Homeಕರ್ನಾಟಕಪಠ್ಯಪುಸ್ತಕ ವಿವಾದಕ್ಕೆ ಆರ್‌.ಅಶೋಕ್‌ ಸ್ಪಷ್ಟೀಕರಣ: ಒಕ್ಕಲಿಗರನ್ನು ಒಡೆದು ಆಳುವ ಹುನ್ನಾರವೇ?

ಪಠ್ಯಪುಸ್ತಕ ವಿವಾದಕ್ಕೆ ಆರ್‌.ಅಶೋಕ್‌ ಸ್ಪಷ್ಟೀಕರಣ: ಒಕ್ಕಲಿಗರನ್ನು ಒಡೆದು ಆಳುವ ಹುನ್ನಾರವೇ?

“ಆರ್‌ಎಸ್‌ಎಸ್‌ ಮೊದಲಿನಿಂದಲೂ ಈ ಕುತಂತ್ರವನ್ನು ಮಾಡುತ್ತಿದೆ. ಒಂದು ಜಾತಿಯ ವ್ಯಕ್ತಿಗೆ ಅದೇ ಜಾತಿಯ ಮತ್ತೊಬ್ಬರಿಂದ ಹೊಡೆಸುವುದು ಸಂಘಪರಿವಾರದ ತಂತ್ರ” ಎಂದಿದ್ದಾರೆ ಎಲ್.ಎನ್.ಮುಕುಂದರಾಜ್‌.

- Advertisement -
- Advertisement -

ನಾಡಗೀತೆಯನ್ನು ತಿರುಚಿದ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಷ್ಕರಿಸಲಾಗಿರುವ ಪಠ್ಯಪುಸ್ತಕಗಳನ್ನು ವಾಪಸ್‌ ಪಡೆಯಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಪತ್ರ ಬರೆದ ಬಳಿಕ ಸಂಘ ಪರಿವಾರ ಇಟ್ಟಿರುವ ಹೆಜ್ಜೆಗಳು ಅನುಮಾನಕ್ಕೆ ಆಸ್ಪದ ನೀಡಿವೆ. ಒಕ್ಕಲಿಗ ಸಮಾಜದಿಂದ ಬಂದಿರುವ ಆಕ್ಷೇಪಗಳನ್ನು ಒಕ್ಕಲಿಗ ನಾಯಕರನ್ನೇ ಬಳಸಿ ದಮನ ಮಾಡಲು ಸಂಘ ಪರಿವಾರ ಹೊರಟಿದೆಯೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಪಠ್ಯಪುಸ್ತಕಗಳಲ್ಲಿ ಆಗಿರುವ ತಪ್ಪುಗಳು ಒಂದೊಂದಾಗಿ ಹೊರಬೀಳುತ್ತಲೇ ಇವೆ. ಈ ನಾಡಿನ ಅಸ್ಮಿತೆ, ಮಹಾನೀಯರಿಗೆ ಸಂಬಂಧಿಸಿದ ಪಠ್ಯಗಳನ್ನು ಕಿತ್ತು ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಜೂನ್‌ 18ರಂದು  ‘ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ’ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆಯೂ ನಡೆಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೂ ಈ ಹೋರಾಟದಲ್ಲಿ ಭಾಗಿಯಾದರು. ನಂತರದಲ್ಲಿ ಪ್ರತಿಭಟನೆಯ ಆಗ್ರಹಗಳನ್ನು ಉಲ್ಲೇಖಿಸಿ ದೇವೇಗೌಡ ಅವರು ಮುಖ್ಯಮಂತ್ರಿಗೆ ಪತ್ರವನ್ನೂ ಬರೆದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಪಠ್ಯಪುಸ್ತಕಗಳಲ್ಲಿನ ಅಸಂಖ್ಯಾತ ದೋಷ ಮತ್ತು ಅನ್ಯಾಯಗಳನ್ನು ಕೇವಲ ತಪ್ಪೋಲೆ ಅಥವಾ ಪ್ರತ್ಯೇಕ ಪುಟಗಳ ಮುದ್ರಣದಿಂದ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪುನರ್ ಪರಿಷ್ಕರಣೆಯ ಪಠ್ಯಪುಸ್ತಕಗಳನ್ನು ವಾಪಸ್ ಪಡೆದು, ಹಿಂದೆ ಇದ್ದ ಬರಗೂರು ರಾಮಚಂದ್ರಪ್ಪರವರ ನೇತೃತ್ವದ 27, ಸಮಿತಿಗಳು ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನೇ ಈ ವರ್ಷ ಮುಂದುವರೆಸುವುದು ಸೂಕ್ತವೆಂದು ನಾನು ಕೂಡ ಅಭಿಪ್ರಾಯ ಪಡುತ್ತೇನೆ” ಎಂದು ದೇವೇಗೌಡರು ಹೇಳಿದ್ದರು.

ಇದನ್ನೂ ಓದಿರಿ: ಪಠ್ಯಪುಸ್ತಕ ರಚನೆಯಲ್ಲಿ ಏಕ‘ಚಕ್ರ’ ಅಧಿಪತ್ಯ: ಸಮಿತಿ ಸದಸ್ಯರ ಗೊಂದಲಕಾರಿ ಹೇಳಿಕೆ

ಇಷ್ಟೆಲ್ಲ ಆದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೋ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೋ ಪ್ರತಿಕ್ರಿಯೆ ನೀಡುತ್ತಾರೆಂದು ಕನ್ನಡಿಗರು ಭಾವಿಸಿದ್ದರು. ಆದರೆ ಈ ವಿವಾದದಲ್ಲಿ ಈವರೆಗೆ ಪ್ರತಿಕ್ರಿಯಿಸದೆ ಇದ್ದ ಕಂದಾಯ ಸಚಿವ ಆರ್‌.ಅಶೋಕ್‌ ಈಗ ಕಾಣಿಸಿಕೊಂಡರು. ಪತ್ರಿಕಾಗೋಷ್ಠಿ ನಡೆಸಿದರು. ಕುವೆಂಪು ಅವರು ಬರೆದ ನಾಡಗೀತೆಯನ್ನು ತಿರುಚಿದ ವ್ಯಕ್ತಿಯ ಮೇಲಿನ ಆಪಾದನೆಗಳಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡದೆ ಏನೋ ಉತ್ತರ ಕೊಟ್ಟು ಹೋದರು.

ದೇವೇಗೌಡರ ಪತ್ರಕ್ಕೆ ಮುಖ್ಯಮಂತ್ರಿಯವರು ಬುಧವಾರವೇ ಪ್ರತಿಕ್ರಿಯೆ ನೀಡುತ್ತಾರೆಂದು ನಾಡಿನ ಜನರು ಭಾವಿಸಿದ್ದರು. ಮಾಧ್ಯಮಗಳಿಗೆ ಪತ್ರಿಕ್ರಿಯೆ ನೀಡಲು ಬಂದ ಶಿಕ್ಷಣ ಸಚಿವರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಬೆನ್ನು ತಿರುಗಿಸಿ ಹೊರಟು ಹೋದರು. “ನಾಳೆ ಮುಖ್ಯಮಂತ್ರಿಯವರು ಪ್ರತಿಕ್ರಿಯೆ ನೀಡುತ್ತಾರೆ” ಎಂದರು. ಆದರೆ ಮುಖ್ಯಮಂತ್ರಿಯವರ ಬದಲಿಗೆ ಆರ್‌.ಅಶೋಕ್‌ ಕಾಣಿಸಿಕೊಂಡರು.

ಜಾತಿ ನಾಯಕರನ್ನು ಎತ್ತಿಕಟ್ಟುವುದು ಸಂಘ ಪರಿವಾರ ಕುತಂತ್ರ: ಎಲ್‌.ಎನ್‌.ಮುಕುಂದರಾಜ್‌

ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿಯ ಮುಖಂಡರು ಹಾಗೂ ಸಂಘಪರಿವಾರದ ಆಳ-ಅಗಲ ಬಲ್ಲವರಾದ ಎಲ್‌.ಎನ್‌.ಮುಕುಂದರಾಜ್‌ ಅವರು ಇಂದಿನ ವಿದ್ಯಮಾನದ ಕುರಿತು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಆರ್‌ಎಸ್‌ಎಸ್‌ ಮೊದಲಿನಿಂದಲೂ ಈ ಕುತಂತ್ರವನ್ನು ಬಳಸುತ್ತಿದೆ. ಯಾವುದಾದರೂ ಒಂದು ಜಾತಿಯ ವ್ಯಕ್ತಿಯನ್ನು ಗುರಿಮಾಡಿ ಹೊಡೆಯಬೇಕೆಂದರೆ ಅದೇ ಜಾತಿಯ ಮತ್ತೊಬ್ಬ ವ್ಯಕ್ತಿಯನ್ನು ಸಂಘಪರಿವಾರ ಬಳಸುತ್ತದೆ. ಮೊದಲಿಂದಲೂ ಇದೇ ಕೆಲಸ ಮಾಡಿಕೊಂಡು ಬಂದಿದೆ” ಎಂದು ವಿಶ್ಲೇಷಿಸಿದರು.

“ಸಿದ್ದರಾಮಯ್ಯನವರು ಮಾತನಾಡಿದರೆ ಈಶ್ವರಪ್ಪನವರನ್ನು ಛೂ ಬಿಡುವುದು, ಇನ್ಯಾರಾದರೂ ಲಿಂಗಾಯತ ಮುಖಂಡರು ಮಾತನಾಡಿದರೆ ಯುಡಿಯೂರಪ್ಪನವರನ್ನು ಛೂಬಿಡುವುದು, ಒಕ್ಕಲಿಗರು ಮಾತನಾಡಿದರೆ ರಾಮಚಂದ್ರೇಗೌಡ, ಅಶೋಕ ಥರದವರನ್ನು ಛೂ ಬಿಡುವುದು ಮಾಡುತ್ತಾ ಬಂದಿದ್ದಾರೆ. ಆ ತಂತ್ರವನ್ನು ಪಠ್ಯಪುಸ್ತಕ ವಿವಾದದಲ್ಲಿಯೂ ಬಳಸುತ್ತಿದ್ದಾರೆ” ಎಂದರು.

“ಆರ್‌ಎಸ್‌ಎಸ್‌ ಕುತಂತ್ರಗಳ ಕುರಿತು ಈಗ ಒಕ್ಕಲಿಗರು ಅಲ್ಪಸ್ವಲ್ಪ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಒಕ್ಕಲಿಗ ಸಮುದಾಯವನ್ನು ಜಾಗೃತರನ್ನಾಗಿ ಮಾಡುವ ಕೆಲಸಗಳನ್ನು ಕಳೆದ ಎರಡು ಮೂರು ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ಒಕ್ಕಲಿಗರಲ್ಲಿ ಎಚ್ಚರಿಕೆ ಬರುತ್ತಿದೆ” ಎಂದು ತಿಳಿಸಿದರು.

“ಬ್ರಾಹ್ಮಣರ ಗುಲಾಮಗಿರಿ ಮಾಡುವ ಅಶೋಕ್‌ ರೀತಿಯ ವ್ಯಕ್ತಿಯ ಮಾತುಗಳನ್ನು ಒಕ್ಕಲಿಗರು ನಂಬುವುದಿಲ್ಲ. ನಮ್ಮವರನ್ನು ಹೆದರಿಸಬಹುದು, ಬೆದರಿಸಬಹುದು, ಕೇಸ್ ಹಾಕಬಹುದು, ಸ್ವಾಮೀಜಿಯವರಿಗೆ ನಮ್ಮ ವಿರುದ್ಧ ಛಾಡಿ ಹೇಳಬಹುದು, ಒಕ್ಕಲಿಗ ಜನಾಂಗವನ್ನು ಒಡೆಯುವುದಕ್ಕೆ ಪ್ರಯತ್ನಿಸಬಹುದು. ಇಷ್ಟೆಲ್ಲ ಮಾಡಿದರೂ ಒಕ್ಕಲಿಗರು ಅಶೋಕ್‌ ಥರದ ವ್ಯಕ್ತಿಗಳ ಮಾತನ್ನು ಕೇಳುವುದಿಲ್ಲ. ಈ ಪ್ರಜ್ಞೆ ನಮ್ಮ ಜನರಲ್ಲಿ ಬೆಳೆದಿದೆ” ಎಂದು ಸ್ಪಷ್ಟಪಡಿಸಿದರು.

“ಪಠ್ಯಪುಸ್ತಕವನ್ನು ಅಶೋಕ್‌ ಸಮರ್ಥನೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಕೇಸರಿವಾದಿಗಳು ತಂತ್ರ ಹಾಗೂ ಕುತಂತ್ರಗಳನ್ನು ಬಳಸುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಮಾಡಿಕೊಂಡು ಬಂದಿರುವುದು ಇದೇ ಕೆಲಸವನ್ನು. ನಾವು ಇದನ್ನು ಅರ್ಥಮಾಡಿಕೊಂಡಿದ್ದೇವೆ” ಎಂದು ಹೇಳಿದರು.

ದೇವೇಗೌಡರಿಗೆ ದೇವೇಗೌಡರೇ ಸಾಟಿ: ಎ.ಪಿ.ರಂಗನಾಥ್‌

‘ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ’ಯ ಕಾರ್ಯದರ್ಶಿ ಎ.ಪಿ.ರಂಗನಾಥ್ ಮಾತನಾಡಿ, “ಸಂಘಪರಿವಾರಕ್ಕೆ ಭಯ ಶುರುವಾಗಿದೆ. ಹೀಗಾಗಿ ಈ ತಂತ್ರಗಾರಿಕೆ ಬಳಸುತ್ತಿದ್ದಾರೆ. ಅಶೋಕ್‌ ಥರದ ನೂರು ಜನ ಹಾಕಿದರೂ ದೇವೇಗೌಡರ ಕಾಲಿನ ಧೂಳಿಗೂ ಸಮರಾಗುವುದಿಲ್ಲ. ದೇವೇಗೌಡರಿಗೆ ದೇವೇಗೌಡರೇ ಸಾಟಿ. ಸಮುದಾಯದ ಮಹಾನ್‌ ನಾಯಕರವರು. ನಾವು ಇಷ್ಟಕ್ಕೇ ಸುಮ್ಮನಾಗುವುದಿಲ್ಲ. ಈ ಹೋರಾಟವನ್ನು ತಾರ್ಕಿಕ ಅಂತ್ಯದವರೆಗೂ ತೆಗೆದುಕೊಂಡು ಹೋಗುತ್ತೇವೆ. ದೇವೇಗೌಡರೂ ಇದನ್ನೇ ಪುನರುಚ್ಚರಿಸಿದ್ದಾರೆ” ಎಂದು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿರಿ: ನಾರಾಯಣ ಗುರುಗಳ ಪಠ್ಯಕ್ಕೆ ಕತ್ತರಿ: ‘ನನಗೆ ಅದು ನೆನಪಾಗುತ್ತಿಲ್ಲ’ ಎಂದ ಪಠ್ಯ ಪುಸ್ತಕ ಸಮಿತಿ ಸದಸ್ಯ ಡಾ. ಅನಂತಕೃಷ್ಣ ಭಟ್‌

“ಶಿಕ್ಷಣ ಸಚಿವರಿಗೆ ಉತ್ತರ ಕೊಡಲು ಆಗುತ್ತಿಲ್ಲ. ಮಾಧ್ಯಮವರ ಪ್ರಶ್ನೆಗಳನ್ನು ಎದುರಿಸಲಾಗದೇ ನಿನ್ನೆ ಓಡಿಹೋದರು. ಸಿಎಂ ಉತ್ತರ ಕೊಡಬಹುದು. ಕಾಯುತ್ತೇವೆ. ಸಂಘಪರಿವಾರದವರು ಕೊನೆಯವರೆಗೂ ಕೌಂಟರ್‌ ಮಾಡುತ್ತಲೇ ಇರುತ್ತಾರೆ, ದಾರಿ ತಪ್ಪಿಸುತ್ತಲೇ ಇರುತ್ತಾರೆ. ನಮ್ಮ ಅಸ್ಮಿತೆಗಳ ಜೊತೆಗೆ ಅವರ ಅಜೆಂಡಾಗಳನ್ನು ತುರುಕುವುದಕ್ಕೆ ಪ್ರಯತ್ನಿಸುತ್ತಾರೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ” ಎಂದರು.

ಚಕ್ರತೀರ್ಥ ವಿರುದ್ಧ ‘ಬಿ ರಿಪೋರ್ಟ್’: ಅಶೋಕ್‌ ಸಮರ್ಥನೆ ಸರಿಯೇ?

ಚಕ್ರತೀರ್ಥನ ಮೇಲಿನ ಆರೋಪಗಳನ್ನು ಸಚಿವ ಆರ್‌.ಅಶೋಕ್‌ ಪತ್ರಿಕಾಗೋಷ್ಟಿಯಲ್ಲಿ ಉಲ್ಲೇಖಿಸುತ್ತಾ ಉಲ್ಲೇಖಿಸುತ್ತಾ, “ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಪ್ರಕರಣದಲ್ಲಿ ಬಿ.ರಿಪೋರ್ಟ್ ಆಗಿದೆ. ಚಕ್ರತೀರ್ಥ ಮೇಲಿನ ಕೇಸ್‌ ಕ್ಲೋಸ್‌ ಆಗಿದೆ” ಎಂದು ಸಮರ್ಥಿಸಿಕೊಂಡರು. ಈ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ‘ಬಿ ರಿಪೋರ್ಟ್’ ಆದ ಮಾತ್ರಕ್ಕೆ ಪ್ರಕರಣ ಅಂತ್ಯವಾಯಿತೆ? ಮತ್ತೆ ಕಾನೂನು ಕ್ರಮ ಜರುಗಿಸಬಹುದಲ್ಲ!? ಯಾರೋ ಬರೆದದ್ದನ್ನು ತಾನು ಹಂಚಿಕೊಂಡಿರುವುದಾಗಿ ಚಕ್ರತೀರ್ಥ ಹೇಳುತ್ತಾರೆ. ಆದರೆ ಅದನ್ನು ಬರೆದದ್ದು ಯಾರು? ಎಲ್ಲಿಂದ ಬಂತು? ನಾಡಗೀತೆ ತಿರುಚಿದವರಿಗೆ ಬುರ್ಜ್‌ ಖಲೀಫ ಕೊಡುವ ಮನಸ್ಥಿತಿಯನ್ನು ಒಪ್ಪಲು ಸಾಧ್ಯವೇ? ಚಕ್ರತೀರ್ಥ ಅವರೇ ಬರೆದು, ಮತ್ತೊಬ್ಬರ ಮೇಲೆ ಆರೋಪ ಹೊರಿಸುತ್ತಿದ್ದಾರಾ? ಈ ರೀತಿಯ ಪೋಸ್ಟ್‌ಗಳನ್ನು ಬರೆಯುವುದಿರಲಿ, ಹಂಚಿಕೊಳ್ಳುವುದು ಕೂಡ ಅಪರಾಧ ಎಂಬ ಸಾಮಾನ್ಯ ಜ್ಞಾನ, ಇವರಿಗೆ ಇರಲಿಲ್ಲವೇ? ಇತ್ಯಾದಿ ಪ್ರಶ್ನೆಗಳಿಗೆ ಸಂಘಪರಿವಾರದ ಉತ್ತರವೇನು?- ಇದ್ಯಾವುದಕ್ಕೂ ಉತ್ತರಗಳು ಸಿಗುತ್ತಿಲ್ಲ.

ಆಫ್‌ ದಿ ರೆಕಾರ್ಡ್ ಮಾತು

ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಬಂದ ಸಚಿವರೊಬ್ಬರು, “ಈ ಚಕ್ರತೀರ್ಥ ಬಾಯಿಗೆ ಬಂದದ್ದನ್ನೆಲ್ಲ ಬರೆದು, ಫೇಸ್‌ಬುಕ್‌ನಲ್ಲಿ ಪೋಸ್ಟ್‌ಗಳನ್ನು ಹಾಕಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿಬಿಟ್ಟಿದ್ದಾನೆ. ಈ ಒಂದು ತಪ್ಪು ಮಾಡಿರದಿದ್ದರೆ ಆತನ ಪಠ್ಯಪುಸ್ತಕವನ್ನು ಸಮರ್ಥಿಸಿಕೊಳ್ಳುವುದು ಸುಲಭವಾಗುತ್ತಿತ್ತು” ಎಂದು ಮಾತನಾಡಿಕೊಂಡಿದ್ದು ಕಿವಿಗೆ ಬಿತ್ತು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಈ ಬ್ರಾಹ್ಮಣರ RSS ಸಂಘ ಹಿಂದಿನಿಂದ ಮಾಡಿಕೊಂಡು ಬಂದಿರುವುದು ಅದನ್ನೇ. ಈ ಬ್ರಹ್ಮಣರನ್ನ ಹೊರತುಪಡಿಸಿ ಉಳಿದ ಅಬ್ರಾಹ್ಮಣ ಸಮುದಾಯಗಳು ಯಾವಾಗ ಈ ಬ್ರಾಹ್ಮಣ ರ RSS.. ನ ನೀಚ, ಜಾತಿವಾದಿ ಉದ್ಧೇಶಗಳ ಬಗ್ಗೆ ಅರಿವು ಮುಡಿಸಿಕೊಳ್ಳುವರೊ ಅಷ್ಟು ಬೇಗ ಈ ಸಮಾಜ ಮತ್ತು ನೆಮ್ಮದಿ ಇಂದ ಇರಲು ಸಾಧ್ಯ,ಈ ಜಾತಿವಾದಿಗಳೆಂದು ನೇರ ನೇರ ಮುನ್ನೆಲೆಗೆ ಬಂದು ಸ್ಪಸ್ಟಿಕರಣ ನೀಡಲು ಅವರಿಗೆ ಎಲ್ಲಿದೆ ದೈರ್ಯ? ಕೇವಲ ಹೇಡಿಗಳು ಮತ್ತು ಮುಖೇಡಿಗಳು ಅವರು.

  2. ಎರಡು ಕೈಲಿ ಎರಡು ಪೊರಕೆ ಹಿಡಿದುಕೊಂಡುಇದುವರೆಗೆ ಶಿಕ್ಷಣರಂಗದಲ್ಲಿ ತುಂಬಿದ ಕಸವನ್ನು ಗುಡಿಸಬೇಕಾಗಿದೆ .ಗುಡಿಸುವುದಕ್ಕೆ ಅಡ್ಡಿ ಮಾಡಿದವರನ್ನು ಆ ಪೊರಕೆಯಿಂದ ಪ್ರಯೋಗ ಮಾಡಿ ಮುಂದುವರಿಯಬೇಕು.

  3. Ppl of the community (vokkaligas )only keep blaming brahmanalism or bramhanike not Brahmins as they ( Brahmans )strongly feel, reality is they can’t digest Kuvempu popularity among masses (with his writing skills)including so called papular poet Byrappa, down with their pettymindedness, Jai Bheem and Jai MKGhandi🙏. I request them to be as humans like others they have not come from heaven ,if they feel even privately they become fools, may be they r living (under this regime and it will not be for ever )comfortably now 🤨 hope they leave this type of divide and rule 😊

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...