ದೇಶ, ರಾಜ್ಯದಲ್ಲಿ ಆಡಳಿತಗಳು ಬದಲಾಗುತ್ತಿದ್ದ ಹಾಗೆ ದೇಶದ್ರೋಹ ಪ್ರಕರಣಗಳನ್ನು ದಾಖಲಿಸುವುದು ಗೊಂದಲದ ಪ್ರವೃತ್ತಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಆತಂಕ ವ್ಯಕ್ತಪಡಿಸಿದೆ. ಈ ವೇಳೆ ಅಮಾನತುಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿಗೆ ಬಂಧನದ ವಿರುದ್ಧ ಜಾಮೀನು ನೀಡಿದೆ.
ಛತ್ತೀಸ್‌ಗಢ ಸರ್ಕಾರ ಅಮಾನತುಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ಗುರ್ಜಿಂದರ್ ಪಾಲ್ ಸಿಂಗ್ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಎರಡು ಕ್ರಿಮಿನಲ್ ಪ್ರಕರಣಗಳು ಮತ್ತು ಅಕ್ರಮ ಆಸ್ತಿ ಸಂಗ್ರಹಣೆಗಾಗಿ ಮತ್ತೊಂದು ಪ್ರಕರಣ ದಾಖಲಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ನ್ಯಾಯಪೀಠವು, ಅಮಾನತುಗೊಂಡ ಹಿರಿಯ ಐಪಿಎಸ್ ಅಧಿಕಾರಿ ಗುರ್ಜಿಂದರ್ ಪಾಲ್ ಸಿಂಗ್ ಅವರನ್ನು ಬಂಧಿಸದಂತೆ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದೆ. ಜೊತೆಗೆ ಪ್ರಕರಣಗಳ ತನಿಖೆಯಲ್ಲಿ ತನಿಖಾ ಏಜೆನ್ಸಿಗಳೊಂದಿಗೆ ಸಹಕರಿಸುವಂತೆ ಗುರ್ಜಿಂದರ್ ಪಾಲ್ ಸಿಂಗ್ ಅವರಿಗೆ ನಿರ್ದೇಶಿಸಿದೆ.
ಇದನ್ನೂ ಓದಿ: ಸಂಸದರು, ಶಾಸಕರ ವಿರುದ್ಧದ ತನಿಖೆ ವಿಳಂಬ: ತನಿಖಾ ಏಜೆನ್ಸಿಗಳಿಗೆ ಸುಪ್ರೀಂಕೋರ್ಟ್ ಛೀಮಾರಿ
“ಇದು ದೇಶದಲ್ಲಿ ಬಹಳ ಗೊಂದಲದ ಪ್ರವೃತ್ತಿಯಾಗಿದೆ. ಇದಕ್ಕೆ ಪೊಲೀಸ್ ಇಲಾಖೆಯೂ ಕಾರಣವಾಗಿದೆ. ಒಂದು ರಾಜಕೀಯ ಪಕ್ಷ ಅಧಿಕಾರದಲ್ಲಿದ್ದಾಗ, ಪೊಲೀಸ್ ಅಧಿಕಾರಿಗಳು ನಿರ್ದಿಷ್ಟ (ಆಡಳಿತ) ಪಕ್ಷದ ಪರವಾಗಿರುತ್ತಾರೆ. ನಂತರ ಮತ್ತೊಂದು ಹೊಸ ಪಕ್ಷ ಅಧಿಕಾರಕ್ಕೆ ಬಂದಾಗ, ಸರ್ಕಾರವು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಇದನ್ನು ನಿಲ್ಲಿಸಬೇಕು” ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠವು ನಾಲ್ಕು ವಾರಗಳಲ್ಲಿ, ಐಪಿಎಸ್ ಅಧಿಕಾರಿ ಗುರ್ಜಿಂದರ್ ಪಾಲ್ ಸಿಂಗ್ ಪ್ರಕರಣದಲ್ಲಿ ಸಲ್ಲಿಸಲಾಗಿರುವ ಎರಡು ಪ್ರತ್ಯೇಕ ಅರ್ಜಿಗಳಿಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ ಈ ಅವಧಿದಲ್ಲಿ ಪೊಲೀಸ್ ಅಧಿಕಾರಿ ಐಪಿಎಸ್ ಅಧಿಕಾರಿ ಗುರ್ಜಿಂದರ್ ಪಾಲ್ ಸಿಂಗ್ ಅವರನ್ನು ಬಂಧಿಸುವಂತಿಲ್ಲ ಎಂದು ಸೂಚಿಸಿದೆ.
ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿಯ ಪರವಾಗಿ ಹಿರಿಯ ವಕೀಲರಾದ ಎಫ್.ಎಸ್. ನಾರಿಮನ್ ಮತ್ತು ವಿಕಾಸ್ ಸಿಂಗ್ ಹಾಜರಿದ್ದರು. ಛತ್ತೀಸ್‌ಗಢ ರಾಜ್ಯ ಸರ್ಕಾರವನ್ನು ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಮತ್ತು ರಕ್ಷ್ ದ್ವಿವೇದಿ ಪ್ರತಿನಿಧಿಸಿದ್ದರು.
ಕಾಂಗ್ರೆಸ್ ನೇತೃತ್ವದ ಛತ್ತೀಸ್‌ಗಢ ಸರ್ಕಾರವು ಐಪಿಎಸ್ ಅಧಿಕಾರಿ ಗುರ್ಜಿಂದರ್ ಪಾಲ್ ಸಿಂಗ್ ವಿರುದ್ಧ ದೇಶದ್ರೋಹ ಅಪರಾಧ ಮತ್ತು ಅಕ್ರಮ ಆಸ್ತಿ ಗಳಿಸಿದ ಎರಡು ಪ್ರಕರಣಗಳನ್ನು ದಾಖಲಿಸಿದೆ.
ಇದನ್ನೂ ಓದಿ: ಮಹಿಳೆಯರು ಎನ್‌ಡಿಎ ಪರೀಕ್ಷೆ ಬರೆಯಬಹುದು: ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪು


