‘ಕಾಂಟ್ ಟೇಕ್ ದಿಸ್ ಶಿಟ್ ಎನಿಮೋರ್’ ಎಂಬ ಸಾಕ್ಷ್ಯಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವ ಭಾರತೀಯ ಪತ್ರಕರ್ತ ವಿನೋದ್ ಕಪ್ರಿ ಅವರ ಹೊಸ ಸಾಕ್ಷ್ಯಚಿತ್ರ, ‘1232 ಕಿ.ಮೀ’ ಮಾರ್ಚ್ 24 ರ ಬುಧವಾರದಂದು ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಗೊಂಡಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಸಿಕ್ಕಿಬಿದ್ದ ವಲಸೆ ಕಾರ್ಮಿಕರ ದುಃಸ್ಥಿತಿಯನ್ನು ಆಧರಿಸಿದ ಈ ಚಿತ್ರವು ಕನ್ನಡ, ತಮಿಳು, ಮಲಯಾಳಂ, ತೆಲುಗು, ಮರಾಠಿ, ಬಾಂಗ್ಲಾ, ಹಿಂದಿ ಭಾಷೆಯಲ್ಲಿ ಲಭ್ಯವಿದೆ.
ಲಾಕ್‌ಡೌನ್ ಸಮಯದಲ್ಲಿ ಯಾವುದೇ ಸಾರಿಗೆ ವ್ಯವಸ್ಥೆ, ಆಹಾರ ಮತ್ತು ಆಶ್ರಯವಿಲ್ಲದೆ ಉಳಿದುಕೊಂಡಿದ್ದ ಏಳು ವಲಸೆ ಕಾರ್ಮಿಕರ ಕಷ್ಟಕರ ಪ್ರಯಾಣವನ್ನು ಈ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ. ಈ ಏಳು ಮಂದಿ ಕಾರ್ಮಿಕರು ಘಾಜಿಯಾಬಾದ್‌ನಿಂದ ಬಿಹಾರದ ಸಹರ್ಸಾಗೆ 1232 ಕಿ.ಮೀ ಸೈಕಲ್ ತುಳಿದುಕೊಂಡು ಹೋಗಿದ್ದರು.
ಇದನ್ನೂ ಓದಿ: ಬೆಳ್ಳಿಚುಕ್ಕಿ: ಪಶ್ಚಿಮದಲ್ಲಿ ಹುಟ್ಟುವ ಸೂರ್ಯ ಮತ್ತು ಒಂದು ವರ್ಷಕ್ಕೂ ದೀರ್ಘವಾದ ಒಂದು ದಿನ!
ವಾರದ ಹಿಂದೆಯೆ ಟೀಸರ್ ಅನ್ನು ಬಿಡುಗಡೆಗೊಳಿಸಲಾಗಿದ್ದು, ಅದು ರಸ್ತೆಗಳು, ಹೆದ್ದಾರಿಗಳು ಮತ್ತು ರಾಜ್ಯದ ಗಡಿಗಳಲ್ಲಿ ಸಿಕ್ಕಿಹಾಕಿಕೊಂಡಿರುವಂತಹ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ. ಹೃದಯ ವಿದ್ರಾವಕ ದೃಶ್ಯವಿರುವ ಟೀಸರ್‌ಗಳನ್ನು ಇಲ್ಲಿ ನೋಡಬಹುದು.
ವಿನೋದ್ ಕಪ್ರಿ ಅವರ ವಲಸೆ ಕಾರ್ಮಿಕರ ಜೊತಗಿನ ಪ್ರಯಾಣವು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳ ಪುಸ್ತಕಗಳಾಗಿಯು ಪ್ರಕಟಗೊಳ್ಳಲಿದೆ. ಪುಸ್ತಕಗಳು ಕ್ರಮವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರಕಟವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು 21 ದಿನಗಳ ಕಾಲ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ ಮಾರ್ಚ್ 24 ರಂದೆ ಈ ಚಿತ್ರವನ್ನು ಬಿಡುಗಡೆ ಮಾಡಿದ್ದು ವಿಶೇಷವಾಗಿದೆ.
ಚಿತ್ರವನ್ನು ನಿರ್ಮಿಸಿರುವ ಪತ್ರಕರ್ತ ವಿನೋದ್ ಕಪ್ರಿ, ಕಳೆದ ವರ್ಷ ಲಾಕ್‌ಡೌನ್ ಘೋಷಣೆಯಾದಾಗ ವಲಸೆ ಕಾರ್ಮಿಕರೊಂದಿಗೆ ತಾವು ಕೂಡಾ ಪ್ರಯಾಣಿಸಿ ವಲಸೆ ಕಾರ್ಮಿಕರ ಸಂಕಷ್ಟಗಳನ್ನು ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: ‘ಸೀರೆ ಧರಿಸಿ ಕಾಲು ಪ್ರದರ್ಶಿಸುವುದು ಬಂಗಾಳಿ ಸಂಸ್ಕೃತಿಯಲ್ಲ’- ‘ಬರ್ಮುಡಾ’ ಹೇಳಿಕೆ ಸಮರ್ಥಿಸಿದ ಬಿಜೆಪಿ ಅಧ್ಯಕ್ಷ
ಈ ಬಗ್ಗೆ ಕಳೆದ ವರ್ಷ ಮೇ 5 ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದ ವಿನೋದ್, “1232 ಕಿಲೋಮೀಟರ್‌ಗಳು. ಗಾಜಿಯಾಬಾದ್‌ನಿಂದ ಬಿಹಾರದ ಸಹರ್ಸಾಗೆ ಪ್ರಾರಂಭವಾದ ನನ್ನ ಜೀವನದ ಕಠಿಣ ಮತ್ತು ಮರೆಯಲಾಗದ ಪ್ರಯಾಣವನ್ನು ಪೂರ್ಣಗೊಳಿಸಿದೆ. ನಾನು 7 ವಲಸೆ ಕಾರ್ಮಿಕರೊಂದಿಗೆ 1232 ಕಿಲೋಮೀಟರ್ ದೂರವನ್ನು ಕ್ರಮಿಸಿದ್ದು, ಈ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ತಲುಪಲು ಬೈಸಿಕಲ್ ಮೂಲಕ ಸವಾರಿ ಮಾಡುತ್ತಿದ್ದರು” ಎಂದು ಟ್ವೀಟ್ ಮಾಡಿದ್ದರು.
1232 KILOMETRES
Just completed toughest & most unforgettable journey of my life which began in Ghaziabad to Saharsa,Bihar & covered a distance of 1232 Kilometres with 7 migrant labourers,who were riding BICYCLE to reach their villages.
My new film:
1232 KMs-Under production. pic.twitter.com/oYwx9cD2DN— Vinod Kapri (@vinodkapri) May 5, 2020
ಈ ಮೂಲಕ ಅವರು ತನ್ನ ಹೊಸ ಚಿತ್ರವು ನಿರ್ಮಾಣ ಹಂತದಲ್ಲಿದೆ, ಅದರ ಹೆಸರು ‘1232 ಕಿ.ಮೀ.’ ಎಂದು ಹೇಳಿಕೊಂಡಿದ್ದರು. ಈ ಟ್ವೀಟ್‌ನಲ್ಲಿ ಅವರು ಸಾಕ್ಷ್ಯಚಿತ್ರದ ಏಳು ವಲಸೆ ಕಾರ್ಮಿಕರು ಹಾಗೂ ಚಿತ್ರದ ಇತರ ದೃಶ್ಯಗಳ ಚಿತ್ರಗಳನ್ನು ಟ್ವಟರ್‌ನಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ದ್ವೇಷ ಬಿತ್ತುವವರಿಗೆ ಮತ ನೀಡಬೇಡಿ: ಪಶ್ಚಿಮ ಬಂಗಾಳದ ಸಿನಿಮಾ, ರಂಗಭೂಮಿ ಕಲಾವಿದರ ಹಾಡು ವೈರಲ್