ಉತ್ತರ ಪ್ರದೇಶದ ಕಾನ್ಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದಲ್ಲಿ ಭಾನುವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 150 ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಿಗ್ಗೆ 8 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕನಿಷ್ಠ ಏಳು ಅಗ್ನಿಶಾಮಕ ದಳ ವಾಹನಗಳನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಅಶ್ವನಿ ಪಾಂಡೆ ಹೇಳಿದ್ದಾರೆ. ಇಡೀ ಆಸ್ಪತ್ರೆ ಹೊಗೆಯಿಂದ ತುಂಬಿದ್ದ ಕಾರಣ, ರೋಗಿಗಳು ಮತ್ತು ಸಿಬ್ಬಂದಿಯನ್ನು ಹೊರತೆಗೆಯಲು ತುರ್ತು ವಿಭಾಗದ ಕಿಟಕಿಯನ್ನು ಮುರಿಯಲಾಗಿದೆ ಎಂದು ಪಾಂಡೆ ಹೇಳಿದ್ದಾರೆ.
ಕಾನ್ಪುರ ಪಟ್ಟಣದಲ್ಲಿರುವ ಗಣೇಶ್ ಶಂಕರ್ ವಿದ್ಯಾರ್ಥಿ ವೈದ್ಯಕೀಯ ಕಾಲೇಜಿನ ಭಾಗವಾದ ಎಲ್‌ಪಿಎಸ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿಯಲ್ಲಿ ಕನಿಷ್ಠ 146 ರೋಗಿಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ್ ಬಂದ್: ಆಂಧ್ರಪ್ರದೇಶ, ಪಂಜಾಬ್ ಪೂರ್ಣ ಸ್ತಬ್ದ – ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ
“ಆಸ್ಪತ್ರೆಯಲ್ಲಿ ಸದ್ಯಕ್ಕೆ ಬೆಂಕಿ ನಿಯಂತ್ರಣದಲ್ಲಿದೆ. ಬೆಂಕಿ ಹರಡಲು ಪ್ರಾರಂಭವಾದ ತಕ್ಷಣ 146 ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಒಂಬತ್ತು ರೋಗಿಗಳು ಇನ್ನೂ ಐಸಿಯುನಲ್ಲಿದ್ದಾರೆ ಆದರೆ ಅವರು ವೈದ್ಯಕೀಯವಾಗಿ ಸುರಕ್ಷಿತವಾಗಿದ್ದಾರೆ. ಇಲ್ಲಿಯವರೆಗೆ ಯಾವುದೇ ಸಾವು- ನೋವು ವರದಿಯಾಗಿಲ್ಲ” ಎಂದು ಕಾನ್ಪುರ ಪೊಲೀಸ್ ಕಮಿಷನರ್ ಅಸೀಮ್ ಅರುಣ್ ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ. “ಕಾನ್ಪುರದ ಕಾರ್ಡಿಯಾಲಜಿ ವಿಭಾಗದ ಕಟ್ಟಡದಲ್ಲಿನ ಬೆಂಕಿ ಅವಘಡದ ಬಗ್ಗೆ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದಾರೆ. ಬೇರೆಡೆ ಸ್ಥಳಾಂತರಿಸಿದ ಎಲ್ಲ ರೋಗಿಗಳಿಗೆ ತಕ್ಷಣದ ಆರೈಕೆ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಜಿಲ್ಲಾಡಳಿತದಿಂದ ವರದಿ ಕೇಳಿದ್ದಾರೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಲ್‌ಪಿಎಸ್ ಕಾರ್ಡಿಯಾಲಜಿ ಕಾನ್ಪುರ ಪ್ರದೇಶದ ಹೃದಯ ಕಾಯಿಲೆಗೆ ಸಂಬಂಧಿಸಿದ ಅತಿದೊಡ್ಡ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಯಲ್ಲಿ 15 ಜಿಲ್ಲೆಗಳ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇತ್ತೀಚೆಗೆ ತುರ್ತು ವಿಭಾಗವನ್ನು ಮತ್ತಷ್ಟು ಆಧುನೀಕರಣ ಮಾಡಲಾಗಿತ್ತು.
ಇದನ್ನೂ ಓದಿ: `1232 ಕಿ.ಮೀ’ | ಕರಾಳ ಲಾಕ್‌ಡೌನ್‌ನಲ್ಲಿ ಕಾರ್ಮಿಕರ ‘ಮಹಾವಲಸೆ’ಯ ಕತೆ ಹೇಳುವ ಸಾಕ್ಷ್ಯಚಿತ್ರ


