ಅಂತರ್ ಧರ್ಮೀಯ ಕುಟುಂಬದ ಸೀಮಂತ ಕಾರ್ಯಕ್ರಮದ ಬಗ್ಗೆ ಜಾಹೀರಾತು ಮಾಡಿದ್ದ ತನಿಷ್ಕ್ ಆಭರಣ ಕಂಪನಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳ ಬೆನ್ನಲ್ಲೇ ಕಂಪನಿ ಜಾಹೀರಾತನ್ನು ನಿಲ್ಲಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಮಂದಿ ತನಿಷ್ಕ್ನ ಈ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ತನಿಷ್ಕ್ ಜಾಹೀರಾತು ವಿವಾದದ ಬಗ್ಗೆ ಮೊದಲ ಬಾರಿಗೆ ಜಾಹೀರಾತು ನಿರ್ದೇಶಕಿ ಜೊಯೀತಾ ಪಟ್ಪಟಿಯಾ ಪ್ರತಿಕ್ರಿಯೆ ನೀಡಿದ್ದಾರೆ. ’ಸಾಮಾಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಭಯಾನಕ ಸಂಗತಿಗಳು ನನ್ನ ದಾರಿಯಲ್ಲಿ ಬರುತ್ತಿವೆ. ಆದರೆ ಅವುಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲು ನಾನು ಬಯಸುವುದಿಲ್ಲ ಎಂದಿದ್ದಾರೆ.
ಏಷ್ಯಾ ಮತ್ತು ಯುಕೆಗಳಲ್ಲಿ ಜಾಹೀರಾತುಗಳು, ಮ್ಯೂಸಿಕ್ ವಿಡಿಯೋಗಳನ್ನು ನಿರ್ಮಿಸಿ ಪ್ರಶಸ್ತಿ ಪಡೆದಿರುವ ಈಕೆ, ’ ಈ ಅಭಿಯಾನಕ್ಕೆ ಬರುತ್ತಿರುವ ಪ್ರೀತಿ, ಸುಂದರವಾದ ಕಲಾಕೃತಿಗಳು ಮತ್ತು ಸುಂದರ ಟಿಪ್ಪಣಿಗಳನ್ನು ಹಂಚಿಕೊಳ್ಳುವುದು ಉತ್ತಮ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.
ತನಿಷ್ಕ್ ಅವರ ‘ಏಕತ್ವಂ’ ಅಭಿಯಾನದ ಚಿತ್ರಕಥೆಯು ಏಕತೆಯ ಪರಿಕಲ್ಪನೆಯಾಗಿದೆ ಮತ್ತು ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಜೊಯೀತಾ ಹೇಳುತ್ತಾರೆ. “ಈ ಅಭಿಯಾನವು ಏಕತೆ ಮತ್ತು ಏಕತೆಯ ಕಲ್ಪನೆಯಿಂದ ಬಂದಿದೆ ಮತ್ತು ಅದಕ್ಕಾಗಿಯೇ ಇದನ್ನು‘ ಏಕತ್ವಂ ’ಎಂದು ಕರೆಯಲಾಗಿದೆ ಎಂದರು.
ಇದನ್ನೂ ಓದಿ: ಸೌಹಾರ್ದತೆ ಸಾರುವ ’ಏಕತ್ವಂ’ ಜಾಹೀರಾತು ನಿಲ್ಲಿಸಿದ ತನಿಷ್ಕ್ ಆಭರಣ ಕಂಪನಿ: ಅಂತದ್ದೇನಿದೆ ಅದರಲ್ಲಿ?
ಈ ಅಭಿಯಾನ ನಾಲ್ಕು ಚಿತ್ರಗಳ ಅಭಿಯಾನವಾಗಿತ್ತು. ಇವುಗಳ ಸ್ಕ್ರಿಪ್ಟ್‌ಗಳು ಅದ್ಭುತವಾಗಿದ್ದವು. ನಮಗೆ ಅದರಲ್ಲಿ ಯಾವುದೇ ವಿವಾದಾಸ್ಪದ ಅಂಶ ಕಾಣಿಸಲಿಲ್ಲ. ನಮ್ಮ ಧಾರಾವಾಹಿಗಳು ಕೆಲವು ಬಾರಿ ಅತ್ತೆ ಮತ್ತು ಸೊಸೆಯನ್ನು ನಕಾರಾತ್ಮಕ ಅಂಶದಲ್ಲಿ ತೋರಿಸುತ್ತವೆ. ಆದರೆ ಈ ಸ್ಕ್ರಿಪ್ಟ್ ಓದಿದಾಗ ನನಗೆ ಒಂದೇ ಭಾರಿಗೆ ಇಷ್ಟವಾಗಿತ್ತು. ಇಬ್ಬರು ಮಹಿಳೆಯರ ಕಥೆ ಇದು. ಇಬ್ಬರ ನಡುವಿನ ಪ್ರೀತಿಯ ಬಗ್ಗೆ, ಮಹಿಳೆಯ ಅತ್ತೆ ಮತ್ತು ಅತ್ತೆ ಕುಟುಂಬದ ಪ್ರೀತಿಯ ಕಥೆಯಾಗಿತ್ತು ಎನ್ನುತ್ತಾರೆ.
So Hindutva bigots have called for a boycott of @TanishqJewelry for highlighting Hindu-Muslim unity through this beautiful ad. If Hindu-Muslim “ekatvam” irks them so much, why don’t they boycott the longest surviving symbol of Hindu-Muslim unity in the world — India? pic.twitter.com/cV0LpWzjda
— Shashi Tharoor (@ShashiTharoor) October 13, 2020
ಜಾಹೀರಾತು ತಯಾರಿಕೆ ಬಗ್ಗೆ ಮಾತನಾಡಿದ ಜೊಯೀತಾ, ’ಏಕತ್ವಂ ಕಲ್ಪನೆಯು ಜಾತ್ಯಾತೀತ ಭಾರತವನ್ನು ಆಧರಿಸಿದೆ. ನೀವು ಈ ಜಾಹೀರಾತಿನಲ್ಲಿ ನೋಡಿದರೆ, ಅವರು ’ಪುಲಿ ಕುಡಿ’ ತಯಾರಿಸುತ್ತಿದ್ದಾರೆ, ಇದು ಸೀಮಂತ ಸಮಾರಂಭದಲ್ಲಿ ಮಲಯಾಳಿಗಳು ತಯಾರಿಸುವ ನಿರ್ದಿಷ್ಟ ದ್ರವ. ನಾವು ಸಂಶೋಧನೆ ಮಾಡಿ ಈ ವಿಚಾರಗಳನ್ನು ತಿಳಿದುಕೊಂಡು ಸಣ್ಣ ಸಣ್ಣ ವಿವರಗಳನ್ನು ಜಾಹೀರಾತಿನಲ್ಲಿ ಇರಿಸಿದ್ದೇವೆ’ ಎಂದಿದ್ದಾರೆ.
’ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರ ನಾವು ಮುಂದೆ ಸಾಗಿದ್ದೇವೆ ಎಂದು ಭಾವಿಸಿದ್ದೇನೆ. ಹಿಂದೆ ಹೋಗುತ್ತಿದ್ದೇವೆ ಎಂದು ಹೇಳುತ್ತಿಲ್ಲ. ಆದರೆ ಕೊಂಚ ಮಟ್ಟದ ಚರ್ಚೆ, ಮಾತುಕತೆಯಾಗಬಹುದು ಎಂದು ಭಾವಿಸಿದ್ದೆವು ಆದರೆ ಈ ಮಟ್ಟದ ದ್ವೇಷ, ವಿಷವನ್ನು ಹೊರಹಾಕಲಾಗಿದೆ. ನಿಜವಾಗಿಯೂ ಇದು ಆಘಾತಕಾರಿಯಾದದ್ದು. ಇದೊಂದು ಟ್ರೋಲ್ ಸೈನ್ಯ’ ಎಂದಿದ್ದಾರೆ.
ಇದನ್ನೂ ಓದಿ: ತನಿಷ್ಕ್ ಜಾಹೀರಾತು: ಗುಜರಾತ್‌ನ ಅಂಗಡಿ ಮಳಿಗೆಗಳಿಗೆ ಬೆದರಿಕೆ!
ಜಾಹೀರಾತಿನ ಬಗ್ಗೆ ಕೆಲವು ಆನ್‌ಲೈನ್ ಚರ್ಚೆಗಳಲ್ಲಿ, ಜಾಹೀರಾತಿನಲ್ಲಿ ಹಿಂದೂ ಅಳಿಯನೊಂದಿಗೆ ಮುಸ್ಲಿಂ ವಧುವನ್ನು ತೋರಿಸಿದ್ದರೆ ವಿವಾದವು ನಡೆಯುತ್ತಿರಲಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೊಯೀತಾ ಧರ್ಮಗಳನ್ನು ಅದಲು-ಬದಲು ಮಾಡಿದ್ದರೂ ಈ ಪ್ರತಿಕ್ರಿಯೆಗಳು ಭಿನ್ನವಾಗಿರುತ್ತಿರಲಿಲ್ಲ ಎನ್ನುತ್ತಾರೆ.
’ತನಿಷ್ಕ್ ತಮ್ಮ ಉದ್ಯೋಗಿಗಳು ಮತ್ತು ಮಳಿಗೆಗಳ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಂಡರು. ನಾವು ಆರ್ಥಿಕ ಬಿಕ್ಕಟ್ಟಿನಲ್ಲಿದ್ದೇವೆ ಮತ್ತು ತನಿಷ್ಕ್ ಹಲವು ಆಭರಣ ಮಳಿಗೆಗಳನ್ನು ಹೊಂದಿದೆ. ಇವುಗಳ ಸುರಕ್ಷತೆ ಮುಖ್ಯ ಹಾಗಾಗಿ ಜಾಹೀರಾತು ವಾಪಸ್ ಪಡೆದಿದ್ದಾರೆ’ ಎಂದರು.
ಜೊಯೀತಾ ಈ ವಿವಾದದ ನಂತರ ತಾನು ಪಡೆಯುತ್ತಿರುವ ಪ್ರೀತಿ ಮತ್ತು ಬೆಂಬಲದ ಕಡೆ ತನ್ನ ಗಮನ ಕೇಂದ್ರಿಕರಿಸಲು ಬಯಸುತ್ತಾರೆ. ಜೊತೆಗೆ ಹೇಳುತ್ತಾರೆ, ಭಾರತದಲ್ಲಿ ಮಾತ್ರವಲ್ಲ, ಪಂಚದಾದ್ಯಂತ ಯಾವಾಗಲೂ ಕೆಟ್ಟ ಸಂಗತಿಗಳು ನಡೆಯುತ್ತಿವೆ. ಪಂಚದಾದ್ಯಂತ ವರ್ಣಭೇದ ನೀತಿ ಇದೆ. ಭಾರತದಲ್ಲಿ ಹಲವಾರು ಸಮುದಾಯಗಳಿವೆ. ಇಲ್ಲಿ ಈಗ ಇದು ಚರ್ಚೆಯ ವಿಷಯವಾಗಿದೆ, ಆದರೆ ಒಂದು ದೇಶವಾಗಿ, ನಾವು ಜಗತ್ತಿಗೆ ದೇಶದ ಒಳ್ಳೆಯ ಭಾಗವನ್ನು ತೋರಿಸಲು ಬಯಸುವುದಿಲ್ಲವೇ..? ಎಂದು ಪ್ರಶ್ನಿಸುತ್ತಾರೆ.
ಜೊತೆಗೆ ನಾವು ಯಾವಾಗಲೂ ಜಾತ್ಯತೀತ ದೇಶದವರಾಗಿದ್ದೇವೆ ಮತ್ತು ನಾವು ಯಾವಾಗಲೂ ಹಾಗೇ ಇರುತ್ತೇವೆ. ಮುಂದಿನ ಪೀಳಿಗೆ ನಾವು ಮಾತನಾಡುತ್ತಿರುವ ವಿಷಯಗಳ ಬಗ್ಗೆ ಬದಲಾವಣೆ ತರುತ್ತದೆ. ಏಕೆಂದರೆ ಯುವ ಪೀಳಿಗೆಯಿಂದ ನನಗೆ ದೊರೆತ ಅದ್ಭುತ ಪ್ರೀತಿ ಮತ್ತು ಬೆಂಬಲ ಅಗಾಧವಾಗಿದೆ” ಎಂದು ಹೇಳುತ್ತಾರೆ ನಿರ್ದೇಶಕಿ.
ತನಿಷ್ಕ್ ಜಾಹೀರಾತಿಗೆ ಅನೇಕ ಜಾಹೀರಾತು ಕಂಪನಿಗಳು ಬೆಂಬಲ ಸೂಚಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಏಕತ್ವಂ ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆ.


