Homeಕರ್ನಾಟಕಸಚಿವ ಆರ್‌. ಅಶೋಕ್‌ ಆರೋಪಗಳಿಗೆ ಪ್ರೊ. ಬರಗೂರು ಸ್ಪಷ್ಟನೆ

ಸಚಿವ ಆರ್‌. ಅಶೋಕ್‌ ಆರೋಪಗಳಿಗೆ ಪ್ರೊ. ಬರಗೂರು ಸ್ಪಷ್ಟನೆ

ನಾವು ಕಮ್ಯುನಿಷ್ಠರಾಗಿ ಪಠ್ಯ ಪರಿಷ್ಕರಣೆ ಮಾಡಲಿಲ್ಲ, ಶಿಕ್ಷಣ ನಿಷ್ಠರಾಗಿ ಮಾಡಿದೆವು ಎಂದು ಅವರು ಹೇಳಿದ್ದಾರೆ

- Advertisement -
- Advertisement -

ಪಠ್ಯಪುಸ್ತಕ ಹಗರಣದ ಬಗ್ಗೆ ಗುರುವಾರ ಮಾತನಾಡಿದ್ದ ಸಚಿವ ಆರ್‌. ಅಶೋಕ್ ಅವರು ಈ ಹಿಂದಿನ ಪಠ್ಯಪುಸ್ತಕದ ಬಗ್ಗೆ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದರು. ಸಚಿವರ ಈ ಎಲ್ಲಾ ಹೇಳಿಕೆಗೆ ಹಿಂದಿನ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಸರ್ವಾಧ್ಯಕ್ಷರಾಗಿದ್ದ, ಹಿರಿಯ ಸಾಹಿತಿ ಪ್ರೊಫೆಸರ್‌ ಬರಗೂರು ರಾಮಚಂದ್ರಪ್ಪ ಅವರು ಶುಕ್ರವಾರ ಸ್ಪಷ್ಟನೆ ನೀಡಿದ್ದು, ನಾವು ಶಿಕ್ಷಣ ನಿಷ್ಠರಾಗಿ ಪಠ್ಯವನ್ನು ಪರಿಷ್ಕರಣೆ ಮಾಡಿದೆವು ಎಂದು ಹೇಳಿದ್ದಾರೆ.

“ಯಾರೇ ಪಠ್ಯಪರಿಷ್ಕರಣೆ ಮಾಡಿದರೂ ಕೆಲವು ಪಾಠಗಳನ್ನು ಬಿಡುವ ಮತ್ತು ಸೇರಿಸುವ ಪ್ರಕ್ರಿಯೆ ನಡೆಯುತ್ತದೆ. ಸಕಾರಣ ಮತ್ತು ಸೂಕ್ತ ಮಾನದಂಡಗಳ ಮೂಲಕ ಈ ಪ್ರಕ್ರಿಯೆ ನಡೆಯಬೇಕು. ನಮ್ಮ ಪರಿಷ್ಕರಣೆಯಲ್ಲಿ ಪ್ರತಿಯೊಂದಕ್ಕೂ ಕಾರಣಗಳನ್ನು ದಾಖಲಿಸಿದ್ದೇವೆ. ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟು ಮತ್ತು ಸಂವಿಧಾನಾತ್ಮಕ ಆಶಯಗಳನ್ನು ಪಾಲಿಸಿದ್ದೇವೆ” ಎಂದು ಬರಗೂರು ರಾಮಚಂದ್ರಪ್ಪ ಅವರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಮೈಸೂರು ಒಡೆಯರ ಕಾಲದ ವಿವರಗಳನ್ನು ನಾವು ಬಿಟ್ಟಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ವಾಸ್ತವವಾಗಿ 6ನೇ ತರತಿಯ ಸಮಾಜ ವಿಜ್ಞಾನದಲ್ಲಿದ್ದ ಪಾಠವನ್ನು ಹೆಚ್ಚು ವಿವರಗಳ ಸಮೇತ, 7ನೇ ತರಗತಿಯ (ಭಾಗ-1 ಪುಟ 45 ರಿಂದ 58) ಪಠ್ಯಕ್ಕೆ ನಾವು ವರ್ಗಾಯಿಸಿದ್ದೆವು. ಇಡೀ ಅಧ್ಯಾಯವನ್ನು ಮರುಪರಿಷ್ಕರಣೆಯಲ್ಲಿ ತೆಗೆದುಹಾಕಿ ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ”

ಇದನ್ನೂ ಓದಿ: ನಾರಾಯಣ ಗುರುಗಳ ಪಠ್ಯಕ್ಕೆ ಕತ್ತರಿ: ‘ನನಗೆ ಅದು ನೆನಪಾಗುತ್ತಿಲ್ಲ’ ಎಂದ ಪಠ್ಯ ಪುಸ್ತಕ ಸಮಿತಿ ಸದಸ್ಯ ಡಾ. ಅನಂತಕೃಷ್ಣ ಭಟ್

“ಹೀಗೆ 7ನೇ ತರಗತಿಯಿಂದ ತೆಗೆದು ಹತ್ತನೇ ತರಗತಿಯಲ್ಲಿ ಮುಕ್ಕಾಲು ಪುಟದಷ್ಟು ಮಾತ್ರ ಮೈಸೂರು ಒಡೆಯರ ವಿವರ ಕೊಟ್ಟು ಅನ್ಯಾಯ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರು ತಂದ ಮೀಸಲಾತಿ, ಮಹಿಳೆಯರಿಗೆ ಮತದಾನದ ಹಕ್ಕಿನ ಮಹತ್ವದ ವಿವರಗಳೇ ಇಲ್ಲ. ನಮ್ಮ ಪಠ್ಯದಲ್ಲಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯನವರು ಮತ್ತು ಮಿರ್ಜಾ ಇಸ್ಮಾಯಿಲ್ ಅವರ ಪೂರ್ಣ ವಿವರಗಳನ್ನು ಮರುಪರಿಷ್ಕರಣೆಯಲ್ಲಿ ಕೈಬಿಟ್ಟಿದ್ದಾರೆ. ಆದರೆ ನಮ್ಮ ಮೇಲೆ ಮಿಥ್ಯಾರೋಪ ಮಾಡಿದ್ದಾರೆ” ಎಂದು ಪ್ರೊಫೆಸರ್‌ ಬರಗೂರು ಹೇಳಿದ್ದಾರೆ.

“ನಾಡಪ್ರಭು ಕೆಂಪೇಗೌಡರ ಪಾಠ ನಮ್ಮ ಪರಿಷ್ಕರಣೆ ಪಠ್ಯದಲ್ಲಿ ಇರಲಿಲ್ಲ ಎಂಬುದು ಇನ್ನೊಂದು ಮಿಥ್ಯಾರೋಪ. ನಾವು 7ನೇ ತರಗತಿಯ ಸಮಾಜ ವಿಜ್ಞಾನ (ಭಾಗ-1 ಪುಟ 43-44) ರಲ್ಲಿ ಎರಡು ಪುಟಗಳ ವಿವರಗಳನ್ನು ಕೊಟ್ಟಿದ್ದೆವು. ಮರುಪರಿಷ್ಕರಣೆಯಲ್ಲಿ ಒಂದು ಪುಟಕ್ಕೆ ಇಳಿಸಿದ್ದಲ್ಲದೆ, ಕೆಂಪೇಗೌಡರ ಆಡಳಿತಕ್ಕೆ ರಾಮನಗರ, ಕೋಲಾರ ಮತ್ತು ತುಮಕೂರು ಭಾಗಗಳು ಒಳಪಟ್ಟಿದ್ದವೆಂದು ನಾವು ಕೊಟ್ಟಿದ್ದ ವಿವರವನ್ನು ತೆಗೆದು ಕೆಂಪೇಗೌಡರ ಮಹತ್ವವನ್ನು ಇವರೇ ಕುಗ್ಗಿಸಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಪೋರ್ಚುಗೀಸರ ವಿರುದ್ಧ ಹೋರಾಡಿದ ಚೆನ್ನ ಬೈರಾದೇವಿಯವರ ಬಗ್ಗೆ ಹೊಸ ಪಾಠ ಸೇರಿಸಿದ್ದನ್ನು ಸ್ವಾಗತಿಸುತ್ತೇನೆ. ಆದರೆ ನಾವು ಸೇರಿಸಿದ್ದ ಇದೇ ಪೋರ್ಚುಗೀಸರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕನವರ ಪಾಠವನ್ನು ತೆಗೆದು ಹಾಕಿದ್ದಾರೆ. ಅಷ್ಟೇ ಅಲ್ಲ ನಾವು 7ನೇ ತರಗತಿಯ ಸಮಾಜ ವಿಜ್ಞಾನದಲ್ಲಿ (ಭಾಗ-2 84 ರಿಂದ 90ನೇ ಪುಟ) ಹೊಸದಾಗಿ ಸೇರಿಸಿದ್ದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರನ್ನು ಕುರಿತ ಇಡೀ ಅಧ್ಯಾಯವನ್ನು ಕೈಬಿಟ್ಟಿದ್ದಾರೆ.

ಇದನ್ನೂ ಓದಿ: ಪಠ್ಯ ಪರಿಷ್ಕರಣೆ ಅಸಂವಿಧಾನಿಕ-ಅಪ್ರಜಾಸತ್ತಾತ್ಮಕ –ಅಪಾರದರ್ಶಕ- ಅಸಿಂಧು: ಸಿಎಂಗೆ ನಿರಂಜನಾರಾಧ್ಯರ ಪತ್ರ

ಈ ಅಧ್ಯಾಯದಲ್ಲಿದ್ದ ರಾಣಿ ಅಬ್ಬಕ್ಕ, ಯಶೋಧರಮ್ಮ ದಾಸಪ್ಪ, ಬಳ್ಳಾರಿ ಸಿದ್ದಮ್ಮ, ಕಮಲಾದೇವಿ ಚಟ್ಟೋಪಾಧ್ಯಾಯ, ಉಮಾಬಾಯಿ ಕುಂದಾಪುರ ಅವರ ಎಲ್ಲಾ ವಿವರಗಳನ್ನು ತೆಗೆದಿದ್ದಾರೆ. ಇದು ಕರ್ನಾಟಕದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ” ಎಂದು ಅವರು ಹೇಳಿದ್ದಾರೆ.

“7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರ ಭಕ್ತಿಪಂಥ ಮತ್ತು ಸೂಫಿ ಪರಂಪರೆಯೆಂಬ ಅಧ್ಯಾಯದಲ್ಲಿದ್ದ ಅಕ್ಕಮಹಾದೇವಿ, ಶಿಶುನಾಳ ಶರೀಫರು, ಪುರಂದರದಾಸರು, ಕನಕದಾಸರು-ಇವರ ಎಲ್ಲಾ ವಿವರ ತೆಗೆದು ಉತ್ತರ ಭಾರತದವರನ್ನು ಮಾತ್ರ ಉಳಿಸಿಕೊಂಡಿದ್ದಾರೆ. 9ನೇ ತರಗತಿಯ ಭಾಗ-2ರಲ್ಲಿದ್ದ ಇವರ ವಿವರಗಳನ್ನೂ ತೆಗೆದಿದ್ದಾರೆ. ಇದು ಕರ್ನಾಟಕದ ಅಸ್ಮಿತೆಗೆ ಮಾಡಿದ ಅನ್ಯಾಯ” ಎಂದು ಅವರು ತಿಳಿಸಿದ್ದಾರೆ.

“ಸಮಾಜ ವಿಜ್ಞಾನದ 7ನೇ ತರಗತಿಯ ಭಾಗ-2 ರಲ್ಲಿ ನಾವು ಹೊಸದಾಗಿ ಸೇರಿಸಿದ್ದ ಸಾವಿತ್ರಿ ಬಾಯಿ ಫುಲೆಯಾದಿಯಾಗಿ ಎಲ್ಲ ಮಹಿಳೆಯರ ವಿವರಗಳನ್ನು ತೆಗೆದು ಹಾಕಿದ್ದಾರೆ. ಕನ್ನಡ ಭಾಷಾ ಪಠ್ಯಗಳಲ್ಲಿದ್ದ ಎಲ್ಲಾ ದಲಿತ ಮೂಲದ ಸಾಹಿತಿಗಳು ಮತ್ತು ಬಹುಪಾಲು ಮಹಿಳಾ ಸಾಹಿತಿಗಳ ಬರಹಗಳನ್ನು ಬಿಟ್ಟು ಆ ಜಾಗದಲ್ಲಿ ಬಹಳಷ್ಟು ಒಂದೇ ಸಮುದಾಯದವರ ಬರಹಗಳನ್ನು ಹಾಕಿ ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯಂತಹ ಸಂವಿಧಾನಾತ್ಮಕ ಆಶಯಗಳಿಗೆ ಧಕ್ಕೆ ತಂದಿದ್ದಾರೆ. ಸ್ವತಃ ಪರುಪರಿಷ್ಕರಣೆ ಸಮಿತಿಯ ಅಧ್ಯಕ್ಷರೇ ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯ ವಿರುದ್ಧವಾಗಿ ಪಠ್ಯಪುಸ್ತಕದ ತಮ್ಮ ಮಾತುಗಳಲ್ಲೇ ಬರೆದಿರುವುದನ್ನು ಇಲ್ಲಿ ನೆನೆಯಬಹುದು” ಎಂದು ಅವರು ನೆನಪಿಸಿದ್ದಾರೆ.

ಇದನ್ನೂ ಓದಿ: ಪಠ್ಯ ಪರಿಷ್ಕರಣೆ ಅಸಂವಿಧಾನಿಕ-ಅಪ್ರಜಾಸತ್ತಾತ್ಮಕ –ಅಪಾರದರ್ಶಕ- ಅಸಿಂಧು: ಸಿಎಂಗೆ ನಿರಂಜನಾರಾಧ್ಯರ ಪತ್ರ

“ಹೀಗೆ ಅನೇಕ ಅಪಚಾರಗಳನ್ನು ಮರೆಮಾಚಲು ಕುವೆಂಪು ಅವರ ಹತ್ತು ಪಾಠ ಹಾಕಿರುವುದನ್ನು ಮುಂದೆ ಮಾಡುತ್ತಿದ್ದಾರೆ. ನಾವು ಕುವೆಂಪು ಅವರು ಪ್ರತಿಪಾದಿಸಿದ ಅಖಂಡ ಕರ್ನಾಟಕತ್ವ ಮತ್ತು ಸರ್ವಜನಾಂಗದ ಶಾಂತಿಯ ತೋಟವೆಂಬ ಆದರ್ಶಕ್ಕೆ ಅನುಗುಣವಾಗಿ ಕರ್ನಾಟಕದ ಎಲ್ಲಾ ಭಾಗಗಳ ಬರಹಗಾರರನ್ನು ಪ್ರಾತಿನಿಧಿಕವಾಗಿ ಸೇರಿಸಿದ್ದೇವೆ. ಕುವೆಂಪು ಅವರ ಆಶಯವನ್ನು ಈಡೇರಿಸಿದ್ದೇವೆ” ಎಂದು ಪ್ರೊಫೆಸರ್‌ ರಾಮಚಂದ್ರಪ್ಪ ಅವರು ಪ್ರತಿಪಾದಿಸಿದ್ದಾರೆ.

“ಕುವೆಂಪು ಅವರ ಹತ್ತು ಪಾಠಗಳ ವಿಷಯವನ್ನು ಮತ್ತೆ ಮತ್ತೆ ಹೇಳುವ ಇವರು ಕರ್ನಾಟಕ ಏಕೀಕರಣದ ವಿಷಯ ತಿಳಿಸುವಾಗ ಹಾಕಿದ್ದ ಕುವೆಂಪು ಭಾವಚಿತ್ರವನ್ನೇ ತೆಗೆದು ಹಾಕಿದ್ದಾರೆ. ಹುಯಿಲಗೋಳ ನಾರಾಯಣರಾಯರ ಭಾವಚಿತ್ರ ತೆಗೆದದ್ದಲ್ಲದೆ, ಕಯ್ಯಾರ ಕಿಞಣ್ಣರೈ ಅವರ ವಿವರ ಬಿಟ್ಟಿದ್ದಾರೆ. ಕರ್ನಾಟಕದಿಂದ ಪ್ರಧಾನಿ ಸ್ಥಾನಕ್ಕೆ ಏರಿದ ದೇವೇಗೌಡರ ಭಾವಚಿತ್ರ ಬಿಟ್ಟಿದ್ದಾರೆ. ದೇವನೂರು ಮಹಾದೇವರ ಭಾವಚಿತ್ರವೂ ಇಲ್ಲ” ಎಂದು ಅವರು ಹೇಳಿದ್ದಾರೆ.

“ನಮ್ಮ ಪಠ್ಯದಲ್ಲಿದ್ದ ಸಿದ್ಧಗಂಗೆ ಮತ್ತು ಆದಿ ಚುಂಚನಗಿರಿ ಮಠಗಳ ವಿವರಗಳನ್ನು ಒಂದೇ ಸಾಲಿಗೆ ಇಳಿಸಿ ಅನ್ಯಾಯ ಮಾಡಿದ್ದಾರೆ. ನಮ್ಮ ಪಠ್ಯದಲ್ಲಿದ್ದ ‘ವೇದಕಾಲದ ಸಂಸ್ಕೃತಿ’ ಎಂಬ ಪಾಠವನ್ನು ತೆಗೆದುಹಾಕಿರುವ ಇವರು ಭಾರತೀಯ ಪರಂಪರೆಯ ಬಗ್ಗೆ ಮಾತಾಡುವುದೇ ಒಂದು ವಿಚಿತ್ರ. ಇಷ್ಟು ಸಾಲದೆಂಬಂತೆ ಡಾ.ಅಂಬೇಡ್ಕರ್ ಅವರ ವಿಚಾರಧಾರೆಗೆ ಸಾಕಷ್ಟು ಕತ್ತರಿ ಪ್ರಯೋಗ ಮಾಡಿದ್ದಾರೆ. ಅಂಬೇಡ್ಕರ್ ಮತ್ತು ಬುದ್ಧ ಗುರು ಕುರಿತ ಪದ್ಯ ತೆಗೆದಿದ್ದಾರೆ. ಇಂಥ ಅನೇಕ ಅಂಶಗಳನ್ನು ಪಟ್ಟಿ ಮಾಡಬಹುದು” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಪಠ್ಯಪುಸ್ತಕ ವಿವಾದಕ್ಕೆ ಆರ್‌.ಅಶೋಕ್‌ ಸ್ಪಷ್ಟೀಕರಣ: ಒಕ್ಕಲಿಗರನ್ನು ಒಡೆದು ಆಳುವ ಹುನ್ನಾರವೇ?

“ಇನ್ನು ನಮ್ಮ ಪಠ್ಯ ಪರಿಷ್ಕರಣೆಯು ಕಮ್ಯುನಿಸ್ಟ್ ಸಿದ್ಧಾಂತವನ್ನು ಅಳವಡಿಸಿಕೊಂಡಿದೆ ಎಂಬ ಮಿಥ್ಯಾರೋಪಕ್ಕೆ ನಮ್ಮ ಪಠ್ಯಗಳೇ ಉತ್ತರ ಹೇಳುತ್ತವೆ. ನಾವು ಹೊಸದಾಗಿ ಬಸವಣ್ಣ, ಸಂಗೊಳ್ಳಿ ರಾಯಣ್ಣ, ಡಾ.ರಾಜಕುಮಾರ್ ಅವರ ಬಗ್ಗೆ ಪಾಠ ಸೇರಿಸಿದರೆ ಅದು ಕಮ್ಯುನಿಸ್ಟ್ ಪಠ್ಯವೆ?” ಎಂದು ಅವರು ಪ್ರಶ್ನಿಸಿದ್ದಾರೆ.

“ಮಾಸ್ತಿ, ಗೋಪಾಲಕೃಷ್ಣ ಅಡಿಗ, ಗೊರೂರು, ಮೂರ್ತಿರಾಯರು, ಲಂಕೇಶ್, ಶಾಂತರಸ, ಸಾರಾ ಅಬೂಬಕರ್, ಚೆನ್ನಣ್ಣ ವಾಲೀಕಾರ ಮುಂತಾದವರ ಬರಹಗಳನ್ನು ಹೊಸದಾಗಿ ಸೇರಿಸಿ ಸಮತೋಲನ ಸಾಧಿಸಿದರೆ ಅದು ಕಮ್ಯೂನಿಸ್ಟ್ ಸಿದ್ಧಾಂತವೇ? ಕರ್ನಾಟಕದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು, ಭಕ್ತಿಪಂಥದವರು, ದೇಶದ ಮಹಿಳಾ ಸುಧಾರಕರು ಪಠ್ಯದಲ್ಲಿದ್ದರೆ ಅದು ಕಮ್ಯುನಿಸಂ ಎನ್ನುವಿರಾ?” ಎಂದು ಅವರು ಕೇಳಿದ್ದಾರೆ.

“ನಮ್ಮ ಪರಿಷ್ಕರಣೆಯ ಪಠ್ಯಗಳು ಜಾರಿಗೊಂಡು ಐದು ವರ್ಷಗಳ ನಂತರ ಕಮ್ಯುನಿಸ್ಟ್ ಎಂದು ಆರೋಪಿಸುವುದು ತಮ್ಮ ಮೂಲಭೂತವಾದಿ ಸಿದ್ಧಾಂತದ ಪಠ್ಯ ಪರಿಷ್ಕರಣೆಯ ಅನ್ಯಾಯಗಳನ್ನು ಮರೆಮಾಚುವುದಕ್ಕೆ ಎನ್ನುವುದು ಸ್ಪಷ್ಟ” ಎಂದು ಬರಗೂರು ಹೇಳಿದ್ದಾರೆ.

ಇದನ್ನೂ ಓದಿ: ಪಠ್ಯ ಪರಿಷ್ಕರಣೆ; ಕವಿಶೈಲದ ಜಾಥಾ ಪಡೆಯಬೇಕಿದೆ ಗೋಕಾಕ್ ಚಳವಳಿಯ ತೀವ್ರತೆ

“ನಾವು ಕಮ್ಯುನಿಷ್ಠರಾಗಿ ಪಠ್ಯಪರಿಷ್ಕರಣೆ ಮಾಡಲಿಲ್ಲ. ಶಿಕ್ಷಣ ನಿಷ್ಠರಾಗಿ ಮಾಡಿದೆವು. ಇನ್ನಾದರೂ ಮಿಥ್ಯಾರೋಪಗಳು ನಿಲ್ಲಲಿ ಮತ್ತು ಮಾನ್ಯ ಮುಖ್ಯಮಂತ್ರಿಗಳು ಮರುಪರಿಷ್ಕರಣೆಯನ್ನು ವಿರೋಧಿಸುತ್ತಿರುವ ಸಾಹಿತಿಗಳು ಮತ್ತು ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸಿ ಪ್ರಜಾಸತ್ತಾತ್ಮಕ ನಡೆಗೆ ಮುಂದಾಗಲಿ” ಎಂದು ಪ್ರೊಫೆಸರ್‌ ಬರಗೂರು ರಾಮಚಂದ್ರಪ್ಪ ಅವರು ಆಶಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...