ್ಮ ಕ್ಷೇತ್ರದಲ್ಲಿ ಹೇತ್ಲಾಂಡಿ ಎನಿಸಿಕೊಳ್ಳುವ ಭಯಕ್ಕೆ ಬಿದ್ದು ಗಂಡು ಶಾಸಕರು ಒಂದಾಗಿ ತಮ್ಮ ಶಿಷ್ಯರ ಮೇಲಿನ ಕಮ್ಯುನಲ್ ಕೇಸು ವಾಪಸ್ ಪಡೆಯುವಂತೆ ಯಡ್ಡಿಬಳಿ ಎಡತಾಕತೊಡಗಿದರು. ಇವರಿಗೂ ಯಡ್ಡಿ ‘ತಥಾಸ್ತು’ ಎಂದರು.

ಕಂತ್ರಿ ಕಸರತ್ತಿನಲ್ಲಿ ನಿಸ್ಸೀಮನಾದ ದಿನಕರ ಶೆಟ್ಟಿ ಎದುರಾಳಿ ರೂಪಾಲಿಗೆ ಮುಖಭಂಗ ಮಾಡಲು ಒಳಗೊಳಗೇ ಪ್ರಯತ್ನ ನಡೆಸಿದ್ದರು. ಹೀಗಾಗಿ ಮೊನ್ನೆ ಕುಮಟಾದ ನಾಲ್ಕು ಪ್ರಕರಣದ 18 ಜನರ ಮೇಲಿನ ಕೇಸು ಸರ್ಕಾರ ವಾಪಸ್ ಪಡೆದಿದೆ. ಅಷ್ಟೇ ಅಲ್ಲ ಕಾರವಾರದ ಕೇಸ್ ನಿಖಾಲಿ ನೆನೆಗುದಿಗೆ ಬಿದ್ದಿದೆ ಎಂಬ ಗುಲ್ಲು ಎಬ್ಬಿಸಲಾಗಿದೆ. ಅಲ್ಲಿಗೆ ರೂಪಾಲಿ ನಾಯ್ಕ್ ಪೇಚಿಗೆ ಬಿದ್ದಂತಾಗಿದೆ. ಆಕೆ ಹೇಳಿಕೆ ಮೇಲೆ ಹೇಳಿಕೆ ಕೊಡುತ್ತ ತನ್ನ ಕ್ಷೇತ್ರದ ಪುಂಡರ ಮೇಲಿನ ಪ್ರಕರಣಗಳೂ ಸದ್ಯವೇ ಸರ್ಕಾರ ಹಿಂಪಡೆಯುತ್ತದೆಂದು ಸಮಜಾಯಿಸಿ ಕೊಡತೊಡಗಿದ್ದಾರೆ. ಸ್ಪೀಕರ್ ಕಾಗೇರಿಯೂ ಯೆಡ್ಡಿ ಬೇಕಂತಲೇ ತನ್ನ ಕ್ಷೇತ್ರದ ಗಲಭೆಗ್ರಸ್ತರ ಪ್ರಕರಣ ನಿಖಾಲಿ ಮಾಡಿಲ್ಲವೆಂಬ ಗುಮಾನಿಗೆ ಬಿದ್ದಿದ್ದಾರೆ. ಕಾಗೇರಿ ಎಂದಿದ್ದರೂ ಯಡ್ಡಿ ವಿರೋಧಿ ಪಾಳಯದ ಕಲಿ. ಭಟ್ಕಳದ ಸುನೀಲ್ ನಾಯ್ಕ್ ಇದೆಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೆ ಕಳ್ಳ ಕಾಸು ಮಾಡುವ ಸ್ಕೆಚ್‍ನಲ್ಲಿ ತಲ್ಲೀನನಾಗಿದ್ದಾನೆ. ಆದರೆ, ಒಂದಂತೂ ಖರೆ, ಪರೇಶ್ ಪ್ರಕರಣ ಕ್ರಿಮಿನಲ್ ಕೇಸ್ ಖತಮ್ ಬಿಜೆಪಿಯ ಶಾಸಕರ ನಡುವಿನ ಗ್ಯಾಂಗ್ ವಾರ್‍ಗೆ ಹೊಸ ಆಯಾಮವಂತೂ ಕೊಟ್ಟಿದೆ!!

ಪರೇಶ್ ಸಾವಿನ ನಂತರದ 140 ಪ್ರಕರಣ ಮತ್ತು ಟಿಪ್ಪು ಜಯಂತಿ ವಿರುದ್ಧ ಹಿಂದೂತ್ವದ ಕಹಳೆ ಮೊಳಗಿಸಿ ಸಿಕ್ಕಿಬಿದ್ದವರ ಕೇಸ್ ಖತಮ್ ಮಾಡಿಸಿ ಓಟ್ ಬ್ಯಾಂಕ್ ಭದ್ರತೆಗೆ ತಿಪ್ಪರಲಾಗ ಹಾಕುತ್ತಿರುವ ಜಿಲ್ಲೆಯ ಬಿಜೆಪಿ ಶಾಸಕ-ಸಂಸದ-ಮಂತ್ರಿಗೆ ಪರೇಶ್ ಸಾವಿನ ರಹಸ್ಯ ಭೇದಿಸಿ ಆತನ ಹೆತ್ತವರಿಗೆ ನ್ಯಾಯ ಕೊಡಿಸಬೇಕೆಂಬ ತುಡಿತವೇನೂ ಇಲ್ಲ. ಸಂಘಪರಿವಾರದ ರಿಂಗ್ ಮಾಸ್ಟರ್‍ಗಳಿಗೇ ಬೇಡದ ಈ ತನಿಖೆ ಉಸಾಬರಿ ಬಿಜೆಪಿಯ ಬೊಬ್ಬೆಕೋರರ ಅಸಲಿ ಅವತಾರ ಅನಾವರಣವಾಗುತ್ತದೆಂಬುದು ಸಂಘಸರದಾರಿಗೆ ಗೊತ್ತಿದೆ. ಹಾಗಾಗಿ ಸಿಬಿಐ ತನಿಖೆಗೆ ಬಿಜೆಪಿ ಭೂಪರೇ ಅಡ್ಡಗಾಲು ಹಾಕಿ ಕುಂತಿದ್ದಾರೆ. ಇವತ್ತಿಗೂ ಪರೇಶ್‍ನ ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯೇ ಬಂದಿಲ್ಲ! ಇವತ್ತಿನ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅಂದು ಬಿಜೆಪಿ ರಷ್ಟ್ರಾಧ್ಯಕ್ಷನಾಗಿ ಪರೇಶ್‍ನ ಮನೆಗೆ ಬಂದು ಆತನ ಹೆತ್ತವರಿಗೆ ನ್ಯಾಯ ಕೊಡಿಸುವುದಾಗಿ ಹೇಳಿದ್ದರು; ಅಂದಿನ ಗೃಹ ಮಂತ್ರಿ ರಾಜ್‍ನಾಥ್ ಸಿಂಗ್, ಯಡ್ಡಿ ಸೇರಿದಂತೆ ವಗೈರೆ ಹಿರಿ-ಮರಿ ಪುಢಾರಿಗಳು ಸರತಿಯಂತೆ ಪರೇಶನ ಮನೆಗೆ ಬಂದು ಮೊಸಳೆ ಕಣ್ಣಿರು ಕೋಡಿ ಹರಿಸಿದ್ದರು.

ಇವರೆಲ್ಲಾ ಈಗ ಗಪ್‍ಚುಪ್ ಆಗಿರುವುದೇ ಪರೇಶ್ ಮೇಸ್ತಾನ ಸಾಬರು ಕೊಂದಿಲ್ಲ ಎಂಬುದು ಖಾತ್ರಿಪಡಿಸುವಂತಿದೆ. ಅನಂತ್ಮಾಣಿಗೆ ರಾಜಕಾರಣದ ದೀಕ್ಷೆ ಕೊಟ್ಟು ಸಂಸದನಾಗಿ ಮಾಡಿದ್ದ ಆತನ ಗುರು-ಅಂದಿನ ಉತ್ತರ ಕನ್ನಡದ ಹಿಂದೂತ್ವದ ಬೆಂಕಿ ನಾಯಕ ಡಾ| ಚಿತ್ತರಂಜನ್ ಎಮ್ಮೆಲ್ಲೆಯಾಗಿದ್ದಾಗಲೇ ಹತನಾಗಿದ್ದರು. ಬಿಜೆಪಿ ವಾಜಪೇಯಿ ಸರ್ಕಾರವಿದ್ದಾಗಲೇ ಈ ಕೇಸ್ ಪತ್ತೆಯಾಗದ ಪ್ರಕರಣವೆಂದು ಸಿಬಿಐ “ಸಿ-ರಿಪೋರ್ಟ್” ಜಡಿದಿದೆ. ಭಟ್ಕಳದ ಮತ್ತೊಬ್ಬ ಹಿಂದೂ ಮುಂದಾಳು ತಿಮ್ಮಪ್ಪ ನಾಯ್ಕನ ಕೊಲೆ ತನಿಖೆಯೂ ಸರಿಯಾಗಿ ಆಗಲಿಲ್ಲ. ಈ ಹಳ್ಳ ಹಿಡಿದ ಕೇಸ್‍ಗಳ ಬಗ್ಗೆಯೇ ತಲೆಕೆಡಿಸಿಕೊಳ್ಳದ ಅನಂತ್ಮಾಣಿ, ಯಡ್ಡಿ, ಶೋಭಕ್ಕ, ಅಮಿತ್ ಶಾ, ಮೋದಿ. ಮುಂತಾದ ಹಿಂದೂ ಕುಲೋದ್ಧಾರಕರಿಗೆ ಪಾಪದ ಬೆಸ್ತರ ಹುಡುಗ ಪರೇಶ್‍ನ ಸಾವೆಲ್ಲಾ ಯಾವ ಲೆಕ್ಕ?

ಓಟ್ ಬ್ಯಾಂಕ್‍ಗಾಗಿ ಹೆಣದ ರಾಜಕಾರಣ ಮಾಡುವ ಬಿಜೆಪಿಗರ ಬಣ್ಣವೀಗ ಬಯಲಾಗುತ್ತಿದೆ. ಹಿಂದೂತ್ವದ ಅಮಲೇರಿಸಿಕೊಂಡು ಪರೇಶ್ ಸಾವಿನ ನಂತರ ದೊಂಬಿ-ಹಿಂಸಾಚಾರಕ್ಕಿಳಿದಿದ್ದ ಶೂದ್ರ ಹುಡುಗರಿಗೀಗ ಸತ್ಯ ಗೊತ್ತಾಗಿದೆ. 13-12-2017ರಂದು ಹೊನ್ನಾವರದ ಶನಿದೇವರ ಅಂಗಳ ಮತ್ತು ಸಾಬರ ಗುಡ್‍ಲಕ್ ಹೋಟೆಲಿನ ಮುಂಭಾಗದಲ್ಲಾದ ಪೊಲೀಸರ ಲಾಠಿ ಚಾರ್ಜ್‍ಗೆ ಬೆದರಿದ ಪರೇಶ್ ಮೇಸ್ತಾ ಬಚಾವಾಗಲು ಪಕ್ಕದ ಶೆಟ್ಟಿಕೆರೆ ಆವರಣ ಗೋಡೆ ಹಾರಿ ಅವಿತಿಟ್ಟುಕೊಳ್ಳುವ ಪ್ರಯತ್ನದಲ್ಲಿ ಕಾಲುಜಾರಿ ಕೆರೆಗೆ ಬಿದ್ದು ಸತ್ತಿದ್ದಾನೆ; ಆತನನ್ನು ಸಾಬರು ಸಾಯಿಸಿಲ್ಲ ಎಂದು ಈಗ ವ್ಯಾಖ್ಯಾನ ಮಾಡಲಾಗುತ್ತಿದೆ. ಪೊಲೀಸರಿಗೆ, ಸಿಬಿಐಗೆ ಮತ್ತು ಪ್ರಜ್ಞಾವಂತರಿಗೂ ಇದೇ ಜಿಜ್ಞಾಸೆಯಿದೆ. ಸಂಘ ಸರದಾರರಿಗೆ ಇದು ಮೊದಲೇ ಗೊತ್ತಿದೆ? ಆದರೆ ಹಿಂದೂತ್ವದ ಅಭಿಯಾನಕ್ಕಾಗಿ ಪರೇಶ್‍ನ ಸಂಘಿಗಳು ಬಿಡಲು ಸಿದ್ಧರಿಲ್ಲ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...