Homeಚಳವಳಿಪ್ರಜಾತಂತ್ರದ ವಿಸ್ತರಣೆ ಮತ್ತು ಧ್ರುವೀಕರಣ: ಚಳವಳಿಗಳ ಗೆಲುವು ಮತ್ತು ಸೋಲು

ಪ್ರಜಾತಂತ್ರದ ವಿಸ್ತರಣೆ ಮತ್ತು ಧ್ರುವೀಕರಣ: ಚಳವಳಿಗಳ ಗೆಲುವು ಮತ್ತು ಸೋಲು

ರೈತ ಚಳವಳಿಯ ಜೊತೆಗೆ ಬಂದವರು ತೀರಾ ಜಾತಿಸೂಕ್ಷ್ಮತೆ ಕಲಿಯದಿದ್ದರೂ, ಅಗ್ರೆಸಿವ್ ಜಾತೀವಾದಿಗಳಾಗದ ಹಾಗೆ ಆಗಲು ಆ ಚಳವಳಿಯ ನಾಯಕತ್ವ ಕಾರಣವಾಗಿತ್ತು. ಅದು ಲೋಹಿಯಾವಾದಿ ಚಿಂತನೆಯುಳ್ಳವರ ನಾಯಕತ್ವವಾಗಿತ್ತು.

- Advertisement -

ಸಮಕಾಲೀನ ಭಾರತ ಇಂದು ಎದುರಿಸುತ್ತಿರುವ ಸವಾಲನ್ನು ಮತ್ತು ಅದಕ್ಕೆದುರಾಗಿ ಪ್ರಜಾತಾಂತ್ರಿಕ ಚಳವಳಿಯು ಎದ್ದು ನಿಲ್ಲಲು ತಿಣುಕಾಡುತ್ತಿರುವುದನ್ನು ಅರ್ಥ ಮಾಡಿಕೊಳ್ಳಲು ನಾವು ಇತಿಹಾಸದಲ್ಲಿ ಎಷ್ಟು ಹಿಂದಿನಿಂದ ಬೇಕಾದರೂ ಆರಂಭಿಸಬಹುದು. ಅಂಬೇಡ್ಕರರು ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯಲ್ಲಿ ಸೂಚಿಸಿರುವ ಪ್ರತಿಕ್ರಾಂತಿಯ ಕಾಲದಷ್ಟು ಹಿಂದಕ್ಕೆ ಹೋಗಿಯೂ ವಿಶ್ಲೇಷಣೆ ಮಾಡಬಹುದು. ಅಷ್ಟು ಹಿಂದಕ್ಕಲ್ಲದಿದ್ದರೂ 12ನೇ ಶತಮಾನದಿಂದೀಚೆಗೆ ವಿವಿಧ ಭಾಷಿಕ ರಾಷ್ಟ್ರೀಯತೆಗಳು ಗುರುತು ಪಡೆದುಕೊಳ್ಳುತ್ತಾ ಹೋದದ್ದು, ಅದರೊಟ್ಟಿಗೆ ವಿವಿಧ ಶೂದ್ರ ಸಮುದಾಯಗಳು ಅಸರ್ಟ್ ಮಾಡಿಕೊಂಡು ಮುಂದೆ ಬಂದದ್ದು, ನಂತರ ವಸಾಹತುಶಾಹಿಯೊಟ್ಟಿಗೆ ನಡೆದ ಸಂಘರ್ಷ ಹಾಗೂ ಅನುಸಂಧಾನ ಇವೆಲ್ಲವನ್ನೂ ಚರ್ಚೆ ಮಾಡಬೇಕಾಗಿ ಬರಬಹುದು. ಆದರೆ, ಇಲ್ಲಿ ಅವೆಲ್ಲವನ್ನೂ ಕೇವಲ ಹಿನ್ನೆಲೆಯಾಗಿಟ್ಟುಕೊಂಡು ಭಾರತವು ಆಧುನಿಕ ಪ್ರಜಾತಾಂತ್ರಿಕ ಮೌಲ್ಯಗಳನ್ನುಳ್ಳ ಸಂವಿಧಾನವನ್ನು ಅಂಗೀಕರಿಸಿ, ಪ್ರಜಾಪ್ರಭುತ್ವ ದೇಶವಾಗಿ ಅಸ್ತಿತ್ವಕ್ಕೆ ಬಂದ ನಂತರದ ಕಾಲದ ಬದಲಾವಣೆಗಳಿಗೆ ಸೀಮಿತಗೊಳಿಸಿಕೊಳ್ಳಲಾಗಿದೆ.

1947ರ ಸ್ವಾತಂತ್ರ್ಯ ಮತ್ತು 1950ರ ಸಂವಿಧಾನಗಳು ಸ್ವಾತಂತ್ರ್ಯ ಚಳವಳಿಯ ಉತ್ಪನ್ನಗಳಾಗಿದ್ದರೂ, ಪ್ರಜಾತಂತ್ರ ಮತ್ತು ಸಂವಿಧಾನದ ಮೌಲ್ಯಗಳು ಇಡೀ ಸಮಾಜದಲ್ಲಿ ಹಾಸುಹೊಕ್ಕಾಗಿರಲಿಲ್ಲ. ಅಂಬೇಡ್ಕರರ ಪ್ರಸಿದ್ಧ ಹೇಳಿಕೆ ‘ಒಬ್ಬ ವ್ಯಕ್ತಿಗೆ ಒಂದು ಓಟು….. ಆದರೆ ಅಪಾರವಾದ ಸಾಮಾಜಿಕ, ಆರ್ಥಿಕ ಅಸಮಾನತೆಯುಳ್ಳ ವೈರುಧ್ಯಪೂರ್ಣ ದೇಶಕ್ಕೆ ಪ್ರವೇಶಿಸುತ್ತಿದ್ದೇವೆ’ ಅದನ್ನು ಅತ್ಯಂತ ಸಮರ್ಥವಾಗಿ ಕಟ್ಟಿಕೊಡುತ್ತದೆ. ಆ ಹೇಳಿಕೆಯಲ್ಲಿ ವ್ಯಕ್ತವಾಗಿರುವ ವೈರುಧ್ಯಗಳ ಜೊತೆಗೆ ಕೇಂದ್ರ ಮತ್ತು ವಿವಿಧ ಭಾಷಿಕ ರಾಷ್ಟ್ರೀಯತೆಗಳ ನಡುವಿನ ವೈರುಧ್ಯವೂ ದೇಶದಲ್ಲಿತ್ತು. (ಇನ್ನೂ ಒಂದು ವೈರುಧ್ಯ ಮುಸ್ಲಿಮರ ಜೊತೆಗಿನದ್ದು. ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಹೋಗದೇ ಭಾರತವನ್ನು ಆಯ್ದುಕೊಂಡ ಮುಸ್ಲಿಮರ ಪಾಲಿಗೆ ಸಂವಿಧಾನದಲ್ಲಿ ಖಾತರಿಗೊಳಿಸಲಾದ ಹಕ್ಕುಗಳ ಪುಸ್ತಕದ ಬದನೇಕಾಯಿ ಬಿಟ್ಟರೆ ಹೆಚ್ಚೇನೂ ಸಿಗಲಿಲ್ಲವೆಂಬುದನ್ನೂ ಗಮನಿಸಬೇಕು.)

ವೈರುಧ್ಯಗಳನ್ನು ತಗ್ಗಿಸಲು ನಂತರ ಹಲವು ರೀತಿಯ ಚಳವಳಿಗಳು ಭುಗಿಲೆದ್ದಿದ್ದವು. ತೆಲಂಗಾಣ ಹೋರಾಟ, ಮೈಸೂರು ಅರಸರ ರೀತಿ ರಾಜಾಧಿಕಾರ ಬಿಟ್ಟುಕೊಡಲು ಒಪ್ಪದವರ ವಿರುದ್ಧ ಹೋರಾಟ, ಭಾಷಾವಾರು ಪ್ರಾಂತ ರಚನೆಗಾಗಿನ ಹೋರಾಟ ಇತ್ಯಾದಿ. ಅದರ ಜೊತೆಗೇ ಆರಂಭವಾಗಿದ್ದ ಭೂ ಹೋರಾಟಗಳು ನಂತರವೂ ಮುಂದುವರೆದಿದ್ದವು. ‘60ರ ದಶಕದಲ್ಲಿ ವಿದ್ಯಾರ್ಥಿಗಳ ಚಳವಳಿಯ ಒಂದು ಅಲೆ ಬೀಸಿದರೆ, ಭೂರಹಿತರ ಹೋರಾಟವು ಇನ್ನೊಂದು ಮಜಲನ್ನು ತಟ್ಟಿತು. ಅಲ್ಲಿಂದಾಚೆಗೆ ಇಂದಿರಾಗಾಂಧಿಯವರ ಅವಧಿ. ಹೋರಾಟಗಳೂ ತೀವ್ರಗೊಂಡಿದ್ದವು, ಸರ್ಕಾರವೂ (ಎಷ್ಟೇ ಅರೆಬರೆ
ಜಾರಿಯಾಗಿದ್ದರೂ) ಹಲವು ನೀತಿ, ಕಾರ್ಯಕ್ರಮಗಳನ್ನು ಘೋಷಿಸಿತು. ಅದೆಷ್ಟೋ ಕಾರ್ಮಿಕ ಪರ ಕಾನೂನುಗಳೂ ಬಂದವು. ಉಳುವವರಿಗೇ ಭೂಮಿ ಕಾಯ್ದೆಯ ಎರಡನೇ ಅಧ್ಯಾಯ ಬಂತು.

ಆ ನಂತರದ್ದು ತುರ್ತುಪರಿಸ್ಥಿತಿಯ ವಿರುದ್ಧದ ಹೋರಾಟ. ಇಂದಿರಾಗಾಂಧಿಯವರ ಪರ ಮತ್ತು ವಿರುದ್ಧ ಎರಡೂ ವಾದಗಳಿದ್ದವಾದರೂ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಇಲ್ಲವಾಗಿಸಿದ ಕರಾಳ ಅವಧಿ ಅದಾಗಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಇದರ ಸುತ್ತಮುತ್ತಲಲ್ಲೇ ರೈತ, ದಲಿತ ಮತ್ತು ಎಡಪಂಥದ ಚಳವಳಿಗಳೂ ಬೆಳೆದು ನಿಂತವಾದರೂ, ಎಲ್ಲಾ ರಾಜ್ಯಗಳಲ್ಲಿ ಈ ಚಳವಳಿಗಳು ಒಂದೇ ರೀತಿಯಲ್ಲಿ ವಿಸ್ತಾರವಾಗಲಿಲ್ಲ. ಆದರೆ, ಅವುಗಳ ಪ್ರಭಾವ ಮಾತ್ರ ಇಡೀ ದೇಶದ ಮೇಲಾಯಿತು. (ಈ ಬರಹದಲ್ಲಿ ಬಹುಮಟ್ಟಿಗೆ ಕರ್ನಾಟಕದ ಉದಾಹರಣೆಯನ್ನೇ ಹೆಚ್ಚಾಗಿ ತೆಗೆದುಕೊಂಡರೂ, ಅದು ಬಹುಮಟ್ಟಿಗೆ ಇಡೀ ದೇಶಕ್ಕೆ ಅನ್ವಯಿಸಬಹುದಾದ ಸಾರ್ವತ್ರಿಕತೆಯನ್ನು ಸ್ಥೂಲವಾಗಿ ಮಾತ್ರ ಹೊಂದಿವೆಯೆಂಬ ಎಚ್ಚರವಿದೆ.) ಇಲ್ಲಿಯವರೆಗೆ (ತುರ್ತುಪರಿಸ್ಥಿತಿಯ ಸಂದರ್ಭ ಹೊರತುಪಡಿಸಿ) ಭಾರತದ ಪ್ರಜಾತಂತ್ರವು ವಿಸ್ತರಣೆಯಾಗುತ್ತಾ ಹೋದ ಕಾಲವಾಗಿತ್ತು. ಭಾರತದಲ್ಲಿ ವಿವಿಧ ಜನಸಮುದಾಯಗಳು (‘ಸಾಲಿನಲ್ಲಿ ಕಡೆಯದಾಗಿ ನಿಂತಿದ್ದ’ ದಲಿತ ಸಮುದಾಯದವರೆಗೆ) ಹೋರಾಡಿ ಪಡೆದುಕೊಂಡ ಹಕ್ಕುಗಳು ಈ ವಿಸ್ತರಣೆಯನ್ನು ಸಾಧಿಸಿದ್ದವು ಎಂಬುದನ್ನು ಮರೆಯಲಾಗದು. ಹಾಗೆಯೇ ಎಲ್ಲಾ ಕೊರತೆಗಳ ನಡುವೆಯೂ ಕಾಂಗ್ರೆಸ್ ಪಕ್ಷವು ಭಾರತದ ಜನಸಾಮಾನ್ಯರ ಚಳವಳಿಯ ಒತ್ತಾಸೆಗಳಿಗೆ ಮಣಿದು ಈ ವಿಸ್ತರಣೆಯ ಕ್ರಮಗಳಿಗೆ ಕಾರಣವಾಗಿತ್ತು ಎಂಬುದನ್ನೂ ನೆನಪಿನಲ್ಲಿಡಬಹುದು.

ಇಷ್ಟೇ ಹೇಳಿದರೆ ಅದು ಪೂರ್ಣ ಸತ್ಯವಾಗದು. ಏಕೆಂದರೆ, ಸಮಗ್ರವಾದ ಸುಧಾರಣೆಗಳಿಗೆ ಮತ್ತು ಪ್ರಜಾತಂತ್ರವನ್ನು ಗಟ್ಟಿಯಾಗಿ ನೆಲೆಗೊಳಿಸಲು ಇದೇ ಕಾಂಗ್ರೆಸ್ ಪಕ್ಷವು ಸಿದ್ಧವಿರಲಿಲ್ಲ. ಅಂದರೆ  ಸಂಖ್ಯಾಬಲ, ಹೋರಾಟದ ಶಕ್ತಿ ಮತ್ತು ಸಂವಿಧಾನವು ಕೊಡಮಾಡಿದ್ದ ಹಕ್ಕುಗಳ ಆಧಾರದ ಮೇಲೆ ದಮನಿತ ಸಮುದಾಯಗಳು ಬೀದಿಯಲ್ಲಿ ಮತ್ತು ಮತಗಟ್ಟೆಗಳಲ್ಲಿ ಅಸರ್ಟ್ ಮಾಡಿಕೊಂಡಿದ್ದು ಹಲವು ಬದಲಾವಣೆಗಳಿಗೆ ಕಾರಣವಾಯಿತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಿಶಾಲ ಜನಸಮುದಾಯಗಳನ್ನು ಪ್ರತಿನಿಧಿಸಿದ ಕಾರಣದಿಂದ ಆ ಆಶಯವನ್ನು ಮುಂದಕ್ಕೊಯ್ಯುವ ಜವಾಬ್ದಾರಿ ಅಂದಿನ ನಾಯಕತ್ವದ ಮೇಲಿತ್ತು ಮತ್ತು ನೆಹರೂ ಅಂಥ ಲಿಬರಲ್ ವ್ಯಕ್ತಿಯು ಆ ಜಾಗದಲ್ಲಿ ಇದ್ದುದಕ್ಕೆ ಒಂದಷ್ಟು ಅಂಕಗಳನ್ನೂ ನೀಡಬಹುದು. ಆದರೆ ಕಾಂಗ್ರೆಸ್ ಪ್ರತಿನಿಧಿಸಿದ ಈ ‘ವಿಶಾಲ ಜನಸಮುದಾಯ’ಗಳಲ್ಲಿ ಯಜಮಾನ ವರ್ಗಗಳ ಮೇಲಾಳ್ವಿಕೆಯೂ ಇದ್ದಿತ್ತಾದ್ದರಿಂದ, ಅಂಬೇಡ್ಕರ್ ಮತ್ತು ಕಮ್ಯುನಿಸ್ಟರು ಪ್ರತಿಪಾದಿಸಿದ ಮಟ್ಟಿಗೆ ಪ್ರಜಾತಂತ್ರವನ್ನು ಏರಿಸಲು ಕಾಂಗ್ರೆಸ್ ಹೋಗಲಿಲ್ಲ. ಹಾಗೆಯೇ ಮುಸ್ಲಿಮರಿಗೆ ಸಿಕ್ಕಿದ್ದೇನು ಎಂಬ ಪ್ರಶ್ನೆಯೂ ಗಂಭೀರವಾದದ್ದು. ದೇಶದಲ್ಲಿ ಹಿಂದಿನಿಂದಲೂ ಮುಸ್ಲಿಮರಲ್ಲಿ ಅತ್ಯಂತ ಶ್ರೀಮಂತವಾದ ಸಣ್ಣ ವಿಭಾಗವಿತ್ತು. ಉಳಿದ ಶ್ರೀಮಂತರಂತೆ ಅವರೂ ದುಂಡಗಾದರು. ಅದನ್ನು ಹೊರತುಪಡಿಸಿದರೆ ‘ಮುಸ್ಲಿಮರ ತುಷ್ಟೀಕರಣ’ ಎಲ್ಲಿ ಎಂಬುದು ಅರ್ಥವಾಗುತ್ತಲೇ ಇಲ್ಲ. ಹಾಗೆ ನೋಡಿದರೆ ಅವರನ್ನು ನಿರಂತರವಾಗಿ ಅಂಚಿನಲ್ಲೇ ಇಡಲು ಆ ಸಮುದಾಯದ ಮೌಲ್ವಿಗಳು, ನಾಯಕರು ಹಾಗೂ ರಾಜಕೀಯ ಪಕ್ಷಗಳು ಯಶಸ್ವಿಯಾಗಿದ್ದಾರೆ.

ಹೋರಾಟದ ಶಕ್ತಿ, ಸಂಖ್ಯಾಬಲ ಮತ್ತು ಮತಗಟ್ಟೆಯ ಅನಿವಾರ್ಯತೆಯ ಪ್ರಧಾನ ಕಾರಣಗಳಿಂದ ಸಿಕ್ಕ ಹಕ್ಕುಗಳಿಂದ ದಮನಿತ ಸಮುದಾಯಗಳ ಒಂದು ಸಣ್ಣ ವಿಭಾಗದಲ್ಲಿ ಮೇಲ್ಚಲನೆಯು ಸಾಧ್ಯವಾಯಿತು. ಇದರಲ್ಲಿನ ಸಕಾರಾತ್ಮಕ ಸಂಗತಿಯ ಹೊರತಾಗಿ ಅಲ್ಲಿ ಮಧ್ಯಮವರ್ಗೀಕರಣದ ಜೊತೆಜೊತೆಗೆ ಬ್ರಾಹ್ಮಣೀಕರಣವೂ ಬೆಳೆಯುತ್ತಾ ಹೋಯಿತು.

ಐಡೆಂಟಿಟಿ ಹೋರಾಟವು ದಮನಿತ ಸಮುದಾಯಗಳ ಪರವಾದ ಗಟ್ಟಿ ದನಿಯನ್ನು ಎತ್ತಲು ಸಹಾಯ ಮಾಡಿದ ಹಾಗೆಯೇ ಅವುಗಳ ನಡುವೆ ಒಡಕನ್ನೂ ತಂದಿತು. ದಮನಿತ ಸಮುದಾಯಗಳ ಐಡೆಂಟಿಟಿ ರಾಜಕಾರಣವನ್ನು ಮೇಲ್ಜಾತಿಗಳ ಧ್ರುವೀಕರಣಕ್ಕೆ ಬೇಕಾದ ಹಾಗೆ ಬಳಸಿಕೊಳ್ಳಲು ಆರೆಸ್ಸೆಸ್, ಬಿಜೆಪಿಗಳು ಮುಂದಾದವು ಮತ್ತು ಯಶಸ್ವಿಯಾದವು. ಈ ವೈರುಧ್ಯವನ್ನು ಗಮನಿಸಬೇಕು.

ದಮನಿತ ಸಮುದಾಯಗಳ ಐಡೆಂಟಿಟಿ ರಾಜಕಾರಣವು ಕಾಲಾಂತರದಲ್ಲಿ ಅವುಗಳ ನಡುವಿನ ಐಕ್ಯತೆಯನ್ನು ದುರ್ಬಲಗೊಳಿಸಿದರೆ, ಮೇಲ್ಜಾತಿಗಳ ಧ್ರುವೀಕರಣವನ್ನು ಹೆಚ್ಚಿಸಿದವು. ಮಂಡಲ್ ವರದಿ ಜಾರಿ ಮತ್ತು ಅದರ ಸುತ್ತಲಿನ ಹಾಗೂ ನಂತರದ ಬೆಳವಣಿಗೆಯನ್ನು ಈಗ ನೋಡಿದರೆ ಅದು ಗೋಚರವಾಗಬಹುದು.

ಮಧ್ಯಮವರ್ಗೀಕರಣವು ತನ್ನಂತೆ ತಾನೇ ಸಮಸ್ಯೆಯಲ್ಲ. ಎಲ್ಲರೂ ಕನಿಷ್ಠ ಮಧ್ಯಮವರ್ಗದಷ್ಟು ಅನುಕೂಲಗಳನ್ನು ಪಡೆದುಕೊಳ್ಳದೇ ಇದ್ದರೆ ಅಂತಹ ಪ್ರಜಾತಂತ್ರದಿಂದೇನು ಪ್ರಯೋಜನ? ಆದರೆ ಅದು ಬ್ರಾಹ್ಮಣೀಕರಣದ ಅಪಾಯಗಳನ್ನೂ ಒಳಗೊಂಡಿದ್ದಲ್ಲದೇ, ಸಮುದಾಯದ ಹಿತಾಸಕ್ತಿಯನ್ನು ಮರೆಯುವಂತಾದರೆ ಏನಾಗಬಹುದೋ ಅದೇ ಆಯಿತು.

ಬಲಾಢ್ಯ ಶೂದ್ರ ಸಮುದಾಯಗಳು ಮಾತ್ರವಲ್ಲದೇ, ಹಿಂದುಳಿದ ಸಮುದಾಯಗಳಲ್ಲಿ ಮೇಲ್ಚಲನೆ ಪಡೆದುಕೊಂಡಂಥವೂ ಸಹಾ ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೇಲ್ಚಲನೆಯೆಂದರೆ ವೈದಿಕ ಸಂಸ್ಕೃತಿಯ ಭಾಗವಾಗುವುದೆಂಬಂತೆ ಭಾವಿಸಿಕೊಂಡವು. ಕರ್ನಾಟಕದ ಎಲ್ಲಾ ಶೂದ್ರ, ಹಿಂದುಳಿದ ಮತ್ತು ದಲಿತ ಸಮುದಾಯಗಳ ಮಠಗಳು ಸ್ಥಾಪನೆಯಾಗಿರುವುದು, ಆ ಮಠಗಳು ವೈದಿಕ ಸಂಕೇತಗಳಲ್ಲಿ ಸಂಭ್ರಮಿಸುತ್ತಿರುವುದು ಮತ್ತು ನಿಧಾನಕ್ಕೆ ಬಿಜೆಪಿ ಆರೆಸ್ಸೆಸ್ ತೆಕ್ಕೆಗೆ ಜಾರುತ್ತಿರುವುದನ್ನು ಗಮನಿಸಬೇಕು.

ಐಡೆಂಟಿಟಿಯ ಭಾಗವಾಗಿ ಅವೈದಿಕ ಸಂಸ್ಕೃತಿ ಮತ್ತು ಸಾಮುದಾಯಿಕ ಹಿತದ ಆಲೋಚನೆಯ ಬದಲಿಗೆ ವಿರುದ್ಧ ದಿಕ್ಕಿನಲ್ಲಿ ಮತ್ತು ಸಮುದಾಯದ ಮೇಲ್ವರ್ಗ ಅಥವಾ ಮೇಲ್ಮಧ್ಯಮವರ್ಗದ ಹಿತದ ಕಡೆಗೆ ಸಾಗಿವೆ ಎಂಬುದು ಢಾಳಾಗಿ ಎದ್ದು ಕಾಣುತ್ತದೆ. ಅಂದರೆ ಯಾವುದನ್ನು ಅವಕಾಶವಾದವೆಂದು ಕರೆಯಬಹುದೋ ಆ ಕಡೆಗೆ ಈ ವಿದ್ಯಮಾನವು ಕೊಂಡೊಯ್ದಿದೆ.

ಇಂತಹ ಬೆಳವಣಿಗೆಗಳು ಆರಂಭವಾಗುವ ಹೊತ್ತಿನಲ್ಲೇ ದೇಶದಲ್ಲಿ ಕಲ್ಯಾಣ ರಾಜ್ಯದ (ಇದನ್ನು ಸಮಾಜವಾದಿ ಆಶಯ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆರೆಸ್ಸೆಸ್ ವಿರೋಧಿಸುವವರೆಲ್ಲರೂ ಎಡಪಂಥೀಯರು ಎಂದು ತಪ್ಪಾಗಿ ಕರೆಯುವಂತೆ) ನೀತಿಗಳಿಗೆ ತಿಲಾಂಜಲಿ ಕೊಡಲು ಶುರು ಮಾಡಿದ್ದರು. 1981ರಲ್ಲಿ ಐಎಂಎಫ್‌ನಿಂದ
ಪಡೆದುಕೊಂಡ ದೊಡ್ಡ (ಆಗಿನ ಮಟ್ಟಿಗೆ ದೊಡ್ಡ) ಸಾಲದಿಂದಲೇ ಅದು ಆರಂಭವಾಗಿತ್ತು ಎಂದು ಇಲ್ಲಿ ಹೇಳಬೇಕು. ರಾಜೀವ್‌ಗಾಂಧಿಯಿಂದ ಹಿಡಿದು ಮನಮೋಹನಸಿಂಗ್‌ರವರೆಗೆ ಎಲ್ಲರೂ ಅದನ್ನು ಮುಂದುವರೆಸಿದರು. ಈ ಹೊಸ ಆರ್ಥಿಕ ನೀತಿಗಳು ಆರ್ಥಿಕ ಬೆಳವಣಿಗೆಯನ್ನು ತರಲೇ ಇಲ್ಲ ಎಂದು ಯಾರೂ ಹೇಳಲಾಗದು; ಹಾಗೆಯೇ ಕಡುಬಡತನ, ಕೆಲವು ಆರೋಗ್ಯ ಸೂಚ್ಯಂಕಗಳು, ಸಾಕ್ಷರತೆ ಇತ್ಯಾದಿಗಳಲ್ಲಿ ಗಣನೀಯ ಬದಲಾವಣೆ ಬಂದಿರುವುದೂ ವಾಸ್ತವ. ಆದರೆ, ಅಪಾರ ಪ್ರಮಾಣದ ಅಸಮಾನತೆ ಬೆಳೆಯಿತು. ಕೃಷಿಯಲ್ಲಿ ತೊಡಗಿದ್ದವರು ಸಾಮಾಜಿಕ ಪ್ರತಿಷ್ಠೆಯನ್ನು ಕಳೆದುಕೊಳ್ಳಲು ಸಾಮಾಜಿಕ ಕಾರಣಗಳಲ್ಲದೇ ಆರ್ಥಿಕ ದಿವಾಳಿತನವೂ ಕಾರಣವಾಯಿತು.

ರೈತ ಚಳವಳಿಯು ನಡೆಸಿದ್ದ ಹೋರಾಟವು, ರೈತರಿಗೆ ಸ್ವಾಭಿಮಾನವನ್ನೂ ಸರ್ಕಾರದ ನೀತಿಗಳಲ್ಲಿ ಬದಲಾವಣೆಯನ್ನೂ ತರುವ ಮಟ್ಟಿಗೆ ಯಶಸ್ವಿಯಾಗಿತ್ತು. ಆದರೆ ಹಿಂದಿಗಿಂತ ಕೆಟ್ಟಸ್ಥಿತಿಗೆ ಕೃಷಿ ಮತ್ತು ಕೃಷಿಕರು ತಲುಪುವ ಹೊತ್ತಿಗೆ ರೈತಚಳವಳಿಯು ವಿಘಟಿತವೂ, ದುರ್ಬಲವೂ ಆಗತೊಡಗಿತ್ತು.ಬಹುಶಃ ಇದೇ ಮಾತನ್ನು ಅದುವರೆಗೆ ಪ್ರಜಾತಂತ್ರದ ವಿಸ್ತರಣೆಗೆ ಕಾರಣವಾಗಿದ್ದ ಎಲ್ಲಾ ಚಳವಳಿಗಳಿಗೂ ಹೇಳಬಹುದು. ಸಾಮಾಜಿಕ ರಚನೆಯಲ್ಲಿ ಬದಲಾವಣೆಗಳು ಬರುತ್ತಿದ್ದವು; ಆರ್ಥಿಕ ನೀತಿಯಲ್ಲಿ ಭಾರೀ ದೊಡ್ಡ ಬದಲಾವಣೆಯು ಬಂದಿತು; ಹೊಸ ತಂತ್ರಜ್ಞಾನವು ಹಲವಾರು ಸಾಂಸ್ಕೃತಿಕ ಪಲ್ಲಟಗಳಿಗೂ ಕಾರಣವಾಯಿತು.

ಅದಕ್ಕೆ ತಕ್ಕುನಾದ ರಾಜಕೀಯ ಬದಲಾವಣೆಯನ್ನು ತರಲು ಸಾಧ್ಯವಾಗಿದ್ದು ಕಾಂಗ್ರೆಸ್‌ಗಿಂತ ಅತ್ಯಂತ ಪ್ರತಿಗಾಮಿಯಾಗಿದ್ದ ಬಿಜೆಪಿಯಿಂದ. ಇದಕ್ಕೆ ಆರೆಸ್ಸೆಸ್ ಒಂದು ಕಾರಣವಾಗಿತ್ತಾದರೂ, ಆರೆಸ್ಸೆಸ್ ಪ್ರತಿಪಾದಿಸುತ್ತಿದ್ದ ಹಲವಾರು ನೀತಿಗಳಿಗಿಂತ ಭಿನ್ನವಾಗಿ (ಆದರೆ ಅಂತಿಮವಾಗಿ ಅದಕ್ಕೆ ಪೂರಕವಾಗಿ) ಫ್ಲೆಕ್ಸಿಬಿಲಿಟಿ ತೋರಿಸಿದ ಬಿಜೆಪಿಯು ಅಗಾಧವಾಗಿ ಬೆಳೆಯಿತು. ಇಲ್ಲಿ ‘ಅದಕ್ಕೆ ತಕ್ಕುನಾದ’ ಎಂದರೆ ಏನು? ಹೊಸ ಬದಲಾವಣೆಗಳು ಎರಡು ಪರಸ್ಪರ ವಿರುದ್ಧ ಹಿತಾಸಕ್ತಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಬೇಕಿತ್ತು. ಅಂತಹ ದೊಡ್ಡ ಸಂಘರ್ಷ ಇಲ್ಲದಂತೆ, ಆದರೆ ಅವುಗಳ ಪೈಕಿ ಬಲಾಢ್ಯವಾಗಿದ್ದ ಕಾರ್ಪೋರೇಟ್ ಮತ್ತು ವೈದಿಕಶಾಹಿಗೆ ತಕ್ಕುನಾದ ರಾಜಕೀಯ ಬದಲಾವಣೆಯನ್ನು ಬಿಜೆಪಿಯು ಸುಮಾರು 2 ದಶಕಗಳ ಅವಧಿಯಲ್ಲಿ ತರಲು ಯಶಸ್ವಿಯಾಯಿತು.

ಇದನ್ನೂ ಓದಿ: (ರೈತ) ಚಳುವಳಿಯ ಬಿಕ್ಕಟ್ಟು : ಕೆ. ಪಿ. ಸುರೇಶ್

ಇದರ ಅಪಾಯವನ್ನು ಎಲ್ಲರಿಗಿಂತ ಮುಂಚೆ ಸರಿಯಾಗಿ ಗ್ರಹಿಸಿದ್ದು ಮಾರ್ಕ್ಸ್‌ವಾದಿಗಳೇ. ಹಾಗೆಯೇ ಮುಂದಿನ ದಿನಗಳಲ್ಲಿ ಈ ‘ಫ್ಯಾಸಿಸ್ಟ್ ರಾಜಕಾರಣ’ವು ಎಲ್ಲಿಗೆ ಕೊಂಡೊಯ್ಯಬಹುದು ಎಂಬುದನ್ನು ಮುಂದಿಟ್ಟಿದ್ದೂ ಅವರೇ (ಮಿಕ್ಕವರಿಗಿಂತ ಹೆಚ್ಚಿನ ಪ್ರಮಾಣದಲ್ಲಿ). ಆದರೆ, ಅದಕ್ಕೆ ಪ್ರತಿಯಾದ ಸುಭದ್ರವಾದ ಚಳವಳಿಯನ್ನು ಕಟ್ಟಲು ಅತ್ಯಂತ ಕಡಿಮೆ ಯಶಸ್ಸನ್ನು ಪಡೆದದ್ದು ಎಡಪಂಥೀಯರೇ. ಇದಕ್ಕೆ ಧರ್ಮದ ಕುರಿತಾದ ಸರಿಯಾದ ತಿಳುವಳಿಕೆ? ಜನಸಾಮಾನ್ಯರಿಗೆ ಇರುವ ಅಧ್ಯಾತ್ಮಿಕ ಅಗತ್ಯವನ್ನು ಗುರುತಿಸಿ ಅದಕ್ಕೆ ಬೇಕಾದ ಪರ್ಯಾಯವನ್ನು ನೀಡುವ ತಿಳುವಳಿಕೆ? ಇಲ್ಲದಿದ್ದುದೇ ಪ್ರಧಾನ ಕಾರಣವೆಂದು ಯೋಗೇಂದ್ರ ಯಾದವ್, ಶಿವ ವಿಶ್ವನಾಥನ್ ಮುಂತಾದವರು ಹೇಳಿದ್ದಾರೆ. ಇದೇ ಸಂಚಿಕೆಯಲ್ಲಿ ಶಿವ ವಿಶ್ವನಾಥನ್ ಅವರ ಲೇಖನವು ಅದನ್ನು ಒತ್ತಿ ಹೇಳುತ್ತದೆ. ಈ ವೈಫಲ್ಯ ನಿಜ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ, ಆ ವೈಫಲ್ಯವು ಅಷ್ಟೇ ಪ್ರಮಾಣದಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈ ದೇಶದ ಲೋಹಿಯಾವಾದಿ ಸಮಾಜವಾದಿಗಳದ್ದೂ ಆಗಿತ್ತು. ತಮ್ಮ ಚಿಂತನೆ ಹಾಗೂ ಆಚರಣೆಯಲ್ಲಿ ಅಧ್ಯಾತ್ಮಿಕ ಆಯಾಮಗಳನ್ನು ಹೊಂದಿದ್ದ ಗಾಂಧಿ ಮತ್ತು ಅಂಬೇಡ್ಕರರ ಅನುಯಾಯಿಗಳೂ ಈ ನಿಟ್ಟಿನಲ್ಲಿ ಗಮನಾರ್ಹವಾದುದೇನನ್ನೂ ಮಾಡಲಾಗಲಿಲ್ಲ ಅಲ್ಲವೇ?

ಆದರೆ ಇಲ್ಲಿ ಮುಖ್ಯವಾದ (ಅಧ್ಯಾತ್ಮ, ಧರ್ಮ ಅಮುಖ್ಯವಲ್ಲ) ಇನ್ನೂ ಒಂದೆರಡು ಸಂಗತಿಗಳಿದ್ದವು. ಆ ವಿಚಾರದ ವೈಫಲ್ಯವು ದೇಶದ ಪ್ರಜಾತಂತ್ರವಾದಿಗಳ ನಡುವೆ ಇನ್ನಷ್ಟು ಚರ್ಚೆಗೊಳಗಾಗುವ ಅಗತ್ಯವಿದೆ. ಸಾಕಷ್ಟು ಕಾಲದಿಂದ ತಮ್ಮ ನ್ಯಾಯವಾದ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುತ್ತಾ ಬಂದ ಈ ದೇಶದ ಶೂದ್ರ, ಹಿಂದುಳಿದ, ದಲಿತ, ರೈತ, ಕಾರ್ಮಿಕ ಸಮುದಾಯಗಳು ಅರ್ಧದಷ್ಟಾದರೂ ನ್ಯಾಯವನ್ನು ಪಡೆದುಕೊಳ್ಳುವ ಮುಂಚೆಯೇ ಅಸಹನೆಯಿಂದ ಕೂಡಿದ ಪ್ರತಿರೋಧವನ್ನು ಎದುರಿಸಬೇಕಾಯಿತು. ಈ ಹೊತ್ತಿಗೆ ಅರ್ಧಂಬರ್ಧ ಅಥವಾ ಗಣನೀಯವಾದ ಹಕ್ಕುಗಳನ್ನು ಪಡೆದುಕೊಂಡಿದ್ದ, ಇದ್ದುದರಲ್ಲಿಯೇ ಒಂದಷ್ಟು ಮೇಲ್ಚಲನೆ ಪಡೆದುಕೊಂಡಿದ್ದ ಜಾತಿ ವರ್ಗಗಳು ಮಿಕ್ಕವರನ್ನು ತಮ್ಮ ಪಾಲಿಗೆ ಕೈ ಹಾಕಲು ಬರುತ್ತಿರುವವರಂತೆ ಕಂಡು ಅಸಹನೆ ಬೆಳೆಸಿಕೊಳ್ಳಲಾರಂಭಿಸಿದ್ದರು. ಇದನ್ನು ನಿಭಾಯಿಸುವುದು ಸುಲಭವಿರಲಿಲ್ಲ.

ಇದನ್ನು ನಿಭಾಯಿಸಬಹುದಾದ ಸಾಧ್ಯತೆಗಳಿದ್ದವು. ಇಂದಿರಾ ಕಾಂಗ್ರೆಸ್ಸಿನ ಶೋಷಿತ ಸಮುದಾಯಗಳ ‘ಪರವಾದ’ (ಇಂತಹ ಮಾತುಗಳನ್ನು ಸಾಪೇಕ್ಷವಾದ ಅರ್ಥದಲ್ಲಿ ತೆಗೆದುಕೊಳ್ಳಬೇಕೆಂದು ಮನವಿ) ನಿಲುವು, ದೇವರಾಜ ಅರಸರ ನಂತರದಲ್ಲಿ ಎರಡು ಬೆಳವಣಿಗೆಗಳಿಗೆ ಕಾರಣವಾಯಿತು. ದೇವರಾಜ ಅರಸರ ಅವಧಿ ಮುಗಿಯುವ ಹೊತ್ತಿಗೆ ದಲಿತ ಚಳವಳಿಯೂ ಆರಂಭವಾಗಿತ್ತು. ಒಂದೆಡೆ ಹಳೆಯ ಸಂಸ್ಥಾ ಕಾಂಗ್ರೆಸ್ಸಿಗರು ಇದ್ದ ಜನತಾಪಕ್ಷದೊಂದಿಗೆ ಮೇಲ್ಜಾತಿಗಳು ಹೆಚ್ಚಾಗಿ ಗುರುತಿಸಿಕೊಂಡರೆ, ಇನ್ನೊಂದೆಡೆ ಕರ್ನಾಟಕದ ಎರಡು ಬಲಾಢ್ಯ ಜಾತಿಗಳ ರೈತಾಪಿಯು ರೈತಸಂಘದೊಂದಿಗೂ ಗುರುತಿಸಿಕೊಂಡಿತು.

ರೈತ ಚಳವಳಿಯ ಜೊತೆಗೆ ಬಂದವರು ತೀರಾ ಜಾತಿಸೂಕ್ಷ್ಮತೆ ಕಲಿಯದಿದ್ದರೂ, ಅಗ್ರೆಸಿವ್ ಜಾತೀವಾದಿಗಳಾಗದ ಹಾಗೆ ಆಗಲು ಆ ಚಳವಳಿಯ ನಾಯಕತ್ವ ಕಾರಣವಾಗಿತ್ತು. ಅದು ಲೋಹಿಯಾವಾದಿ ಚಿಂತನೆಯುಳ್ಳವರ ನಾಯಕತ್ವವಾಗಿತ್ತು. ಅಂದರೆ ಜಾತಿನೆಲೆಯ ಗುರುತಿನಲ್ಲಲ್ಲದೇ ರೈತರೆಂಬ ವರ್ಗ ನೆಲೆಯಲ್ಲಿ ಒಂದಾದವರು ತಮ್ಮ ಶತ್ರುವೆಂದರೆ ಶ್ರೀಮಂತರ, ನಗರದ ಆರ್ಥಿಕತೆಯ ಪರವಾಗಿರುವ ಸರ್ಕಾರ, ದೊಡ್ಡ ವ್ಯಾಪಾರಿಗಳು, ಕಂಪೆನಿಗಳು ಮತ್ತು ವಿದೇಶೀ ಬಹುರಾಷ್ಟ್ರೀಯ ಕಂಪೆನಿಗಳು ಎಂದು ಅರ್ಥ ಮಾಡಿಕೊಳ್ಳಲು ಒಂದು ಅವಧಿಯವರೆಗಾದರೂ ಸಾಧ್ಯವಾಗಿತ್ತು. ಆದರೆ, ಜನತಾಪಕ್ಷದ ಜೊತೆಗೆ ಹೋದವರಲ್ಲಿ ಗಣನೀಯ ಭಾಗ ನಿಧಾನಕ್ಕೆ ಬಿಜೆಪಿ ಸೇರಿಕೊಂಡರು.

ಇದೇ ರೈತಸಂಘವು ಭೂಮಿಯುಳ್ಳ ರೈತರನ್ನು ದಾಟಿ ಭೂಹೀನರೂ, ಜಾತಿಯಿಂದ ಅತಿ ಶೋಷಿತರೂ ಆದವರ ಹಿತಾಸಕ್ತಿಯನ್ನೂ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬೆಳೆಯುವುದು ಸಾಧ್ಯವಾಗಲಿಲ್ಲ. ಇಂತಹ ಸಂಗತಿಗಳ ಕುರಿತು ಒಳ್ಳೆಯ ವಿಶ್ಲೇಷಣೆ ಮಾಡಬಹುದಾಗಿದ್ದ ಎಡಪಂಥೀಯರಲ್ಲಿ ವಿಶ್ಲೇಷಣೆಯಿತ್ತು, ಪರಿಹಾರವಿರಲಿಲ್ಲ. ಹಾಗೆಯೇ ಇನ್ನಿತರ ಪಂಥಗಳ ನೇತೃತ್ವದಲ್ಲಿದ್ದ ಚಳವಳಿಗಳು ಒಂದು ಸಣ್ಣ ಮಧ್ಯಮವರ್ಗವನ್ನು ಸೃಷ್ಟಿಸಿ (ಅದು ಕಾರ್ಮಿಕ, ದಲಿತ ಮತ್ತು ತೀರಾ ಈಚೆಗೆ ಆದಿವಾಸಿ ಚಳವಳಿಯೂ ಆಗಬಹುದು) ಅದರ ಹಿತವನ್ನು ಕಾಯುವುದಕ್ಕೆ ಸೀಮಿತವಾಯಿತು. ಅದೇ ರೀತಿ ಐಡೆಂಟಿಟಿಯ ಹೆಸರಿನಲ್ಲಿ ಮೊದಲು ಶೋಷಕ ಸಮುದಾಯಗಳಲ್ಲಿದ್ದರೂ ಜೊತೆಗೆ ಬರಬಹುದಾದವರನ್ನು, ನಂತರ ಶೋಷಿತ ಸಮುದಾಯಗಳಿಗೆ ಸೇರಿದ ಇತರರನ್ನೂ ಪ್ರತ್ಯೇಕಗೊಳಿಸಿಕೊಳ್ಳುತ್ತಾ ಹೋದವು. ಅಂದರೆ ಒಂದೆಡೆ ವರ್ಗ ಹಿತಾಸಕ್ತಿಯ ಮುಂದುವರಿಕೆಯಾಗಿ ಭೂಹೀನರನ್ನು ಒಳಗೊಳ್ಳಲು ಮೇಲ್ಜಾತಿ ಶೂದ್ರ ಸಮುದಾಯವೇ ಹೆಚ್ಚಿದ್ದ ರೈತಸಂಘಕ್ಕೂ ಸಾಧ್ಯವಾಗಲಿಲ್ಲ. ಇನ್ನೊಂದೆಡೆ ಶೋಷಿತ ಸಮುದಾಯಗಳು ‘ದಲಿತ’ ‘ಅಹಿಂದ’ ‘ಹಿಂದುಳಿದ ವರ್ಗಗಳ ಒಕ್ಕೂಟ’ ಇತ್ಯಾದಿ ವಿಶಾಲವ್ಯಾಪ್ತಿಯ ಚೌಕಟ್ಟನ್ನು ಆರಂಭದಲ್ಲಿ ರೂಪಿಸಿಕೊಂಡರೂ ನಿಧಾನಕ್ಕೆ ಒಂದೊಂದೇ ಜಾತಿಗಳಿಗೆ ಸೀಮಿತವಾಗಿ ವಿಘಟಿತವಾದವು.

ಇನ್ನೊಮ್ಮೆ ಒತ್ತಿ ಹೇಳಬೇಕಾದ ಸಂಗತಿಯೆಂದರೆ, ದೇಶದಲ್ಲಿ ಹೊಸ ಆರ್ಥಿಕ ನೀತಿಯು ತೀವ್ರವಾಗಿ ಜಾರಿಗೆ ಬರುತ್ತಿದ್ದ ಹೊತ್ತಿನಲ್ಲಿ ಇವೆಲ್ಲವೂ ಸಂಭವಿಸುತ್ತಿದ್ದವು. ಸರಿಯಾಗಿ ನೋಡಿದರೆ ಕರ್ನಾಟಕದ ರೈತ ಮತ್ತು ದಲಿತ ಚಳವಳಿಗಳು ವಿಘಟಿತವಾಗತೊಡಗಿದ್ದು 1995 ರಿಂದ 2000ದ ಹೊತ್ತಿಗೆ. ದೇಶದಲ್ಲಿ ಮೊದಲ ಎನ್‌ಡಿಎ ಸರ್ಕಾರವು ಬಂದಿದ್ದೂ ಅದೇ ಹೊತ್ತಿನಲ್ಲಿ.

ಇವೆಲ್ಲದರ ವಿಶ್ಲೇಷಣೆಯನ್ನು ಎಡಪಂಥೀಯರು ಚೆನ್ನಾಗಿಯೇ ಮಾಡಿದ್ದರು. ಜಾತಿ ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲವಷ್ಟೇ ಅಲ್ಲ, ಈ ಬೆಸುಗೆಯನ್ನು ಹೇಗೆ ಮಾಡಬಹುದೆಂಬುದರ ಕುರಿತು ಪರ್ಯಾಯವನ್ನು ಮುಂದಿಟ್ಟು ಸಾಧಿಸುವಲ್ಲಿಯೂ ವಿಫಲರಾಗಿದ್ದರು.

ಮೇಲೆ ಹೆಸರಿಸಲಾದ ಪಂಥಗಳು, ಚಳವಳಿಗಳು ವಿಫಲವಾದುದೆಲ್ಲಿ ಎಂಬ ಬರಹ ಇದಾದುದರಿಂದ ನಕಾರಾತ್ಮಕ ಸಂಗತಿಗಳನ್ನಷ್ಟೇ ಉದಾಹರಿಸಲಾಗಿದೆ. ಆದರೆ, ಅವುಗಳ ಸಾಧನೆ ಮತ್ತು ಬದ್ಧತೆಯ ಕುರಿತು ಅಪಾರವಾದ ಗೌರವವನ್ನಿಟ್ಟುಕೊಂಡು ಹೇಳಲಾಗುತ್ತಿದೆ ಮತ್ತು ಬರೆಯುತ್ತಿರುವ ವ್ಯಕ್ತಿಯೂ ಈ ಚಳವಳಿಗಳ ಭಾಗವಾಗಿ ವೈಫಲ್ಯದ ಹೊಣೆಯನ್ನು ಯಾವುದೋ ಒಂದು ಪ್ರಮಾಣಕ್ಕೆ ಹೊರಬೇಕಿದೆ ಎಂಬ ಅರಿವಿದೆ ಎಂದು ಇಲ್ಲಿ ಸ್ಪಷ್ಟಪಡಿಸಬೇಕಿದೆ.

ಮೇಲೆ ಹೆಸರಿಸಲಾದ ಎಲ್ಲಾ ಪಂಥಗಳ ಜೊತೆಗೂ ಸಂಬಂಧವಿದ್ದ ಮಹತ್ವದ ಚಿಂತಕ ಡಿ.ಆರ್.ನಾಗರಾಜ್ 1996ರಲ್ಲಿ ಪ್ರಕಟಿಸಿದ ಪ್ರಬಂಧದಲ್ಲಿ ‘ಕುಪಿತ ರೈತ, ಆತಂಕಿತ ಹಿಂದೂ ? ಇವೆರಡೂ ಭಾರತದಲ್ಲಿ ಜಾಗತೀಕರಣಕ್ಕೆದುರು ಬಂದ ಎರಡು ಪ್ರತಿಕ್ರಿಯೆಗಳು’ ಎಂದು ಹೇಳಿದ್ದರು. ಪ್ರಬಂಧದ ಒಟ್ಟೂ ಸಂಗತಿಗಳ ಕುರಿತು ಇಲ್ಲಿ ಚರ್ಚಿಸುತ್ತಿಲ್ಲ. ಆದರೆ ಡಿ.ಆರ್.ನಾಗರಾಜ್ ಅವರು ಮುಂದಿಟ್ಟ ಆ ನುಡಿಗಟ್ಟನ್ನು ಕಾಲು ಶತಮಾನದ ನಂತರ ನಾವು ಹೇಗೆ ನೋಡಬಹುದು? ಅವರು ಸ್ವಲ್ಪ ಅವಸರದಲ್ಲಿ ಈ ಸೂತ್ರೀಕರಣ ಮಾಡಿದರು ಎನಿಸುತ್ತದೆ.

ವಾಸ್ತವದಲ್ಲಿ ಈಗ ಹಿಂತಿರುಗಿ ನೋಡಿದರೆ ಅದು ‘ಹತಾಶ ರೈತ ಮತ್ತು ಅಸಹನೆ ಹೊಂದಿದ ಮೇಲ್ಜಾತಿ ಹಿಂದೂ’ ಎಂಬುದು ಎದ್ದು ಕಾಣುತ್ತದೆ. ಕುಪಿತ ಎಂಬುದಕ್ಕೆ ಒಂದು ಸಕಾರಾತ್ಮಕ ದನಿಯೂ ಇರುವುದು ಸಾಧ್ಯ. ಅದು ರೈತ ಸರ್ಕಾರದ ಮೇಲೆ ಕೋಪಗೊಳ್ಳುವುದಕ್ಕೆ ಬಳಸಬಹುದು. ಇಂಗ್ಲಿಷಿನಲ್ಲಿ ಅವರದನ್ನು  Angry farmer, Anxious Hindu ಎಂದಿದ್ದರು. ಆದರೆ ಮೇಲ್ಜಾತಿಗಳಲ್ಲಿನ ಹೆಚ್ಚಿನ ಮಧ್ಯಮ ಅಥವಾ ಕೆಳ ಮಧ್ಯಮವರ್ಗದವರು ಕೋಪಗೊಳ್ಳುವುದಾದರೆ, ಭಾರತವಿನ್ನೂ ಹಿಂದುಳಿಸಿರುವ ಸಂಪ್ರದಾಯವಾದಿಗಳು ಮತ್ತು ಅವರನ್ನು ಪ್ರತಿನಿಧಿಸುವ ಗುಂಪುಗಳು ಹಾಗೂ ನಮ್ಮನ್ನು ಮತ್ತೊಮ್ಮೆ ಆಳಲು ಬರುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳನ್ನು ಗುರಿಯಾಗಿಸಿಕೊಳ್ಳಬೇಕಿತ್ತು. ಬದಲಿಗೆ ಅವರು ಜಾಗತೀಕರಣ ನೀತಿಗಳ ಫಲವಾಗಿ ಕುಗ್ಗುತ್ತಿದ್ದ ರಾಷ್ಟ್ರೀಯ ಉತ್ಪನ್ನದಲ್ಲಿ (ಅಂದರೆ ಕಾರ್ಪೋರೇಟ್‌ಗಳು ದೋಚಿದ ನಂತರ ಜನಸಾಮಾನ್ಯರಿಗೆ ಲಭ್ಯವಿದ್ದ ರಾಷ್ಟ್ರೀಯ ಉತ್ಪನ್ನ) ತಮ್ಮ ಸಾಪೇಕ್ಷ ಪಾಲು ಕಡಿಮೆಯಾಗಲು ಇನ್ನೂ ತಳದಲ್ಲಿದ್ದ ಸಮುದಾಯಗಳ ಮೇಲೆ ಅಸಹನೆ ಬೆಳೆಸಿಕೊಳ್ಳಲಾರಂಭಿಸಿದರು.

ಅದುವರೆಗೆ ಶೋಷಿತ ಸಮುದಾಯಗಳ ಪರವಾಗಿ ಹೋರಾಡಿದ್ದವರು ಇನ್ನಷ್ಟು ಅದಕ್ಕೆ ಅಂಟಿಕೊಳ್ಳಬೇಕಾಯಿತು. ಐಡೆಂಟಿಟಿ ಕಟ್ಟಿಕೊಳ್ಳಲು ಹೆಣಗಾಡಿದವರು ಅದನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸಬೇಕಾಯಿತೇ ಹೊರತು, ಅದನ್ನು ಒಡೆದು ಇನ್ನೂ ವಿಶಾಲವಾದ ಐಡೆಂಟಿಟಿ ರೂಪಿಸಲು ಆಗಲಿಲ್ಲ. ಅಂತಹ ವಿಶಾಲವಾದ ಐಡೆಂಟಿಟಿಯನ್ನು ಅದೇ ಸಂದರ್ಭದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯು ರೂಪಿಸತೊಡಗಿತ್ತು.

ಹೊಸ ಆರ್ಥಿಕ ನೀತಿಯು ಜನರನ್ನು ಹಿಂಡುತ್ತಿದ್ದ ಹೊತ್ತಿನಲ್ಲಿ, ಅದೇ ಜನರು ಇಲ್ಲದ ಶತ್ರುವನ್ನು ಮುಸ್ಲಿಮರಲ್ಲಿ ಕಾಣುತ್ತಾ ದೊಡ್ಡ ಐಡೆಂಟಿಟಿಯ ಒಳಗೆ ಸುರಕ್ಷತೆಯನ್ನು ಕಂಡುಕೊಂಡರು. ಧರ್ಮ, ಅಧ್ಯಾತ್ಮಗಳ ಕುರಿತು 70ರ ದಶಕದ ಪರಿಭಾಷೆಯಿಂದ ಹೊರಬಾರದ 20ನೇ ಶತಮಾನದ ವಿಚಾರವಾದಿ ಹೋರಾಟಗಾರರು, 21ನೇ ಶತಮಾನದ ಹೊತ್ತಿಗೆ ಬದಲಾದ ಮುಖ್ಯವಾಹಿನಿ ವಾಗ್ವಾದದಲ್ಲಿ ಅಂಚಿಗೆ ಸರಿಸಲ್ಪಟ್ಟರು. ಅಂತಿಮವಾಗಿ ಅಂತಹ ಬಹುತೇಕರು ಜೀವನವಿಡೀ ತಾವು ವಿರೋಧಿಸಿಕೊಂಡು ಬಂದಿದ್ದ ಕಾಂಗ್ರೆಸ್ ಮಾತ್ರ ಬಿಜೆಪಿಯನ್ನು ಸೋಲಿಸುವ ಏಕೈಕ ಆಸರೆ ಎಂದು ಭಾವಿಸುವ ಸ್ಥಿತಿ ಬಂದಿತು.

ಈ ಅವಧಿಯಲ್ಲಿ ಆದಿವಾಸಿಗಳು ಮತ್ತು ರೈತರು ಎತ್ತಂಗಡಿಯ ವಿರುದ್ಧ ವೀರೋಚಿತವಾದ ಹೋರಾಟವನ್ನು ನಡೆಸಿದರಾದರೂ, ಅವು ಸ್ಥಳೀಯವಾದ ಚಳವಳಿಗಳಾಗಿದ್ದವು. ದೇಶವ್ಯಾಪಿಯಾಗಿ ನಡೆದು ಐತಿಹಾಸಿಕ ಸ್ವರೂಪವನ್ನು ಪಡೆದುಕೊಂಡಿದ್ದು ಸಿಎಎ ವಿರೋಧಿ ಹೋರಾಟ ಮಾತ್ರವೇ. ಕೊರೊನಾ ಲಾಕ್‌ಡೌನ್ ನಿರ್ಬಂಧಗಳಿಲ್ಲದಿದ್ದರೆ ಅದು ಯಾವ ಸ್ವರೂಪವನ್ನು ಪಡೆದುಕೊಳ್ಳುತ್ತಿತ್ತು ಎಂಬುದು ಬೇರೆ ವಿಚಾರ. ಆದರೆ ಸಿಎಎ ವಿರೋಧಿ ಹೋರಾಟವು ಸಾಧಿಸಿದ್ದ ಮಹತ್ವದ ಬದಲಾವಣೆಯು ಈ ಸದ್ಯಕ್ಕಂತೂ ಎರಡು ಹೆಜ್ಜೆ ಹಿಂದಕ್ಕೆ ಹೋಗಿದೆ.

ಬ್ರಾಹ್ಮಣಶಾಹಿ ಕಾರ್ಪೋರೇಟ್ ಬಲಪಂಥದ ಎದುರು ಎಲ್ಲಾ ಸಮುದಾಯಗಳನ್ನೂ ಒಗ್ಗೂಡಿಸಬೇಕೆಂಬ ಮಂತ್ರಪಠಣ ಮಾಡಿದ ಹೆಚ್ಚಿನ ಪ್ರಗತಿಪರ ಪಂಥಗಳು, ದೇಶದಲ್ಲಿ ಬಹುತೇಕ ಹೋರಾಟಗಾರರು/ಚಿಂತಕರನ್ನೂ ಒಂದೆಡೆ ತರಲಾಗಲಿಲ್ಲ. ಅದನ್ನು ಭಾರೀ ಗಣನೀಯ ಪ್ರಮಾಣದಲ್ಲಿ ಮಾಡಿದ್ದು ಮುಸ್ಲಿಂ ಸಮುದಾಯ, ಎನ್‌ಆರ್‌ಸಿ ವಿರೋಧಿ ಹೋರಾಟದಲ್ಲಿ. ಆದರೆ, ದೇಶದ ಮುಸ್ಲಿಮೇತರ ಜನಸಾಮಾನ್ಯರನ್ನೂ ಈ ಹೋರಾಟದಲ್ಲಿ ಒಳಗೊಳ್ಳುವುದು ಅದರಿಂದ ಸಾಧ್ಯವಿರಲಿಲ್ಲ. ಮತ್ತಷ್ಟು ವಿಭಜನೆಗೆ ಕಾರಣವಾಗುವ ಐಡೆಂಟಿಟಿಗಳನ್ನು ಪಕ್ಕಕ್ಕಿಟ್ಟು, ಆಧುನಿಕ ಭಾರತವನ್ನು ಪ್ರಭಾವಿಸಿರುವ ಹಲವು ಪ್ರಗತಿಪರ ರಾಜಕೀಯ ಚಿಂತನೆಗಳೆಲ್ಲದರ ಐಡೆಂಟಿಟಿಗಳನ್ನೂ ಪಕ್ಕಕ್ಕಿಟ್ಟು? ಅವುಗಳ ಚೈತನ್ಯವನ್ನು ಮಾತ್ರ ಹೀರಿಕೊಂಡು, ಎಲ್ಲಾ ಜಾತಿ ಧರ್ಮಗಳ ಜನಸಾಮಾನ್ಯರನ್ನು ಒಳಗೊಂಡು ಹೊಸ ಪ್ರಜಾತಾಂತ್ರಿಕ ಪ್ರಜ್ಞೆಯ ಹುಟ್ಟಿಗೆ ಕಾರಣವಾಗಬಹುದಾದ ಆಂದೋಲನವನ್ನು ರೂಪಿಸುವುದು ಈ ಮೂರು ದಶಕಗಳಲ್ಲಿ ಎಲ್ಲಿಯಾದರೂ ನಡೆಯಬೇಕಿತ್ತು. ಆ ಹೊಸ ಪ್ರಜಾತಾಂತ್ರಿಕ ಪ್ರಜ್ಞೆಯು ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆಗಳ ಮೌಲ್ಯಗಳ ಪುನರುತ್ಪತ್ತಿ ಮಾಡಲು ಸಾಧ್ಯವಾಗಬೇಕಿತ್ತು. ಅದಾಗಲಿಲ್ಲ. ಹಾಗಾಗಿ ಸುಮಾರು 3 ದಶಕಗಳ ಕಾಲ ನಡೆದ ಇನ್ನೊಂದು ಬಗೆಯ ಧ್ರುವೀಕರಣವು 20ನೇ ಶತಮಾನದಲ್ಲಿ ಮತ್ತೊಂದು ಪ್ರತಿಕ್ರಾಂತಿಗೆ ದಾರಿ ಮಾಡಿಕೊಟ್ಟಿತು. 2014 ಅದರ ಮೊದಲ ಘಟ್ಟವಾದರೆ 2019 ಅದರ ಇನ್ನೊಂದು ಘಟ್ಟ.

ಇಂತಹ ಪ್ರತಿಕ್ರಾಂತಿ ಹೇಗೆ ನಡೆಯಿತು ಎಂಬ ಕುರಿತು ದೇಶದ ಹಲವು ಚಿಂತಕರು ನಡೆಸಿರುವ ಚಿಂತನೆಯನ್ನು ವಿಶೇಷ ಸಂಚಿಕೆಗಳ ಮೂಲ ಮುಂದಿಡಲು ಪ್ರಯತ್ನಿಸುತ್ತಿದ್ದೇವೆ. ಅಂತಿಮವಾಗಿ, ಈ ಪ್ರತಿಕ್ರಾಂತಿಯನ್ನು ಸೋಲಿಸುವ ಬಗೆ ಏನು ಎಂಬ ಕುರಿತು ದೇಶದ ಮತ್ತು ಜಗತ್ತಿನ ಹಲವಾರು ಚಿಂತಕರು/ಹೋರಾಟಗಾರರು ಮುಂದಿನ ಮೂರ್‍ನಾಲ್ಕು ಸಂಚಿಕೆಗಳಲ್ಲಿ ಬರೆಯಲಿದ್ದಾರೆ. ನಮ್ಮ ಪ್ರಜ್ಞಾವಂತ ಓದುಗರು ಅದರ ಕುರಿತು ಚರ್ಚಿಸಿ ತಮ್ಮ ಅನಿಸಿಕೆಗಳನ್ನೂ ಹಂಚಿಕೊಳ್ಳಬೇಕೆಂದು ಸಂಪಾದಕ ಮಂಡಳಿಯು ಕೋರುತ್ತದೆ.


ಇದನ್ನೂ ಓದಿ: ಮತ ನಂಬಿಕೆ, ಜಾತ್ಯತೀತತೆ : ಮರುಕಟ್ಟಿಕೊಳ್ಳಬೇಕಾದ್ದು ಯಾವ ಭಾಷೆಯನ್ನು? – ಕೆ.ಫಣಿರಾಜ್

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial