ಉತ್ತರ ಪ್ರದೇಶದಲ್ಲಿ ಡೆಂಗ್ಯೂಗೆ ಇನ್ನೂ ಎರಡು ಸಾವುಗಳು ಸಂಭವಿಸಿದ್ದು, ಜಿಲ್ಲೆಯಲ್ಲಿ ವೈರಲ್ ಜ್ವರದಿಂದ ಸಾವಿಗೀಡಾದವರ ಸಂಖ್ಯೆ 60 ಕ್ಕೆ ಏರಿದೆ ಎಂದು ಫಿರೋಜಾಬಾದ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ 14 ವರ್ಷದ ಬಾಲಕಿಯೊಬ್ಬರು ವೈದ್ಯಕೀಯ ಕಾಲೇಜಿನಲ್ಲಿ ಸಾವನ್ನಪ್ಪಿದ್ದಾರೆ. ಜೊತೆಗೆ ಒಂದು ಮಗು ಕೂಡ ಡೆಂಗ್ಯೂಗೆ ಬಲಿಯಾಗಿದೆ ಎಂದು ಆರೋಗ್ಯ ವಿಭಾಗದ ಹೆಚ್ಚುವರಿ ನಿರ್ದೇಶಕ ಎ. ಕೆ ಸಿಂಗ್ ಮಾಹಿತಿ ನೀಡಿದ್ದಾರೆ.
ಬಾಲಕಿಯ ಸಾವಿನ ನಂತರ, ಆಕೆಯ ಸಹೋದರಿ ವಿಭಾಗೀಯ ಆಯುಕ್ತ ಅಮಿತ್ ಗುಪ್ತಾ ಅವರ ವಾಹನದ ಮುಂದೆ ಕುಳಿತು ಆಕೆಯನ್ನು ಬದುಕಿಸುವಂತೆ ಬೇಡುತ್ತಿದ್ದ ದೃಶ್ಯ ನೆರೆದಿದ್ದವರ ಮನ ಕಲಕುವಂತಿತ್ತು. ಬಳಿಕ ಆಡಳಿತ ಅಧಿಕಾರಿಗಳು ಆಕೆಗೆ ಪರಿಸ್ಥಿತಿಯನ್ನು ವಿವರಿಸಿ ಸಮಾಧಾನಗೊಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಯುಪಿ: 3 ಗಂಟೆ ಕಾದರೂ ದಾಖಲಿಸದ ಆಸ್ಪತ್ರೆ, ಹೆತ್ತವರ ಕಣ್ಣು ಮುಂದೆ 5 ವರ್ಷದ ಬಾಲಕಿ ಸಾವು
ಇನ್ನುಕೊರೊನಾ ಸಾಂಕ್ರಾಮಿಕದ ನಡುವೆ ಹಬ್ಬುತ್ತಿರುವ ಡೆಂಗ್ಯೂ, ವೈರಲ್ ಜ್ವರದ ಲಾಭ ಪಡೆಯುತ್ತಿರುವ ಆಸ್ಪತ್ರೆಗಳು ಅಧಿಕ ಶುಲ್ಕಾ ವಿಧಿಸುತ್ತಿರುವ ಕುರಿತು ಹಲವು ವರದಿಗಳು ಪ್ರಕಟವಾಗಿದ್ದವು. ಹೀಗಾಗಿ ಆಸ್ಪತ್ರೆಗಳು ತೆಗೆದುಕೊಳ್ಳಬೇಕಾದ ದರಗಳ ಕುರಿತು ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್ ಹೇಳಿದ್ದಾರೆ.
ಆಗ್ರಾದಿಂದ 50 ಕಿಮೀ ಮತ್ತು ಲಕ್ನೋದಿಂದ 320 ಕಿಮೀ ದೂರದಲ್ಲಿರುವ ಫಿರೋಜಾಬಾದ್‌ನಲ್ಲಿ ಕಳೆದ ಮೂರು ವಾರಗಳಿಂದ ಡೆಂಗ್ಯೂ ಮತ್ತು ಮಾರಣಾಂತಿಕ ನಿಗೂಢ ವೈರಲ್ ಜ್ವರದಿಂದ ಜನ ಬಳಲುತ್ತಿದ್ದಾರೆ. ಇದರಲ್ಲಿ ಹೆಚ್ಚಿಗೆ ಮಕ್ಕಳು ಸಾವನ್ನಪ್ಪಿದ್ದಾರೆ.
ಫಿರೋಜಾಬಾದ್ ಜೊತೆಗೆ ನೆರೆಯ ಮಥುರಾ, ಆಗ್ರಾ ಮತ್ತು ಮೈನ್‌ಪುರಿಯಲ್ಲಿಯೂ ಹಲವು ಪ್ರಕರಣಗಳು ವರದಿಯಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡೆಂಗ್ಯೂ ಜ್ವರ ಬಂದ ತಮ್ಮ ಐದು ವರ್ಷದ ಮಗಳನ್ನು ಎತ್ತಿಕೊಂಡು ಆಸ್ಪತ್ರೆಯೊಳಗೆ ಮೂರು ಗಂಟೆ ಅಲೆದಾಡಿದರೂ, ಚಿಕಿತ್ಸೆ ಸಿಗದೆ ಹೆತ್ತರವರ ಕಣ್ಣ ಮುಂದೆಯೆ ಬಾಲಕಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿತ್ತು.
ಡೆಂಗ್ಯೂ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಕಳಪೆಯಾಗಿ ನಿರ್ವಹಣೆ ಮಾಡಿರುವುದರ ವಿರುದ್ದ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಳೆದ ವಾರವಷ್ಟೇ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆಗಳ ಕೊರತೆಯಿಂದ ಅನೇಕ ರೋಗಿಗಳು ಸಾಯುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಉತ್ತರ ಪ್ರದೇಶ: ಫಿರೋಜಾಬಾದ್‌ನಲ್ಲಿ ಶಂಕಿತ ಡೆಂಗ್ಯೂಗೆ 45 ಮಕ್ಕಳು ಸೇರಿ 53 ಮಂದಿ ಬಲಿ


