Homeನ್ಯಾಯ ಪಥನೂತನ ಐಟಿ ನಿಯಮಗಳ ಮೊದಲ ಟಾರ್ಗೆಟ್ ಕಾರ್ಟೂನಿಸ್ಟ್‌ಗಳೇ ಏಕಿರಬಹುದು?

ನೂತನ ಐಟಿ ನಿಯಮಗಳ ಮೊದಲ ಟಾರ್ಗೆಟ್ ಕಾರ್ಟೂನಿಸ್ಟ್‌ಗಳೇ ಏಕಿರಬಹುದು?

- Advertisement -
- Advertisement -

ಪ್ರಭುತ್ವವೊಂದಕ್ಕೆ ದೇಶದ ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳಲು, ಜನಸಾಮಾನ್ಯರ ಹಕ್ಕುಗಳನ್ನು ರಕ್ಷಿಸಲು, ತನ್ನ ಸುಪರ್ದಿಯಲ್ಲಿ ಕಾರ್ಯನಿರ್ವಹಿಸುವ ಯಾವುದೇ ವೇದಿಕೆಯನ್ನಾಗಲಿ, ಸಂಸ್ಥೆಯನ್ನಾಗಲೀ ಸಂವಿಧಾನಬದ್ಧವಾಗಿ ನಿಯಂತ್ರಿಸಲು ಅಗತ್ಯ ನಿಯಮಗಳನ್ನು ರೂಪಿಸಕೊಳ್ಳುವುದು ಮತ್ತು ಅವುಗಳನ್ನು ಜಾರಿಗೊಳಿಸುವುದು ಬೇಕಾಗುತ್ತದೆ. ಅಂದರೆ ಅಂತಹ ನಿಯಂತ್ರಣಗಳು ತನ್ನ ನಾಗರಿಕರ ಸಂವಿಧಾನಬದ್ಧ ಮತ್ತು ಜವಾಬ್ದಾರಿಯುತ ಸ್ವಾತಂತ್ರ್ಯವನ್ನು, ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಡಿತಗೊಳಿಸಲು ಜಾರಿಗೊಳಿಸಿದ ನಿಯಮಗಳಾಗಿರದೇ ಅವುಗಳನ್ನು ವಿಸ್ತರಿಸುವಂತಿರಬೇಕು. ಉದಾಹರಣೆಗೆ ನೋಡುವುದಾದರೆ, ಸಾಮಾಜಿಕ ಮಾಧ್ಯಮವೊಂದರಲ್ಲಿ ಬೇರೊಬ್ಬರ ಹೆಸರನಲ್ಲಿ ಅಕೌಂಟ್ ಸೃಷ್ಟಿ ಮಾಡಿ, ಅವರ ಹೆಸರಿನಲ್ಲಿ ತಪ್ಪು ಮಾಹಿತಿಗಳನ್ನು ನೀಡವುದು ಅಥವಾ ಮೋಸ ಮಾಡುವಂತಹ ಸಂಗತಿಗಳು ಅಪಾಯಕಾರಿ. ಇಂತಹವುಗಳನ್ನು ಕಡಿವಾಣ ಹಾಕಲು ಸಾಮಾಜಿಕ ಮಾಧ್ಯಮಗಳ ನಿಯಂತ್ರಣ ಅಗತ್ಯ.

ಮತ್ತೊಂದು ಉದಾಹರಣೆ ನೋಡುವುದಾದರೆ ಆಸ್ಟ್ರೇಲಿಯಾ ದೇಶದಲ್ಲಿ ಅಂತರ್ಜಾಲ ದೈತ್ಯ ಸಂಸ್ಥೆಗಳು, ಹಲವು ಪಾರಂಪರಿಕ ಸುದ್ದಿ ಸಂಸ್ಥೆಗಳ ವರದಿ-ಸುದ್ದಿಗಳನ್ನು ಹಂಚಿಕೊಳ್ಳುವುದರಿಂದ ಗಳಿಸುವ ಗಳಿಕೆಯ ನ್ಯಾಯಯುತ ಅಂಶವನ್ನು ಮೂಲ ಸಂಸ್ಥೆಗಳ ಜೊತೆಗೆ ಹಂಚಿಕೊಳ್ಳಬೇಕು ಎಂಬುದಕ್ಕೆ ನಿಯಮಗಳನ್ನು ರೂಪಿಸಲು ಅಲ್ಲಿನ ಸರ್ಕಾರ ಪ್ರಯತ್ನ ಪಟ್ಟಿರುವುದನ್ನೂ ಇದಕ್ಕೆ ಸೇರಿಸಬಹುದು. ಇನ್ನೂ ಒಂದು ಉದಾಹರಣೆಯಲ್ಲಿ,
ಅಮೆರಿಕದಲ್ಲಿ ಫೇಸ್ಬುಕ್, ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯ ಜೊತೆಗೆ ಕೈಜೋಡಿಸಿ ಮತದಾರರ ಖಾಸಗಿ ಮಾಹಿತಿಯನ್ನು ಅನಧಿಕೃತವಾಗಿ ಬಳಸಿಕೊಂಡು ಅವರಿಗೆ ಒಂದು ಪಕ್ಷದ ಪರವಾಗಿ ಮತಹಾಕುವುದಕ್ಕೆ ಪ್ರಭಾವಿಸಿದ ಪ್ರಕರಣವನ್ನು ತನಿಖೆ ಮಾಡಿದ್ದು ಕೂಡ ಇರಬಹುದು. ಇವೆಲ್ಲವೂ ಆಯಾ ದೇಶದ ನಾಗರಿಕರ ಹಕ್ಕುಗಳನ್ನು ಉಳಿಸುವುದಕ್ಕೆ ಮತ್ತು ವಿಸ್ತರಿಸುವುದಕ್ಕೆ ಮಾಡಿದ/ಮಾಡುವ ಸರಕಾರದ ಅಥವಾ ಪ್ರಭುತ್ವದ ಸಂಸ್ಥೆಗಳ ಹಸ್ತಕ್ಷೇಪವಾಗಿ ನೋಡಬಹುದಾಗಿದೆ.

ಆದರೆ ಈ ನಿಯಂತ್ರಣ-ನಿಯಮಗಳ ಹೆಸರಿನಲ್ಲಿ ಜವಾಬ್ದಾರಿಯುತ ಟೀಕೆ-ವಿಮರ್ಶೆ ಮತ್ತು ರಾಜಕೀಯ ವಿರೋಧವನ್ನು ಹತ್ತಿಕ್ಕಲು ಪ್ರಯತ್ನ ಮಾಡುವುದಾದರೆ? ನೂತನ ಐಟಿ (ಮಧ್ಯಂತರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿಸಂಹಿತೆ) ನಿಯಮಗಳು-2021ರ ಹೆಸರಿನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಆರಂಭಿಕ ಕ್ರಮಗಳನ್ನು ಗಮನಿಸಿದರೆ, ಈ ನಿಯಮಗಳನ್ನು ನಾಗರಿಕ ಸಮಾಜ ಯಾವ ಕಾರಣಕ್ಕಾಗಿ ವಿರೋಧಿಸುತ್ತಿತ್ತೋ ಅವೆಲ್ಲವೂ ನಿಜವಾಗುತ್ತಿರುವಂತೆ ಕಾಣುತ್ತಿದೆ.

ಟ್ರೋಲ್ ಸೇನೆಗೆ ಗುರಿಯಾಗಿದ್ದ ಕಾರ್ಟೂನಿಸ್ಟ್‌ಗಳ ಮೇಲಿನ ದಾಳಿಗೆ ಈಗ ಅಧಿಕೃತತೆಯ ಮುದ್ರೆ

ಸರ್ಕಾರಗಳನ್ನು-ಆಡಳಿತ ವ್ಯವಸ್ಥೆಯನ್ನು ಟೀಕಿಸುವ ಪತ್ರಕರ್ತರನ್ನು ಮತ್ತು ಕಾರ್ಟೂನಿಸ್ಟ್‌ಗಳನ್ನು ಮೊದಲು ಪ್ರಭುತ್ವಗಳ/ರಾಜಕೀಯ ಪಕ್ಷಗಳ ಬೆಂಬಲಿತ ಐಟಿ ಟ್ರಾಲ್ ಸೇನೆಯಿಂದ ಗೋಳುಹುಯ್ದುಕೊಳ್ಳಲಾಗುತ್ತಿತ್ತು. ಈ ಟ್ರಾಲ್ ಸೇನೆಗಳು ಮಾಡುವ ಹರಾಕಿರಿಯನ್ನು ಬರೀ ಗೋಳುಹುಯ್ದುಕೊಳ್ಳುವುದು ಎಂದರೆ ಅದು ಬಹಳ ಮೃದು ಪದವಾದೀತು! ಕೆಲವು ದಿನಗಳ ಹಿಂದೆಯೆಷ್ಟೇ ವ್ಯಾಕ್ಸಿನ್ ರಾಜಕೀಯದ ಬಗ್ಗೆ ವ್ಯಂಗ್ಯಚಿತ್ರ ರಚಿಸಿದ್ದಕ್ಕೆ ಕರ್ನಾಟಕದವರೇ ಆದ ವ್ಯಂಗ್ಯಚಿತ್ರಕಾರ ಸತೀಶ ಆಚಾರ್ಯ ಅವರ ಮೇಲೆ ಬಿಜೆಪಿ ಪಕ್ಷ ಬೆಂಬಲಿತ ಐಟಿ ಟ್ರಾಲ್ ಸೇನೆ ಅಶ್ಲೀಲ ದಾಳಿ ನಡೆಸಿತ್ತು. ಅಂತಹ ದಾಳಿಗಳನ್ನು ಪತ್ರಕರ್ತರು-ಕಾರ್ಟೂನಿಸ್ಟ್‌ಗಳು ಮೆಟ್ಟಿ ನಿಲ್ಲುತ್ತಿದ್ದಾರೆ ಅಥವಾ ಅಂತಹ ದಾಳಿಗಳಿಗೆ ನಾಗರಿಕ ಸಮಾಜ ವಿರೋಧ ವ್ಯಕ್ತಪಡಿಸುತ್ತಿದೆ ಎಂದೆನಿಸಿದ ಕೂಡಲೇ ಈಗ ಪ್ರಸಕ್ತ ಕೇಂದ್ರ ಸರ್ಕಾರ ತನ್ನ ದಾಳ ಬೀಸಿದೆ.

ಜೂನ್ ಮೊದಲ ವಾರದಲ್ಲಿ, ಖ್ಯಾತ ಕಾರ್ಟೂನಿಸ್ಟ್ ಮಂಜುಲ್ ಅವರಿಗೆ ಟ್ವಿಟ್ಟರ್‌ನಿಂದ ಕಳುಹಿಸಲಾಗಿದ್ದ ನೋಟಿಸ್‌ಅನ್ನು ಅವರು ಅದೇ ವೇದಿಕೆಯಲ್ಲಿ ಹಂಚಿಕೊಂಡಿದ್ದರು. ’ನೀವು ಹಂಚಿಕೊಂಡಿರುವ ಮಾಹಿತಿ ಭಾರತದ ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು ಭಾರತದ ಕಾನೂನು ಪಾಲನಾ ವ್ಯವಸ್ಥೆಯಿಂದ ಸಲಹೆ ಬಂದಿದೆ. ಈ ಸಲುವಾಗಿ ನೀವು ತಕ್ಷಣ ಕ್ರಮ ತೆಗೆದುಕೊಳ್ಳಬೇಕು’ ಎಂಬ ಟ್ವಿಟ್ಟರ್ ನೋಟಿಸ್‌ನ ಒಕ್ಕಣೆ ಪರೋಕ್ಷ ಬೆದರಿಕೆಯೂ ಆಗಿತ್ತು. ಮಂಜುಲ್ ಸರ್ಕಾರದ ವೈಫಲ್ಯಗಳನ್ನು ವ್ಯಂಗ್ಯಚಿತ್ರಗಳ ಮೂಲಕ ಬಿತ್ತರಿಸಿದ್ದಕ್ಕೆ, ಸದರಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಅಥವಾ ಶಿಕ್ಷೆ ಇದು ಎಂತಹವನಿಗೂ ಸುಲಭವಾಗಿ ಅರ್ಥವಾಗುತ್ತಿತ್ತು. ಇದೇ ಬೆನ್ನಲ್ಲಿ ಮಂಜುಲ್ ಅವರ ಕಾರ್ಟೂನ್ ಸೇವೆಯನ್ನು ಬಳಸಿಕೊಳ್ಳುತ್ತಿದ್ದ ನೆಟ್‌ವರ್ಕ್18 ಸಂಸ್ಥೆ ಅವರ ಜೊತೆಗೆ ಇದ್ದ ಒಪ್ಪಂದವನ್ನು ರದ್ದುಗೊಳಿಸಿದ್ದರ ಬಗ್ಗೆಯೂ ವರದಿಯಾಗಿತ್ತು. ರಿಲಯನ್ಸ್ ದೊಡ್ಡಮಟ್ಟದಲ್ಲಿ ಹೂಡಿಕೆ ಮಾಡಿರುವ ಮಾಧ್ಯಮ ಸಂಸ್ಥೆ ನೆಟ್‌ವರ್ಕ್18. ಸರ್ಕಾರವನ್ನು, ಸರ್ಕಾರದ ನಡೆಗಳನ್ನು ಟೀಕಿಸುವುದು ಎಂದಿನಿಂದ ಭಾರತದ ಕಾನೂನನ್ನು ಉಲ್ಲಂಘಿಸಿದಂತೆ ಆಗಿದೆ? ಭಾರತ ಸರ್ಕಾರ ಸಂಸತ್ತಿನಲ್ಲಿ ಚರ್ಚೆಯನ್ನೂ ನಡೆಸದೆ, ತರಾತುರಿಯಲ್ಲಿ ಜಾರಿಗೆ ತಂದಿರುವ ಈ ನೂತನ ಐಟಿ ನಿಯಮಗಳು ರಾಜಕೀಯ ಪಕ್ಷವೊಂದಕ್ಕೆ, ಸರ್ಕಾರವೊಂದಕ್ಕೆ ಬರುವ ಟೀಕೆ-ವಿಮರ್ಶೆಗಳಿಂದ ರಕ್ಷಣಾಕವಚವನ್ನು ನಿರ್ಮಿಸಿಕೊಳ್ಳುವುದಕ್ಕಾಗಿಯೇ? ಇದು ಪ್ರಜಾಪ್ರಭುತ್ವದ ಅಣಕವಲ್ಲದೆ ಮತ್ತೇನು?

ಇದರ ಬೆನ್ನಲ್ಲಿಯೇ ದೆಹಲಿ ಮೂಲದ ಖ್ಯಾತ ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರಿಗೂ ಹೆಚ್ಚುಕಡಿಮೆ ಇಂತಹುದೇ ನೋಟಿಸ್‌ಅನ್ನು ಟ್ವಿಟ್ಟರ್ ಕಳುಹಿಸಿತ್ತು. ಭೂಷಣ್ ಅವರು ಹಂಚಿಕೊಂಡಿದ್ದ, ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ’ಬ್ಯಾಂಕ್ ರಾಬರಿ ಮತ್ತು ಸರ್ಕಾರ’ದ ಬಗ್ಗೆ ರಚಿಸಿದ್ದ ಕಾರ್ಟೂನ್ ಒಂದು, ಭಾರತದ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಟ್ವಿಟ್ಟರ್ ಹೇಳಿತ್ತು. ಪ್ರಶಾಂತ್ ಭೂಷಣ್ ಅವರು ಕೇಳಿದ ಈ ಕಾರ್ಟೂನ್ ’ಭಾರತದ ಯಾವ ಕಾನೂನನ್ನು ಉಲ್ಲಂಘಿಸುತ್ತಿದೆ’ ಎಂಬ ಪ್ರಶ್ನೆಗಾಗಲೀ, ಮಂಜುಲ್ ಅವರ ’ನನ್ನ ಯಾವ ಕಾರ್ಟೂನ್ ಭಾರತದ ಕಾನೂನನ್ನು ಮುರಿದಿದೆ’ ಎಂಬ ಪ್ರಶ್ನೆಗಾಗಲೀ ಟ್ವಿಟ್ಟರ್ ಇನ್ನೂ ಉತ್ತರಿಸಿಲ್ಲ. ಈ ಇಬ್ಬರ ವಿರುದ್ಧ ಮುಂದಿನ ಕ್ರಮಗಳನ್ನೂ ಟ್ವಿಟ್ಟರ್ ತೆಗೆದುಕೊಂಡಿಲ್ಲ.

ಕಾರ್ಟೂನಿಸ್ಟ್‌ಗಳ ವಿರುದ್ಧ ದಾಳಿ ಕಾಲಾತೀತವಾದದ್ದು-ದೇಶಾತೀತವಾದದ್ದು

ಒಂದೆರಡು ಮುಖ್ಯ ಕಾರಣಗಳಿಗೆ ಕಾರ್ಟೂನ್‌ಗಳು ಒಂದೊಳ್ಳೆ ವರದಿಗಿಂತಲೂ, ಒಂದೊಳ್ಳೆ ಅಂಕಣಕ್ಕಿಂತಲೂ ಹೆಚ್ಚು ಪರಿಣಾಮ ಬೀರಬಲ್ಲವು ಮತ್ತು ಸರ್ವಾಧಿಕಾರಿಗಳನ್ನು ಹಾಗೂ ಸರ್ವಾಧಿಕಾರಿ ಧೋರಣೆಯುಳ್ಳ ಪ್ರಜಾಪ್ರಭುತ್ವದ ಮುಖಂಡರನ್ನೂ ಇನ್ನಿಲ್ಲದಂತೆ ಕಾಡಬಲ್ಲವು. ಅದರಲ್ಲಿ ಮುಖ್ಯವಾದದ್ದು, ಅಕ್ಷರ ಬಾರದವರಿಗೂ ಮತ್ತು ಅಕ್ಷರ ಬಂದರೂ ಓದುವುದಕ್ಕೆ ತಾತ್ಸಾರ ಇರುವವರಿಗೂ ಕಾರ್ಟೂನ್ ತಕ್ಷಣಕ್ಕೆ
ಕನೆಕ್ಟ್ ಆಗಬಲ್ಲದು ಮತ್ತು ವಿಷಯಗಳನ್ನು ಹಾಸ್ಯ-ವ್ಯಂಗ್ಯಭರಿತ ಶೈಲಿಯಲ್ಲಿ ತೀಕ್ಷ್ಣವಾಗಿ ಸಂವಹಿಸಬಲ್ಲುದು. ಮತ್ತೊಂದು ಸಂಗತಿ, ಸಾಮಾನ್ಯವಾಗಿ ಸರ್ವಾಧಿಕಾರಿಗಳ ಮತ್ತು ದುರುಳ ಮುಖಂಡರ ದೌರ್ಜನ್ಯಗಳ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ಎಚ್ಚರಿಸಿದರೂ ಅವರು ಅದಕ್ಕೆ ವಿಚಲಿತರಾಗದೆ ಉಳಿಯುವ ಸಾಧ್ಯತೆ ಇರುತ್ತದೆ. ಜನರ ನೋವುಗಳಿಗೆ ಸ್ಪಂದಿಸಲು ಅವರ ಎಲ್ಲಾ ಇಂದ್ರಿಯಗಳು ಮುಚ್ಚಿರುತ್ತವೆ. ಆದರೆ ಅದೇ ಮುಖಂಡನನ್ನು ಮೂರ್ಖ ಎಂತಲೋ, ಪೆದ್ದ ಅಥವಾ ತಿಕ್ಕಲ ಎಂತಲೋ ಚಿತ್ರಿಸಿದರೆ ಅದು ಆತನನ್ನು ಹೆಚ್ಚು ಕಾಡುತ್ತದೆ. ಓರೆಕೋರೆಯ ಗೆರೆಗಳ ವ್ಯಂಗ್ಯಚಿತ್ರಕ್ಕೆ ಇಂತಹುದನ್ನು ಸಾಂಕೇತಿಕವಾಗಿ ಹಿಡಿದಿಡುವ ಶಕ್ತಿ ಅಪರಿಮಿತ. ಆದುದರಿಂದ ಇತಿಹಾಸದಲ್ಲಿ ಕಾರ್ಟೂನ್‌ಗಳಿಂದ ಕೆಂಡಾಮಂಡಲವಾಗಿ ನಿದ್ದೆ ಕಳೆದುಕೊಂಡ ಸರ್ವಾಧಿಕಾರಿಗಳ ಸಂಖ್ಯೆ ದೊಡ್ಡದಿದೆ.

ಕಾರ್ಟೂನ್ ಕೃಪೆ: ಪಿ ಮಹಮದ್

ನ್ಯೂಜಿಲ್ಯಾಂಡ್ ಮೂಲದ ಬ್ರಿಟನ್ ಕಾರ್ಟೂನಿಸ್ಟ್ ಡೇವಿಡ್ ಲೋ ತನ್ನ ರಾಜಕೀಯ ಕಾರ್ಟೂನ್‌ಗಳಿಗೆ ವಿಶ್ವವಿಖ್ಯಾತ. 30-40ರ ದಶಕದಲ್ಲಿ ಎರಡನೇ ವಿಶ್ವಯುದ್ಧದ ಆರಂಭಕ್ಕೂ ಮೊದಲೇ ಹಿಟ್ಲರ್‌ನ ಹಲವು ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದವನು. ಹಿಟ್ಲರ್‌ನನ್ನು ಅಣಕಿಸುತ್ತಲೇ ಆತ ಮುಂದೆ ಒಡ್ಡಬಹುದಾದ ಅಪಾಯಗಳ ಬಗ್ಗೆ ಎಚ್ಚರಿಸುತ್ತಿದ್ದವನು. ಈವನಿಂಗ್ ಸ್ಟಾಂಡರ್ಡ್ ಪತ್ರಿಕೆಯಲ್ಲಿ ಲೋನ ಕಾರ್ಟೂನ್ ಹಿಟ್ಲರ್ ವಿರುದ್ಧ ರಚಿತವಾಗಿದ್ದ ದಿನ, ಅದು ಆ ಸರ್ವಾಧಿಕಾರಿಯನ್ನು ತೀವ್ರ ಅಪ್ಸೆಟ್ ಮಾಡುತ್ತಿತ್ತಂತೆ. ನಾಜಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಲೋನನ್ನು ಹಣಿಯಲು, ಈವಿನಿಂಗ್ ಸ್ಟಾಂಡರ್ಡ್‌ನನ್ನು ಬರ್ಲಿನ್‌ನಲ್ಲಿ ನಿಷೇಧಿಸುವ ಬೆದರಿಕೆಯಿಂದ ಸಂಪಾದಕನಿಂದ ಒತ್ತಡ ತರುವುದರಿಂದ ಹಿಡಿದು, ಬ್ರಿಟನ್ ರಾಜತಾಂತ್ರಿಕ ಅಧಿಕಾರಿಗಳ ಮೂಲಕವೂ ಲೋ ಮೇಲೆ ಒತ್ತಡ ತರಲಾಗುತ್ತದೆ. ಇವೆಲ್ಲವನ್ನೂ ಮೆಟ್ಟಿನಿಂತು ಲೋ ಕೊನೆಗೆ ಮುಸಲೋನಿ ಮತ್ತು ಹಿಟ್ಲರ್‌ಅನ್ನು ಕೂಡಿಸಿ ಸಾಂಕೇತಿಕವಾಗಿ ಮಜ್ಲರ್ ಎಂಬ ಪಾತ್ರದ ಮೂಲಕ ವ್ಯಂಗ್ಯಚಿತ್ರ ರಚಿಸುತ್ತಾರೆ. ಲೋ ನೀಡುತ್ತಿದ್ದ ಎಚ್ಚರಿಕೆಯೆಲ್ಲಾ ನಿಜವಾಗುವಂತೆ ಒಂದು ದಿನ ಹಿಟ್ಲರ್ ಬ್ರಿಟನ್ ಮೇಲೆಯೇ ದಾಳಿ ಮಾಡಲು ಸಜ್ಜಾಗುತ್ತಾನೆ.

ಕಾರ್ಟೂನ್ ಕೃಪೆ: ಮಂಜುಲ್

ಡೇವಿಡ್ ಲೋ ಸಂದರ್ಭದಲ್ಲಿ, ರಾಜಕೀಯ ಒತ್ತಡವಿದ್ದರೆ, ಎಷ್ಟೋ ಸಂದರ್ಭಗಳಲ್ಲಿ ’ಸುಧಾರಿತ’ ಎನಿಸಿಕೊಂಡಿರುವ ಪತ್ರಿಕೆಗಳೇ ಕಾರ್ಟೂನಿಸ್ಟ್‌ಗಳನ್ನು ಸೆನ್ಸಾರ್ ಮಾಡಿರುವ ಉದಾಹರಣೆಗಳಿಗೂ ಕಡಿಮೆಯಿಲ್ಲ. ಆರ್ಟ್ ಸ್ಪೀಗಲ್‌ಮ್ಯಾನ್ ಪೋಲೆಂಡ್ ಮೂಲದ ಅಮೆರಿಕ ಕಾರ್ಟೂನಿಸ್ಟ್. ನಾಜಿಗಳನ್ನು ಬೆಕ್ಕುಗಳನ್ನಾಗಿಯೂ, ಯಹೂದಿಗಳನ್ನು ಇಲಿಗಳನ್ನಾಗಿಯೂ ಚಿತ್ರಿಸಿ, ಪೊಲೆಂಡ್‌ನಲ್ಲಿ ನಡೆದ ನಾಜಿಗಳ ಕ್ರೌರ್ಯ ಮತ್ತು ಜನಾಂಗೀಯ ಹತ್ಯಾಕಾಂಡದ (ಹೋಲೋಕಾಸ್ಟ್) ಬಗ್ಗೆ ’ಮೌಸ್’ ಎಂಬ ಗ್ರಾಫಿಕ್ ನಾವೆಲ್ (ಚಿತ್ರಕಾದಂಬರಿ) ಬರೆದವನು. ಜಾರ್ಜ್ ಬುಶ್ ಅಮೆರಿಕದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಇವರು ನ್ಯೂಯಾರ್ಕರ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಬುಶ್ ಕಾಲದಲ್ಲಿ ಅಮೆರಿಕ ದೇಶದ ದೌರ್ಜನ್ಯಗಳನ್ನು ವಿರೋಧಿಸಿದ ತನ್ನ ಚಿತ್ರಗಳನ್ನು ನ್ಯೂಯಾರ್ಕರ್ ಅಂತಹ ಪತ್ರಿಕೆಯೇ ಸೆನ್ಸಾರ್ ಮಾಡುತ್ತಿದೆ ಎಂದು ಹೇಳಿ ಅಲ್ಲಿ ರಾಜೀನಾಮೆ ನೀಡಿ ಹೊರನಡೆದಿದ್ದರು ಸ್ಪೀಗಲ್‌ಮ್ಯಾನ್. ಹೀಗೆ ಲಿಬರಲ್ ಎನ್ನಿಸಿಕೊಂಡ ಪತ್ರಿಕೆಗಳೇ ಪ್ರಭುತ್ವದ ದೌರ್ಜನ್ಯದ ಪರವಾಗಿ ನಿಂತ ಉದಾಹರಣೆಗಳಿವೆ. ಕನ್ನಡದ ಮಟ್ಟಿಗೂ ಜನಪರ ಕಾರ್ಟೂನಿಸ್ಟ್ ಪಿ ಮಹಮದ್ ಅವರ ’ಚೂಪು ಮೀಸೆ’ ಕಾರ್ಟೂನ್‌ಗಳಿಗೆ ಇಲ್ಲಿನ ’ಸುಧಾರಿತ’ ಪತ್ರಿಕೆ ಕತ್ತರಿ ಹಾಕಿದ ಉದಾಹರಣೆ ನಮ್ಮ ಬಾಗಿಲಿನಲ್ಲಿಯೇ ಇದೆ.

ಅಮೆರಿಕದ ಹಾರ್ಪರ್ ವೀಕ್ಲಿಯ ಕಾರ್ಟೂನಿಸ್ಟ್ ಥಾಮಸ್ ನ್ಯಾಸ್ಟ್ ನ್ಯೂಯಾರ್ಕ್ ಆಡಳಿತಗಾರರು, ರಾಜಕಾರಣಿಗಳನ್ನು, ದುಷ್ಟ ಶಕ್ತಿಗಳನ್ನು ಎದುರು ಹಾಕಿಕೊಂಡು, ಅಂದು ಸುಲಿಗೆ ಮಾಡುತ್ತಿದ್ದವರ ಆಮಿಷ, ನಂತರದ ಬೆದರಿಕೆ-ಹಲ್ಲೆಗಳನ್ನು ಮೆಟ್ಟಿನಿಂತು ಅವರನ್ನೆಲ್ಲಾ ತನ್ನ ಓರೆಕೋರೆಯ ರೇಖೆಗಳ ಮೂಲಕವೇ ಮಣಿಸಿದ್ದ. ಇವರ ಬಗ್ಗೆ ಲಂಕೇಶ್ ಟೀಕೆಟಿಪ್ಪಣಿಯಲ್ಲಿ ಬರೆಯುತ್ತಾ “ಥಾಮಸ್ ನ್ಯಾಸ್ಟ್ ಅಮೆರಿಕದ ಚರಿತ್ರೆ ತನ್ನ ದಾರಿ ಬದಲಿಸುವಂತೆ ಮಾಡಿದವರಲ್ಲಿ ಮುಖ್ಯನಾದ. ಪ್ರಜಾಪ್ರಭುತ್ವ ಕೊಡುವ ಸ್ವಾತಂತ್ರ್ಯವನ್ನು ಬಳಸಿಕೊಂಡು ತನ್ನ ಪ್ರತಿಭೆಯಿಂದ ಕಳ್ಳ ಖದೀಮರು, ಸಮಾಜ ವಿರೋಧಿ ವ್ಯಕ್ತಿಗಳನ್ನು ಛಿದ್ರಗೊಳಿಸಿದ. ಅಮೆರಿಕೆಯ ನೀಗ್ರೋಗಳು, ಬಡವರು, ಮಹಿಳೆಯರ ಪರವಾಗಿ ಚಿತ್ರಿಸುತ್ತಿದ್ದ ನ್ಯಾಸ್ಟ್ ತನಗೆ ಒಪ್ಪಿತವಾಗುವ ಮುಂದಾಳನ್ನು ಗೆಲ್ಲಿಸಬಲ್ಲವನಾಗಿದ್ದ” ಎಂದು ದಾಖಲಿಸುತ್ತಾರೆ.

ಹೀಗೆ ಸಂವಹನದ ಮಾಧ್ಯಮಗಳು ಬದಲಾದರೂ ಕಾರ್ಟೂನಿಸ್ಟ್‌ಗಳು ತಮ್ಮ ದಿಟ್ಟತನದಿಂದ, ಸೃಜನಶೀಲತೆಯಿಂದ ಅದಕ್ಕೆ ತಕ್ಕಂತೆ ಅಡಾಪ್ಟ್ ಆಗುತ್ತಾ, ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ತಮ್ಮ ಜವಾಬ್ದಾರಿಯನ್ನು ಕೆಲವರಾದರೂ ಉಳಿಸಿಕೊಂಡು ಬಂದಿದ್ದಾರೆ. ಇದು ಸರ್ವಾಧಿಕಾರಿ ಧೋರಣೆಯುಳ್ಳವರಿಗೆ ತಲೆನೋವಾಗಿ ಪರಿಣಮಿಸಿರುವುದರಲ್ಲಿ ಸೋಜಿಗವೇನಲ್ಲ.

ಸೋಗಲಾಡಿ ಮಾಧ್ಯಮಗಳು – ಸರ್ವಾಧಿಕಾರಿ ಧೋರಣೆಯ ಪ್ರಭುತ್ವ – ಲಾಭಕೋರ ದೈತ್ಯ ಟೆಕ್ ಕಂಪನಿಗಳ ನಡುವೆ ಉಸಿರುಕಟ್ಟಿರುವ ನಾಗರಿಕ

ಹೊಸ ಐಟಿ ನಿಯಮಗಳಿಗೆ ಈ ಟೆಕ್ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಬಲಿಪಶುಗಳಾಗುತ್ತಿವೆ ಎಂದು ಮರುಕಪಡಬೇಕೇ ಎಂಬ ಪ್ರಶ್ನೆಗೆ ನಿಖರವಾದ ಉತ್ತರವಿಲ್ಲ. ಅತ್ತ ಟ್ವಿಟ್ಟರ್ ಹಲವು ಪ್ರಕರಣಗಳಲ್ಲಿ ಲಿಬರಲ್-ಪ್ರಗತಿಪರ-ಜನಪರ ಮೌಲ್ಯಗಳನ್ನು ಎತ್ತಿಹಿಡಿದಿರುವುದು ಗೋಚರಿಸಿದ್ದರೂ, ಕೋವಿಡ್ ಸಮಯದಲ್ಲಿ ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ ಪರಿವಾರದ ಸಂಸ್ಥೆಯೊಂದಕ್ಕೆ ಅದರ ಸಿಇಒ ದೇಣಿಗೆ ನೀಡಿದ್ದೂ ಇದೆ. ಇದು ಇಲ್ಲಿನ ಪ್ರಭುತ್ವವನ್ನು ಒಲಿಸಿಕೊಳ್ಳುವ ತಂತ್ರವಿರಬಹುದು ಎಂದು ಕೂಡ ವ್ಯಾಖ್ಯಾನಿಸಲಾಗಿತ್ತು. ಇನ್ನು ಫೇಸ್ಬುಕ್ ಭಾರತ ಸರ್ಕಾರದೊಂದಿಗೆ ಕೈಮಿಲಾಯಿಸಿದ್ದ ಆರೋಪ ಕೆಲವು ತಿಂಗಳುಗಳ ಹಿಂದೆ ಆ ಸಂಸ್ಥೆಯ ನೀತಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆಂಖಿ ದಾಸ್ ಪ್ರಕರಣದಲ್ಲಿ ದೊಡ್ಡದಾಗಿ ಕೇಳಿಬಂದಿತ್ತು. ಕೊನೆಗೆ ಲಾಭ ಮತ್ತು ಶೇರು ಮೌಲ್ಯ ವೃದ್ಧಿಯನ್ನಷ್ಟೇ ಮೌಲ್ಯವನ್ನಾಗಿಸಿಕೊಂಡಿರುವ ಈ ಟೆಕ್ ಕಂಪನಿಗಳು ಬಳಕೆದಾರ-ನಾಗರಿಕ ಸ್ವಾತಂತ್ರ್ಯವನ್ನು ಕಾಯುತ್ತವೆ ಎಂಬುದನ್ನು ನಂಬುವುದಕ್ಕೆ ಕಷ್ಟ. ಅತ್ತ ಪಾರಂಪರಿಕ ಮಾಧ್ಯಮಗಳಲ್ಲಿ (ಟಿವಿ-ಮುದ್ರಣ) ಹಲವನ್ನು ಪ್ರಭುತ್ವ ಖಬ್ಜಾ ಮಾಡಿದ್ದು, ಇತ್ತ ಅಲ್ಪಸ್ವಲ್ಪ ಉಳಿದಿರುವ ಸಾಮಾಜಿಕ ಮಾಧ್ಯಮಗಳನ್ನೂ ಕಬಳಿಸುವ, ಸಾಧ್ಯವಾಗದಿದ್ದಾಗ ಹಣಿಯುವ ತಂತ್ರಗಳನ್ನು ಹೆಣೆಯುತ್ತಿರುವಾಗ ನಡುವೆ ಕಂಗೆಟ್ಟಿರುವ ನಾಗರಿಕರೇ ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ!


ಇದನ್ನೂ ಓದಿ: ಬಹುಜನ ಭಾರತ: ನಗೆಗೆ ಹೊಗೆ ಇಡುತ್ತಿದ್ದಾರೇಕೆ ನರೇಂದ್ರ ಮೋದಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...