Homeಪುಸ್ತಕ ವಿಮರ್ಶೆವೋಲ್ಗಾ ಗಂಗಾ ರಾಹುಲ ಸಾಂಕೃತ್ಯಾಯನ

ವೋಲ್ಗಾ ಗಂಗಾ ರಾಹುಲ ಸಾಂಕೃತ್ಯಾಯನ

- Advertisement -
- Advertisement -

“ಮಾನವ ಸಮಾಜ ಒಮ್ಮೆಲೇ ಇಂದಿನ ಪರಿಸ್ಥಿತಿಗೆ ತಲುಪಲಿಲ್ಲ. ಈ ಸ್ಥಿತಿಗೆ ತಲುಪಬೇಕಾದರೆ ಅದು ಅನೇಕಾನೇಕ ಸಂಘರ್ಷಗಳನ್ನು ಎದುರಿಸಬೇಕಾಯಿತು” ಎಂದೇ ಪ್ರಾರಂಭವಾಗುವ ಈ ಕೃತಿ ಕತೆಗಳೆಂದು ಕರೆಯಿಸಿಕೊಳ್ಳುವ ಮಾನವ ಸಮಾಜದ ಇತಿಹಾಸದ ಭಿತ್ತಿ ಚಿತ್ರಗಳು.

ಇಪ್ಪತ್ತು ಕತೆಗಳ ಸಂಕಲನ.
ಇಂದು ನಾವು ಕಾಣುತ್ತಿರುವಂತೆ ಸಮಾಜವಿರಲಿ, ಕುಟುಂಬವೂ ಇರಲಿಲ್ಲ ಮತ್ತು ಕುಟುಂಬದ ಸದಸ್ಯರ ಸಂಬಂಧವೂ ಇರಲಿಲ್ಲ. ತಾಯಿ, ಮಗು, ಸೋದರ, ಸೋದರಿಯರ ಇಂದಿನ ಶಿಷ್ಟ ಸಂಬಂಧದ ಕನ್ನಡಕದಿಂದ ಅಂದಿನ ನಮ್ಮ ಪೂರ್ವಜರ ನೈಸರ್ಗಿಕ ವರ್ತನೆಗಳನ್ನು ನೋಡಿದರೆ, ಅಶ್ಲೀಲವೆಂದೋ, ಅಕ್ರಮವೆಂದೋ, ಅಸಭ್ಯವೆಂದೋ ತುಚ್ಛೀಕರಿಸಬಹುದು. ಆದರೆ ಸಮಾಜದ ವ್ಯವಸ್ಥೆಯು ವಿಕಸಿತವಾದಂತೆ, ಕುಟುಂಬವೂ, ಅದರ ಸದಸ್ಯರ ಸಂಬಂಧಗಳ ರೂಪುರೇಷೆಗಳೂ ವಿಕಸಿತಗೊಳ್ಳುತ್ತಾ ಬಂತು ಎಂಬುದನ್ನು ನಿರಾಕರಿಸಲಾಗದು. ಮಾನವನ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸಗಳ ಸಿಕ್ಕ ತುಣುಕುಗಳನ್ನು ಕತೆಗಳ ರೂಪದಲ್ಲಿ ಕಟ್ಟಿಕೊಡುವ ಸಾಂಕೃತ್ಯಾಯನ ಬಹುದೊಡ್ಡ ಪಂಡಿತರು.

ತುಂಡುತುಂಡಾಗಿ ಸಿಕ್ಕಿರುವ ಇತಿಹಾಸದ ದಾಖಲೆಗಳನ್ನು ಜೋಡಿಸುವ ಕೊಂಡಿಗಳನ್ನು ಕಲ್ಪಿಸಿರುವ ಕತೆಗಾರನ ಕಲ್ಪನಾಶಕ್ತಿಗಿಂತ ಕಾಣದಿರುವ ಇತಿಹಾಸದ ಗ್ರಹಿಕೆ ತೋರುತ್ತದೆ.

ನಿಶಾ, ಮೊದಲ ಕತೆ. ವೋಲ್ಗಾ ನದಿಯ ತಟದಲ್ಲಿ ಕ್ರಿ.ಪೂ.600ರ ಜೀವನವನ್ನು ತೆರೆದಿಡುತ್ತದೆ.

ಹಾಗೆಯೇ ವೇದ, ಬ್ರಾಹ್ಮಣ, ಉಪನಿಷತ್ತುಗಳನ್ನೆಲ್ಲಾ ಜಾಲಾಡುವ ಸಾಂಕೃತ್ಯಾಯನ ವಿವಿಧ ಭೂಭಾಗಗಳಲ್ಲಿ ಮಾನವನ ವಿವಿಧ ಜನಾಂಗಗಳು ಬಾಳಿರುವ ರೀತಿಗಳನ್ನು, ಎದುರಿಸಿರುವ ಸಂಘರ್ಷಗಳನ್ನು ಮತ್ತು ಅಳವಡಿಸಿಕೊಂಡಿರುವ ವ್ಯವಸ್ಥೆಗಳನ್ನು ಕಥಿಸುತ್ತಾರೆ.
1942ರಲ್ಲಿ ಸಾಂಕೃತ್ಯಾಯನ ಬರೆದ ಈ ಕೃತಿಗೆ ಸನಾತನಿಗಳು ಕೆಂಡಕಾರಿದ್ದರು. ಬಹುವಾಗಿ ನಿಂದಿಸಿದ್ದರು. ಆದರೆ ಈ ಕೃತಿಯನ್ನು ಸಮರ್ಥಿಸಲು ಅಥವಾ ಖಂಡಿಸಲು ಯಾರಿಗಾದರೂ ಆಳವಾದ ಅಧ್ಯಯನವಿರಬೇಕು. ಏಕೆಂದರೆ ಇವರ ಅಗಾಧ ಓದಿನ ಹಿನ್ನೆಲೆ ಮತ್ತು ಅಧ್ಯಯನ ವ್ಯಾಪ್ತಿಯನ್ನು ನಗ್ನವಾದಿ ವೇದನಿಂದಕ ಎಂದು ದೂಷಿಸಿದರೆ ಅದೊಂದು ಪೂರ್ವಾಗ್ರಹ ಪೀಡಿತ ಮನಸ್ಕರ ಅಸಹನೆಯ ಪ್ರದರ್ಶನವಷ್ಟೇ ಆಗುತ್ತದೆ.

ಬರಿಯ ಗ್ರಂಥಾಧ್ಯಯನ ಮಾತ್ರವಲ್ಲದೇ ತಾವೇ ಅಲೆದಾಟದಲ್ಲಿ ತೊಡಗಿದ್ದರ ಪರಿಣಾಮ ಜೀವನವಿಧಾನ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳು ವೋಲ್ಗಾ ಗಂಗಾದಲ್ಲಿ ಹರಳುಗಟ್ಟಿದೆ. ಇತಿಹಾಸ, ತತ್ವಶಾಸ್ತ್ರ, ವಿಜ್ಞಾನ, ರಾಜನೀತಿ, ಸಂಸ್ಕೃತಿ, ಸಮಾಜ ವಿಜ್ಞಾನ ಎಲ್ಲವೂ ಕತೆಗಳ ತಳಪಾಯಗಳೇ. ಹಾಗಾಗಿ ತಿಳಿವಳಿಕೆಯ ಕೊರತೆಗಳು ಕತೆಗಳನ್ನು ಕ್ಲಿಷ್ಟಗೊಳಿಸುತ್ತವೆ. ತಲೆಬಾಲ ಅರ್ಥವಾಗದೇ ಹೋಗಬಹುದು. ಏಕೆಂದರೆ ಇಂದಿನ ಸಮಾಜದ ಕನ್ನಡಕದಿಂದ ನೋಡಲಾಗುವುದಿಲ್ಲವಲ್ಲ!

ಈ ಲೇಖನದ ಉದ್ದೇಶ ಅವರ ಕತೆಗಳಲ್ಲಿರುವ ಅಂಶಗಳನ್ನು ಚರ್ಚಿಸುವುದಾಗಲಿ, ವಿಷಯಗಳನ್ನು ಮುಂದಿಡುವುದಾಗಲಿ ಅಲ್ಲ. ಬರಿದೇ ಪ್ರವೇಶಿಕೆಯನ್ನು ಒದಗಿಸುವುದಕ್ಕೆ. ಕತೆಗಳ ನಾಟಕೀಯತೆಯನ್ನು ಊಹಿತಸತ್ಯ (ಹೈಪೋತಿಸೀಸ್) ರೀತಿಯಲ್ಲಿ ಗ್ರಹಿಸಬೇಕಾಗಿರುವ ಮುನ್ನೆಚ್ಚರಿಕೆಯನ್ನು ಹೊಂದುವುದಕ್ಕೆ.

ವಿಶ್ವದ 7500 ವರ್ಷಗಳ ಇತಿಹಾಸದಲ್ಲಿ ಮಾನವನ ತುಳಿದಿಟ್ಟ ಭಾವನೆಗಳ ಹಾಗೂ ಕಲ್ಪನೆಗಳ ಸುಂದರ ಕತೆಗಳ ರೂಪದ ಈ ಪುಸ್ತಕ ನವಕರ್ನಾಟಕದಲ್ಲಿ ಸಿಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...