“ಕುಲಮದ ವೈಭವಮದ ವಿದ್ಯಾಮದಗಳ | ನುಳಿದು ಹರಿದಾಸರ ಮರೆಹೊಕ್ಕು ಸುಖಿಯಾಗು” ಎಂದು ವಾದಿರಾಜರು ಹೇಳಿದರೆ, “ಕುಲಕುಲ ಕುಲವೆನ್ನುತಿಹರು, ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ” ಎನ್ನುತ್ತಾ ಕನಕದಾಸರು “ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ | ಕುಲದ ನೆಲೆಯನೇನಾದರೂ ಬಲ್ಲಿರಾ?” ಎಂದು ಪ್ರಶ್ನಿಸುತ್ತಾರೆ. “ಧರ್ಮವೇ ಜಯವೆಂಬ ದಿವ್ಯ ಮಂತ್ರ” ಎನ್ನುವ ಪುರಂದರ ದಾಸರು “ವಿಷವಿಕ್ಕಿದವಗೆ ಷಡ್ರಸವನುಣಿಸಲು ಬೇಕು, ದ್ವೇಷ ಮಾಡಿದವನ ಪೋಷಿಸಲು ಬೇಕು, ಪುಸಿಯಾಡಿ ಕೆಡಿಸುವನ ಹಾಡಿ ಹರಸಲು ಬೇಕು” ಎಂದು ಹರಿಭಕ್ತಿಯ ಮೂಲಕ ನರಪ್ರೀತಿಯನ್ನು ಜಾಗೃತ ಮಾಡವರು. ‘ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯ ತೋರು, ಅಂಗಿಯನ್ನು ಕಿತ್ತುಕೊಂಡರೆ ಒಳ ಅಂಗಿಯನ್ನೂ ನೀಡು’ ಎನ್ನುವ ಕ್ರಿಸ್ತನ ಮಾರ್ದನಿಯಾಗುತ್ತಾರೆ. ‘ಅಶಾಂತಿಯನ್ನು ಶಾಂತಿಯಿಂದ, ದ್ವೇಷವನ್ನು ಪ್ರೀತಿಯಿಂದ ಗೆಲ್ಲು’ ಎನ್ನುವ ಬುದ್ಧನ ಧ್ವನಿಸುತ್ತಾರೆ. ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರ ಸಂಪಾದನೆಯಲ್ಲಿ ಸಂಗ್ರಹವಾಗಿರುವ ಹರಿದಾಸರ ಹತ್ತುಸಾವಿರ ಹಾಡುಗಳು ಕರ್ನಾಟಕದ ಭಕ್ತಿಪರಂಪರೆಯ ಬಹು ಮುಖ್ಯ ಕೊಂಡಿಯಾಗಿರುವ ದಾಸ ಸಾಹಿತ್ಯದ ಅತ್ಯಪೂರ್ವವಾದ ದಾಖಲೆ.

‘ಹರಿ’ ಎಂಬ ವಿಶ್ವದ್ಚೇತನದ ಪ್ರತಿಮೆಗೆ ಶರಣಾಗುವ ಮೂಲಕ ದಾಸರು ಮಾನವ ಮನಸುಗಳ ಕಶ್ಮಲಗಳನ್ನು ಹೋಗಲಾಡಿಸಿ, ಸದ್ಭಕ್ತಿಯನ್ನು ಜಾಗೃತಗೊಳಿಸಿ, ಆ ಮೂಲಕ ಮುಕ್ತರಾಗಲು ತಮ್ಮ ಕೀರ್ತನೆಗಳಲ್ಲಿ ದಾರಿ ತೋರಿದರು. ಹರಿ ಎಂದರೆ ಎಲ್ಲೋ ಮೋಡಗಳಾಚೆಯ ಸರ್ವಾಧಿಕಾರಿಯೊಬ್ಬನಿಗೆ ದಾಸರಾಗಿರುವ ರೀತಿಯಲ್ಲ. ‘ದಾಸ’ ಎನ್ನುವ ಪದದಲ್ಲಿ ಗುಲಾಮಗಿರಿಯ ಧ್ವನಿಯಲ್ಲ. ಬಸವಾದಿ ಶರಣರ ‘ಶರಣ’ ಎನ್ನುವ ಪದದ ವಿನೀತ ಭಾವವೇ ಇದು. ತಲೆಯೆತ್ತುವ ಅಹಂಕಾರವನ್ನು ಮಣಿಸಿ ಸಂಪೂರ್ಣ ಶರಣಾಗತರಾಗುವ ಭಾವದಲ್ಲಿ ದಾಸನಾಗುವುದು. ಶಿಶು, ಸತಿ, ಜನನಿಜನಕ, ರಸಿಕ ಭ್ರಾತರ, ರಾಜ ಹೀಗೆ ವಿವಿಧ ಬಗೆಯ ಮೋಹಗಳು, ಅನ್ನಮದ, ಅರ್ಥಮದ, ಅಖಿಲ ವೈಭವದ ಮದ, ಪ್ರಾಯದ, ರೂಪದ, ಇನ್ನು ತನಗಿದಿರಿಲ್ಲವೆಂತೆAಬ ಮದಗಳೆಲ್ಲಾ ವಿವಿಧ ಬಗೆ ಮಾನಸಿಕ ಕಾಂಪ್ಲೆಕ್ಸ್ಗಳನ್ನು ಸೃಷ್ಟಿಸಿ, ಶುದ್ಧ ಮನಸ್ಸಿನವನಾಗದೇ “ಬಿನ್ನಹಕೆ ಬಾಯಿಲ್ಲವಯ್ಯಾ, ಅನಂತ ಅಪರಾಧ ಎನ್ನಲ್ಲಿ ಇರಲಾಗಿ” ಎನ್ನುತ್ತಾ ಪುರಂದರ ದಾಸರು ಆತ್ಮಾವಲೋಕನಕ್ಕೆ ಪ್ರೇರೇಪಿಸುತ್ತಾರೆ.

ದಾಸರಿಗೆ ಹರಿಯ ಮೇಲೆ ಕೋಪ ಬಂದರೆ ಸುಮ್ಮನೆ ಬಿಡುವವರಲ್ಲ, “ಯಾರು ಬದುಕಿದರಯ್ಯಾ ಹರಿ ನಿನ್ನ ನಂಬಿ, ತೋರು ಈ ಧರೆಯೊಳಗೆ ಒಬ್ಬರನೂ ಕಾಣೆ” ಎಂದು ಜಗಳವಾಡುತ್ತಾರೆ. ಹರಿಯನ್ನು ಕಾಡುತ್ತಾರೆ, ಬೇಡುತ್ತಾರೆ, ನಿನ್ನ ಹೊರತು ನನಗ್ಯಾರಿಲ್ಲವೋ ಎಂದು ಪ್ರೇಮದಿಂದ ಬಳಲುತ್ತಾರೆ. ಮಗುವಿನಂತೆ ಮಾಡಿ ಅವನ ತೂಗುತ್ತಾ, ಉಣಿಸುತ್ತಾ ತಮ್ಮಲ್ಲಿರುವ ವಾತ್ಸಲ್ಯವನ್ನು ಎಚ್ಚರಿಸಿಕೊಳ್ಳುತ್ತಾರೆ. ಅಚಲವಾದ ಶ್ರದ್ಧೆಯಿಂದ ಅವನ ಬಿಡದೇ ಕೊಂಡಾಡುತ್ತಾರೆ. ಆರಾಧಿಸುತ್ತಾರೆ, ಪೂಜಿಸುತ್ತಾರೆ, ಮುದ್ದಿಸುತ್ತಾರೆ; ಹೀಗೆ ಹರಿ ದಾಸರ ಹಲವು ಭಾವಗಳಿಗೆ ಗುರಿಯಾಗುತ್ತಾನೆ. “ನೀನ್ಯಾಕೋ, ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ” ಎಂದು ಅವನನ್ನೇ ಛೇಡಿಸುವಷ್ಟು ಸಲುಗೆ.

“ಮಂಡೆ ಬೋಳಾದರೆ ಮನ ಬೋಳಾಯಿತೆ” ಎಂದು ಡಂಭಾಚಾರದ ಕಪಟತನಗಳನ್ನು ಪ್ರಶ್ನಿಸುತ್ತಾರೆ. ಸಮಾಜದ ಓರೆಕೋರೆಗಳನ್ನು ಗಮನಿಸುತ್ತಾರೆ, ತಿದ್ದುತ್ತಾರೆ. ಭಕ್ತಿ ವಿರಕ್ತಿಯ ಮನದಲ್ಲಿ ಧರಿಸಿಕೊಂಡು, “ಎನ್ನ ಹೃದಯ ಕಮಲದೊಳು ನಿಂದಿರೋ” ಹೃದಯದಲ್ಲಿ ಹರಿಯನ್ನು ಧರಿಸಿಕೊಂಡು ಶುದ್ಧ ಸಂಕಲ್ಪದ ಮನುಷ್ಯನಾಗಿ ಇಹದಲ್ಲಿಯೂ ಪರದಲ್ಲಿಯೂ ಸದ್ಗತಿಯನ್ನು ಕಾಣುವುದರ ದಾರಿಯಾಗಿ ಸಾವಿರಾರು ದಾಸರ ಪದಗಳು ಪುಟಪುಟಗಳಲ್ಲಿ ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತವೆ.

ವ್ಯಾಸರಾಜರು, ವಾದಿರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಜಗನ್ನಾಥದಾಸರು, ರಾಘವೇಂದ್ರಸ್ವಾಮಿಗಳೇ ಮೊದಲಾದ ದಾಸರು ನಮಗೆ ಸಾಮಾನ್ಯವಾಗಿ ತಮ್ಮ ಕೀರ್ತನೆಗಳ ಮೂಲಕ ಪರಿಚಿತರು. ಆದರೆ, ಇನ್ನೂ ನೂರಾರು ದಾಸರ ರಚನೆಗಳನ್ನು ಓದುವ ಭಾಗ್ಯ ಈ ಕೃತಿಯಿಂದ. “ಇದು ಭಾಗ್ಯ, ಇದು ಭಾಗ್ಯ ಇದು ಭಾಗ್ಯವಯ್ಯ” ಎಂಬ ಆನಂದ.

ತತ್ವ, ಆಧ್ಯಾತ್ಮ, ಕುಂಡಲಿನೀ ತಂತ್ರದಿಂದ ಹಿಡಿದು, ಭಕ್ತಿಯ ಪರಮೋಚ್ಚ ಪ್ರಕಟಣೆಗಳನ್ನು ಹೊಂದಿರುವ ಎಲ್ಲಾ ಬಗೆಯ ಹಾಡುಗಳೂ ಇದರಲ್ಲಿವೆ. ಸಾಮಾನ್ಯವಾಗಿ ಸರ್ವಜ್ಞನ ತ್ರಿಪದಿ, ತಿರುವಳ್ಳುವರ್ ದ್ವಿಪದಿ, ಕಬೀರನ ದೋಹೆ ಇತ್ಯಾದಿಗಳಂತೆ ಮೂರೇ ಸಾಲಿನ ಹಾಡುಗಳಿಂದ ಹಿಡಿದು ದೊಡ್ಡದೊಡ್ಡ ಕೀರ್ತನೆಗಳವರೆಗೂ ಈ ಸಂಗ್ರಹದಲ್ಲಿದೆ. ಎಲ್ಲಾ ಹಾಡುಗಳು ಅಕಾರಾದಿಯಲ್ಲಿ ಜೋಡಿಸಲ್ಪಟ್ಟು, ದಾಸರ ಅಂಕಿತ ನಾಮಗಳ ಪಟ್ಟಿಯನ್ನು ಒದಗಿಸಿಕೊಡುವ ಮೂಲಕ ಅತ್ಯಂತ ಸುಸಜ್ಜಿತವಾಗಿದೆ.

ಶತಶತಮಾನಗಳ ಕಾಲ ಭಕ್ತಜನ ಭಾವುಕರು, ಮುಗ್ಧ ಜಾನಪದ ಹೆಣ್ಣುಮಕ್ಕಳು ಮೌಖಿಕ ಪರಂಪರೆಯಲ್ಲಿ ಉಳಿಸಿಕೊಂಡು ಬಂದಿದ್ದು, ಲಿಖಿತ ಪಾಠಕ್ಕೆ ಬಂದಿರುವ ಈ ಹಾಡುಗಳನ್ನು ಶ್ರದ್ಧೆ, ಭಕ್ತಿ ಮತ್ತು ಪ್ರೀತಿಯಿಂದ ಸಂಪಾದಿಸಿರುವ ಡಾ. ಪಾರ್ಥಸಾರಥಿಯವರು ತಮ್ಮ ಸಂಪಾದಕರ ನುಡಿಯಲ್ಲಿ ಹೀಗೆ ಹೇಳುತ್ತಾರೆ.

“ದಾಸಸಾಹಿತ್ಯದ ಬಗ್ಗೆ ನನಗೆ ಒಲವು ಬಂದಿದ್ದು ಮನೆತನದ ಪ್ರಭಾವದಿಂದ. ಆದರೆ ಅದಕ್ಕೂ ಮಿಗಿಲಾಗಿ ಹರಿದಾಸರು ಶುದ್ಧ ಮನಸ್ಸಿನಿಂದ, ಸದಾಚಾರ ಸದ್ವಿಚಾರಗಳಿಂದ ಹಾಡುಗಳನ್ನು ರಚಿಸಿದರು ಎನ್ನುವ ಪ್ರಮುಖ ಕಾರಣದಿಂದ, ‘ಮಾನವ ಜನ್ಮ ದೊಡ್ಡದು’ ಎಂದು ಮಾನವೀಯ ಮೌಲ್ಯಗಳನ್ನು ಮೆರೆದ ದಾಸಸಾಹಿತ್ಯ, ಕನ್ನಡ ಭಾಷೆಯನ್ನು ಸಮೃದ್ಧಗೊಳಿಸಿ, ಜನಮನವನ್ನು ಪಾವನ ಮಾಡಿತು, ಪಾಮರರನ್ನು ಪ್ರಾಜ್ಞರನ್ನಾಗಿ ಮಾಡಿತು.”

ನಿಜ, ಮಾನವನ ಬಹು ಲೌಕಿಕ ಬಲೆಯಿಂದ ಭಗವಂತನ ಮುಕ್ತ ಬಯಲಿಗೆ ಒಯ್ಯುವಂತಹ ಸಾತ್ವಿಕ ಧೋರಣೆಯ ಈ ಹರಿಭಕ್ತಿಯ ಹಾಡುಗಳು ಹಿಂದೂ ಧರ್ಮದ ಭಕ್ತಿ ಚಳವಳಿಯ ಧ್ವನಿಗಳೇ ಆಗಿವೆ. ಜಾತಿಮತಗಳ, ಉಚ್ಚನೀಚಗಳ, ಬಡವ ಬಲ್ಲಿದನೆಂದಿಲ್ಲದೇ ದಾಸನಾಗುವ ಮೂಲಕ ಇಹದಲ್ಲಿ ಉತ್ತಮ ಬಾಳ್ವೆ, ಪರದಲ್ಲಿ ಸದ್ಗತಿ ಎಂದು ಆಸ್ತಿಕರಿಗೆ ದಾರಿದೀಪವಾಗುತ್ತವೆ. ಆದರೆ ಹಿಂದೂ ಧರ್ಮದ ಇಂತಹ ವೈಶಾಲ್ಯದ ಪರಂಪರೆಗಳನ್ನು ಮರೆಮಾಚುತ್ತಾ ಹಿಂದುತ್ವವಾದಿಗಳು ಧರ್ಮವನ್ನು ರಾಜಕೀಯಗೊಳಿಸುತ್ತಾರೆ. ಇದೇ ಸಮಸ್ಯೆ. ಹಿಂದೂ ಧರ್ಮದ ಪಾವಿತ್ರ್ಯತೆ ಇರುವುದು ಹಿಂದುತ್ವವಾದದ ಕಳಂಕವನ್ನು ಹೋಗಲಾಡಿಸಿಕೊಳ್ಳುವುದರಲ್ಲಿ.

ಜಾತಿ ಶ್ರೇಷ್ಠತೆಯ ಗೀಳಿನಲ್ಲಿ ಅಸ್ಪೃಷ್ಯತೆ ಆಚರಣೆ ಮಾಡುವವರಿಗೆ ಭ್ರಮೆ ಹರಿಯುವಂತೆ ದಾಸರು, “ಹೊಲೆಯ ಪೆದ್ದಯ್ಯಗೆ ಒಲಿದವನ ಆಳಾದಿ, ಕುಲದಿ ಮಾದಿರ‍್ಹರಳಯ್ಯನ ಮನೆಲುಂಡಿ, ಡೊಂಬಿತಿಯ ಗುಡಿಸಿಲಲಿ ಸಂಭ್ರಮದಿ ಮಲಗಿದಿ, ಶಂಭೋ ಕುಣಿದೆಲೋ ಕುಂಬಾರಗೊಲಿದು” ಎಂದು ಹರಿಯನ್ನುದ್ದೇಶಿಸಿ ಹೇಳುತ್ತಾರೆ.

ಮುಸಲ್ಮಾನರನ್ನು ದ್ವೇಷಿಸುವುದೇ ಹಿಂದೂ ಒಬ್ಬನ ಸಾಮಾನ್ಯ ಮನಸ್ಥಿತಿಯಾಗಬೇಕು ಎನ್ನುವಂತೆ ದ್ವೇಷಬೀಜ ಬಿತ್ತುವವರು ದಾಸರು ತುರುಕರ ಬಗ್ಗೆ ಹೇಳಿರುವುದನ್ನು ಗಮನಿಸಬೇಕು.
“ಅಂತಹ ಮೋಹಿಪ ಕಂತುಗೆ ಮೊದಲೆ ಸಂತಿಯ (ಸುನ್ನತಿ) ಮಾಡಬೇಕಲ್ಲಾ, ಸಂತರು ಮಾಡುವ ಸಂತಿಯ ಮುಲ್ಲನ ಸ್ವಂತ ಕರಿಯ ಬೇಕಲ್ಲಾ” ಎಂದು ಕೋಸಿಗಿ ಸ್ವಾಮಿರಾಯಾಚಾರ್ಯರು ಮುಂದುವರಿಯುತ್ತಾ ತಮ್ಮ ಕೀರ್ತನೆಯಲ್ಲಿ ಹೇಳುತ್ತಾರೆ, “ಮನೋಶುದ್ಧೋಪಾಸನಲಕ್ಷಣ ಘನ ನಮಾಜವ ಮಾಡಬೇಕಲ್ಲಾ” “ಮೋರಮು (ಮೊಹರಂ) ಬರಲು ಸೇರಿದ ತಾಮಸ, ಸಾರಿಸಿ ಬಳಿಬೇಕಲ್ಲಾ, ಸಾರಸ್ವತ ಮನೋಚಾರುಮಸೀದಿಯ ನೀರ ಜ್ಞಾನದಿ ತೊಳಿಬೇಕಲ್ಲ.” ಹೀಗೆ ಮುಸಲ್ಮಾನರನ್ನು ತಮ್ಮ ‘ತುರಕರಾದರೀ’ ಕೀರ್ತನೆಯಲ್ಲಿ ನೇರ ಉಲ್ಲೇಖಿಸುತ್ತಾರೆ.

ಹಾಗೆ ಮೋಹನದಾಸರು “ತುರುಕರಿಲ್ಲದ ಊರೊಳು ಇರಬಾರದು, ತುರುಕರು ಜಗದೊಳು ಪರಮ ಶ್ರೇಷ್ಠರು ಕಾಣೋ, ತುರುಕರು ಕರೆದರೆ ಉಣಬಹುದು ಉಡಬಹುದು, ತುರುಕರಿಂದಲಿ ಜಗಕೆ ಪರಮ ಸೌಖ್ಯಾ” ಎಂದು ಬರೆದಿರುವುದನ್ನು ನೋಡಿ, ಇದೇನು ದಾಸರು ಹೀಗೆ ಮುಸಲ್ಮಾನರ ಬಗ್ಗೆ ಬರೆದಿದ್ದಾರೆ ಎಂದು ನನ್ನ ಸ್ನೇಹಿತರೊಬ್ಬರು ಗಮನ ಸೆಳೆದಿದ್ದರು. ಆದರೆ ಅದು ತುರು-ಕರು. ಹಸುವಿನ ಕರು. ಇನ್ನೂ ಕೆಲವು ಕಡೆ ಗೋಪಾಲಕರನ್ನು ತುರುಕಾರ ಎನ್ನುವುದೂ ಉಂಟು. ಕಿಟ್ಟೆಲ್ ನಿಘಂಟಿನಲ್ಲಿ ಇದರ ಬಗ್ಗೆ ಸ್ಪಷ್ಟತೆ ಇದೆ. ಹಿಂದೆ ಕನ್ನಡದಲ್ಲಿಯೇ ಎರಡು ಬಗೆಯ ರ-ಕಾರಗಳನ್ನು ಬಳಸುತ್ತಿದ್ದರು. ಮೊದಲನೆಯ ‘ರ’ ತುರುಕ ಎಂದರೆ ಟರ್ಕಿಯಿಂದ ಬಂದವನು, ಮುಸಲ್ಮಾನ, ಯವನ, ತುರುಷ್ಕ. ಇನ್ನೊಂದು ತುರುಕಾರದಲ್ಲಿ ಈಗ ಬಿಟ್ಟುಹೋಗಿರುವ ರ-ಕಾರದ ಬಳಕೆ. ಗೋಪಾಲ, ವಲ್ಲವ, ಗೋಮತ್; ಈ ಅರ್ಥದಲ್ಲಿ. ತುರು-ಕರ ಎಂದರೆ ಬಹುಶಃ ಕರು ಇರಬಹುದು.

ಹರಿದಾಸರ ಹತ್ತು ಸಾವಿರ ಹಾಡುಗಳು ಅಧ್ಯಯನಕ್ಕೂ, ಭಕ್ತಿಯ ಪಾರಾಯಣಕ್ಕೂ, ಸಾಹಿತ್ಯೋಪಾಸನೆಗೂ ದಕ್ಕುವುದು. ಭಕ್ತ ಮತ್ತು ಭಗವಂತನ ನಡುವಿನ ಮಾರ್ಗದರ್ಶಿಯಾಗಿ ತೆರೆದುಕೊಳ್ಳುವ ದಾಸ ಸಾಹಿತ್ಯವೂ ಕೂಡಾ ಶರಣರ ವಚನಗಳಂತೆ, ತತ್ವಪದಕಾರರ ರಚನೆಗಳಂತೆ ಕನ್ನಡದ ಸಾಹಿತ್ಯಕ ಮತ್ತು ಆಧ್ಯಾತ್ಮಿಕ ಕೊಡುಗೆ.
“ಮನವು ಬಿಲ್ಲನೆ ಮಾಡಿ | ತನುವು ಹೆದಿಯನೆ ಕಟ್ಟಿ | ಅನುಭವದ ಅಂಬಿನಲಿ | ಜನನ ಮರಣದ ಗುರಿಯ ಕೆಡಹಿದಾ | ಜ್ಞಾನಸಾಗರ ಗುರುನಾಥನೆಂದು | ಸ್ತುತಿಸಿದಾ ಮಹಿಪತಿಯು |”

ಸಂಪಾದಕ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ
ಪ್ರಕಟಣೆ: ಶ್ರೀ ಹರಿದಾಸ ಸಂಘ, ಬೆಂಗಳೂರು
ಪುಟಗಳು: ೧೮೮೬ ಬೆಲೆ: ರೂ. ೭೯೫/-
(೦೮೦-೨೫೬೧೬೩೨೮, ೯೪೪೮೫೫೨೩೨೮).


ಇದನ್ನೂ ಓದಿ: ನಿಮ್ಮ ಮಿತಿಗಳನ್ನು ಮೀರಿ, ಆಕಾಶದೆತ್ತರಕ್ಕೆ ನೀವೂ ಹಾರಬಹುದು.. ಎಂದು ತೋರಿಸಿಕೊಟ್ಟ ಪುಸ್ತಕ..

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

Avatar
ಯೋಗೇಶ್ ಮಾಸ್ಟರ್
+ posts

LEAVE A REPLY

Please enter your comment!
Please enter your name here