ಉತ್ತರಾಖಂಡದ ತೆಹ್ರಿ ಜಿಲ್ಲೆಯ ಕುಂಡಿ ಗ್ರಾಮದ ಸಮೀಪ ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದ 18 ರಿಂದ 22 ವರ್ಷ ವಯಸ್ಸಿನ ಯುವಕರ ತಂಡವೊಂದರ ಕಥೆ ದುರಂತದಲ್ಲಿ ಮುಗಿದಿದೆ. ಆಕಸ್ಮಿಕವಾಗಿ ಗುಂಡು ತಾಗಿ ಯುವಕನೊಬ್ಬ ಸಾವನ್ನಪ್ಪಿದ್ದರೆ, ಆತನ ಮೂವರು ಗೆಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತೆಹ್ರಿ ಜಿಲ್ಲೆಯ ಕುಂಡಿ ಗ್ರಾಮದ ಭಿಲಂಗಾಣ ಬ್ಲಾಕ್‌ನ ಹಳ್ಳಿಯಿಂದ ಶನಿವಾರ ರಾತ್ರಿ ಏಳು ಮಂದಿ ಸ್ನೇಹಿತರು ಬೇಟೆಯಾಡಲು ಕಾಡಿಗೆ ತೆರಳಿದ್ದರು. ಅವರಲ್ಲಿ ಗುಂಪನ್ನು ಮುನ್ನೆಡೆಸುತ್ತಿದ್ದ 22 ವರ್ಷದ ರಾಜೀವ್ ದಾರಿಯಲ್ಲಿ ಜಾರಿ ಬಿದ್ದಾಗ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ, ತಂಡದಲ್ಲಿದ್ದ ಸಂತೋಷ್ ಎಂಬುವರಿಗೆ ತಾಗಿದೆ. ಸ್ಥಳದಲ್ಲಿಯೇ ಸಂತೋಷ್ ರಕ್ತಸಾವ್ರವಾಗಿ ಸಾವನ್ನಪ್ಪಿದ್ದಾನೆ.
ಸ್ನೇಹಿತನ ಮರಣದ ಬಗೆಗಿನ ತಪ್ಪಿತಸ್ಥ ಭಾವನೆ ಮತ್ತು ಭಯದಿಂದಾಗಿ ಇತರ ಮೂವರು ಸ್ನೇಹಿತರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಈ ದುರಂತದ ಬಗ್ಗೆ ಅವರೊಂದಿಗೆ ಕಾಡಿಗೆ ಹೋಗಿದ್ದ ಇತರ ಸ್ನೇಹಿತರು ಈ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ ಎಂದು ಎಸ್‌ಡಿಎಂ ಪಿಆರ್ ಚೌಹಾಣ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢ: ಎನ್‌ಕೌಂಟರ್‌ನಲ್ಲಿ ವೈಫಲ್ಯವಿಲ್ಲ, 25-30 ಮಾವೋವಾದಿಗಳ ಹತ್ಯೆ- CRPF ಮುಖ್ಯಸ್ಥ
ಗುಂಡು ತಾಗಿ ಸಂತೋಷ್ ಸಾವನ್ನಪ್ಪುತ್ತಿದ್ದಂತೆ, ಅವರ ಸ್ನೇಹಿತರು ಭಯಭೀತರಾಗಿದ್ದಾರೆ. ಬಂದೂಕು ಹಿಡಿದುಕೊಂಡಿದ್ದ ರಾಜೀವ್ ಬಂದೂಕಿನೊಂದಿಗೆ ಪರಾರಿಯಾಗಿದ್ದರೆ, ಇತ್ತ ಸೋಬನ್, ಪಂಕಜ್ ಮತ್ತು ಅರ್ಜುನ್ ಘಟನೆಯಿಂದ ನಮಗೆ ನಾಚಿಕೆಯಾಗುತ್ತಿದೆ ಎಂದು ಮೂವರು ಕೀಟನಾಶಕವನ್ನು ಸೇವಿಸಿದ್ದಾರೆ.
ಘಟನೆಯ ಬಗ್ಗೆ ನಿವಾಸಿಗಳಿಗೆ ತಿಳಿಸಲು ರಾಹುಲ್ ಮತ್ತು ಸುಮಿತ್ ಗ್ರಾಮಕ್ಕೆ ಮರಳಿದ್ದಾರೆ. ಗ್ರಾಮಸ್ಥರು ಕೀಟನಾಶಕ ಸೇವಿಸಿದ್ದ ಮೂವರು ಸ್ನೇಹಿತರನ್ನು ಬೇಲೇಶ್ವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆಗೂ ಮುನ್ನವೇ ಪಂಕಜ್ ಮತ್ತು ಅರ್ಜುನ್ ಮೃತಪಟ್ಟರೆ, ಚಿಕಿತ್ಸೆ ಸಮಯದಲ್ಲಿ ಸೋಬನ್ ನಿಧನರಾದ್ದಾರೆ.
ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಘಟನೆಯನ್ನು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ತೆಹ್ರಿ ಜಿಲ್ಲಾಧಿಕಾರಿ ಇವಾ ಆಶಿಶ್ ಶ್ರೀವಾಸ್ತವ ತಿಳಿಸಿದ್ದಾರೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ: 104
ಇದನ್ನೂ ಓದಿ: ಪ್ರಚಾರಕ್ಕಾಗಿ ರಾಕೇಶ್ ಟಿಕಾಯತ್ ಮೇಲೆ ದಾಳಿ ನಡೆಸಿದ್ದೆವು: ತಪ್ಪೊಪ್ಪಿಕೊಂಡ ಎಬಿವಿಪಿ ಮುಖಂಡ


