ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಅಮಿತ್ ಶಾ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಪಕ್ಷದ ಚಟುವಟಿಕೆಗಳ ಬಗ್ಗೆ ಗಮನ ಹರಿಸಲಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ.
ಬಂಕುರಾ ಮತ್ತು ಕೋಲ್ಕತ್ತಾದಲ್ಲಿ ಪಕ್ಷದ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡರು ತಿಳಿಸಿದ್ದಾರೆ. ಕೊರೊನಾ ಲಾಕ್‌ಡೌನ್ ನಂತರ ಪಶ್ಚಿಮ ಬಂಗಾಳಕ್ಕೆ ಅಮಿತ್ ಶಾ ಅವರ ಮೊದಲ ಭೇಟಿ ಇದಾಗಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ನಿನ್ನೆ ರಾತ್ರಿ ಅಮಿತ್ ಶಾ ಕೋಲ್ಕತ್ತಾಗೆ ಆಗಮಿಸಿದ್ದು, ಇಂದು ಬಂಕುರಾಕ್ಕೆ ಭೇಟಿ ನೀಡಿ ಪೂರ್ವ ಮತ್ತು ಪಶ್ಚಿಮ ಮಿಡ್ನಾಪೋರ್, ಬಿರ್ಭುಮ್, ಪುರುಲಿಯಾ ಮತ್ತು ಬಂಕುರಾ ಜಿಲ್ಲೆಗಳ ಬಿಜೆಪಿ ಮುಖಂಡರೊಂದಿಗೆ ಸಾಂಸ್ಥಿಕ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯಂತನ್ ಬಸು ತಿಳಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಪ್ರವಾಸ: ಜೆ.ಪಿ.ನಡ್ಡಾ ಬಿಟ್ಟು ಅಮಿತ್ ಶಾಗೆ ಮಣೆ ಹಾಕಿದ ಬಿಜೆಪಿ!
I will be reaching West Bengal tonight on two days visit.
Looking forward to interacting with our karyakartas of @bjp4bengal, beloved people of West Bengal, friends in Media and representatives of different communities. https://t.co/MQlb2t4Uzv
— Amit Shah (@AmitShah) November 4, 2020
“ಇಂದು ಸಂಜೆ ಕೋಲ್ಕತ್ತಾಗೆ ಹಿಂದಿರುಗಲಿದ್ದಾರೆ. ನವೆಂಬರ್ 6 ರಂದು ಅವರು ದಕ್ಷೀಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಶಾಸ್ತ್ರೀಯ ಗಾಯಕ ಪಂಡಿತ್ ಅಜೋಯ್ ಚಕ್ರವರ್ತಿಯನ್ನು ಭೇಟಿಯಾಗಲಿದ್ದಾರೆ. ನಂತರ ಅವರು ರಾಜ್ಯ ಬಿಜೆಪಿ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ” ಎಂದು ಬಸು ಹೇಳಿದರು.
ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪಕ್ಷ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು, ಬಂಗಾಳ ಪ್ರವಾಸದಲ್ಲಿ ಸಂಘಟನೆಯ ವಿವಿಧ ಅಂಶಗಳನ್ನು ಪರಿಶೀಲಿಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಬಗ್ಗೆ ಚರ್ಚಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬಂಗಾಳದ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಹೇಳಿದ್ದರು.
ಅಮಿತ್ ಶಾ, ಪಕ್ಷದ ಹಿರಿಯ ನಾಯಕರಾದ ಕೈಲಾಶ್ ವಿಜಯವರ್ಗಿಯಾ, ಉಪಾಧ್ಯಕ್ಷ ಮುಕುಲ್ ರಾಯ್ ಮತ್ತು ಪಕ್ಷದ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಅವರೊಂದಿಗೆ ಮತ್ತು ಬೂತ್, ಜಿಲ್ಲಾ ಮಟ್ಟದ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇನ್ನು ಈ ಹಿಂದೆ ನಿಗದಿಯಾಗಿದ್ದಂತೆ ಪಶ್ಚಿಮ ಬಂಗಾಳಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನವೆಂಬರ್ 6ಕ್ಕೆ ಭೇಟಿ ನೀಡಬೇಕಿತ್ತು. ಆದರೆ ಪಕ್ಷದಲ್ಲಿ ಆದ ಕೆಲ ಬೆಳವಣಿಗೆ ಹಿನ್ನೆಲೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿಗದಿತ ಭೇಟಿ ರದ್ದುಗೊಳಿಸಿ, ಅಮಿತ್ ಶಾ ಭೇಟಿಯನ್ನು ನಿಗದಿ ಮಾಡಲಾಗಿತ್ತು.


