ಒಕ್ಕೂಟ ಸರ್ಕಾರದ ಹಿಂದಿ ದಿವಸ್ ವಿರೋಧಿಸಿ ದಕ್ಷಿಣ ಭಾರತದಲ್ಲಿ ಕರಾಳ ದಿನ ಆಚರಣೆ ಮಾಡಲಾಗುತ್ತಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ StopHindiImposition, #ಹಿಂದಿಹೇರಿಕೆನಿಲ್ಲಿಸಿ ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಟ್ರೆಂಡ್ ಮಾಡಲಾಗುತ್ತಿದೆ.

ಗಣ್ಯರು, ನಟ-ನಟಿಯರು ಸೇರಿದಂತೆ ಲಕ್ಷಾಂತರ ಜನರು ಹಿಂದಿ ಹೇರಿಕೆ ವಿರೋಧಿಸಿ ಸಾಮಾಜಿಕ ಜಾಲತಾಣದ ವೇದಿಕೆಗಳಾದ ಟ್ವಿಟರ್, ಫೇಸ್‌ಬುಕ್, ಇನ್ಸ್ಟ್ರಾಗ್ರಾಮ್‌, ವಾಟ್ಸಾಪ್‌ಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ, ಕರ್ನಾಟಕ ಜನಾಧಿಕಾರ ಪಕ್ಷ, ಜೆಡಿಎಸ್‌ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.

ಟ್ವಿಟರ್‌ನಲ್ಲಿ ಪೋಸ್ಟ್ ಶೇರ್‌ ಮಾಡಿರುವ ನಟ ಡಾಲಿ ಧನಂಜಯ, “ಎಲ್ಲಾ ಭಾಷೆಯನ್ನು ಗೌರವಿಸುತ್ತೇವೆ, ಆದರೆ, ಯಾವುದೇ ಹೇರಿಕೆ ಸಲ್ಲದು” ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೂಡ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, “ಹಿಂದಿ ಹೇರಿಕೆಯನ್ನು ಕನ್ನಡಿಗರು ಒಪ್ಪುವುದಿಲ್ಲ. ಹಿಂದಿ ದಿವಸ ಆಚರಣೆಯನ್ನೂ ಸಹಿಸುವುದಿಲ್ಲ.‌ ಒಕ್ಕೂಟದ ಎಲ್ಲಾ ಭಾಷೆಗಳಂತೆ ಹಿಂದಿಯೂ ಒಂದು ಭಾಷೆಯಷ್ಟೇ. ಕೇಂದ್ರ ಸರಕಾರ ಹಿಂದಿಗೆ ʼಇಂದ್ರ ವೈಭೋಗʼ ನೀಡಿ ಅನ್ಯ ಭಾಷೆಗಳನ್ನು ಬೀದಿಪಾಲು ಮಾಡುವುದನ್ನು ಸಹಿಸಲಾಗದು” ಎಂದಿದ್ದಾರೆ.

“ಹಿಂದಿ ಹೇರುವವರಿಗೆ ತಿಳಿದಿರಲಿ. ನಮ್ಮ ಕನ್ನಡ ಅಭಿಜಾತ ಭಾಷೆ. ನಮ್ಮ ಕನ್ನಡ ಸಾವಿರಾರು ವರ್ಷಗಳ ಘನ ಚರಿತ್ರೆಯುಳ್ಳ ಭಾಷೆ. ನಮ್ಮ ಕನ್ನಡ 6.4 ಕೋಟಿ ಜನರ ಹೃದಯಮಿಡಿತ. ನಮ್ಮ ಪಾಲಿನ ಮಾತೃಸ್ವರೂಪಿಣಿ. ನಮ್ಮ ನೆಲದಲ್ಲಿ ನಮ್ಮ ಕನ್ನಡ ಭಾಷೆಯೇ ಮೊದಲು. ಹಿಂದಿ ದಿವಸ ಆಚರಣೆ ಅಸಮರ್ಪಕ ಮತ್ತು ಅನಗತ್ಯ. ಹಿಂದಿ  ಹೇರಿಕೆಯಿಂದ ಬಹುಭಾಷೆಯ ಭಾರತದ ನೆಮ್ಮದಿ ಕದಡುವುದು ಬೇಡ” ಎಂದಿದ್ದಾರೆ.

ಇದನ್ನೂ ಓದಿ: ಸೆ.14 ರಂದು ’ಹಿಂದಿ ಹೇರಿಕೆ ನಿಲ್ಲಿಸಿ’ ಟ್ವಿಟರ್‌ ಆಂದೋಲನಕ್ಕೆ ಕರವೇ ಕರೆ

ಟ್ವಿಟರ್‌ ಆಂದೋಲನಕ್ಕೆ ಕರೆ ನೀಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಕೂಡ ಟ್ವೀಟ್ ಮಾಡಿ, “ಹಿಂದಿ ದಿವಸ ಎಂಬುದು ದೇಶದ ಹಿಂದಿಯೇತರ ಜನರ ಮೇಲೆ ನಡೆಸುವ ದೌರ್ಜನ್ಯ, ಭಾಷಾ ಸಮುದಾಯಗಳನ್ನು ವಂಚಿಸುವ ಹುನ್ನಾರ. ನಮ್ಮ ತೆರಿಗೆ ಹಣದಲ್ಲಿ ನಮ್ಮ ಮೇಲೇ ಒಂದು ಭಾಷೆಯನ್ನು ಹೇರುವ ಕುಟಿಲತಂತ್ರ. ನಮ್ಮ ಕೈಗೇ ಕತ್ತರಿ ಕೊಟ್ಟು ನಮ್ಮ ನರಗಳನ್ನೇ ಕತ್ತರಿಸುವ ಹೀನ ಆಚರಣೆ. ಇದನ್ನು ಧಿಕ್ಕರಿಸೋಣ” ಎಂದಿದ್ದಾರೆ.

“ಹಿಂದಿ ದಿವಸ ಎಂಬ ಆಚರಣೆ ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ ಅನೈತಿಕ. ದೇಶದ ಪ್ರಜೆಗಳೆಲ್ಲರೂ ಸಮಾನರು ಎಂಬ ಸಂವಿಧಾನದ ಆಶಯಕ್ಕೆ ವಿರುದ್ಧ. ಕನ್ನಡಿಗರು ಮಾತ್ರವಲ್ಲದೆ ಎಲ್ಲ ಹಿಂದಿಯೇತರ ಭಾಷಾ ಸಮುದಾಯಗಳು ಮತ್ತು ಸಮಾನತೆಯಲ್ಲಿ ನಂಬಿಕೆ ಇಟ್ಟ ಹಿಂದಿ ಭಾಷಿಕರು ಇದನ್ನು ವಿರೋಧಿಸಬೇಕು” ಎಂದು ಆಗ್ರಹಿಸಿದ್ದಾರೆ.

ಸೆಪ್ಟೆಂಬರ್ 14 ರಂದು ಕೇಂದ್ರ ಸರ್ಕಾರದ ವತಿಯಿಂದ ಆಚರಿಸುವ ‘ಹಿಂದಿ ದಿವಸ’ ಆಚರಣೆ ವಿರೋಧಿಸಿ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಶಾಸಕ ಆರ್‌.ಮಂಜುನಾಥ್ ತಿಳಿಸಿದ್ದಾರೆ.

ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ದಿವಸವನ್ನು ವಿರೋಧಿಸಿದ್ದಾರೆ.

“ಇಂದು, ಸೆಪ್ಟೆಂಬರ್ 14ನೇ ತಾರೀಖನ್ನು ಹಿಂದಿ ದಿವಸವೆಂದು ನಮ್ಮ ಸಂವಿಧಾನದ 343ನೇ ಆರ್ಟಿಕಲ್‌ ಪ್ರಕಾರ ಗುರುತಿಸಲಾಗಿದ್ದು, ಇದು ಹಿಂದಿಯನ್ನು ನಮ್ಮ ರಾಷ್ಟ್ರದ ಅಧಿಕೃತ ಭಾಷೆಯೆಂದು ಪರಿಗಣಿಸುತ್ತದೆ.
ಇಂತಹ ಭಾಷಾ ತಾರತಮ್ಯವನ್ನು ನಾವು ವಿರೋಧಿಸುತ್ತೇವೆ. ಹಿಂದಿ ಪ್ರಾಮುಖ್ಯತೆಯನ್ನು ನಿಲ್ಲಿಸಿ, 8ನೇ ವೇಳಾಪಟ್ಟಿಯಲ್ಲಿರುವ ಎಲ್ಲಾ 22 ಭಾಷೆಗಳನ್ನೂ ಕೂಡ ಅಧಿಕೃತ ಭಾಷೆಯೆಂದು ಗುರುತಿಸಬೇಕು” ಎಂದು ಆಗ್ರಹಿಸಿದ್ದಾರೆ.
ಹೋರಾಟಗಾರ, ಕರ್ನಾಟಕ ರಾಷ್ಟ್ರ ಸಮಿತಿಯ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ತಮ್ಮ ಟ್ವಿಟರ್‌ ಖಾತೆಯಲ್ಲಿ  , “ಹಿಂದಿ ದಿವಸದ ಬದಲಿಗೆ ದೇಶ ಭಾಷಾ ದಿನ ಆಚರಿಸಿ, StopHindiImposition ಎಂದಿದ್ದಾರೆ. ಎಲ್ಲಾ ಭಾಷಿಕ ದೇಶವಾಸಿಗಳ ತೆರಿಗೆಯ ಹಣದಲ್ಲಿ ಒಕ್ಕೂಟ ಸರ್ಕಾರವು ಕೇವಲ “ಹಿಂದಿ ದಿವಸ್” ಆಚರಿಸುವುದನ್ನು ಕರ್ನಾಟಕ ರಾಷ್ಟ್ರ ಸಮಿತಿ ವಿರೋಧಿಸುತ್ತದೆ ಮತ್ತು ಈ ದಿನವನ್ನು “ದೇಶಭಾಷೆ ದಿನ”ವಾಗಿ ಆಚರಿಸಲು ಆಗ್ರಹಿಸುತ್ತದೆ” ಎಂದಿದ್ದಾರೆ.


 

LEAVE A REPLY

Please enter your comment!
Please enter your name here